ಬೆಂಗಳೂರು: ಜಿಎಸ್‌ಟಿ ತೆರಿಗೆ ಪದ್ಧತಿ ಜಾರಿ ನಂತರ ರಾಜ್ಯಕ್ಕೆ ತೆರಿಗೆ ಹಂಚಿಕೆ ವಿಚಾರದಲ್ಲಿ ನಿರಂತರ ಅನ್ಯಾಯವಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.
ಜಾಗೃತ ಕರ್ನಾಟಕ ಹಾಗೂ ರಾಜ್ಯ ರೈತ ಸಂಘ ಆಯೋಜಿಸಿದ್ದ ‘ಜಿಎಸ್‌ಟಿ ಸೆಸ್, ತೆರಿಗೆ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ’ ಬಹಿರಂಗ ಚರ್ಚೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಆಹ್ವಾನಿಸಲಾಗಿತ್ತು. ನಿರ್ಮಲಾ ಸೀತಾರಾಮನ್ ಅವರು ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಹಾಗಾಗಿ, ಖಾಲಿ ಕುರ್ಚಿ ಇಡಲಾಗಿತ್ತು.
ಜಿಎಸ್‌ಟಿ ಜಾರಿಯಾದ ನಂತರ 2019-20ರಲ್ಲಿ ರಾಜ್ಯದ ತೆರಿಗೆ ಆದಾಯದಲ್ಲಿ ರೂ.18,897 ಕೋಟಿ ಖೋತಾ ಆಗಿದೆ. 2023-24ರಲ್ಲಿ ರೂ.34,570 ಕೋಟಿ ನಷ್ಟವಾಗಿದೆ. ರಾಜ್ಯದ ಆದಾಯದಲ್ಲಿ ಪ್ರತಿ ವರ್ಷ 30 ರಿಂದ 32 ಸಾವಿರ ಕೋಟಿ ನಷ್ಟವಾಗುತ್ತಿದೆ. ಇದೇ ಕಾರಣಕ್ಕೆ ಜಿಎಸ್‌ಟಿ ಪರಿಹಾರವನ್ನು ಕೇಂದ್ರ ಸರಕಾರ ರಾಜ್ಯಗಳಿಗೆ ತುಂಬಿ ಕೊಡಬೇಕೆಂದು ಹಣಕಾಸು ಆಯೋಗ ಸ್ಪಷ್ಟವಾಗಿ ನಿರ್ದೇಶನ ನೀಡಿದೆ. ಆದರೆ, ನಿರ್ಮಲಾ ಸೀತಾರಾಮನ್ ಅದನ್ನು ನಿರಾಕರಿಸಿದ್ದಾರೆ.
ಈ ಹಿಂದೆ ಕೇಂದ್ರದ ತೆರಿಗೆಯಲ್ಲಿ ರಾಜ್ಯಕ್ಕೆ ಶೇ.4.713ರಷ್ಟು ತೆರಿಗೆ ಪಾಲು ಇತ್ತು. ಆದರೆ 15ನೇ ಹಣಕಾಸು ಆಯೋಗ ಈ ಪ್ರಮಾಣವನ್ನು 3.617ಕ್ಕೆ ಇಳಿಸಿದೆ. ಇದರಿಂದ ರಾಜ್ಯಕ್ಕೆ ಶೇ.23ರಷ್ಟು ಹಣ ಕಡಿಮೆಯಾಗಿದೆ. ಪ್ರತಿ ವರ್ಷ 6 ರಿಂದ 13 ಸಾವಿರ ಕೋಟಿ ನಷ್ಟವಾಗುತ್ತಿದೆ. ರಾಜ್ಯಕ್ಕೆ ಈವರೆಗೆ ಒಟ್ಟು 62,098 ಕೋಟಿ ನಷ್ಟ ಉಂಟಾಗಿದೆ. ದೇಶದ 31 ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕಕ್ಕೆ ಮಾತ್ರ ಇಷ್ಟು ಕಡಿಮೆ ಪ್ರಮಾಣದ ತೆರಿಗೆ ಹಂಚಿಕೆ ಮೋಸ ಏಕೆ? ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕಕ್ಕೆ ಇದು ಕೇಂದ್ರ ಸರಕಾರ ನೀಡುವ ಉಡುಗೊರೆಯೇ? ಎಂದು ಪ್ರಶ್ನಿಸಿದರು.