ಹುಬ್ಬಳ್ಳಿ: ಬಜರಂಗದಳ ಹಾಗೂ ಇತರ ಹಿಂದೂಪರ ಸಂಘಟನೆಯ 100 ಜನ ಕಾರ್ಯಕರ್ತರು ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಅಕ್ಟೋಬರ್ 17ರಂದು ನವನಗರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು. ಅಂದು ವ್ಯಕ್ತಿಯೊಬ್ಬರು ಅವಾಚ್ಯವಾಗಿ ಡಿಸಿಪಿಯನ್ನು ನಿಂದಿಸಿದ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು.
ಅಂದು ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಪ್ರಚೋದಿಸಿದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಯವರು ಏಕಾಏಕಿಯಾಗಿ ಪ್ರತಿಭಟನೆಗೆ ಮುಂದಾಗಿದ್ದರು. ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಕೂಡ ಪ್ರತಿಭಟನೆಯ ಭಾಗವಾಗಿದ್ದರು.
ಈ ಸಂದರ್ಭದಲ್ಲಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಕೆ. ರಾಮರಾಜನ್ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ. ಡಿಸಿಪಿಯನ್ನು ಬಹಿರಂಗವಾಗಿ ಅವಾಚ್ಯ ಪದಗಳಿಂದ ನಿಂದಿಸಿದ ಘಟನೆಗೆ ಸಂಬಂಧಿಸಿದಂತೆ ಅಶೋಕ ಅಣ್ವೇಕರ ಹಾಗೂ ಇತರ 100 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 504,143,147,153,295 (ಎ) ಮತ್ತು 353 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಜರಂಗದಳ ಹಾಗೂ ಇತರ ಹಿಂದೂಪರ ಸಂಘಟನೆಗಳ ಪ್ರತಿಭಟನೆ ಸಂದರ್ಭದಲ್ಲಿ ಸಮಾಜದ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಮತ್ತು ಶಾಂತಿಗೆ ಭಂಗವಾಗುವಂತೆ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಪೊಲೀಸ್ ಇಲಾಖೆಯಲ್ಲಿ ಶೇ 99ರಷ್ಟು ಜನ ಸಿಬ್ಬಂದಿ ಹಿಂದೂಗಳೇ ಇದ್ದು, ಅವರೆಲ್ಲ ಕಾನೂನು ಪಾಲನೆ ಮಾಡುತ್ತಿದ್ದಾರೆ. ಆದರೆ ಮತಾಂತರಿ, ದೇಶದ್ರೋಹಿ ಹಾಗೂ ಸೋನಿಯಾ ಗಾಂಧಿಯ ಚಮಚಾ ಡಿಸಿಪಿ, ಠಾಣೆಗೆ ಸಂಘಟನೆಯ ಕಾರ್ಯಕರ್ತರು ಕರೆದುಕೊಂಡು ಬಂದ ಆರೋಪಿಯನ್ನೇ ವಾಪಸ್ ಕಳುಹಿಸಿದ್ದಾನೆ ಆ ವ್ಯಕ್ತಿ ಆಕ್ರೋಶ ವ್ಯಕ್ತಪಡಿಸಿದ್ದು, ವಿಡಿಯೊದಲ್ಲಿ ದಾಖಲಾಗಿದೆ.
ಠಾಣೆಯ ಎದುರು ಏಕಾಏಕಿ ಪ್ರತಿಭಟಿಸಿದ್ದರು, ಅಕ್ರಮವಾಗಿ ಗುಂಪು ಕಟ್ಟಿಕೊಂಡು ಠಾಣೆಗೆ ನುಗ್ಗಿ ಸರ್ಕಾರಿ ಕರ್ತವ್ಯ ನಿಭಾಯಿಸಲು ಪೊಲೀಸರಿಗೆ ಅಡ್ಡಿಯುಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.