ಇಸ್ರೇಲ್-ಇರಾನ್ ಯುದ್ಧ : ಏನಾಯ್ತು ? ಏಕಾಯ್ತು? ಮುಂದೇನು? – ಭಾಗ 2

ವಸಂತರಾಜ ಎನ್.ಕೆ

ಇತ್ತೀಚೆಗೆ ಜಾಗತಿಕವಾಗಿ ಮೂರನೇ ಮಹಾಯುದ್ಧದ ಆತಂಕ ಮೂಡಿಸಿದ್ದ, ಇರಾನ್ ಮೇಲಿನ ಇಸ್ರೇಲಿ ಹಠಾತ್ ದಾಳಿಯಿಂದ ಆರಂಭವಾದ ಯುದ್ಧ ಅಷ್ಟೇ ಹಠಾತ್ತಾಗಿ ಸದ್ಯಕ್ಕಂತೂ ನಿಂತಿದೆ. ಇದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಯುದ್ಧ ಯಾಕೆ ನಡೆಯಿತು ? ಈ ವರೆಗೆ ತೆರೆಯ ಹಿಂದೆ ಮಾತ್ರವಿದ್ದ ಯು ಎಸ್ ಏಕೆ  ಇದ್ದಕ್ಕಿದ್ದ ಹಾಗೆ ಭಾಗವಹಿಸಿತು ? ದೀರ್ಘಕಾಲೀನ ಯುದ್ಧದಂತೆ ಕಾಣುತ್ತಿದ್ದರೂ 12 ದಿನಗಳಲ್ಲಿ ಕದನ ವಿರಾಮ ಹೇಗಾಯಿತು? ಈ ಕದನ ವಿರಾಮ ಉಳಿಯಬಹುದೆ? ಈ ಯುದ್ಧದಲ್ಲಿ ಯಾರು ಗೆದ್ದರು ?  ಮುಂದೇನಾಗಬಹುದು – ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸಲು ಪ್ರಯತ್ನಿಸಲಾಗಿದೆ.  ಭಾಗ 1 ರಲ್ಲಿ ಮೊದಲ 3 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಈ ಭಾಗ 2ರಲ್ಲಿ ಕೊನೆಯ 3 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ.
  1. ಉಕ್ರೇನ್, ಗಾಜಾಗಳಂತೆ ದೀರ್ಘ ಕಾಲದಲ್ಲಿ ನಡೆಯಬಹುದು ಅಥವಾ ಮೂರನೇ ಮಹಾಯುದ್ಧಕ್ಕೆ ಹಾದಿ ಮಾಡಬಹುದು ಎಂಬ ನಡುಕ ಹುಟ್ಟಿಸಿದ್ದ ಈ ಯುದ್ಧ 12 ದಿನಗಳಲ್ಲಿ ನಿಂತದ್ದು ಹೇಗೆ?

ಹೌದು. ಇಂತಹ ಭೀತಿ-ಆತಂಕ ಮಾತ್ರವಲ್ಲ, ಸಾಧ್ಯತೆನೂ ಇತ್ತು. ಹಾಗಾಗಿ ಯುದ್ಧ ನಿಲುಗಡೆ ಆಶ್ವರ್ಯ ಹುಟ್ಟಿಸಿದೆ. ಇದಕ್ಕೆ ಕಾರಣವೇನು ಎಂಬುದರ ಬಗ್ಗೆ ಹಲವು ವಿಶ್ಲೇಷಣೆಗಳು ಬಂದಿವೆ. ಇವುಗಳಲ್ಲಿ ಬಹುಶಃ ಈ ಮುಂದಿನದು ಹೆಚ್ಚು ಸರಿಯೆನಿಸುತ್ತದೆ:

ಇಸ್ರೇಲ್-ಯು.ಎಸ್ ಕೂಟ ದಾಳಿ ಯೋಜಿಸಿದಾಗ ಹಿರಿಯ ರಾಜಕೀಯ-ಮಿಲಿಟರಿ ನಾಯಕರ ಕೊಲೆ (ಅಗತ್ಯ ಬಿದ್ದರೆ ಖಮೇನಿ ಅವರ ಕೊಲೆಗೆ ಸಹ ಸಂಚು ಇತ್ತು) , ಅಣು ಸ್ಥಾವರಗಳ ಮೇಲೆ ದಾಳಿ, ವಾಯು ರಕ್ಷಣಾ ವ್ಯವಸ್ಥೆಯ ನಾಶ, ಟೆಹರಾನ್ ಮೇಲೆ ದಾಳಿ – ಇರಾನ್ ನಾಯಕತ್ವವನ್ನು ಪೂರ್ಣವಾಗಿ ಧೃತಿಗೆಡಿಸಬಹುದು. ಜನತೆ ಕಂಗಾಲಾಗಿ ಸರಕಾರದ ವಿರುದ್ಧ ದಂಗೆಯೇಳಬಹುದು. ಅರಾಜಕ ವಾತಾವರಣ ಉಂಟಾಗಿ, ಸರಕಾರ ಶರಣಾಗಬಹುದು ಅಥವಾ ಕನಿಷ್ಟ ಪ್ರತಿದಾಳಿ ನಡೆಸಲು ಸಾಧ್ಯವಾಗದೆ ಹೋಗಬಹುದು ಎಂಬ ಯು.ಎಸ್-ಇಸ್ರೇಲ್ ಲೆಕ್ಕಾಚಾರ ಎರಡನೇ ದಿನವೇ ತಲೆಕೆಳಗಾಯ್ತು. ಎರಡನೇ ದಿನದಿಂದಲೇ ಹಲವು ಹಿರಿಯ ನಾಯಕರ ಕೊಲೆಯ ನಂತರವೂ ಹೊಸ ನಾಯಕತ್ವ ತೀವ್ರ ಮಿಲಿಟರಿ ಪ್ರತಿದಾಳಿ ಸಂಘಟಿಸಿತು. ಟೆಲ್ ಅವಿವ್, ಹೈಫಾ ದ  ಆಯಕಟ್ಟಿನ ಗುರಿಗಳ ಮೇಲೆ ದಾಳಿಯಿಂದಾದ ವಿನಾಶ, ಇಸ್ರೇಲಿ ನಾಯಕತ್ವಕ್ಕೆ ನಡುಕ ತಂದಿತು. ಅದು ಇರಾನ್ ನ ಮಿಲಿಟರಿ ಶಕ್ತಿ, ವ್ಯೂಹ-ತಂತ್ರಗಳ ನಿಖರ ಅಂದಾಜು ಮಾಡುವುದರಲ್ಲಿ ವಿಫಲವಾಗಿತ್ತು. ಯುದ್ಧಧ ಒಂದು ವಾರದೊಳಗೆ ಇಸ್ರೇಲ್ ನಲ್ಲಿ ಕ್ಷಿಫಣಿ-ನಿರೋಧ ಕ್ಷಿಪಣಿಗಳು ಕೆಲವು ದಿನಗಳ ಸ್ಟಾಕ್ ಸಹ ಇಲ್ಲದೆ ಅದು ಸೋಲಿನ ದವಡೆ ಯಲ್ಲಿತ್ತು. ಇರಾನ್ ನ ಮಧ್ಯಮ-ದೂರದ ಕ್ಷಿಪಣಿಗಳಿಗಿಂತ ಮೊದಲೇ ಇಸ್ರೇಲ್ ನಲ್ಲಿ ಕ್ಷಿಫಣಿ-ನಿರೋಧ ಕ್ಷಿಪಣಿಗಳ ಮುಗಿದು ಹೋಗುತ್ತವೆ ಎಂದು ಹಲವು ಸ್ವತಂತ್ರ ಮಿಲಿಟರಿ ಪರಿಣತರು ಹೇಳಿದ್ದಾರೆ. ಆ ಮೇಲೆನೇ ಯು ಎಸ್ ಮಧ್ಯಪ್ರವೇಶ ಮತ್ತು ದಾಳಿಯ ನಿರ್ಣಯ ತೆಗೆದುಕೊಳ್ಳಲಾಯಿತು. ಇದಾದರೂ ಇರಾನ್ ನ್ನು ಧೃತಿಗೆಡಿಸಬಹುದು ಎಂಬ ಲೆಕ್ಕಾಚಾರವಿತ್ತು.  ದೋಹಾದಲ್ಲಿನ ಇರಾನ್  ನ ದಾಳಿ ಮತ್ತೆ ಅವರ ಲೆಕ್ಕಾಚಾರ ತಲೆ ಕೆಳಗು ಮಾಡಿತು.

ಯು.ಎಸ್ ದಾಳಿಗೆ ಪ್ರತಿಯಾಗಿ ಕೊಲ್ಲಿ ದೇಶ ಕತಾರ್ ನ ರಾಜಧಾನಿ ದೋಹಾದಲ್ಲಿನ  ಯು.ಎಸ್ ಮಿಲಿಟರಿ ನೆಲೆಯ ಮೇಲೆ ಇರಾನ್ ಮಾಡಿದ ಈ ದಾಳಿ, ಎಲ್ಲ ಕೊಲ್ಲಿ ದೇಶಗಳ ಶೇಕ್ ದೊರೆಗಳಲ್ಲಿ ಮತ್ತು  ನಾಗರಿಕರಲ್ಲಿ ತೀವ್ರ ನಡುಕ, ಭೀತಿ ಉಂಟು ಮಾಡಿದವು;  ಅಶಾಂತಿ, ಅಸ್ಥಿರತೆಯ ಪ್ರಾಣ ನಷ್ಟದ ಭೀತಿ, ತೈಲ ಸ್ಥಾವರದ ನಾಶ, ಹೂಡಿಕೆ, ವ್ಯವಹಾರಗಳಲ್ಲಿ ಏರುಪೇರುಗಳ ಕುರಿತು ಆತಂಕ ಮನೆಮಾಡಿತು. ‘ಇರಾನ್ ಬೆದರಿಕೆ’ ನಿರ್ಮೂಲನ ಕ್ಕೆ ಹೋಗಿ, ಇರುವ ನಿಷ್ಠ ಕೊಲ್ಲಿ ದೇಶಗಳ ದೊರೆ ಮತ್ತು ನಾಗರಿಕರ ಬೆಂಭಲಿಗರನ್ನು ಕಳೆದುಕೊಳ್ಳುವುದು ಜಾಣತನವಲ್ಲ; ಮೊದಲ ಬಾರಿ ನಿಜವಾದ ಯುದ್ಧದ ಸಾವು-ನೋವು, ಆತಂಕಗಳನ್ನು ಕಂಡ ಇಸ್ರೇಲಿ ನಾಗರಿಕರ ಆಕ್ರೋಶ ಇರಾನ್ ಬದಲು ಇಸ್ರೇಲಿನ ಸರಕಾರ ಬದಲಾವಣೆಗೆ ಕಾರಣವಾಗಬಹುದು – ಎಂಬ ಎಚ್ಚರ ಯು.ಎಸ್-ಇಸ್ರೇಲಿ ಕೂಟದಲ್ಲಿ ಮೂಡಿರಬೇಕು.

ಯು.ಎಸ್ ದಾಳಿಯಿಂದ ಆತಂಕಿತರಾದ ರಷ್ಯ, ಚೀನಾ ಸಹ ಯು.ಎಸ್ ಗೆ  ಮಧ್ಯ ಪ್ರವೇಶ ಮಾಡುವ ಬೆದರಿಕೆ ಮತ್ತು ಎಚ್ಚರಿಕೆ ಕೊಟ್ಟಿರಬೇಕು. ಇರಾನ್ ನ ಹೊರ್ಮುಝ್ ಜಲಸಂಧಿ ಮುಚ್ಚುವ ಬೆದರಿಕೆ ಸಹ ಈ ನಿರ್ಣಯದಲ್ಲಿ ಪಾತ್ರ ವಹಿಸಿರಬಹುದು.

ಇದನ್ನೂ ಓದಿ : ಇಸ್ರೇಲ್-ಇರಾನ್ ಯುದ್ಧ : ಏನಾಯ್ತು ? ಏಕಾಯ್ತು? ಮುಂದೇನು?- ಭಾಗ 1

  1. ಯುದ್ಧದಲ್ಲಿ ಗೆದ್ದವರು ಯಾರು ?

ಯು.ಎಸ್, ಇಸ್ರೇಲ್, ಇರಾನ್ – ಮೂವರಿಂದಲೂ ತಾವು ಗೆದ್ದಿರುವುದಾಗಿ ಘೋಷಣೆಗಳು ಕೇಳಿ ಬರುತ್ತಿವೆ. ಯುದ್ಧದಲ್ಲಿ ‘ಗೆದ್ದವನು ಸೋತ, ಸೋತವನು ಸತ್ತ’ ಎಂಬ ಮಾತು ಹೆಚ್ಚು ಸೂಕ್ತ. ಈ ದೇಶಗಳ ಜನತೆಯಂತೂ ಸೋತಿದ್ದಾರೆ ಎಂಬುದಂತು ಸ್ಪಷ್ಟ. ಇಸ್ರೇಲ್ ತನ್ನ ಎಲ್ಲ ಗುರಿಗಳು – ಅಣ್ವಸ್ತ್ರ ಕ್ಷಮತೆಯ ನಾಶ, ವಾಯು ದಾಳಿ ರಕ್ಷಣಾ ವ್ಯವಸ್ಥೆ, ಕ್ಷಿಪಣಿ ಕ್ಷಮತೆ ನಾಶದ ಮೂಲಕ ಇಸ್ರೇಲಿಗೆ ಬೆದರಿಕೆ ನಿರ್ಮೂಲನೆ, ಇಸ್ರೇಲಿ-ವಿರೋಧಿ ನಾಯಕತ್ವದ ನಾಶ – ಸಾಧಿಸಲಾಗಿದೆ ಎಂದು ಹೇಳಿಕೊಂಡಿದೆ. ಇರಾನಿನ ಅಣ್ವಸ್ತ್ರ ಕ್ಷಮತೆಯ ನಾಶ ಮಾತ್ರ ತನ್ನ ಗುರಿಯಾಗಿತ್ತು, ಅದನ್ನು ಸಾಧಿಸಲಾಗಿದೆ ಎಂದು ಯು ಎಸ್ ಹೇಳಿದೆ.

ಅಣ್ವಸ್ತ್ರ ಕ್ಷಮತೆಯ ನಾಶದ ಬಗ್ಗೆ ಹಲವು ಸ್ವತಂತ್ರ ಪರಿಣತರು ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಅಣ್ವಸ್ತ್ರ ಕ್ಷಮತೆಗೆ ಹಲವು ಆಯಾಮಗಳಿವೆ. ಕೆಲವು ಉನ್ನತ ವಿಜ್ಞಾನಿಗಳ ಹತ್ಯೆ ಮಾಡಿದ್ದರೂ, ಇರಾನಿನಲ್ಲಿ ಅಣುವಿಜ್ಞಾನ-ತಂತ್ರಜ್ಞಾನದಲ್ಲಿ ಪರಿಣತಿ ಸಾಕಷ್ಟು ಪ್ರಮಾಣದಲ್ಲಿ ಇದೆ. ಈ ದಾಳಿಯ ಅನುಮಾನವಿದ್ದದ್ದರಿಂದ ಶುದ್ಧೀಕರಿಸಿದ ಯುರೇನಿಯಂ ನ್ನು ಮೊದಲೇ ಗುಪ್ತ ಸ್ಥಳಗಳಿಗೆ ಸಾಗಾಣಿಕೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಐಎಇಎ ದಾಳಿಯ ನಂತರ ಆ ಪ್ರದೇಶಗಳಲ್ಲಿ ಅಣು ವಿಕಿರಣ ಹೆಚ್ಚಿದ್ದು ಕಂಡು ಬಂದಿಲ್ಲವೆಂಬುದು ಇದನ್ನೇ ದೃಢಪಡಿಸುತ್ತದೆ. ಯುರೇನಿಯಂ ಶುದ್ಧೀಕರಣ ಇತ್ಯಾದಿ ಉಪಕರಣಗಳನ್ನೂ ಬೇರೆ ಕಡೆಗೆ ವರ್ಗಾಯಿಸಲಾಗಿದೆ ಎಂದೂ ಹೇಳಲಾಗಿದೆ. ಆದರೆ ಸುಲಭದಲ್ಲಿ ಸಾಗಿಸಲಾಗದ ಕೆಲವು ಉಪಕರಣಗಳ ನಷ್ಟವಾಗಿರುವ ಸಾಧ್ಯತೆಯಿದೆ. ಕೆಲವು ಪರಿಣತರು ಇರಾನ್ ನ ಅಣ್ವಸ್ತ್ರ ಸೇರಿದಂತೆ ಅಣುಶಕ್ತಿ ಕ್ಷಮತೆಯನ್ನು ಕೆಲವು ತಿಂಗಳುಗಳಷ್ಟು ಮಾತ್ರ ಹಿಮ್ಮೆಟ್ಟಿಸಿರಬಹುದು ಎಂದು ಅಂದಾಜು ಮಾಡಿದ್ದಾರೆ. ಕ್ಷಿಪಣಿ, ವಾಯು ರಕ್ಷಣಾ ವ್ಯವಸ್ಥೆ ನಷ್ಟವಾಗಿದ್ದು ನಿಜವಾದರೂ ಅದನ್ನು ಮತ್ತೆ ಪಡೆಯುವುದು (ಅದರಲ್ಲೂ ರಶ್ಯ ಚೀನಾದ ಬೆಂಭಲದಿಂದ) ಕಷ್ಟವಾಗಲಾರದು.

ಇರಾನ್ ಸರಕಾರ ಬದಲಾಯಿಸಿ ಕೈಗೊಂಬೆ ಸರಕಾರ ತರುವ ಅಥವ ಅದರ ಸ್ವತಂತ್ರ ದೃಢನೀತಿಯನ್ನು ಅಸ್ಥಿರಗೊಳಿಸುವುದರಲ್ಲಿ, ಸರಕಾರದ ವಿರುದ್ಧ ಜನತೆಯಲ್ಲಿ ಆಕ್ರೋಶ ದಂಗೆ ಉಂಟು ಮಾಡುವ ಪ್ರಯತ್ನದಲ್ಲಿ ಯು.ಎಸ್-ಇಸ್ರೇಲ್ ಕೂಟ ಪೂರ್ಣ ವಿಫಲವಾಗಿದೆ. ಬದಲಿಗೆ ಆಂತರಿಕ ನೀತಿಗಳ ಕಾರಣಕ್ಕೆ ಸಾಕಷ್ಟು ಜನತೆಯ ಕೋಪಕ್ಕೆ ಗುರಿಯಾಗಿದ್ದ ಸರಕಾರವನ್ನು ಯು.ಎಸ್-ಇಸ್ರೇಲ್ ಕೂಟ ರಕ್ಷಿಸಿದೆಯೆನ್ನಬಹುದು. ಬಾಹ್ಯ ಬೆದರಿಕೆ, ಮಧ್ಯಪ್ರವೇಶ ಜನತೆಯನ್ನು ಸರಕಾರದ ಬೆಂಭಲಕ್ಕೆ ಧಾವಿಸುವಂತೆ ಮಾಡಿ ಅದನ್ನು ಬಲಪಡಿಸಿದೆ. ಅದೇ ರೀತಿ ಯು.ಎಸ್-ಇಸ್ರೇಲ್ ಕೂಟ ಆಡಳಿತದ ಕುಸಿತ, ಸಾಮಾಜಿಕ ಅರಾಜಕತೆ ವಿಘಟನೆ ತರುವಲ್ಲೂ ವಿಫಲಗೊಂಡಿದೆ. ಇರಾನಿ ಸರಕಾರದ ಉನ್ನತ ವಲಯಗಳಲ್ಲಿ ದೇಶದ್ರೋಹ, ಭ್ರಷ್ಟಾಚಾರ, ಬಾಹ್ಯಶಕ್ತಿಗಳ ಬಗ್ಗೆ ಎಚ್ಚರದ ಅಭಾವ, ಪಶ್ಚಿಮದ ಬಗ್ಗೆ ಭ್ರಮೆ – ಇವನ್ನು ಈ ದಾಳಿ ಅನಾವರಣಗೊಳಿಸಿದ್ದು ಅದನ್ನೂ ತಿದ್ದಿಕೊಳ್ಳಲು ಒತ್ತಾಯಿಸುವ ಮೂಲಕ ಬಲಪಡಿಸಿದೆ.

  1. ಈ ಕದನ ವಿರಾಮ ಮುಂದುವರೆಯಬಹುದೆ? ಪಶ್ಚಿಮ ಏಶ್ಯಾ ಮತ್ತು ಜಾಗತಿಕ ರಾಜಕೀಯ ದೀರ್ಘಕಾಲೀನ ಕೂಟನೀತಿಯ ಮೇಲೆ ಈ 12 ದಿನಗಳ ಯುದ್ಧದ ಪರಿಣಾಮವೇನು?

ತಾಂತ್ರಿಕವಾಗಿ ಇದು ಕದನ ವಿರಾಮವೇ ಅಲ್ಲ. ಯುದ್ಧದಲ್ಲಿ ತೊಡಗಿದ್ದ ಇರಾನ್ ಇಸ್ರೇಲ್ ಗಳು ಕದನ ವಿರಾಮ ಒಪ್ಪಂದಕ್ಕೆ ಬರಲಿಲ್ಲ. ಟ್ರಂಪ್ ಕದನ ವಿರಾಮದ ಘೋಷಣೆ ಮಾಡಿದರು. ಟ್ರಂಪ್ ಮಾತು ಮನ್ನಿಸುವುದಾಗಿ ಹೇಳಿದರು. ಕತಾರ್ ದೊರೆಯ ಕೋರಿಕೆಯ ಮೇರೆಗೆ ಇಸ್ರೇಲ್ ದಾಳಿ ಮಾಡದಿದ್ದರೆ ತಾನೂ ಯಾವುದೇ ದಾಳಿ ಮಾಡುವುದಿಲ್ಲವೆಂದು ಇರಾನ್ ಹೇಳಿತು, ಅಷ್ಟೇ.

ಕದನ ವಿರಾಮಕ್ಕೆ ಈಗಾಗಲೇ ಹೇಳಿದ ಕಾರಣಗಳು ನಿಜವಾದರೆ ಮತ್ತು ಅವು ನಿಜವಾಗಿರುವಷ್ಟು ಕಾಲ ಕದನ ವಿರಾಮ ಮುಂದುವರೆಯಬಹುದು. ಉದಾಹರಣೆಗೆ ಇಸ್ರೇಲಿ ಜನತೆಯಿಂದ, ಕೊಲ್ಲಿದೇಶಗಳ ದೊರೆ ಮತ್ತು ಜನತೆಯಿಂದಲೂ ಮತ್ತೊಂದು ಯುದ್ಧಕ್ಕೆ ತೀವ್ರ ವಿರೋಧ ಬರಬಹುದು. ಈ ಪ್ರದೇಶದ ಯು.ಎಸ್ ನೆಲೆಗಳ ಮೇಲೆ ದಾಳಿಯ ಭೀತಿ ಟ್ರಂಪ್ ಮತ್ತೆ ಇಂತಹ ದುಸ್ಸಾಹಸಕ್ಕೆ ಕೈಹಾಕುವ ಮೊದಲು ಎರಡು ಬಾರಿ ಯೋಚಿಸಬಹುದು. ಇಸ್ರೇಲಿನಲ್ಲಿ ಸರಕಾರ ಬದಲಾವಣೆಯಾಗಿ ನೇತನ್ಯಾಹು ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಯು.ಎಸ್-ಇಸ್ರೇಲ್ ಕೂಟ ಇರಾನಿನ ಮಿಲಿಟರಿ ಬಲದ ಬಗ್ಗೆ ಮಾಡಿದ ಕಡಿಮೆ ಅಂದಾಜು ಅವರನ್ನು ಎಚ್ಚರಿಕೆಯಿಂದ ಮುಂದಿನ ಹೆಜ್ಜೆ ಇಡುವಂತೆ ಮಾಡಬಹುದು. ತೀವ್ರ ಅತೃಪ್ತಿಯ ನಡುವೆಯೂ ಇರಾನಿನಲ್ಲಿ ಕೈಗೊಂಬೆ  ಸರಕಾರದ ರಚನೆ (ಇದು ಯು,ಎಸ್-ಇಸ್ರೇಲಿ ಕೂಟದ ನಿಜವಾದ ಗುರಿ) ಕಷ್ಟಸಾಧ್ಯ ಎಂಬುದೂ ಹಿಂಜರಿತಕ್ಕೆ ಕಾರಣವಾಗಬಹುದು. ಅಥವಾ ಈ ಬಾರಿಯ ನ್ಯೂನತೆ ಕಡಿಮೆ ಅಂದಾಜುಗಳನ್ನು ಸರಿ ಪಡಿಸಿಕೊಂಡು ಸ್ವಲ್ಪ ಸಮಯದ ನಂತರ ಮತ್ತೆ ಪೂರ್ಣ ತಯಾರಿಯೊಂದಿಗೆ ಇರಾನಿನ ಮೇಲೆ ಮತ್ತೆ ಹಠಾತ್ ದಾಳಿ ಮಾಡಬಹುದು.

ಈ ಯುದ್ಧವನ್ನು ಬಳಸಿ ಈಗಾಗಲೇ ಐಎಇಎ ಜತೆ ಅಣು ಸ್ಥಾವರ ಪರೀಕ್ಷಣೆ ಇತ್ಯಾದಿ ಸಹಕಾರ ಅಮಾನತಿನಲ್ಲಿಡಲು ಅಥವಾ ರದ್ದು ಮಾಡಲು ಇರಾನಿ ಪಾರ್ಲಿಮೆಂಟು ಈಗಾಗಲೇ ಸರಕಾರಕ್ಕೆ ಅಧಿಕಾರ ಕೊಟ್ಟಿದೆ. ಎನ್.ಪಿ.ಟಿ ಯಿಂದಲೂ ಇರಾನ್ ಹೊರಬರುವ ಸೂಚನೆಗಳಿವೆ. ಅಣುಸ್ಥಾವರಗಳ ಮೇಲೆ ಯು.ಎಸ್-ಇಸ್ರೇಲಿ ದಾಳಿಯು ಎನ್.ಪಿ.ಟಿ ಯನ್ನು ಅರ್ಥಹೀನಗೊಳಿಸಿದೆ. ಇರಾನಿ ವಿದೇಶಿ ಸಚಿವರು ಅಣು ಸ್ಥಾವರಗಳ ನಾಶಕ್ಕೆ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಐಎಇಎ ಪರೀಕ್ಷಣೆ ಮತ್ತು ಎನ್.ಪಿ.ಟಿ ಯಿಂದ ಸ್ವತಂತ್ರವಾದ ಮೇಲೆ, ಇರಾನ್ ಮುಂದೆ ಹಲವು ಆಯ್ಕೆಗಳಿವೆ. ಅಣು ಸ್ಥಾವರಗಳು ನಾಶವಾಗಿರುವುದರಿಂದ ಯೋಜನೆ ಸ್ಥಗಿತಗೊಂಡಿದೆ ಎಂದು ಹೇಳಿ, ಐಎಇಎ ಪರೀಕ್ಷಣೆಯಿಂದ ಮುಕ್ತವಾದ ಅಣುಶಕ್ತಿಗೆ ಮಾತ್ರ ಬಳಸುತ್ತೇವೆ ಎಂದು ಹೇಳುತ್ತಾ, ಗುಪ್ತವಾಗಿ ಅಣ್ವಸ್ತ್ರ ತಯಾರಿಕೆಗೆ ಯೋಜಿಸಬಹುದು. (ಭಾರತ ಎನ್.ಪಿ.ಟಿ ಗೆ ಸಹಿ ಮಾಡದೆ, ಇದನ್ನೇ ಮಾಡಿತ್ತು ಎಂದು ಇಲ್ಲಿ ನೆನಪಿಸಿಕೊಳ್ಳಬಹುದು) ಇಲ್ಲವೆ ಆರ್ಥಿಕ ದಿಗ್ಬಂಧನ ಕೂಡಲೇ ತೆಗೆಯಿರಿ, ಇಲ್ಲದಿದ್ದರೆ ತಾನು ಅಣ್ವಸ್ತ್ರ ತಯಾರಿಕೆಗೆ ಸ್ವತಂತ್ರವೆಂದು ಘೋಷಿಸಬಹುದು. ಒಟ್ಟಾರೆಯಾಗಿ ಯು.ಎಸ್ ಮತ್ತು ಯುರೋಪ್ ಜತೆ ಮಾತುಕತೆ-ಚೌಕಾಶಿಗಳಲ್ಲಿ ಅಣುತಂತ್ರಜ್ಞಾನವನ್ನು ದಾಳವಾಗಿ ಬಳಸಬಹುದು. ಇರಾನ್ ಒಳಗೆ ಸಹ ಅಣ್ವಸ್ತ್ರ ತಯಾರಿಕೆಗೆ ಹೆಚ್ಚಿನ ಒತ್ತಡ ಬರಬಹುದು. ಈ ವರೆಗೆ ಪರಮ ನಾಯಕ ಖಮೇನಿ ಮತ್ತು ಸಾಂಪ್ರದಾಯಿಕ ನಾಯಕತ್ವ ಅಣ್ವಸ್ತ್ರಗಳು ಇಸ್ಲಾಂ-ವಿರೋಧಿ ಎಂಬ ಧಾರ್ಮಿಕ-ನೈತಿಕ ಕಾರಣಕ್ಕೆ ಅಣ್ವಸ್ತ್ರ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟಿರಲಿಲ್ಲ ಎನ್ನಲಾಗಿದ್ದು, ಇದು ಬದಲಾಗುವುದೇ ಎಂದು ಕಾದು ನೋಡಬೇಕಾಗಿದೆ. ಇರಾನ್ ಸಹ 12 ದಿನಗಳ ಯುದ್ಧದಲ್ಲಿ ನಾಶವಾದ ಮತ್ತು ಅದರಿಂದ ಕಲಿತ ಪಾಠಗಳ ಆಧಾರದ ಮೇಲೆ ಮಿಲಿಟರಿ ಬಲ ಮತ್ತೆ ಕಟ್ಟಿಸಿ ಹೆಚ್ಚಿಸಬಹುದು. ಆ ಮೂಲಕ ಇಸ್ರೇಲಿನಿಂದ ಮುಂದಿನ ಹಠಾತ್ ದಾಳಿಗೆ ಸಿದ್ಧವಾಗಬಹುದು. ಅಥವಾ ತಾನೇ ಹಠಾತ್ ದಾಳಿ ಮಾಡಬಹುದು. ಹೀಗೆ ಎರಡೂ ಕಡೆಯಿಂದ ಸದ್ಯಕ್ಕೆ ಕದನವಿರಾಮ ಮುಂದುವರೆಯಬಹುದು. ಆದರೆ ಈ ವಿರಾಮವನ್ನು ಮುಂದಿನ ಯುದ್ಧದ ತಯಾರಿಗೆ ಬಳಸುವ ಸಾಧ್ಯತೆ ಹೆಚ್ಚು.

ಯು.ಎಸ್-ಇಸ್ರೇಲ್ ಮತ್ತೆ ಅಣ್ವಸ್ತ್ರ ಒಪ್ಪಂದಕ್ಕೆ ಒತ್ತಾಯ ಹೇರಬಹುದು.  ಯುರೇನಿಯಂ ಶುದ್ದೀಕರಣ ಮಾಡಲೇಬಾರದು ಎಂಬ ಷರತ್ತಿಗೆ ಅಂಟಿಕೊಂಡರೆ ಅಥವಾ ಇರಾನ್ ಎನ್,ಪಿ.ಟಿ ಯಿಂದ ಹೊರಬಂದರೆ ಮಾತುಕತೆ ಪೂರ್ಣವಾಗಿ ಮುರಿದು ಬೀಳಬಹುದು, ಸಂಘರ್ಷದ ವಾತಾವರಣ ಉಂಟಾಗಬಹುದು.

ಯು.ಎಸ್-ಇಸ್ರೇಲ್ ಕೂಟ ಮತ್ತು ಇರಾನ್ ಸಂಘರ್ಷಕ್ಕೆ ಬಲವಾದ ಮೂಲಭೂತ ಕಾರಣಗಳಿವೆ. ಅವುಗಳನ್ನು ಹೋಗಲಾಡಿಸದೆ ಕದನ ವಿರಾಮ ಬಹಳ ದೀರ್ಘ ಕಾಲ ನಿಲ್ಲುವ ಸಾಧ್ಯತೆ ಕಡಿಮೆ.

ಪಶ್ಚಿಮ ಏಶ್ಯಾದ ಅಪಾರ ತೈಲ‌ನಿಕ್ಷೇಪ ಮತ್ತು ಅದರಿಂದ ಸೃಷ್ಟಿಯಾಗಿರುವ ಸಂಪತ್ತು ಮೇಲೆ ತನ್ನ ನಿಯಂತ್ರಣ ಖಾಯಂ ಆಗಿರಬೇಕು. ತೈಲ ವ್ಯಾಪಾರ ಮತ್ತು  ಪೆಟ್ರೋ ಡಾಲರ್ ವ್ಯವಸ್ಥೆಯ ಮೂಲಕ ಪ್ರದೇಶದ ಸಂಪತ್ತನ್ನು ವರ್ಗಾಯಿಸಲು ಯು.ಎಸ್ ಸಾಮ್ರಾಜ್ಯಶಾಹಿಗೆ ತಲೆಬಾಗಿಸುವ ಸರಕಾರಗಳು ಈ ಪ್ರದೇಶದ ದೇಶಗಳಲ್ಲಿರಬೇಕು..ಇಡೀ ಪ್ರದೇಶದ ಮತ್ತು ಹೀಗೆ  ತಲೆಬಾಗದ ಸರಕಾರಗಳನ್ನು ಬೆದರಿಸಲು ಇರುವ ಪಾಳೆಯಗಾರನೇ ಇಸ್ರೇಲ್. ಇದಕ್ಕಾಗಿಯೇ ಹಿಂದಿನ ಸಾಮ್ರಾಜ್ಯಶಾಹಿ ಬ್ರಿಟನ್-ಫ್ರಾನ್ಸ್ ಮತ್ತು ಈಗಿನ ಸಾಮ್ರಾಜ್ಯಶಾಹಿ ಯು.ಎಸ್ ಸೇರಿಯೇ  ಝಿಯೊನಿಸ್ಟ್ ಪ್ರಭುತ್ವ ಇಸ್ರೇಲ್.ನ್ನು ಹುಟ್ಟು ಹಾಕಿರುವುದು. ಎಲ್ಲ ಪ್ಯಾಲೆಸ್ಟನ್ನರನ್ನು ಓಡಿಸಿ ಜ್ಯೂ  ಗಳಿಗೆ ಸೀಮಿತವಾದ ಮಹಾ ಇಸ್ರೇಲ್ ಕಟ್ಟುವುದು ಅವರ ಕನಸು.

ಕೊಲ್ಲಿ ದೇಶಗಳ ದೊರೆಗಳಾದ ಶೇಕ್ ಗಳಂತೂ ಎಂದಿನಿಂದಲೂ ತಲೆಬಾಗಿ ನಡೆಯುತ್ತಿದ್ದಾರೆ. ತಲೆಬಾಗದ ಸರಕಾರಗಳನ್ನು ಉರುಳಿಸುವುದು ಯು.ಎಸ್ ನ ವಿದೇಶ ನೀತಿಯ ಭಾಗ. ಈಜಿಪ್ಟ್, ಇರಾನ್(೧೯೫೩), ಇರಾಕ್, ಲಿಬ್ಯಾ, ಸಿರಿಯಾ, ಲೆಬನಾನ್, ಜೋರ್ಡಾನ್. ಹೀಗೆ ಆಯಾ ಕಾಲದಲ್ಲಿ ತಲೆಬಾಗದ ಸರಕಾರಗಳನ್ನು ಉರುಳಿಸಲಾಗಿದೆ. ಈಗ ತಲೆಬಾಗದ ಮತ್ತು ಪ್ಯಾಲೆಸ್ಟೀನ್ ಬೆಂಬಲಿಸುವ ಒಂದೇ  ಶಕ್ತಿ ಇರಾನ್. ಅದನ್ನು ಮಟ್ಟ ಹಾಕಿದರೆ ಮಾತ್ರ ಇಡೀ ಪಶ್ಚಿಮ ಏಶ್ಯಾದ ಮೇಲೆ ಪೂರ್ಣ ಅಧಿಪತ್ಯ ಸಾಧ್ಯ.

ಈಗಿನ ಸಂದರ್ಭದಲ್ಲಿ ಇರಾನ್ ನ್ನು ಗುರಿ ಮಾಡಲು ಜಾಗತಿಕ ಕಾರಣಗಳೂ ಇವೆ. ಜಗತ್ತು ವೇಗವಾಗಿ ಬಹುದ್ರುವೀಯ ಆಗುತ್ತಿದೆ. ಆರ್ಥಿಕವಾಗಿ ಜಾಗತಿಕ ಉತ್ತರ (ಜಿ7) ಅವನತಿಯಾಗುತ್ತಿದ್ದು ಅಥವಾ ಸ್ಥಗಿತವಾಗುತ್ತಿದ್ದು, ಜಾಗತಿಕ ದಕ್ಷಿಣ (ಅಭಿವೃದ್ಧಿಶೀಲ ದೇಶಗಳು) ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿದೆ.  ಮೊದಲ ಬಾರಿಗೆ ಜಾಗತಿಕ ದಕ್ಷಿಣದ ಜಿಡಿಪಿ ಜಾಗತಿಕ ಉತ್ತರದ ಜಿಡಿಪಿಯನ್ನು ದಾಟಿವೆ. ಜಾಗತಿಕ ಉತ್ತರದ ಮಾರುಕಟ್ಟೆ, ಹೂಡಿಕೆ, ತಂತ್ರಜ್ಞಾನ, ಹಣಕಾಸು ನೆರವು ಇಲ್ಲದೆ ಸ್ವತಂತ್ರವಾಗಿ  ಬೆಳೆಯಬಲ್ಲ ಕ್ಷಮತೆಯನ್ನು ಈಗ ಜಾಗತಿಕ ದಕ್ಷಿಣ ಹೊಂದಿದೆ. ಇದರ ಪರಿಣಾಮವಾಗಿ ಎರಡನೇ ಮಹಾಯುದ್ಧದ ನಂತರ ಜಾಗತಿಕ ಉತ್ತರ ರಚಿಸಿದ್ದ ಅಂತರರಾಷ್ಟ್ರೀಯ ವ್ಯವಸ್ಥೆ ಕುಸಿದು ಬೀಳುತ್ತಿದೆ ಹೊಸ ಜಾಗತಿಕ ವ್ಯವಸ್ಥೆ ರೂಪುಗೊಳ್ಳುತ್ತಿದೆ.  ಬ್ರಿಕ್ಸ್, ಎಸ್.ಸಿ.ಒ, ಅಪಡಾಲರೀಕರಣ, – ಈ ಹೊಸ ವ್ಯವಸ್ಥೆಯ ಉದಾಹರಣೆಗಳು.

ಇರಾನ್ ಬ್ರಿಕ್ಸ್ ಭಾಗವಾಗಿದ್ದು ರಶ್ಯ, ಚೀನದ ಜತೆ ಆರ್ಥಿಕವಾಗಿ, ಮಿಲಿಟರಿಯಾಗಿ, ವ್ಯೂಹಾತ್ಮಕವಾಗಿ ಘನಿಷ್ಠ ಸಂಬಂಧ ಹೊಂದಿವೆ. ರಶ್ಯ, ಚೀನಾ ಗಳು ಯುರೋಪಿನೊಂದಿಗೆ ಸೇರಿ ‘ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್’ ಮೂಲಕ  ಯುರೇಶಿಯನ್ ಆರ್ಥಿಕ ಕೂಟ ರಚಿಸುವ ಪ್ರಯತ್ನದ ಮೇಲೆ ಯು.ಎಸ್ ಉಕ್ರೇನ್ ನಲ್ಲಿ ಕೈಗೊಂಬೆ ಸರಕಾರ ಮತ್ತು ಯುದ್ಧಕ್ಕೆ ಪ್ರಚೋದನೆ ಕೊಡುವ ಮೂಲಕ ವಿಫಲಗೊಳಿಸಿದವು. ಇರಾನ್ ಬ್ರಿಕ್ಸ್ ನ ಪ್ರಮುಖ ಸದಸ್ಯನಾಗಿದ್ದು ಹೊಸ ಯುರೇಶಿಯನ್ ಕೂಟ ರಚಿಸುವ ಪ್ರಯತ್ನವನ್ನು ವಿಫಲಗೊಳಿಸುವ ಪ್ರಯತ್ನದ ಭಾಗವೇ ಇರಾಕ್ ಮೇಲೆ ಯುದ್ಧ. ಇರಾನ್ ರಶ್ಯಾದ ದಕ್ಷಿಣದ ಗಡಿಗೆ ಹತ್ತಿರವಾಗಿದ್ದು, ಅಲ್ಲಿ ಉಕ್ರೇನಿನಂತೆ ಕೈಗೊಂಬೆ ಸರಕಾರ ಸಾಧ್ಯವಾದರೆ ರಶ್ಯಕ್ಕೆ ಕಿರುಕುಳ ಕೊಡಬಹುದು. ಇರಾನಿನಲ್ಲಿ ಕೈಗೊಂಬೆ ಸರಕಾರ ಸಾಧ್ಯವಾದರೆ ಚೀನಾದ ತೈಲ ಪೂರೈಕೆ ಗೂ ಅಡ್ಡಿ ಮಾಡಬಹುದು. ಇತ್ತೀಚಿಗಷ್ಟೇ ಚೀನಾದಿಂದ ಇರಾನಿಗೆ ನೇರ ರೈಲು ಸಂಚಾರ ಆರಂಭವಾಗಿತ್ತು ಎಂದು ಇಲ್ಲಿ ನೆನಪಿಸಿಕೊಳ್ಳಬಹುದು.

ಇರಾನ್ ಮೇಲೆ ಯುದ್ಧವು, ಇರಾನ್, ರಶ್ಯ, ಚೀನಾ ಯುರೇಶಿಯನ್ ಕೂಟ ಮುರಿಯುವ ದೀರ್ಘಕಾಲೀನ ಗುರಿಯ ಒಂದು ಹೆಜ್ಜೆಯಾಗಿತ್ತು. ಹಾಗಾಗಿ ಈ ಗುರಿ ಇರುವವರೆಗೆ ಇರಾನ್ ಮೇಲೆಯು.ಎಸ್-ಇಸ್ರೇಲ್ ಕೂಟದ ಹದ್ದಿನ ಕಣ್ಣು ಇರುತ್ತದೆ.

ಯು ಎಸ್, ಯುರೊಪ್, ಇಸ್ರೇಲುಗಳಲ್ಲಿ ಗುರಿಯನ್ನು ಬದಲಿಸುವ ತೀವ್ರ  ರಾಜಕೀಯ ಬದಲಾವಣೆಗಳು (ಇವು ಅಸಾಧ್ಯವೇನಲ್ಲ) ಆಗದಿದ್ದರೆ ಈ ಗುರಿ ಮುಂದುವರೆಯುತ್ತದೆ.

ಇದನ್ನೂ ನೋಡಿ : ರೈತರನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡ್ತೀರಾ.. ಸಿದ್ರಾಮಯ್ಯನವರೇ? ಎಸ್‌ ವರಲಕ್ಷ್ಮೀ ಪ್ರಶ್ನೆ Janashakthi

 

Donate Janashakthi Media

Leave a Reply

Your email address will not be published. Required fields are marked *