ಇನ್ನೊಂದು ತೆರನ ಎರಡನೇ ಅಲೆ…

 

ವೇದರಾಜ್‌ ಎನ್‌.ಕೆ.

ಎಪ್ರಿಲ್ 4 ರಂದು ಫ್ರಾನ್ಸಿನ ಒಂದು ವೆಬ್ ಸುದ್ದಿ ಪತ್ರಿಕೆ ”ಮೀಡಿಯಾ ಪಾರ್ಟ್” Sale of French Rafale jet fighters to India: how a state scandal was buried (ಭಾರತಕ್ಕೆ ಫ್ರೆಂಚ್ ರಫೆಲ್ ಜೆಟ್‍ಗಳ ಮಾರಾಟ : ಹೇಗೆ ಒಂದು ಪ್ರಭುತ್ವ ಹಗರಣವನ್ನು ಹೂತುಬಿಡಲಾಯಿತು” ) ಎಂಬ ಮೂರು ಭಾಗಗಳ ತನಿಖಾ ವರದಿಯ ಮೊದಲ ಭಾಗ ಪ್ರಕಟವಾಯಿತು. ನಂತರ ಉಳಿದೆರಡು ಭಾಗಗಳೂ ಪ್ರಕಟವಾಗಿವೆ. ಇದು ಸಹಜವಾಗಿ ಭಾರತದ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯಿತು. ಸುಪ್ರಿಂ ಕೋರ್ಟ್‍ ಈ ವ್ಯವಹಾರದ ಬಗ್ಗೆ ತನಿಖೆಯ ಅಗತ್ಯವಿಲ್ಲ ಎಂದು ತೀರ್ಪಿತ್ತ ಮೇಲೆ  ತಣ್ಣಗಾಗಿದ್ದ ಈ ಪ್ರಕರಣ ಎರಡನೇ ಬಾರಿಗೆ  ದೇಶದ ಗಮನ ಸೆಳೆಯಿತು ಮತ್ತು ವ್ಯಂಗ್ಯಚಿತ್ರಕಾರರದ್ದು ಕೂಡ.

ಈ ವೇಳೆಗೆ  ಕೊವಿಡ್‍ ಸೋಂಕಿತರ ಸಂಖ್ಯೆ ಮತ್ತೊಮ್ಮೆ ದಿನಕ್ಕೆ 1 ಲಕ್ಷವನ್ನು ದಾಟಲಾರಂಭಿಸಿ ಅದನ್ನು ಎರಡನೇ ಅಲೆ ಎಂದು ಕರೆದಂತೆ ಇದೂ ಭ್ರಷ್ಟಾಚಾರದ ಮಹಾಸೋಂಕಿನ ಎರಡನೇ ಅಲೆ ಎಂಬಂತೆ ವ್ಯಂಗ್ಯಚಿತ್ರಕಾರ ಪಿ.ಮಹಮ್ಮದ್‍ ಚಿತ್ರಿಸಿದ್ದಾರೆ (ಕೃಪೆ: ವಾರ್ತಾಭಾರತಿ)

***

ಸುಪ್ರಿಂ ಕೋರ್ಟ್ ತೀರ್ಪಿನ ನಂತರ  ಸೋರುತ್ತಿದ್ದ ಕೊಳಾಯಿಗಳಿಗೆಲ್ಲ  ತೇಪೆ ಹಾಕಿ ಎರಡು ವರ್ಷಗಳು ಕಳೆದ ಮೇಲೆ ಮತ್ತೆ ಹೇಗೆ ಈ ಸೋರಿಕೆ? ಹೇಗೆ ಗೊತ್ತಿಲ್ಲ, ಎಲ್ಲಿಂದ  ಎಂದು ಹಣಕಾಸು ಮಂತ್ರಿಗಳು ಕಂಡು ಹಿಡಿದೇ ಬಿಟ್ಟರು!

“ಇದು ಸೋರುತ್ತಿರುವುದು ಫ್ರಾನ್ಸಿನಿಂದ!”

(ಅಲೋಕ್‍ ನಿರಂತರ್/ ಫೇಸ್‍ಬುಕ್)

***

ಆದರೆ ಇದು ಭಾರತದ ಆಂತರಿಕ ವಿಷಯ ಎಂದೇನೂ ಅವರು ಫ್ರೆಂಚ್‍ ವೆಬ್‍ಪತ್ರಿಕೆಯನ್ನು ಖಂಡಿಸಲಿಲ್ಲ.

“..ವಿದೇಶಗಳಲ್ಲಿ ನಮ್ಮ ಈ ರೀತಿಯ ಅಪಖ್ಯಾತಿಗೆ ಇದುವರೆಗೂ ‘ರಫೆಲ್ ನಲ್ಲಿ  ಲಂಚಕೋರತನ ನಮ್ಮ ದೇಶದ ಆಂತರಿಕ ವಿಷಯ’  ಎಂಬಂತಹ ಟ್ವೀಟ್‍ಗಳು ಬರಲು ಶುರುವಾಗಿಲ್ಲವೇ?”

(ಕೃಪೆ: ಶೇಖರ್ ಗುರೇರ, ಕಾರ್ಟೂನಿಸ್ಟ್ಸ್ ಕ್ಲಬ್‍ ಆಫ್‍ ಇಂಡಿಯ)

***

ಹೌದು, ಈ ಮಾದರಿಯ ಟ್ವೀಟ್‍ ಗಳು ಬರದಿದ್ದರೂ ವಾಟ್ಸ್ ಆಪ್ ಯುನಿವರ್ಸಿಟಿಯ “ವಾಟೆಬೌಟರಿ’ (ಅವರೂ ಮಾಡಿಲ್ಲವೇ?) ಎಂಬ ಅತಿ ವೇಗದ  ಮಾದರಿ ಸದಾ ಸಿದ್ಧವಾಗಿರುತ್ತದೆ ತಾನೇ?

“ವಾಟೆಬೌಟರಿ”ಯನ್ನೇರಿ

“ನಮ್ಮ ಬಳಿ ಜಗತ್ತಿನಲ್ಲೇ ಅತ್ಯಂತ ವೇಗದ ಈ ಜೆಟ್‍ ಇರುವಾಗ ನಮಗೇಕೆ ಚಿಂತೆ!”

(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

***

ರಫೆಲ್ ತಯಾರಕರಾದ ಡಸಾಲ್ಟ್ ಅವಿಯೇಷನ್‍ ವಕ್ತಾರರು ಈ ತನಿಖಾ ವರದಿ ಎತ್ತಿದ ಪ್ರಶ್ನೆಗಳ ಬಗ್ಗೆ ಟಿಪ್ಪಣಿ ಮಾಡಲು ನಿರಾಕರಿಸಿದ್ದಾರಂತೆ.  ತಾವು ಫ್ರಾನ್ಸಿನ ಭ್ರಷ್ಟಾಚಾರ-ವಿರೋಧಿ ಶಾಸನವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇವೆ, ಇದು ಭಾರತ ಮತ್ತು ಫ್ರೆಂಚ್‍ ಸರಕಾರಗಳ ನಡುವಿನ ವ್ಯವಹಾರ ಎನ್ನುತ್ತ  ಯಾವುದೇ ಅಕ್ರಮಗಳಲ್ಲಿ ತಾವು ಭಾಗಿಗಳಲ್ಲ ಎಂದು ಸೂಚಿಸಿರುವುದಾಗಿ ವರದಿಯಾಗಿದೆ. ಭಾರತ ಸರಕಾರದ ಮಂತ್ರಿಗಳೂ ಇವೆಲ್ಲ ಆಧಾರಹೀನ ಎಂದು ತಳ್ಳಿ ಹಾಕಿದ್ದಾರೆ.

ಅಂದರೆ ಅವರೂ ಪರೋಕ್ಷವಾಗಿ “ನ ಖಾವುಂಗಾ.. ನ ಖಾನೇ ದೂಂಗಾ” ಎಂಬ 2014ರ ಘೋಷಣೆಯನ್ನು ನೆನಪಿಸಿದ್ದಾರೆ.  ಆದರೆ ಇದರಲ್ಲಿ ಈಗ  “ನ ಖಾವೂಂಗಾ..”  ತೇಗಿನಿಂದಾಗಿ ಸೈಲೆಂಟ್ ಆಗಿರಬಹುದೇ?

(ಸತೀಶ ಆಚಾರ್ಯ, ನ್ಯೂಸ್‍ ಸ್ಟ್ರಿಂಗ್)

***

ಹೂತು ಬಿಟ್ಟಿದ್ದ ಪ್ರಕರಣ….

ಇತ್ತೀಚಿನ ದಿನಗಳಲ್ಲಿ ಬಹಳ ಸಕ್ರಿಯವಾಗಿರುವ  ಭಾರತದ ಜಾರಿ ನಿರ್ದೇಶನಾಲಯ(ಇ.ಡಿ.) ಕ್ಕೆ ಫ್ರೆಂಚ್ ವೆಬ್‍ ಪತ್ರಿಕೆ ಹೇಳಿದ ಒಂದು ಮಿಲಿಯ ಯುರೊ ‘ಉಡುಗೊರೆ’ ಪಡೆದಾತನ ಬಗ್ಗೆ, ಆತ ಇಂತಹ ಬಹಳಷ್ಟು ಮಿಲಿಯ ಯುರೋಗಳನ್ನು ಪಡೆದಿರುವ ಬಗ್ಗೆ ಬಹಳಷ್ಟು ಮಾಹಿತಿಗಳಿವೆ ಮತ್ತು  ಫ್ರಾನ್ಸ್ ನ ಭ್ರಷ್ಟಾಚಾರ-ನಿರೋಧಕ ಸಂಸ್ಥೆಯ ಬಳಿಯೂ ಬಹಳಷ್ಟು ಮಾಹಿತಿಗಳಿವೆ ಎಂದು ಹೇಳಿರುವ ಈ ತನಿಖಾ ವರದಿ ತನ್ನ ಶೀರ್ಷಿಕೆಯಲ್ಲಿ “ಪ್ರಭುತ್ವ ಹಗರಣವನ್ನು ಹೂತುಬಿಡಲಾಯಿತು” ಎಂದಿರುವುದೇಕೆ?

ಅಷ್ಟೊಂದು ಮಾಹಿತಿಗಳಿರುವುದಾದರೆ, ಈಗ ಸಮಾಧಿಯಿಂದ ಕೈಹೊರಹಾಕಿದಂತೆ ಮತ್ತೆ……? ಮೂರನೇ ಅಲೆ….?

(ಮಿಕ ಅಝೀಝ್/ಟ್ವಿಟರ್)

***

ಭಾರತದ ಹಿರಿಯ ಪತ್ರಕರ್ತರೊಬ್ಬರು  ಈ ವ್ಯವಹಾರದ ಬಗ್ಗೆ ತನಿಖೆ ನಡೆಸಬೇಕೆಂಬ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಅದರ ಅಗತ್ಯವೇನೂ ತನಗೆ ಕಾಣಿಸುತ್ತಿಲ್ಲ ಎಂದು ವಜಾ ಮಾಡಿದಾಗ ಈ ವ್ಯವಹಾರ ಎಬ್ಬಿಸಿರುವ ಹಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದಿದ್ದರು.  ಸರಕಾರದಿಂದ ಮೊಹರಾದ ಲಕೋಟೆಗಳಲ್ಲಿ ಪಡೆದ ವಿವರಗಳಲ್ಲಿ ಕೆಲವು ಎದ್ದು ಕಾಣುವ ತಪ್ಪುಗಳಿದ್ದದ್ದು ಆಗ ವರದಿಯಾಗಿದ್ದವು ಎಂಬುದನ್ನು ಈ ವ್ಯಂಗ್ಯಚಿತ್ರಕಾರರು ಈ ಹೊಸ ವರದಿಯ ಸಂದರ್ಭದಲ್ಲಿ ನೆನಪಿಸಿದ್ದಾರೆಯೇ?  ನಮಗಷ್ಟೇ ಅಲ್ಲ, ಸಂಬಂಧಪಟ್ಟ ಫ್ರೆಂಚರಿಗೂ!

“ಭಾರತೀಯ ಮೇಣದಿಂದ ಮೊಹರು ‍ಮಾಡಲು ಪ್ರಯತ್ನಿಸಿ, ಶಾಶ್ವತವಾಗಿ ಸೀಲ್‍ ಆಗಿರುತ್ತದೆ”

(ಆರ್.ಪ್ರಸಾದ್, ಇಕನಾಮಿಕ್‍ ಟೈಮ್ಸ್)

 

Donate Janashakthi Media

Leave a Reply

Your email address will not be published. Required fields are marked *