ಕೆಪಿಎಸ್‌ಸಿ ಸದಸ್ಯರ ನೇಮಕಾತಿಗೆ ಶೋಧನಾ ಸಮಿತಿ ಇಲ್ಲ ಎಂಬುದು ಅಚ್ಚರಿಯ ಸಂಗತಿ: ಹೈಕೋರ್ಟ್‌

ಬೆಂಗಳೂರು: ಒಂದು ಶಾಸನಬದ್ಧ ಸಂಸ್ಥೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಆಗಿದ್ದೂ, ಇಂತಹ ಸಂಸ್ಥೆಗೆ ಸದಸ್ಯರನ್ನು ನೇಮಕ ಮಾಡಲು ಒಂದು ನಿರ್ದಿಷ್ಟ ವಿಧಾನ ಇಲ್ಲ. ಶೋಧನಾ ಸಮಿತಿ ಶಿಫಾರಸು ಮಾಡುವ ಅರ್ಹರನ್ನು ನೇಮಿಸಬೇಕೆ ಹೊರತು ಯಾರೋ ವೆಂಕ, ಸೀನ, ನಾಣಿಯರನ್ನೆಲ್ಲ ನೇಮಕ ಮಾಡಬಾರದು ಎಂದು ಹೈಕೋರ್ಟ್‌ ಚಾಟಿ ಬೀಸಿದೆ.

ಸದಸ್ಯರ ನೇಮಕಾತಿಗೆ ಶೋಧನಾ ಸಮಿತಿಯೇ ಇಲ್ಲ ಎಂಬುದು ಅಚ್ಚರಿಯ ಸಂಗತಿ ಎಂದಿರುವ ಹೈಕೋರ್ಟ್‌, ಶೋಧನಾ ಸಮಿತಿ ಇಲ್ಲದೆ, ಕೆಪಿಎಸ್‌ಸಿಗೆ ಸದಸ್ಯರನ್ನು ನೇಮಕ ಮಾಡುವುದು ಸಂವಿಧಾನಕ್ಕೆ ಅಪಚಾರ ಎಸಗಿದಂತೆ. ಆದ್ದರಿಂದ ಕೆಪಿಎಸ್‌ಸಿಗೆ ಸದಸ್ಯರನ್ನು ನೇಮಿಸಲು ಶೋಧನಾ ಸಮಿತಿ ರಚಿಸಲು ಅನುಸರಿಸಲಾಗುವ ಕಾರ್ಯವಿಧಾನವನ್ನು 15 ದಿನಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಿದೆ.

ಇದನ್ನೂ ಓದಿ:  ಕೆಲಸ ಮಾಡದೆ ಸಂಬಳ ಪಡೆಯುತ್ತಿರಿ: ಅಲೋಕ್ ಕುಮಾರ್ ಅಸಮಾಧಾನ

ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳ ನೇಮಕದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಕೆಪಿಎಸ್ಸಿ ಮಾಡಿರುವ ಶಿಫಾರಸಿಗೆ ತಡೆ ನೀಡಬೇಕು ಎಂಬ ಮನವಿಯನ್ನು ನಿರಾಕರಿಸಿರುವ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ ನೀಡಿರುವ ಆದೇಶ ಪ್ರಶ್ನಿಸಿ ಎಂಜಿನಿಯರ್‌ಗಳಾದ ವಿಶ್ವಾಸ್‌ ಮತ್ತಿತರರು ಸಲ್ಲಿಸಿರುವ ಎರಡು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಹಾಗೂ ನ್ಯಾ| ರಾಮಚಂದ್ರ ಡಿ. ಹುದ್ದಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

ಸಿಬಿಐ ತನಿಖೆಗೆ ಎಜಿ ವಿರೋಧ

ಅರ್ಜಿದಾರರ ಪರ ವಕೀಲರು ಪ್ರಕರಣವನ್ನು ನ್ಯಾಯಾಲಯವೇ ಸಿಬಿಐ ತನಿಖೆಗೆ ಒಪ್ಪಿಸಿದರೆ ಅದನ್ನು ಸ್ವಾಗತಿಸುತ್ತೇವೆ ಎಂದರು. ಆದರೆ ಅಡ್ವೋಕೇಟ್‌ ಜನರಲ್‌ ಅದಕ್ಕೆ ಆಕ್ಷೇಪಿಸಿ, ಪರೀಕ್ಷೆ ಅಕ್ರಮ ಸಂಬಂಧಿತ ಎಂಟು ಪ್ರಕರಣಗಳನ್ನು ಸಿಐಡಿಯು ಯಶಸ್ವಿಯಾಗಿ ನಿಭಾಯಿಸಿದ್ದು, ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಎಲ್ಲ ರೀತಿಯಲ್ಲೂ ಸಮರ್ಥರಾದ ಅಧಿಕಾರಿಗಳನ್ನು ಸಿಐಡಿಗೆ ನಿಯೋಜಿಸಲಾಗಿದೆ.

ಪಿಎಸ್‌ಐ ನೇಮಕಾತಿ ಹಗರಣ, ಪೊಲೀಸ್‌ ಪೇದೆ ನೇಮಕಾತಿ ಸಂಬಂಧ 65 ಪ್ರಕರಣ ದಾಖಲಿಸಲಾಗಿದೆ, ಎಸ್‌ಡಿಎ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದ 8 ಪ್ರಕರಣ ದಾಖಲಿಸಲಾಗಿದೆ. ಪ್ರೌಢಶಾಲಾ ಶಿಕ್ಷಕರ ಗ್ರೇಡ್‌-1 ನೇಮಕಾತಿ ಸಂಬಂಧ 3 ಪ್ರಕರಣ ದಾಖಲಿಸಲಾಗಿದೆ.

ಜಲಸಂಪನ್ಮೂಲ ಇಲಾಖೆಯಲ್ಲಿನ ಸಹಾಯಕ ಎಂಜಿನಿಯರ್‌ ನೇಮಕಾತಿ ಸಂಬಂಧಿತ 5 ಪ್ರಕರಣ, ಉರ್ದು ಪ್ರಾಥಮಿಕ ಶಾಲೆ ಶಿಕ್ಷಕರ ನೇಮಕಾತಿಯ ಒಂದು ಪ್ರಕರಣ, ಬಿಟ್‌ ಕಾಯಿನ್‌ ಪ್ರಕರಣವನ್ನೂ ಸಿಐಡಿ ಯಶಸ್ವಿಯಾಗಿ ನಡೆಸಿದೆ. ಹಾಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಆವಶ್ಯಕತೆ ಇಲ್ಲ ಎಂದು ಸಮರ್ಥಿಸಿಕೊಂಡರು.

ಇದನ್ನೂ ನೋಡಿ: ವಿದ್ಯಾರ್ಥಿಗಳು ತಿನ್ನುವ ಅನ್ನಕ್ಕೆ ವಾರ್ಡನ್‌ ಕನ್ನ Janashakthi Media

Donate Janashakthi Media

Leave a Reply

Your email address will not be published. Required fields are marked *