ಬೆಂಗಳೂರು: ರಾಜ್ಯದಲ್ಲಿ ಹಾಲು, ಗ್ಯಾಸ್, ವಿದ್ಯುತ್ ದರ ಸೇರಿ ಎಲ್ಲ ದಿನಬಳಕೆ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾದ ಬೆನ್ನಲ್ಲೇ ರಾಜ್ಯಾದ್ಯಂತ ಹೋಟೆಲ್‌ಗಳಲ್ಲಿ ಕಾಫಿ, ಟೀ, ತಿಂಡಿ, ಊಟದ ದರ ಹೆಚ್ಚಿಸಲು ಬೆಂಗಳೂರು ಹೋಟೆಲ್ ಗಳ ಮಾಲೀಕರ ಸಂಘ ನಿರ್ಧರಿಸಿದೆ.
ಇದನ್ನೂ ಓದಿ:ನಾಳೆಯಿಂದಲೇ ಹೋಟೆಲ್ ಊಟ, ತಿಂಡಿ ದರ ಹೆಚ್ಚಳ
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಅವರು, ಒಂದು ಕಡೆ ವಿದ್ಯುತ್ ದರ ಹೆಚ್ಚಳವಾಗಿದೆ. ಮತ್ತೊಂದೆಡೆ ಹಾಲಿನ ದರ ಹೆಚ್ಚಳದ ಬಗ್ಗೆ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅಧ್ಯಕ್ಷ ಭೀಮಾನಾಯ್ಕ ಅವರು ನಿರ್ಧಾರ ಮಾಡಿದ್ದಾರೆ.ಜೊತೆಗೆ, ಹೋಟೆಲ್ ನಲ್ಲಿ ಉಪಯೋಗಿಸುವ ಗ್ಯಾಸ್, ತರಕಾರಿ, ಬೇಳೆ ಸೇರಿದಂತೆ ಎಲ್ಲ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ದರ ಏರಿಕೆಯ ಹೊಡೆತ ನಮ್ಮ ಉದ್ಯಮದ ಮೇಲೂ ಪರಿಣಾಮ ಬೀರುತ್ತಿದೆ. ಆದ್ದರಿಂದ ನಾವು ಕೂಡ ಹೋಟೆಲ್‌ನಲ್ಲಿಯೂ ಕಾಫಿ, ತಿಂಡಿ, ಊಟದ ದರ ಏರಿಕೆ ಮಾಡಲೇ ಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ಹೋಟೆಲ್ ಮಾಲೀಕರ ಸಂಘ ದರ ಹೆಚ್ಚಳಕ್ಕೆ ಚರ್ಚೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.