ಬೆಂಗಳೂರು: ನಗರದ ಯಲಹಂಕ ವಲಯದಲ್ಲಿರುವ ಕೋಡಿಗೆಹಳ್ಳಿ, ಕೋತಿ ಹೊಸಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಅಲ್ಲದೆ, ಒತ್ತುವರಿ ಜಾಗದಲ್ಲಿ ಬೃಹತ್ ವಸತಿ ಸಮುಚ್ಛಯಗಳನ್ನು ನಿರ್ಮಿಸಿರುವ ಪ್ರಕರಣ ಸಂಬಂಧ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಲೆ ನೇತೃತ್ವದ ವಿಭಾಗೀಯ ಪೀಠ ಅರ್ಜಿಯ ವಿಚಾರಣೆಯನ್ನು ನಡೆಸಿ, ಸರ್ಕಾರಿ ಜಮೀನಿನಲ್ಲಿ ಬೃಹತ್ ಕಟ್ಟಡಗಳು ನಿರ್ಮಾಣವಾಗಿವೆ. ಇಷ್ಟು ದೊಡ್ಡ ಕಟ್ಟಡಗಳು ರಾತ್ರೋರಾತ್ರಿ ನಿರ್ಮಾಣವಾದವೇ? ನಿಮ್ಮ ಅಧಿಕಾರಿಗಳು ಏನು ಮಾಡುತ್ತಿದ್ದರು? ಕಚೇರಿಯಲ್ಲಿ ಕುಳಿತು ಮೂಕಪ್ರೇಕ್ಷಕರಾಗಿದ್ದರೇ? ಸರ್ಕಾರಿ ಭೂಮಿಯಲ್ಲಿ ಕಟ್ಟಡ ನಿರ್ಮಿಸುವಾಗ ಸುಮ್ಮನಿದ್ದಿದ್ದೇಕೆ? ಅನುಮತಿ ನೀಡುವಾಗ ದಾಖಲೆ ಪರಿಶೀಲಿಸುವುದಿಲ್ಲವೇ ಎಂದು ಸರ್ಕಾರ ಮತ್ತು ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಅನುಮತಿ ನೀಡುವ ಸಂಬಂಧದಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುವುದಿಲ್ಲವೇ. ಎಲ್ಲ ಇಲಾಖೆಗಳಲ್ಲಿಯೂ ಇದೇ ರೀತಿಯಲ್ಲಿ ನಡೆಯುತ್ತಿದೆಯೇ? ತನ್ನ ಆಸ್ತಿಗಳನ್ನು ರಕ್ಷಣೆ ಮಾಡಿಕೊಳ್ಳುವುದಕ್ಕೆ ಸರ್ಕಾರಕ್ಕೆ ನಿಯಂತ್ರಣವಿಲ್ಲವೇ. ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದಿರಲು ಕಾರಣವೇನು ಎಂದು ನ್ಯಾಯಪೀಠ ಪ್ರಶ್ನೆ ಮಾಡಿದೆ.
ಕೊಡಿಗೇಹಳ್ಳಿ ಮತ್ತು ಕೋತಿ ಹೊಸಹಳ್ಳಿ ಗ್ರಾಮಗಳಲ್ಲಿನ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸುವಂತೆ ಸೂಚಿಸಬೇಕೆಂದು ಅಶ್ವಥ್ ನಾರಾಯಣಗೌಡ ಎಂಬುವರು ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಒತ್ತುವರಿಗೆ ಅವಕಾಶಕೊಟ್ಟ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಿ, ಮೂರು ವಾರಗಳಲ್ಲಿ ವರದಿ ನೀಡಬೇಕು ನ್ಯಾಯಪೀಠ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ. ಈ ಸಂಬಂಧ ಎನ್‌ಟಿಐ ಹೌಸಿಂಗ್ ಸೊಸೈಟಿ, ಕೆ.ಎನ್.ಚಕ್ರಪಾಣಿ ಸೇರಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಲಾಗಿದೆ.