ಪಠ್ಯ ಪುಸ್ತಕದ ಪರಿಷ್ಕರಣೆ- ಅನುಮತಿ ಹಿಂಪಡೆದ ಮತ್ತಿಬ್ಬರು ಸಾಹಿತಿಗಳು

ಬೆಂಗಳೂರು: ಪಠ್ಯ ಪುಸ್ತಕದ ಪರಿಷ್ಕರಣೆಗೆ ಸಂಬಂಧಿಸಿ ಉಂಟಾಗುತ್ತಿರುವ ವಿವಾದದವನ್ನು ವಿರೋಧಿಸಿ ಅನೇಕ ಸಾಹಿತಿಗಳು ಈ ಪಠ್ಯದಲ್ಲಿ ತಮ್ಮ ಕವಿತೆ, ಪಾಠವನ್ನು ಪ್ರಕಟಿಸದಂತೆ ಆಗ್ರಹ ಮಾಡುತ್ತಿದ್ದಾರೆ.  ಇತ್ತೀಚೆಗಷ್ಟೇ ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿರೋಧಿಸಿ ಜಿ.ರಾಮಕೃಷ್ಣ ಹಾಗೂ ದೇವನೂರ ಮಹದೇವ, ಎಸ್‌ಜಿ ಸಿದ್ದರಾಮಯ್ಯ ಅವರು ತಾವು ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿದ್ದರು. ಇದೀಗ ಸಾಹಿತಿ ಮೂಡ್ನಕೂಡು ಚಿನ್ನಸ್ವಾಮಿ ಹಾಗೂ ಈರಪ್ಪ ಎಂ ಕಂಬಳಿ ಅವರು ಬರೆದಿರುವ ಪ್ರಬಂಧ ಹಾಗೂ ಕವಿತೆಯನ್ನು ಪ್ರಕಟಿಸಲು ಅನುಮತಿಯನ್ನು ವಾಪಸ್ ಪಡೆದುಕೊಂಡಿದ್ದಾರೆ.

ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕದ ಪರಿಷ್ಕರಣೆಯನ್ನು ಅನೇಕ ಲೇಖಕರು ಸಾಹಿತಿಗಳು ಸೇರಿದಂತೆ ಗಣ್ಯರು ವಿರೋಧಿಸಿದ್ದರು. ಅಷ್ಟೇ ಅಲ್ಲದೇ ಕುವೆಂಪು ಹಾಗೂ ಬಸವಣ್ಣನರ ತತ್ವಕ್ಕೆ ಅಪಚಾರವಾಗುವಂಥ ಕೆಲಸ ನಡೆಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ತಮ್ಮ ಪ್ರಬಂಧ ಹಾಗೂ ಕವಿತೆಯನ್ನು ಅನೇಕರು ಹಿಂಪಡೆದಿದ್ದಾರೆ. ಇದೀಗ ಆ ಸಾಲಿಗೆ ಮತ್ತಿಬ್ಬರು ಸಾಹಿತಿಗಳು ಸೇರಿಕೊಂಡಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಈರಪ್ಪ ಎಂ ಕಂಬಳಿ ಅವರು, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅನಾರೋಗ್ಯಕರ ಬೆಳವಣಿಗೆಯನ್ನು ಕಂಡ ನನಗೆ ತೀವ್ರ ಅಸಮಾಧಾನವಾಗಿದೆ. ಈ ಕಾರಣಕ್ಕೆ ಕಳೆದ ಸಾಲಿನಲ್ಲಿ ಹತ್ತನೆಯ ತರಗತಿಯ ನುಡಿ ಕನ್ನಡ ತೃತೀಯ ಭಾಷಾ ಕನ್ನಡ ಪಠ್ಯಪುಸ್ತಕದಲ್ಲಿ ‘ಹೀಗೊಂದು ಟಾಪ್ ಪ್ರಯಾಣ’ ಶೀರ್ಷಿಕೆಯ ನನ್ನ ಲಲಿತ ಪ್ರಬಂಧವನ್ನು ಮುಂದುವರಿಸಬಾರದೆಂದೂ, ಈ ಹಿಂದೆ ನೀಡಿದ್ದ ನನ್ನ ಅನುಮತಿಯನ್ನು ಈ ಮೂಲಕ ವಾಪಸ್‌ ಪಡೆಯುತ್ತಿದ್ದೇನೆ ಎಂದು ಪತ್ರದಲ್ಲಿ ನಮೂದಿಸಿದ್ದಾರೆ.

ಇದನ್ನೂ ಓದಿ : ಬಸವಣ್ಣನವರ ಕುರಿತು ತಪ್ಪು ಮಾಹಿತಿ ಸೇರ್ಪಡೆ : ಪಠ್ಯ ಸರಿಪಡಿಸದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟ

ಅದೇ ರೀತಿ ಮೂಡ್ನಕೂಡು ಚಿನ್ನಸ್ವಾಮಿ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, ಐದನೇ ತರಗತಿಗೆ ಪಠ್ಯವಾಗಿರುವ ʼನನ್ನ ಕವಿತೆಯನ್ನು” ಎಂಬ ಕವಿತೆಯನ್ನು ಪ್ರಕಟಿಸಲು ಅನುಮತಿ ನೀಡಿದ್ದನ್ನು ಹಿಂತೆಗೆದುಕೊಂಡಿದ್ದಾರೆ.

ಮಹಾನ್ ದಾರ್ಶನಿಕ ಕವಿ ಕುವೆಂಪು ಅವರನ್ನು ಅವಮಾನಿಸುವುದು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮಾಡುವ ಅಪಚಾರ.ಜಾತಿ ವ್ಯವಸ್ಥೆಯಿಂದ ಕಲುಷಿತಗೊಂಡಿರುವ ನಮ್ಮ ಸಮಾಜವನ್ನು ಜಾತ್ಯತೀತತೆಯಿಂದ ಮಾತ್ರ ಸರಿಪಡಿಸಲು ಸಾಧ್ಯ. ಸ್ವಸ್ಥ ಸಮಾಜಕ್ಕಾಗಿ ಮುಂದಿನ ಪೀಳಿಗೆಯನ್ನು ತಯಾರು ಮಾಡುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕ್ಷೇತ್ರ ಅನವಶ್ಯಕ ವಿದ್ಯಮಾನಗಳಿಂದ ದಾಳಿಗೊಳಗಾಗಿರುವುದು ವಿಷಾದನೀಯ. ಪ್ರಗತಿಪರತೆಯನ್ನು ಪ್ರತಿಪಾದಿಸುವವರನ್ನು ಎಡಪಂಥೀಯರು ಎಂದು ದೂರುವುದು, ದೂರ ಮಾಡುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ ಎಂದು ಪತ್ರದಲ್ಲಿ ದೂರಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *