ಬೆಂಗಳೂರು : ಕೆಲಸದ ಅವಧಿಯನ್ನು ದಿನಕ್ಕೆ14 ಗಂಟೆಗಳಿಗೆ ವಿಸ್ತರಿಸುವ ಸರ್ಕಾರದ ನಡೆಯನ್ನು ಐಟಿ ಉದ್ಯೋಗಿಗಳು ತೀವ್ರವಾಗಿ ವಿರೋಧಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.
ಆಗಸ್ಟ್ 3ರಂದು ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರದ ವಿರುದ್ಧ ಸಾವಿರಾರು ಸಂಖ್ಯೆಯಲ್ಲಿ ಐಟಿ ಉದ್ಯೋಗಿಗಳು ಪ್ರತಿಭಟನೆ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಐಟಿ ಮತ್ತು/ ಐಟಿಇಎಸ್ ಎಂಪ್ಲಾಯೀಸ್ ಯೂನಿಯನ್ (KITU) ಪ್ರಧಾನ ಕಾರ್ಯದರ್ಶಿ ಸುಹಾಸ್ ಅಡಿಗ ತಿಳಿಸಿದ್ದಾರೆ.
ಕೆಲಸದ ಅವಧಿಯನ್ನು 14 ಗಂಟೆಗೆ ವಿಸ್ತರಣೆ ಮಾಡಲು ಕರ್ನಾಟಕ ಸಚಿವ ಸಂಪುಟ ಚಿಂತಿಸಿತ್ತು. ಈ ಬಗ್ಗೆ ಐಟಿ ಕಂಪನಿಗಳು ಸರ್ಕಾರದ ಮೇಲೆ ಒತ್ತಡ ಹೇರಿದ್ದವು, ಇದು ಐಟಿ ಉದ್ಯೋಗಿಗಳನ್ನು ಕೆರಳಿಸುವಂತೆ ಮಾಡಿತ್ತು.
14 ಗಂಟೆ ಕೆಲಸದ ಅವಧಿ ವಿಸ್ತರಿಸುವ ಪ್ರಸ್ತಾವಕ್ಕೆ ಸಿಡಿದೆದ್ದಿದ್ದ ಸಾಫ್ಟ್‌ವೇರ್ ಉದ್ಯೋಗಿಗಳು ಕಳೆದೊಂದು ವಾರದಿಂದ ಮಡಿವಾಳ, ಬಿಟಿಎಂ ಲೇಔಟ್‌ನಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರ ತನ್ನ ನಿರ್ಧಾರ ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ನಂತರ ಈ ಕುರಿತು ಇಮೇಲ್ ಚಳುವಳಿ ಆರಂಭಿಸಿದ್ದರು, ಇದಕ್ಕೆ ಐಟಿ ನೌಕರರಲ್ಲದವರು ಬೆಂಬಲ ನೀಡುವ ಮೂಲಕ ವ್ಯಾಪಕ ಪ್ರಚಾರ ಸಿಕ್ಕಿತ್ತು. ಕರ್ನಾಟಕ ರಾಜ್ಯ ಐಟಿ ಮತ್ತು/ ಐಟಿಇಎಸ್ ಎಂಪ್ಲಾಯೀಸ್ ಯೂನಿಯನ್ ಈ ಅಭಿಯಾನವನ್ನು ಆರಂಭಿಸಿತ್ತು. ʼI oppose the Increase in Working Hoursʼ ಎಂದು ಇಮೇಲ್ ಮೂಲಕ ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಿಎಂ ಸಿದ್ದರಾಮಯ್ಯ ಅವರಿಗೆ ನಿತ್ಯ ಸಾವಿರಾರು ಸಂದೇಶ ಕಳುಹಿಸಲಾಗುತ್ತಿದೆ. ಸಾಮಾಜಿಕ ಜಾಲತಾಣ ಎಕ್ಸ್ ಹಾಗೂ ಫೇಸ್‌ಬುಕ್‌ನಲ್ಲಿ ಟ್ರೆಂಡ್ ಆಗಿದೆ.
ಏನಿದು ವಿವಾದ?
ಐಟಿ-ಬಿಟಿ ಉದ್ಯೋಗಿಗಳಿಗೆ 14 ಗಂಟೆ ಕೆಲಸದ ಸಮಯ ನಿಗಧಿ ವಿಚಾರವಾಗಿ ಸರ್ಕಾರದ ಮೇಲೆ ಕೆಲ ಉದ್ಯಮಿಗಳಿಂದ ತೀವ್ರ ಒತ್ತಡ ಹೇರಲಾಗುತ್ತಿದೆ. ಕಾರ್ಮಿಕ ಸಚಿವರ ವಿರೋಧದ ನಡುವೆಯೂ ಮುಖ್ಯಕಾರ್ಯದರ್ಶಿ ಮೂಲಕ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ಯಮಿಗಳ ಕಸರತ್ತು ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯಗೂ ಉದ್ಯಮಿಗಳು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದ ಸಚಿವ ಸಂತೋಷ್ ಲಾಡ್, ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಉದ್ಯಮಿಗಳು ವಿರೋಧಿಸಿದ್ದಾರೆ. ಆದರೆ 14 ಗಂಟೆ ಕೆಲಸದ ಸಮಯ ನಿಗಧಿ ವಿಚಾರದಲ್ಲಿ ಯಾಕೆ? ಮೌನ ಎಂದು ಕೆಲ ಪ್ರಭಾವಿ ಉದ್ಯಮಿಗಳಿಗೆ ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ. ಉದ್ಯಮಿಗಳ ಪರ ನಿಂತ ಕೆಲ ಸಚಿವರ ವಿರುದ್ದವೂ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಪುಟ ಸಹೋದ್ಯೋಗಿಗಳ ವಿರುದ್ದವೂ ಸಚಿವ ಲಾಡ್ ಕಿಡಿಕಾರಿದ್ದರು.