ಶಿವಮೊಗ್ಗ/ಮಂಗಳೂರು: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ(ಐಸಿಸ್)ಯೊಂದಿಗೆ ನಂಟು ಹೊಂದಿರುವ ಆರೋಪದಡಿ ಶಿವಮೊಗ್ಗ ಪೊಲೀಸರ ವಿಶೇಷ ತನಿಖಾ ತಂಡ ಇಬ್ಬರನ್ನು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಶೋಧ ನಡೆಸುತ್ತಿರುವ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಂಕಿತ ಉಗ್ರರು ಸ್ಫೋಟಕಗಳನ್ನು ಹೊಂದಿದ್ದು ರಾಜ್ಯಾದ್ಯಂತ ವಿಧ್ವಂಸಕ ಕೃತ್ಯ ನಡೆಸಲು ಯೋಜಿಸಿದ್ದರು ಎಂಬ ಆರೋಪಗಳಿವೆ.
ಶಿವಮೊಗ್ಗದ ಸಿದ್ದೇಶ್ವರ ನಗರದ ಸೈಯದ್ ಯಾಸೀನ್, ತೀರ್ಥಹಳ್ಳಿಯ ಸೊಪ್ಪುಗಡ್ಡೆ ನಿವಾಸಿ ಶಾರೀಕ್ ಹಾಗೂ ಮಂಗಳೂರಿನ ಮಾಜ್ ಮುನೀರ್ ವಿರುದ್ಧ ಪೊಲೀಸರು ವಿವಿಧ ಪ್ರಕರಣಗಳು ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಸ್ವಯಂಪ್ರೇರಿತ ದೂರನ್ನು ದಾಖಲಿಸಿಕೊಂಡಿದ್ದಾರೆ.
ಪ್ರಮುಖ ಆರೋಪಿ ಯಾಸಿನ್‌ನನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ. ಸೈಯ್ಯದ್ ಯಾಸಿನ್ ಅಲಿಯಾಸ್ ಯಾಸೀನ್ ಬೈಲು ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರೀಕಲ್ ವಿಭಾಗದಲ್ಲಿ ಎಂಜಿನಿಯರಿಂಗ್ ಆಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಕಳೆದ ಆಗಸ್ಟ್ 15ರಂದು ಪ್ರೇಮ್ ಸಿಂಗ್ ಎಂಬ ವ್ಯಕ್ತಿಯ ಮೇಲೆ ನಡೆದ ಚಾಕು ಇರಿತ ಪ್ರಕರಣದ ಹಿನ್ನೆಲೆಯಲ್ಲಿ ಭದ್ರಾವತಿ ಡಿವೈಎಸ್‌ಪಿ ಜಿತೇಂದ್ರ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಡಿವೈಎಸ್ಪಿ ಜಿತೇಂದ್ರ ತಮ್ಮ ತನಿಖೆಯ ವೇಳೆ ಆರೋಪಿ ಜಬೀವುಲ್ಲಾ ಮೊಬೈಲ್ ಪರಿಶೀಲನೆ ನಡೆಸಿದಾಗ ಉಗ್ರ ಸಂಘಟನೆಗಳ ಜತೆ ನಿರಂತರ ಸಂಪರ್ಕ ಹೊಂದಿರುವ ಮಾಹಿತಿ ಹೊರಬಿದ್ದಿದೆ. ಜಬೀವುಲ್ಲಾ ಮೇಲೆ ಮೂಲಭೂತವಾದಿಗಳು ಪ್ರಭಾವಿ ಬೀರಿದ್ದರು ಎನ್ನಲಾಗಿದೆ.
ಶಂಕಿತರ ಬಂಧನ ಕುರಿತಂತೆ ಪ್ರತಿಕ್ರಿಯಿಸಿರುವ ಶಿವಮೊಗ್ಗದ ಎಸ್ ಪಿ ಬಿಂ ಲಕ್ಷ್ಮೀ ಪ್ರಸಾದ್ ಅವರು, ಐಸಿಸ್ ನಂಟು ಆರೋಪದಲ್ಲಿ ಇಬ್ಬರ ಬಂಧನವಾಗಿದೆ. ಶಿವಮೊಗ್ಗದ 3ನೇ ಜೆಎಂಎಫ್ಸಿ ನ್ಯಾಯಾಲಯ ಆದೇಶದ ಮೇರೆಗೆ 9 ದಿನಗಳ ಕಾಲ ಇಬ್ಬರನ್ನೂ ಪೊಲೀಸರ ವಶಕ್ಕೆ ಪಡೆಯಲಾಗಿದೆ, ವಿಚಾರಣೆ ನಡೆಯುತ್ತಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬನಿಗಾಗಿ ಶೋಧ ನಡೆದಿದೆ ಎಂದು ಸ್ಪಷ್ಟಪಡಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಮೂವರು ಐಎಸ್ ಜೊತೆ ಸಂಪರ್ಕ ಹೊಂದಿದ್ದರು ಎಂದು ಹೇಳಿದ್ದಾರೆ. ಬಂಧಿತರ ಚಟುವಟಿಕೆಗಳ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ. ಅವರು ಶಿವಮೊಗ್ಗ ಮತ್ತು ತೀರ್ಥಹಳ್ಳಿಯಿಂದ ಮಂಗಳೂರಿಗೆ ಸಂಪರ್ಕ ಹೊಂದಿದ್ದಾರೆ. ಶಿವಮೊಗ್ಗ ಜಿಲ್ಲೆಯವರಾದ ಜ್ಞಾನೇಂದ್ರ ಅವರು ಬಂಧಿತರಲ್ಲಿ ಒಬ್ಬರಿಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕವಿದೆ ಎಂದು ಹೇಳಿದ್ದಾರೆ.
ಭೂಗತ ಶಂಕಿತನ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ
ಬಂಧಿತ ಅನ್ಸರ್ ಎಂಬಾತ ವ್ಯಕ್ತಿ ಮಂಗಳೂರು ಮೂಲದ ಮಾಜ್ ಮುನೀರ್ ಅಹ್ಮದ್ ಮತ್ತು ನಾಪತ್ತೆಯಾಗಿರುವ ಶಂಕಿತ ಉಗ್ರ ಮೊಹಮ್ಮದ್ ಶರೀಕ್ ಜೊತೆ ನಂಟು ಹೊಂದಿದ್ದ ಎನ್ನಲಾಗಿದೆ. ಅನ್ಸರ್ ಎಂಬಾತನನ್ನು ಪೊಲೀಸರು ಅಜ್ಞಾತ ಸ್ಥಳದಲ್ಲಿರಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತರ ಇಬ್ಬರ ಮೊಬೈಲ್ನಲ್ಲಿ ಬಾಂಬ್ ತಯಾರಿಕೆ ಮತ್ತು ವಿಧ್ವಂಸಕ ಕೃತ್ಯದ ದೃಶ್ಯಾವಳಿಗಳಿದ್ದವು ಎಂದು ಪೊಲೀಸರು ನಡೆಸಿದ ಪರಿಶೀಲನೆ ವೇಳೆ ಪತ್ತೆಯಾಗಿದೆ. ಇವರು ಸಣ್ಣ ಪ್ರಮಾಣದ ಬಾಂಬ್ ತಯಾರಿಕೆ ಮಾಡಿದ್ದಾರೆ. ಅದರಂತೆ ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು.
ತೀರ್ಥಹಳ್ಳಿಯ ಭೂಗತ ಶಂಕಿತ ಉಗ್ರ ಮತೀನ್ ತಲೆಮರೆಸಿಕೊಂಡು ಎರಡು ವರ್ಷಗಳು ಕಳೆದಿವೆ. ಈತನ ಸುಳಿವು ಇನ್ನೂ ಸಿಕ್ಕಿಲ್ಲ. ಈ ವ್ಯಕ್ತಿ ತೀರ್ಥಹಳ್ಳಿಯಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವುದು ಕಂಡು ಬಂದಿದೆ. ಸದ್ಯ ಈ ವ್ಯಕ್ತಿಯ ಬಂಧನಕ್ಕೆ ಎನ್ಐ ಮುಂದಾಗಿದೆ. ಅದರಂತೆ ಈತನ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಮತೀನ್ ತಮಿಳುನಾಡಿನ ಹಿಂದೂ ಕಾರ್ಯಕರ್ತನ ಹತ್ಯೆಯ ಆರೋಪಿ ಆಗಿದ್ದಾನೆ.