– ವಸಂತರಾಜ ಎನ್.ಕೆ.
ಗಾಜಾದಲ್ಲಿ ನರಮೇಧವನ್ನು ಆರೋಪಿಸಿರುವ ದಕ್ಷಿಣ ಆಫ್ರಿಕಾ ಇಸ್ರೇಲ್ “ನರಮೇಧ ತಡೆ ಒಪ್ಪಂದ” ಉಲ್ಲಂಘಿಸಿದೆ ಎಂದು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಪ್ರಕರಣ ದಾಖಲಿಸಿದೆ. ಈ ಐತಿಹಾಸಿಕ ಪ್ರಕರಣದ ಬಗ್ಗೆ ಜನವರಿ 11 ರಂದು ಐಸಿಜೆ ವಿಚಾರಣೆಯನ್ನು ಪ್ರಾರಂಭಿಸಿತು. 23,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯಾದ ಜನರನ್ನು ಕೊಂದ ಇಸ್ರೇಲಿನ ಮಿಲಿಟರಿ ಆಕ್ರಮಣವನ್ನು ತಡೆಯಲು ತುರ್ತು ಕ್ರಮಗಳನ್ನು ಕೈಗೊಳ್ಳಲು ದಕ್ಷಿಣ ಆಫ್ರಿಕಾ ಒತ್ತಾಯಿಸಿದೆ. ಈ ಪ್ರಕರಣವನ್ನು ಇಡೀ ಜಗತ್ತು ಆಸಕ್ತಿ, ಆಶಾಭಾವನೆಗಳಿಂದ ಗಮನಿಸುತ್ತಿದೆ. ಐಸಿಜೆ ನರಮೇಧದ ಆಪಾದನೆ ಮನ್ನಿಸಿ ತುರ್ತು ತಾತ್ಕಾಲಿಕ ಕ್ರಮಗಳಿಗೆ ಆದೇಶ ಕೊಡುತ್ತಾ? ಅದನ್ನು ಇಸ್ರೇಲ್ ಪುರಸ್ಕರಿಸುತ್ತಾ ? ಎಂಬ ಪ್ರಶ್ನೆ ಗಳಿಗೆ ಉತ್ತರ ಸ್ಪಷ್ಟವಿಲ್ಲ. ಆದರೆ ಐಸಿಜೆ ಪ್ರಕರಣದ ಪ್ರಕ್ರಿಯೆ ಇಸ್ರೇಲನ್ನು ಪ್ರತ್ಯಕ್ಷ ಪರೋಕ್ಷವಾಗಿ ಬೆಂಬಲಿಸುತ್ತಿರುವ ಯು.ಎಸ್, ಯುರೋ ಕೂಟದ ದೇಶಗಳಿಗೆ ಇರುಸು ಮುರುಸು ಉಂಟು ಮಾಡಿ ಇಸ್ರೇಲಿನ ಮೇಲೆ ಕಡಿವಾಣ ಹಾಕುವ ಸಾಧ್ಯತೆಯಂತೂ ದಟ್ಟವಾಗಿದೆ. ಇಸ್ರೇಲ್
ಜನವರಿ 11 ರಂದು, ದಕ್ಷಿಣ ಆಫ್ರಿಕಾ ತನ್ನ ಐತಿಹಾಸಿಕ ಪ್ರಕರಣದಲ್ಲಿ (ವಿಶ್ವ ಕೋರ್ಟ್ ಎಂದು ಕರೆಯಲಾಗುವ) ಅಂತರರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮುಂದೆ ತನ್ನ ವಾದಗಳನ್ನು ಮಂಡಿಸಿತು, ಇಸ್ರೇಲ್ ಗಾಜಾ ಪ್ರದೇಶದಲ್ಲಿ ನರಮೇಧವನ್ನು ಮಾಡಿದೆ ಎಂದು ಆರೋಪಿಸಿತು. ಅಂದು ಬೆಳಿಗ್ಗೆ ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ, ಹಾಲೆಂಡಿನಲ್ಲಿರುವ ಹೇಗ್ ನ ನ್ಯಾಯಾಲಯದ ಹೊರಗೆ ನೂರಾರು ಜನರು ಜಮಾಯಿಸಿ, “ನಿಲ್ಲಿಸಿ, ನರಮೇಧವನ್ನು ನಿಲ್ಲಿಸಿ ” ಮತ್ತು “ ನಾವೆಲ್ಲರೂ ಪ್ಯಾಲೆಸ್ಟೀನಿಯನ್ನರು ” ಎಂದು ನೂರಾರು ಜನರು ಸೇರಿ ಪ್ರತಿಭಟನೆ ನಡೆಸಿದರು. ಇಸ್ರೇಲ್
ದಕ್ಷಿಣ ಆಫ್ರಿಕಾದ ಪರವಾಗಿ ವಾದಗಳನ್ನು ಆರು ವಕೀಲರ ತಂಡವು ಮಂಡಿಸಿತು. ಐಸಿಜೆ 15 ಸದಸ್ಯರ ನ್ಯಾಯಾಧೀಶರ ಸಮಿತಿಯನ್ನು ಹೊಂದಿದೆ, ಪ್ರತಿಯೊಬ್ಬರೂ ವಿವಿಧ ದೇಶಗಳವರು ಮತ್ತು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಮತ್ತು ಭದ್ರತಾ ಮಂಡಳಿ ಗಳಿಂದ ಒಂಬತ್ತು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ. ಈ ಪ್ರಕರಣದ ತೀರ್ಪಿಗೆ ಸಹಾಯಕವಾಗುವಂತೆ (ನಿಯಮಾನುಸಾರ) ಇಸ್ರೇಲ್ ಮತ್ತು ದಕ್ಷಿಣ ಆಫ್ರಿಕಾ ತಲಾ ಒಬ್ಬರು ತಾತ್ಕಾಲಿಕ ನ್ಯಾಯಾಧೀಶರನ್ನು ನಾಮಕರಣ ಮಾಡಿವೆ. ಇಸ್ರೇಲ್
“ಪ್ಯಾಲೇಸ್ಟಿನಿಯನ್ನರ ವಿರುದ್ಧ ವರ್ಣಭೇದ ನೀತಿ, ಜನತೆಯ ಉಚ್ಚಾಟನೆ, ಜನಾಂಗೀಯ ಶುದ್ಧೀಕರಣ, ಅತಿಕ್ರಮಣ, ತಾರತಮ್ಯ ಎಸಗುತ್ತಿರುವ ಮತ್ತು ಅವರ ಸ್ವ-ನಿರ್ಣಯದ ಹಕ್ಕನ್ನು ನಿರಂತರವಾಗಿ ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 7, 2023 ರಿಂದ, ನರಮೇಧವನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ ಮತ್ತು ನರಮೇಧಕ್ಕೆ ನೇರ ಪ್ರಚೋದನೆಯನ್ನು ವಿಚಾರಣೆಗೆ ಒಳಪಡಿಸುವಲ್ಲಿ ಇಸ್ರೇಲ್, ವಿಫಲವಾಗಿದೆ ” ಎಂದು ದಕ್ಷಿಣ ಆಫ್ರಿಕಾ ವಾದಿಸಿದೆ.
ಇದನ್ನು ಓದಿ : ವಿಡಿಯೋ | ರಾಮ, ಸೀತೆ, ಲಕ್ಷಣ & ಹನುಮಂತನ ವೇಷ ಧರಿಸಿದ ಇಂಡಿಗೋ ವಿಮಾನದ ಕ್ಯಾಬಿನ್ ಸಿಬ್ಬಂದಿ!
ಇದು 1948 ರ “ನರಮೇಧದ ಅಪರಾಧ ತಡೆಗಟ್ಟುವಿಕೆ ಮತ್ತು ಶಿಕ್ಷೆಯ ಒಪ್ಪಂದ”ದ ಭಾಗವಾಗಿ ಇಸ್ರೇಲ್ ನ ಬಾಧ್ಯತೆಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿ ವಾದಿಸುತ್ತದೆ.
ಐಸಿಜೆಯನ್ನು ಉದ್ದೇಶಿಸಿ ಮಾತನಾಡುತ್ತಾ, ನೆದರ್ಲೆಂಡ್ಸ್ ನಲ್ಲಿ ದಕ್ಷಿಣ ಆಫ್ರಿಕಾದ ರಾಯಭಾರಿ “1948 ರಿಂದ ಇಸ್ರೇಲ್ ವಸಾಹತೀಕರಣದ ಮೂಲಕ ಪ್ಯಾಲೇಸ್ಟಿನಿಯನ್ ಜನರ ಮೇಲೆ ನಡೆಯುತ್ತಿರುವ ನಕ್ಬಾವನ್ನು ಗುರುತಿಸಿದೆ” ಮತ್ತು ಈಗಿನ ನರಮೇಧದ ಕೃತ್ಯಗಳು 1948ರಿಂದ ಸತತವಾಗಿ ನಡೆಯುತ್ತಿರುವ ಕಾನೂನುಬಾಹಿರ ಕೃತ್ಯಗಳ ಭಾಗವಾಗಿದೆ, ಎಂದು ಹೇಳಿದರು. ಇದನ್ನೇ ದ,ಆಫ್ರಿಕಾದ ನ್ಯಾಯ ಮಂತ್ರಿ ರೊನಾಲ್ಡ್ ಲಾಮೋಲಾ ಅವರು ಪ್ರತಿಧ್ವನಿಸಿದರು.
ಇಸ್ರೇಲ್ ತನ್ನ “ಸತತ ಮಿಲಿಟರಿ ಕಾರ್ಯಾಚರಣೆಯನ್ನು ಹೆಚ್ಚಿಸುತ್ತಿರುವ, ಮತ್ತಷ್ಟು ಹೆಚ್ಚಿಸಲು ಬೆದರಿಕೆ ಹಾಕುತ್ತಿರುವ” ಹಿನ್ನೆಲೆಯಲ್ಲಿ ಪ್ಯಾಲೇಸ್ಟಿನಿಯರನ್ನು “ಮತ್ತಷ್ಟು, ತೀವ್ರವಾದ ಮತ್ತು ಸರಿಪಡಿಸಲಾಗದ ಹಾನಿ” ಗಳಿಂದ ರಕ್ಷಿಸುವ ಸಲುವಾಗಿ “ತುರ್ತು ತಾತ್ಕಾಲಿಕ ಕ್ರಮಗಳನ್ನು” ಸೂಚಿಸಲು ದಕ್ಷಿಣ ಆಫ್ರಿಕಾ ಐಸಿಜೆಗೆ ಕರೆ ನೀಡಿದೆ, ಗಾಜಾದಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ಮತ್ತು ಜನಾಂಗೀಯ ಹತ್ಯಾಕಾಂಡದ ಅಡಿಯಲ್ಲಿ ನರಮೇಧ ಎಂದು ವ್ಯಾಖ್ಯಾನಿಸಲಾದ ಯಾವುದೇ ಮತ್ತು ಎಲ್ಲಾ ಕೃತ್ಯಗಳನ್ನು ಮಾಡದಂತೆ ತಡೆಯಲು ಇಸ್ರೇಲಿಗೆ ಆದೇಶಿಸಬೇಕೆಂದೂ ಅರ್ಜಿ ಒತ್ತಾಯಿಸಿದೆ. ಇಸ್ರೇಲ್
ನರಮೇಧಕ್ಕೆ ಸಾಕ್ಷ್ಯ ಇಲ್ಲಿದೆ !
ಇಸ್ರೇಲ್ ನ ಭೀಕರ ಕೃತ್ಯಗಳು ನರಮೇಧದ ಲಕ್ಷಣಗಳನ್ನು ಹೊಂದಿದೆ ಏಕೆಂದರೆ ಅವು “ಪ್ಯಾಲೇಸ್ಟಿನಿಯನ್ ರಾಷ್ಟ್ರೀಯ, ಜನಾಂಗೀಯ ಮತ್ತು ಜನಾಂಗೀಯ ಗುಂಪ” ನ್ನು ಇಡಿಯಾಗಿ ಅಥವಾ .ಗಣನೀಯ ಭಾಗವನ್ನು ನಾಶಪಡಿಸುವ ಉದ್ದೇಶವನ್ನು ಹೊಂದಿವೆ, ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
“ಗಾಜಾದಲ್ಲಿ ಪ್ಯಾಲೆಸ್ಟೀನಿಯರನ್ನು ಕೊಲ್ಲುವ, ಅವರಿಗೆ ಗಂಭೀರ ದೈಹಿಕ ಮತ್ತು ಮಾನಸಿಕ ಹಾನಿ ಉಂಟುಮಾಡುವ ಮತ್ತು ಅವರ ದೈಹಿಕ ವಿನಾಶವನ್ನು ತರುವ ಜೀವನದ ಪರಿಸ್ಥಿತಿಗಳನ್ನು ಅವರ ಮೇಲೆ ಹೇರುವ” ಇಸ್ರೇಲಿ ಕೃತ್ಯಗಳ ವಿವರ ಮತ್ತು ಪುರಾವೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇಸ್ರೇಲ್ ನ ಕ್ರಮಗಳು “ಒಂದು ವ್ಯವಸ್ಥಿತ ನಡವಳಿಕೆಯನ್ನು ತೋರಿಸುತ್ತವೆ, ಮತ್ತು ಇದರಿಂದ ನರಮೇಧವನ್ನು ಊಹಿಸಬಹುದು” ಎಂದು ವಾದಿಸಲಾಯಿತು. ಇಸ್ರೇಲ್
ಆಕ್ರಮಿತ ಪ್ಯಾಲೇಸ್ಟಿನಿಯನ್ ಪ್ರದೇಶಗಳ ಒಂದು ಘಟಕವಾಗಿ ಗಾಜಾದ ಪ್ರಾದೇಶಿಕ ನೀರು, ಭೂ ದಾಟುವಿಕೆ, ವಿದ್ಯುತ್ ಮತ್ತು ಕೆಲವು ಪ್ರಮುಖ ಸರ್ಕಾರಿ ಕಾರ್ಯಗಳ ಮೇಲೆ ಇಸ್ರೇಲ್ ನಿಯಂತ್ರಣವನ್ನು ಮುಂದುವರೆಸಿದೆ ಎಂದು ಎತ್ತಿ ತೋರಿಸಲಾಯಿತು. ಇಸ್ರೇಲ್
ಆಧುನಿಕ ಯುದ್ಧದ ಇತಿಹಾಸದಲ್ಲೇ “ಅತ್ಯಂತ ಭಾರೀ ಸಾಂಪ್ರದಾಯಿಕ ಬಾಂಬ್ ದಾಳಿ” ಗೆ ಪ್ಯಾಲೆಸ್ಟೀನಿಯರನ್ನು ಒಳಪಡಿಸಲಾಗಿದೆ. ಜನವರಿ 11 ರ ಹೊತ್ತಿಗೆ, ಗಾಜಾದಲ್ಲಿ 23,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನವಜಾತ ಶಿಶುಗಳನ್ನೂ ಬಿಡದ ಈ ಉದ್ದೇಶಪೂರ್ವಕ ಸಾಮೂಹಿಕ ಹತ್ಯೆ ಪ್ಯಾಲೇಸ್ಟಿನಿಯನ್ ಜೀವದ ವಿನಾಶವೇ ಎಂದು ಪ್ರಬಲವಾಗಿ ವಾದಿಸಲಾಯಿತು.
ಪ್ಯಾಲೇಸ್ಟಿನಿಯನ್ ಪಟ್ಟಣಗಳ ನಾಶ, ಇಸ್ರೇಲ್ ಹೊರಿಸಿರುವ ದಿಗ್ಬಂಧನ, ಸಾಕಷ್ಟು ಸಹಾಯ ತಲುಪಿಸಲು ಅನುಮತಿಯ ನಿರಾಕರಣೆ ಮತ್ತು ಬಾಂಬುಗಳು ಬೀಳುವಾಗ ಈ ಸೀಮಿತ ಸಹಾಯವನ್ನು ವಿತರಿಸುವ ಅಸಾಧ್ಯತೆ – ಇವೆಲ್ಲವುಗಳ ಪರಿಣಾಮವಾಗಿ ಗಾಜಾದ ಪ್ಯಾಲೆಸ್ಟೀನಿಯನ್ನರು ಹಸಿವು, ನಿರ್ಜಲೀಕರಣ ಮತ್ತು ರೋಗದಿಂದ ಸಾವಿನ ತಕ್ಷಣದ ಅಪಾಯದಲ್ಲಿದ್ದಾರೆ. ಇಸ್ರೇಲ್ ನ ನಡವಳಿಕೆಗಳು ಜೀವನಕ್ಕೆ ಅಗತ್ಯ ವಸ್ತುಗಳನ್ನು ನಿರಾಕರಿಸಿವೆ. ಉದ್ದೇಶಪೂರ್ವಕವಾಗಿ ಜೀವವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲದ ಮತ್ತು ಪ್ಯಾಲೇಸ್ಟಿನಿಯನ್ನರ ವಿನಾಶವನ್ನು ತರುವ ಪರಿಸ್ಥಿತಿಗಳನ್ನು ಉಂಟು ಮಾಡಲಾಗಿದೆ ಎಂಬುದರತ್ತ ಕೋರ್ಟಿನ ಗಮನ ಸೆಳೆಯಲಾಯಿತು. ಇಸ್ರೇಲ್
ನಾಗರಿಕರು ಉತ್ತರದಿಂದ ಗಾಜಾದ ದಕ್ಷಿಣಕ್ಕೆ ಹೋಗಲು ಇಸ್ರೇಲ್ ಹೊರಡಿಸಿದ ಮೊದಲ ಬಲವಂತ ಸ್ಥಳಾಂತರದ ಆದೇಶವು ಸ್ವತಃ ನರಮೇಧವಾಗಿದೆ. ಎಲ್ಲ ಪ್ರದೇಶಗಳಿಂದಲೂ ಸ್ಥಳಾಂತರ ಕ್ಕೆ ಆದೇಶ ಹೊರಡಿಸಲಾಗುತ್ತಿದೆ. ಎಲ್ಲೆಡೆ ಬಾಂಬ್ ದಾಳಿ ನಡೆಯುತ್ತಿದ್ದು ಎಲ್ಲೂ ಸುರಕ್ಕಿತ ಪ್ರದೇಶವಿಲ್ಲ. ಎಲ್ಲೆಡೆ ಮನೆಮಾರು, ಆಸ್ಪತ್ರೆ, ಜೀವನಾವಶ್ಯಕ ವ್ಯವಸ್ಥೆಗಳ ವಿನಾಶದ ಪ್ರಮಾಣವನ್ನು ಗಮನಿಸಿದರೆ .ಈ ಸ್ಥಳಾಂತರವು ಅನಿವಾರ್ಯವಾಗಿ ಶಾಶ್ವತವಾಗಿರುತ್ತದೆ, ಎಂದು ನರಮೇಧದ ಉದ್ದೇಶವನ್ನು ಮತ್ತು ವಿಧಾನಗಳನ್ನು ಅರ್ಜಿ ಎತ್ತಿ ತೋರಿಸಿದೆ.
“ನರಮೇಧಗಳನ್ನು ಎಂದಿಗೂ ಮುಂಚಿತವಾಗಿ ಘೋಷಿಸಲಾಗುವುದಿಲ್ಲ, ಆದರೆ ಈ ನ್ಯಾಯಾಲಯದ ಮುಂದೆ ಕಳೆದ 13 ವಾರಗಳ ಸಾಕ್ಷ್ಯಗಳಿವೆ. ಅವು ನಿರ್ವಿವಾದವಾಗಿ ನರಮೇಧದ ಕೃತ್ಯಗಳ ನಡವಳಿಕೆಯ ಮಾದರಿ ಮತ್ತು ಸಂಬಂಧಿತ ಉದ್ದೇಶಕ್ಕೆ ಪುರಾವೆ ಒದಗಿಸುತ್ತವೆ” ಎಂದು ದ.ಆಫ್ರಿಕಾದ ನ್ಯಾಯವಾದಿಗಳು ಐಸಿಜೆ ಮುಂದೆ ಪ್ರಬಲವಾಗಿ ವಾಧಿಸಿದರು.
ನರಮೇಧದ ಅಧಿಕೃತ ಉದ್ದೇಶ
ನಿರ್ದಿಷ್ಟವಾಗಿ, ವಿಶಾಲ ಪ್ಯಾಲೇಸ್ಟಿನಿಯನ್ ರಾಷ್ಟ್ರೀಯ, ಜನಾಂಗೀಯ ಮತ್ತು ಜನಾಂಗೀಯ ಗುಂಪಿನ ಭಾಗವಾಗಿ ಗಾಜಾದ ಪ್ಯಾಲೆಸ್ಟೀನಿಯರನ್ನು ನಾಶಮಾಡುವ ಉದ್ದೇಶವು, ನರಮೇಧದ ಪ್ರಕರಣಗಳಲ್ಲಿ ಬೇಕಾದ “ನಿರ್ದಿಷ್ಟ ಅಗತ್ಯ ಉದ್ದೇಶ” ಆಗಿದೆ, ಇವು ಅಕ್ಟೋಬರ್ 7 ರಿಂದ ಗಾಜಾದಲ್ಲಿ ಇಸ್ರೇಲಿನ ಕ್ರಮಗಳನ್ನು ಪ್ಯಾಲೇಸ್ಟಿನಿಯನ್ನರ ವಿರುದ್ಧ ಮಾಡಿದ ಹಿಂದಿನ ಇತರ ಅಪರಾಧಗಳಿಂದ ಪ್ರತ್ಯೇಕಿಸುತ್ತದೆಯೆಂಬುದು ದ.ಆಪ್ರಿಕಾ ಹೂಡಿರುವ ಪ್ರಕರಣದ ವಿಶಿಷ್ಟತೆ.
ಈ ನರಮೇಧದ ಉದ್ದೇಶ ಇಸ್ರೇಲ್ ಮಿಲಿಟರಿ ದಾಳಿಯನ್ನು ನಡೆಸುತ್ತಿರುವ ವಿಧಾನದಿಂದ ಸ್ಪಷ್ಟವಾಗಿದೆ… ಇದು ಅದರ ವ್ಯವಸ್ಥಿತ ಲಕ್ಷಣ ಮತ್ತು ರೂಪಗಳಲ್ಲಿ ಕಾಣುತ್ತದೆ… ಗಾಜಾದ ಪ್ಯಾಲೇಸ್ಟಿನಿಯನ್ ಜನಸಂಖ್ಯೆಯ ಒಂದು ಶೇಕಡಾವನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗಿದೆ, ಮತ್ತು ಇತರ ನಾಲ್ವರಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ”
ಇಸ್ರೇಲ್ ನ ರಾಜಕೀಯ ನಾಯಕರು, ಮಿಲಿಟರಿ ಕಮಾಂಡರ್ ಗಳು ಮತ್ತು ಅಧಿಕೃತ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳು ವ್ಯವಸ್ಥಿತವಾಗಿ ಮತ್ತು ಸ್ಪಷ್ಟವಾಗಿ ತಮ್ಮ ಜನಾಂಗೀಯ ಉದ್ದೇಶವನ್ನು ಘೋಷಿಸಿದ್ದಾರೆ. ಪ್ಯಾಲೆಸ್ಟೀನಿನ್ನರ ಮತ್ತು ಗಾಜಾದ ಭೌತಿಕ ಮೂಲಸೌಕರ್ಯಗಳ ವಿನಾಶಗಳಲ್ಲಿ ತೊಡಗಿರುವಾಗ ಈ ಹೇಳಿಕೆಗಳನ್ನು ಸೈನಿಕರು ಪುನರಾವರ್ತಿಸುತ್ತಾರೆ.”
“ನರಮೇಧಧ ಉದ್ದೇಶ” ವನ್ನು ಸ್ಪಷ್ಟವಾಗಿ ಅಭಿವ್ಯಕ್ತಗೊಳಿಸುವ ಇಸ್ರೇಲಿನ ರಾಜಕೀಯ ಮತ್ತು ಮಿಲಿಟರಿ ನಾಯಕತ್ವ ನೀಡಿದ ಹೇಳಿಕೆಗಳು ಮತ್ತು ಭಾಷಣಗಳ ಏಳು ಪುಟಗಳ ದಾಖಲಾತಿಗಳನ್ನು ಅರ್ಜಿ ಒದಗಿಸಿದೆ, ಇವರಲ್ಲಿ ಸ್ವತಃ ಇಸ್ರೇಲಿನ ಅಧ್ಯಕ್ಷರು, ಪ್ರಧಾನಿ, ಸಚಿವರು, ಆಳುವ ಕೂಟದ ನಾಯಕರು, ಪಾರ್ಲಿಮೆಂಟ್ ಸದಸ್ಯರು, ಗಾಜಾವನ್ನು “ಒರೆಸಿ ಹಾಕಬೇಕು, ನೆಲಸಮಗೊಳಿಸಬೇಕು, ಅಳಿಸಬೇಕು ಮತ್ತು ಪುಡಿಮಾಡಬೇಕು” ಎಂದು ಹೇಳಿದ್ದಾರೆ. ಈ ಹೇಳಿಕೆಗಳಲ್ಲಿ ಮತ್ತು ಗಾಜಾವನ್ನು “ಕಸಾಯಿಖಾನೆ” ಆಗಿ ಪರಿವರ್ತಿಸಬೇಕೆಂದು ಪತ್ರಕರ್ತರು ಮತ್ತು ವ್ಯಾಖ್ಯಾನಕಾರರು ಪದೇ ಪದೇ ನೀಡಿದ ಕರೆಗಳಲ್ಲಿ “ವ್ಯವಸ್ಥಿತ ಅಮಾನವೀಯ ಭಾಷೆ” ಯನ್ನು ಎತ್ತಿ ತೋರಿಸುವ ಹಲವಾರು ದಾಖಲಾತಿಗಳನ್ನು ಅರ್ಜಿ ಉಲ್ಲೇಖಿಸಿದೆ.
“ಇಸ್ರೇಲಿನ ನರಮೇಧದ ಉದ್ದೇಶವು ವಾಸ್ತವವಾಗಿ ಶತ್ರು ಕೇವಲ ಹಮಾಸ್ ನ ಮಿಲಿಟರಿ ವಿಭಾಗವಲ್ಲ ಅಥವಾ ಇಡಿಯಾಗಿ ಹಮಾಸ್ ಮಾತ್ರ ಅಲ್ಲ, ಬದಲಿಗೆ ಗಾಜಾದ ಇಡೀ ಪ್ಯಾಲೇಸ್ಟಿನಿಯನ್ ಜೀವನದ ಹೆಣಿಗೆಯೇ ಶತ್ರು ಎಂದು ನಂಬಿದೆ” ಎಂದು ದಾಖಲಾತಿಗಳು ಸ್ಪಷ್ಟವಾಗಿ ತೋರಿಸುತ್ತವೆ.
ಪ್ರಧಾನಿ ಮತ್ತಿತರ ಅಧಿಕಾರಸ್ಥ ರಾಜಕೀಯ ನಾಯಕರು, ಮಿಲಿಟರಿ ಕಮಾಂಡರ್ ಗಳ ಹೇಳಿಕೆಗಳು ಪ್ರಾಯೋಗಿಕವಾಗಿ ನೆಲದಲ್ಲಿ ಇಸ್ರೇಲಿ ಸೈನಿಕರ ಭೀಕರ ವಿನಾಶಕಾರಿ ನರಮೇಧಧ ಕೃತ್ಯಗಳಿಗೆ ಕಾರಣವಾಗಿವೆ. ಈ ಹೇಳಿಕೆಗಳನ್ನು ಸೈನಿಕರು “ಅಧಿಕೃತ ನೀತಿ” ಮತ್ತು “ಆದೇಶ” ವೆಂದು ಪರಿಗಣಿಸಿದ್ದಾರೆ ಎಂಬುದಕ್ಕೆ ಡಿಸೆಂಬರ್ 7, 2023 ರಂದು ಇಸ್ರೇಲಿ ಸೈನಿಕರು ಪ್ಯಾಲೆಸ್ಟೀನ್ ನಾಗರಿಕರ ದೌರ್ಜನ್ಯ ಎಸಗುತ್ತಿರುವುದರ ಬರ್ಬರ ವೀಡಿಯೊಗಳನ್ನು ಅವರೇ ಮಾಡಿ ಹಂಚಿಕೊಂಡಿರುವ ದಾಖಲಾತಿಯನ್ನು ಅರ್ಜಿ ಉಲ್ಲೇಖಿಸಿದೆ,
“ಇಂತಹ ನರಮೇಧದ ಪ್ರಚೋದನೆಯನ್ನು ಖಂಡಿಸಲು, ತಡೆಯಲು ಮತ್ತು ಶಿಕ್ಷಿಸಲು ಇಸ್ರೇಲ್ ಉದ್ದೇಶಪೂರ್ವಕವಾಗಿ ವಿಫಲವಾದದ್ದು ಸ್ವತಃ ನರಮೇಧ ತಡೆ ಒಪ್ಪಂದದ ಗಂಭೀರ ಉಲ್ಲಂಘನೆಯಾಗಿದೆ.” ಎಂದು ಅರ್ಜಿ ವಾದಿಸುತ್ತದೆ.
ಗಾಜಾ ಜನರನ್ನು ಈಗಲೇ ರಕ್ಷಿಸಿ!
ಗಾಜಾದಲ್ಲಿನ ನರಮೇಧದ ಕೃತ್ಯಗಳು ಮತ್ತು ಅವುಗಳ ಹಿಂದಿರುವ ಉದ್ದೇಶವನ್ನು ಸ್ಪಷ್ಟವಾಗಿ ವಿವರಿಸಿದ ದಕ್ಷಿಣ ಆಫ್ರಿಕಾದ ಅರ್ಜಿ, “ನರಮೇಧದ ತಡೆ ಒಪ್ಪಂದ”ದ ಅಡಿಯಲ್ಲಿ ಸಹಿ ಹಾಕಿದ ದೇಶಧ ಸರಕಾರವು “ಜನಾಂಗೀಯ ಕೃತ್ಯಗಳಿಂದ ದೂರವಿರುವುದು ಮಾತ್ರವಲ್ಲದೆ ಅವುಗಳನ್ನು ತಡೆಯಲು ಸಹ ಬಾಧ್ಯವಾಗಿದೆ” ಎಂಬ ಪ್ರಮುಖ ಕಟ್ಟುಪಾಡನ್ನು ಒತ್ತಿ ಹೇಳಿದೆ.
ಈ ಪ್ರಕರಣವನ್ನು ದಾಖಲಿಸುವ ಮೊದಲು, ದಕ್ಷಿಣ ಆಫ್ರಿಕಾ ಸರಕಾರವು ಇಸ್ರೇಲಿ ರಾಯಭಾರ ಕಚೇರಿಗೆ ಇಸ್ರೇಲಿನ ಕ್ರಮಗಳು ನರಮೇಧಕ್ಕೆ ಸಮನಾಗಿವೆ ಎಂಬ ಅಭಿಪ್ರಾಯವನ್ನು ಒಳಗೊಂಡ ರಾಜತಾಂತ್ರಿಕ ಟಿಪ್ಪಣಿಯನ್ನು ಕಳುಹಿಸಿತ್ತು. ಆದಾಗ್ಯೂ ಇಸ್ರೇಲ್ ಟಿಪ್ಪಣಿ ತೋರಿಸಿದ “ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿದೆ” ಮತ್ತು ಈ ವಿವಾದದ ಅಸ್ತಿತ್ವವನ್ನು ದೃಡೀಕರಿಸಿಯೂ ಇಲ್ಲ ಅಥವಾ ನಿರಾಕರಿಸಿಯೂ ಇಲ್ಲ”. ಎಂದು ಐಸಿಜೆ ವ್ಯಾಪ್ತಿಗೆ ಈ ಪ್ರಕರಣ ಬರುತ್ತದೆ ಎಂಬ ವಾದದ ಭಾಗವಾಗಿ ದಕ್ಷಿಣ ಆಫ್ರಿಕಾ ತಿಳಿಸಿದೆ.
“ಗಾಜಾದಲ್ಲಿ ಈಗ ನಡೆಯುತ್ತಿರುವುದು ಎರಡು ಪಕ್ಷಗಳ ನಡುವಿನ ಸರಳ ಸಂಘರ್ಷ ಅಲ್ಲ. ಇವು ಇಸ್ರೇಲ್, ಅತಿಕ್ರಮಣ ಮಾಡಿದ ಶಕ್ತಿಯಾಗಿ ಮಾಡಿರುವ ವಿನಾಶಕಾರಿ ಕೃತ್ಯಗಳು.” ಎಂದು ನ್ಯಾಯವಾದಿಗಳು ಒತ್ತಿ ಹೇಳಿದರು.
“ಗಾಜಾದಿಂದ ನಮ್ಮ ಮೊಬೈಲ್ ಫೋನ್, ಕಂಪ್ಯೂಟರ್ ಮತ್ತು ಟೆಲಿವಿಷನ್ ಪರದೆಗಳಿಗೆ ನೇರ ಪ್ರಸಾರವಾಗುತ್ತಿರುವ, ಪ್ಯಾಲೇಸ್ಟಿನಿಯನ್ ಜನರ ನರಮೇಧದ ಭಯಾನಕತೆಯ ಹೊರತಾಗಿಯೂ, ಇತಿಹಾಸದಲ್ಲಿ ಮೊದಲ ಬಾರಿ ನರಮೇಧವೊಂದನ್ನು ಅದರ ಬಲಿಪಶುಗಳು ಲೈವ್ ಆಗಿ ಪ್ರಸಾರ ಮಾಡುತ್ತಿದ್ದಾರೆ, ಜಗತ್ತು ಏನನ್ನಾದರೂ ಮಾಡಬಹುದೆಂಬ ವ್ಯರ್ಥ ಭರವಸೆಯಲ್ಲಿ ಅವರು ಇದನ್ನು ಮಾಡುತ್ತಿದ್ದಾರೆ… ಗಾಜಾ ನಮ್ಮೆಲ್ಲರ ಪೂರ್ಣ ನೈತಿಕ ವೈಫಲ್ಯ” ಎಂದು ನ್ಯಾಯವಾದಿಗಳು ತಿಳಿಸಿದರು.
ಪ್ಯಾಲೇಸ್ಟಿನಿಯನ್ ಜನರ ಪರವಾಗಿ ದಕ್ಷಿಣ ಆಫ್ರಿಕಾ ಕೋರಿದ ತಾತ್ಕಾಲಿಕ ಕ್ರಮಗಳ ಬಗ್ಗೆ ವಿವರಿಸುತ್ತಾ ನರಮೇಧ ತಡೆ ಒಪ್ಪಂದದ ಅಡಿಯಲ್ಲಿ ಇಸ್ರೇಲ್ ತನ್ನ ಜವಾಬ್ದಾರಿಗಳಿಗೆ ವಿರುದ್ಧವಾಗಿ ವರ್ತಿಸಿದೆ ಅಥವಾ ಇಲ್ಲವೇ ಎಂಬುದನ್ನು ಐಸಿಜೆ ತಕ್ಷಣ ನಿರ್ಧರಿಸುವ ಅಗತ್ಯವಿಲ್ಲ. ಬದಲಾಗಿ, “ನ್ಯಾಯಾಲಯದ ಅಂತಿಮ ನಿರ್ಧಾರ ಬರುವ ಮೊದಲು ತಾತ್ಕಾಲಿಕ ಕ್ರಮಗಳು ಯಾವುವು ಎಂಬ ಪ್ರಶ್ನೆ ತುರ್ತಿನದು ಎಂದು ಹೇಳಿದರು.
ಅಕ್ಟೋಬರ್ 7ರಿಂದ ಇಸ್ರೇಲ್ ವಾದಿಸುತ್ತಿರುವಂತೆ ಆತ್ಮರಕ್ಷಣೆಯ ಹಕ್ಕಿನ ನೆಪವೊಡ್ಡಿ “ನರಮೇಧದ ತಡೆ ಒಪ್ಪಂದ”ದ ಕಟ್ಟುಪಾಡುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆಕ್ರಮಿಸಿಕೊಂಡಿರುವ ಭೂಪ್ರದೇಶದಲ್ಲಿ ಆತ್ಮರಕ್ಷಣೆಯ ಹಕ್ಕಿನ ಪ್ರಶ್ನೆ ಬರುವುದಿಲ್ಲ. ವಿಶ್ವಸಂಸ್ಥೆಯ ಚಾರ್ಟರ್ ನ ಕಲಮು 51 ರ ಅಡಿಯಲ್ಲಿ ಬರುವ ಆತ್ಮರಕ್ಷಣೆಯ ನೀತಿ ಸಹ ದಾಳಿ ಅಥವಾ ಪ್ರಚೋದನೆ ಎಷ್ಟೇ ಅತಿರೇಕದ್ದು ಅಥವಾ ಭಯಾನಕವಾಗಿದ್ದರೂ, ನರಮೇಧವು ಎಂದಿಗೂ ಕಾನೂನುಬದ್ಧ ಪ್ರತಿಕ್ರಿಯೆಯಾಗುವುದಿಲ್ಲ. ಎಂದು ದ.ಆಫ್ರಿಕಾದ ನ್ಯಾಯವಾದಿಗಳು ಸ್ಪಷ್ಟೀಕರಿಸಿದ್ದಾರೆ.
“ನ್ಯಾಯಾಲಯವು ಕೈಕಟ್ಟಿ ಕುಳಿತು ಮೌನವಾಗಿರಲು ಇದು ಸಮಯವಲ್ಲ. ಅದು ತನ್ನ ಅಧಿಕಾರವನ್ನು ಪ್ರತಿಪಾದಿಸುವುದು ಅವಶ್ಯಕ ಮತ್ತು ನರಮೇಧ ತಡೆ ಒಪ್ಪಂದದ ಅಡಿಯಲ್ಲಿರುವ ಕಟ್ಟುಪಾಡುಗಳನ್ನು ಅನುಸರಿಸಲು ಆದೇಶಿಸ ಬೇಕು ಎಂದು ದ.ಆಫ್ರಿಕಾದ ನ್ಯಾಯವಾದಿಗಳು ಪ್ರಬಲವಾಗಿ ಒತ್ತಾಯಿಸಿದರು.
ಇದನ್ನೂ ಓದಿ : ಗಾಜಾ ಹತ್ಯಾಕಾಂಡ | 42 ಪತ್ರಕರ್ತರು ಸಾವು; 37 ಜನರು ಪ್ಯಾಲೆಸ್ತೀನಿಯನ್ನರು
ಜಗತ್ತು ಆಸಕ್ತಿ ಆಶಾಭಾವನೆಗಳಿಂದ ಗಮನಿಸುತ್ತಿದೆ
ಈ ನಡುವೆ ಐಸಿಜೆ ನಲ್ಲಿ ಗಾಜಾ ನರಮೇಧ ಪ್ರಕರಣವನ್ನು ಒಯ್ದ ದ.ಆಫ್ರಿಕಾದ ಐತಿಹಾಸಿಕ ಕಾರ್ಯವನ್ನು ಇಡೀ ಜಗತ್ತು ಆಸಕ್ತಿ, ಆಶಾಭಾವನೆಗಳಿಂದ ಗಮನಿಸುತ್ತಿದೆ. ಹಮಾಸ್ ವಕ್ತಾರರು, ಪ್ಯಾಲೇಸ್ಟಿನಿಯನ್ನರು ಈ ಪ್ರಕರಣವನ್ನು ಬಹಳ ಕಾಳಜಿ ಮತ್ತು ಆಸಕ್ತಿಯಿಂದ ಅನುಸರಿಸುತ್ತಿದ್ದಾರೆ. ಎಲ್ಲಾ ಒತ್ತಡಗಳನ್ನು ತಿರಸ್ಕರಿಸಲು ಗಾಜಾದ ಮೇಲಿನ ಆಕ್ರಮಣವನ್ನು ನಿಲ್ಲಿಸುವಂತೆ ನಾವು ಐಸಿಜೆ ಯನ್ನು ಕೋರುತ್ತೇವೆ ಎಂದಿದ್ದಾರೆ.
“ಪ್ರಗತಿಪರ ಅಂತರರ್ರಾಷ್ಟ್ರೀಯ” ಐಸಿಜೆ ಹೊರಗೆ ಸಾರ್ವಜನಿಕ ಸಭೆ ನಡೆಸಿತು, ಹಿರಿಯ ಯುಕೆ ಸಮಾಜವಾದಿ ರಾಜಕಾರಣಿ ಜೆರೆಮಿ ಕಾರ್ಬಿನ್ ಮತ್ತು ವರ್ಕರ್ಸ್’ ಪಾರ್ಟಿ ಆಫ್ ಬೆಲ್ಜಿಯಂನ ನಾಯಕ ಪೀಟರ್ ಮೆರ್ಟೆನ್ಸ್ ಸೇರಿದಂತೆ ಭಾಷಣಕಾರರು, ಈ ಪ್ರಕರಣದ ವಿಚಾರಣೆ “ಪ್ಯಾಲೆಸ್ಟೀನಿಯನ್ನರಿಗೆ ಮಾತ್ರವಲ್ಲ ಇಡೀ ಮನುಕುಲಕ್ಕೆ ಸಂಭಂಧಿಸಿದ ವಿಷಯ” ಎಂದು ಹೇಳಿದ್ದಾರೆ.
ಹಿಂದೆ ಇಸ್ರೇಲ್ ಜೊತೆಗಿನ ಸಂಬಂಧವನ್ನು ಕಡಿತಗೊಳಿಸಿಸ ಸ್ಪೈನ್ ನ ನಗರ ಬಾರ್ಸಿಲೋನಾದ ಮಾಜಿ ಮೇಯರ್ ಅದಾ ಕೊಲಾವ್, “ ಇಂದು ನಾವು ಮಾನವ ಹಕ್ಕುಗಳನ್ನು ರಕ್ಷಿಸಲು ಇಲ್ಲಿದ್ದೇವೆ. ಈ ಉಪಕ್ರಮಕ್ಕಾಗಿ ದಕ್ಷಿಣ ಆಫ್ರಿಕಾಕ್ಕೆ ಧನ್ಯವಾದಗಳು ಹಾಗೂ ತಕ್ಷಣದ ಮತ್ತು ಶಾಶ್ವತ ಕದನ ವಿರಾಮವನ್ನು ಕೋರುತ್ತೇವೆ.” ಎಂದಿದ್ದಾರೆ.
ದಕ್ಷಿಣ ಆಫ್ರಿಕಾದ ಪ್ರಕರಣಕ್ಕೆ ಬ್ರೆಜಿಲ್ ಅಧ್ಯಕ್ಷ ಲುಲಾ, ಕೊಲಂಬಿಯ ಅಧ್ಯಕ್ಷ ಪೆಟ್ರೊ ಮತ್ತು ಅರಬ್ ಲೀಗ್ ಬೆಂಬಲ ವ್ಯಕ್ತಪಡಿಸಿವೆ.
ಐಸಿಜೆ ನರಮೇಧದ ಆಪಾದನೆ ಮನ್ನಿಸಿ ತುತ್ರು ತಾತ್ಕಾಲಿಕ ಕ್ರಮಗಳಿಗೆ ಆದೇಶ ಕೊಡುತ್ತಾ? ಅದನ್ನು ಇಸ್ರೇಲ್ ಪುರಸ್ಕರಿಸುತ್ತಾ ? ಎಂಬ ಪ್ರಶ್ನೆ ಗಳಿಗೆ ಉತ್ತರ ಸ್ಪಷ್ಟವಿಲ್ಲ. ಆದರೆ ಐಸಿಜೆ ಪ್ರಕರಣದ ಪ್ರಕ್ರಿಯೆ ಇಸ್ರೇಲನ್ನು ಪ್ರತ್ಯಕ್ಷ ಪರೋಕ್ಷವಾಗಿ ಬೆಂಬಲಿಸುತ್ತಿರುವ ಯು.ಎಸ್, ಯುರೋ ಕೂಟದ ದೇಶಗಳಿಗೆ ಇರುಸು ಮುರುಸು ಉಂಟು ಮಾಡಿ ಇಸ್ರೇಲಿನ ಮೇಲೆ ಕಡಿವಾಣ ಹಾಕುವ ಸಾಧ್ಯತೆಯಂತೂ ದಟ್ಟವಾಗಿದೆ.
ಇಸ್ರೇಲ್ ತನ್ನ ಮೌಖಿಕ ವಾದಗಳನ್ನು ಐಸಿಜೆ ಜನವರಿ 12ರಂದು ಮಂಡಿಸಲಿದೆ. ಐಸಿಜೆ ಪ್ರಕರಣಕ್ಕೆ ಪ್ರತಿಕ್ರಿಯಿಸುತ್ತಾ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ಅಕ್ಟೋಬರ್ 7ರ ಹಮಾಸ್ ದಾಳಿಗೆ ಪ್ರತಿಕ್ರಿಯೆ ಮಾತ್ರ, ಯುದ್ಧವನ್ನು ಅಂತರರಾಷ್ಟ್ರೀಯ ಕಾನೂನು ಮತ್ತು ಒಪ್ಪಂದಕ್ಕೆ ಅನುಗುಣವಾಗಿ ನಡೆಸಲಾಗುತ್ತಿದೆ ಎಂಬ ತನ್ನ ಎಂದಿನ ಧೋರಣೆಯನ್ನು ಪುನರುಚ್ಚರಿಸಿದೆ.
ಇದನ್ನು ನೋಡಿ : ಬಹುತ್ವದ ಭಾರತದ ಉಳಿವಿಗಾಗಿ ಸಂವಿಧಾನವೇ ದಾರಿ – ಜಸ್ಟೀಸ್ ಎಚ್.ಎನ್. ನಾಗಮೋಹನ್ ದಾಸ್ Janashakthi Media