ಬೆಂಗಳೂರು : ಕೇಂದ್ರ ಸರಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು (ಮಾರ್ಚ್ 22) ‘ವಿಧಾನಸೌಧ ಚಲೋ’ ನಡೆಸುವ ಮೂಲಕ ರಾಜಧಾನಿ ಬೆಂಗಳೂರಿನಲ್ಲಿ ರೈತರ ಕಹಳೆ ಮೊಳಗಲಿದೆ.
ಸಂಯುಕ್ತ ಹೋರಾಟ-ಕರ್ನಾಟಕದ ನೇತೃತ್ವದಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ನಗರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಬಳಿಕ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ರೈತ ಮುಖಂಡರಾದ ರಾಕೇಶ್ ಟಿಕಾಯತ್, ಡಾ.ದರ್ಶನ್ ಪಾಲ್, ಯುದ್ಧವೀರ್ ಸಿಂಗ್ , ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ರೈತ ನಾಯಕಾರದ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ, ಯು. ಬಸವರಾಜ್, ಜಿ.ಸಿ.ಬಯ್ಯಾರೆಡ್ಡಿ, ಚಾಮರಸ ಮಾಲೀಪಾಟೀಲ್, ಚುಕ್ಕಿ ನಂಜುಂಡಸ್ವಾಮಿ, ಕುಮಾರ ಸಮತಳ, ಸೇರಿದಂತೆ ಕಾರ್ಮಿಕ, ವಿದ್ಯಾರ್ಥಿ, ಯುವಜನ ಮಹಿಳಾ ಸಂಘಟನೆಯ ಮುಖಂಡರು ಉಪಸ್ಥಿತರಿರಲಿದ್ದಾರೆ.
ಈ ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ 50 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ ಸಂಯುಕ್ತ ಹೋರಾಟ ಕರ್ನಾಟಕ ತಿಳಿಸಿದೆ.
ರೈತರ ಹೋರಾಟದ ಕುರಿತು ಬೆಳಗ್ಗೆ 10:30 ರಿಂದ ರಾತ್ರಿ 9 ರವರೆಗೆ ಜನಶಕ್ತಿ ಮೀಡಿಯಾದಲ್ಲಿ ನಿರಂತರ ಸುದ್ದಿಗಳನ್ನು ವೀಕ್ಷಿಸಬಹುದಾಗಿದೆ.