ಅಂಬೇಡ್ಕರ್ ಪೋಟೋಗೆ ಅಪಮಾನ, ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವರ್ಗಾವಣೆ

  • ರಾಯಚೂರು ಜಿಲ್ಲಾ ಪ್ರಧಾನ ‌ಮತ್ತು ಸತ್ರ ನ್ಯಾಯಾಧೀಶರಾಗಿದ್ದ ಮಲ್ಲಿಕಾರ್ಜುನಗೌಡ ವರ್ಗಾವಣೆ
  • ಹೈಕೋರ್ಟ್ ‌ರೆಜಿಸ್ಟ್ರಾರ್‌ ಟಿ.ಜಿ. ಶಿವಶಂಕರೇಗೌಡ ಅವರಿಂದ ಆದೇಶ
  • ಗಣರಾಜ್ಯೋತ್ಸವ ಸಂದರ್ಭ ಸಂವಿಧಾನ ಶಿಲ್ಪಿ ಡಾ.ಬಿಆರ್‌. ಅಂಬೇಡ್ಕರ್ ಪೋಟೋಗೆ ಅವಮಾನ ಮಾಡಿದ್ದ ನ್ಯಾಯಾಧೀಶರು
  •  ಮಲ್ಲಿಕಾರ್ಜುನಗೌಡ ವಿರುದ್ಧ ರಾಜ್ಯಾದ್ಯಂತ ತೀವ್ರಗೊಂಡಿದ್ದ ಪ್ರತಿಭಟನೆ

ರಾಯಚೂರು: ಗಣರಾಜ್ಯೋತ್ಸವ ಸಂದರ್ಭದಲ್ಲಿ ಡಾ.ಬಿಆರ್‌. ಅಂಬೇಡ್ಕರ್ ಪೋಟೋಗೆ ಅವಮಾನ ಮಾಡಿದ ಹಿನ್ನೆಲೆಯಲ್ಲಿ ತೀವ್ರ ವಿರೋಧ ಎದುರಿಸುತ್ತಿದ್ದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಶುಕ್ರವಾರ ವರ್ಗಾವಣೆ ಮಾಡಲಾಗಿದೆ.

ರಾಯಚೂರು ಜಿಲ್ಲಾ ಪ್ರಧಾನ ‌ಮತ್ತು ಸತ್ರ ನ್ಯಾಯಾಧೀಶರಾಗಿದ್ದ ಮಲ್ಲಿಕಾರ್ಜುನಗೌಡ ಅವರನ್ನ ವರ್ಗಾವಣೆ ‌ಮಾಡಿ ಹೈಕೋರ್ಟ್ ‌ರೆಜಿಸ್ಟ್ರಾರ್‌ ಟಿ.ಜಿ. ಶಿವಶಂಕರೇಗೌಡ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಮಂಡಳಿಗೆ (ಜಿಲ್ಲಾ ನ್ಯಾಯಾಧೀಶ, ಒಒಡಿ, ಪ್ರಿಸೈಡಿಂಗ್‌ ಆಫೀಸರ್‌) ವರ್ಗಾವಣೆ ಮಾಡಲಾಗಿದೆ . ಸದ್ಯ ಈ ಹುದ್ದೆಯಲ್ಲಿರುವ ಎಸ್‌.ಎಚ್‌. ರೇಣುಕಾದೇವಿ ಇದೇ ಫೆಬ್ರವರಿ 28ರಂದು ನಿವೃತ್ತಿಯಾಗಲಿದ್ದಾರೆ. ಅವರ ಜಾಗಕ್ಕೆ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ : ಅಂಬೇಡ್ಕರ್ ಭಾವಚಿತ್ರ ತೆಗೆದರೆ ಮಾತ್ರ ಧ್ವಜಾರೋಹಣ ನ್ಯಾಯಾಧೀಶನ ಉದ್ಧಟತನ

ಘಟನೆಯ ಹಿನ್ನಲೆ : ಜ.26 ರಂದು ಗಣರಾಜ್ಯೋತ್ಸವ ದಿನದಂದು ಜಿಲ್ಲಾ ನ್ಯಾಯಾಲಯದಲ್ಲಿ ಧ್ವಜಾರೋಹಣ ಸಂದರ್ಭದಲ್ಲಿ ಮಹಾತ್ಮಗಾಂಧಿ ಭಾವಚಿತ್ರದೊಂದಿಗೆ ಇರಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಅಲ್ಲಿಂದ ತೆಗೆದು, ಅಪಮಾನಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ರಾಯಚೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಭಾರೀ ವ್ಯಾಪಕ ಪ್ರತಿಭಟನೆ ನಡೆಸಲಾಗಿತ್ತು. ಅನೇಕ ಕಡೆಗಳಲ್ಲಿ ಬಂದ್‌ ಕೂಡಾ ನಡೆಸಲಾಗಿತ್ತು. ನ್ಯಾಯಾಧೀಸರನ್ನು ವಜಾ ಮಾಡಬೇಕು ಎಂದು ಪ್ರತಿಭಟನೆ ನಡೆಸಲಾಗಿತ್ತು. ನ್ಯಾ.ಮಲ್ಲಿಕಾರ್ಜುನ ಗೌಡ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು. ಸದಾರ್ ಬಜಾರ್ ಠಾಣೆಗೆ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಅಪಮಾನ ಪ್ರಕರಣಕ್ಕೆ ಸಂಬಂಧಿಸಿ ಲಿಖಿತ ದೂರು ಸಹನೀಡಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಜ.29 ರಂದು ನಗರಕ್ಕೆ ಜಿಲ್ಲಾ ಆಡಳಿತ ಉಸ್ತುವಾರಿ ಹಾಗೂ ಹೈಕೋರ್ಟ್ ನ್ಯಾಯಾಧೀಶರು ಜಿಲ್ಲೆಗೆ ಭೇಟಿ ನೀಡಿ, ಇಲ್ಲಿಯ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದಿದ್ದರು.

ಈ ಕುರಿತು ಜಿಲ್ಲಾ ಆಡಳಿತ ಮತ್ತು ಉಸ್ತುವಾರಿ ನ್ಯಾಯಾಧೀಶರು, ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ವರದಿ ನೀಡಿ, ಕಾನೂನು ಕ್ರಮಕ್ಕೆ ಮುಂದಿನ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದ್ದರು. ಸುಮಾರು 20 ದಿನಗಳ ನಂತರ ಈಗ ಜಿಲ್ಲಾ ನ್ಯಾಯಾಧೀಶರನ್ನು ವರ್ಗಾಯಿಸುವ ಮೂಲಕ ಈ ವಿವಾದಕ್ಕೆ ತೆರೆ ಎಳೆಯಲಾಗಿದೆ.

ತೆರೆದ ನ್ಯಾಯಾಲಯದಲ್ಲಿ ಸಂವಿಧಾನ ಶಿಲ್ಪಿ ಸಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಹಾಕುವವರೆಗೂ ಈ ಹೋರಾಟ ನಡೆಯಲಿದೆ. ಫೆ. 19 ರಂದು  ಬೆಂಗಳೂರು ಚಲೋ ಕಾರ್ಯಕ್ರಮ ನಡೆಸುವ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದು ದಲಿತ ಸಂಘಟನೆಗಳು ತಿಳಿಸಿವೆ.

Donate Janashakthi Media

Leave a Reply

Your email address will not be published. Required fields are marked *