ಬೆಂಗಳೂರು: ಕೋವಿಡ್-19ರ ರೂಪಾಂತರಿ ತಳಿ ಓಮೈಕ್ರಾನ್(ಒಮಿಕ್ರಾನ್) ಭಾರತದಲ್ಲಿಯೂ ಕಾಣಿಸಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಕರ್ನಾಟಕದಲ್ಲಿನ ಇಬ್ಬರಲ್ಲಿ ಓಮೈಕ್ರಾನ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಕೆಲದಿನಗಳಿಂದ ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಕಾಣಿಸಿಕೊಂಡ ಓಮೈಕ್ರಾನ್ ವೈರಸ್ ಸಾಕಷ್ಟು ತಲ್ಲಣ ಸೃಷ್ಟಿಸಿದೆ. ದೇಶದಲ್ಲಿ ಎರಡು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲೂ ಬೆಂಗಳೂರಿನಲ್ಲಿ ಪತ್ತೆಯಾಗಿದೆ.
ರಾಜ್ಯದಲ್ಲಿ ಕೋವಿಡ್ ತಪಾಸಣೆ ಮಾಡಿದಾಗ ಇಬ್ಬರಿಗೆ ಕೋವಿಡ್ ದೃಢಪಟ್ಟಿತು. ಆದರೆ, ರೂಪಾಂತರಿ ತಳಿ ವೈರಸ್ ಬಗ್ಗೆ ಗೊಂದಲಗಳಿದ್ದವು. ಐಸಿಎಂಆರ್‌ನಲ್ಲಿ ತಪಾಸಣೆ ಮಾಡಿದಾಗ ಅದು ಕೊರೊನಾ ವೈರಸ್ ರೂಪಾಂತರವಾದ ಓಮೈಕ್ರಾನ್ ಎಂಬುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ದಕ್ಷಿಣ ಆಫ್ರಿಕಾದಿಂದ ನವೆಂಬರ್ ಮೊದಲ ವಾರದಲ್ಲಿ ಬೆಂಗಳೂರಿಗೆ ಬಂದ 66 ವರ್ಷದ ಓರ್ವ ವೃದ್ಧ ಹಾಗೂ 46 ವರ್ಷದ ವ್ಯಕ್ತಿಗೆ ಸೋಂಕು ಕಂಡುಬಂದಿತ್ತು. ಓಮೈಕ್ರಾನ್ ಪ್ರಕರಣ ಪತ್ತೆ ಹಚ್ಚಲು ಜಿನೋಮ್ ಪರೀಕ್ಷೆ ಸೇರಿದಂತೆ ಹೆಚ್ಚಿನ ತಪಾಸಣೆಗೆ ಮಾದರಿಗಳನ್ನು ಕಳಿಸಲಾಗಿತ್ತು. ಇಂದು ಓಮೈಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮೂಲಗಳ ಪ್ರಕಾರ, 66 ವರ್ಷ ವಯಸ್ಸಿನವರು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ವಿದೇಶಿಯಾಗಿದ್ದರೆ, 46 ವರ್ಷ ವಯಸ್ಸಿನವರು ಬೆಂಗಳೂರಿನಲ್ಲಿ ಆರೋಗ್ಯ ಕಾರ್ಯಕರ್ತರಾಗಿದ್ದಾರೆ. ಇದರಲ್ಲಿ ಓರ್ವ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದ್ದು, ಮತ್ತೊಬ್ಬ ವ್ಯಕ್ತಿ ವಿದೇಶಕ್ಕೆ ಹೋಗಿದ್ದಾರೆ ಎನ್ನಲಾಗಿದ್ದು, ಇದರ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಲವ ಅಗರವಾಲ್ ಮಾಹಿತಿ ನೀಡಿದ್ದಾರೆ.
ಇಬ್ಬರು ವ್ಯಕ್ತಿಗಳೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲ ಜನರನ್ನು ಪತ್ತೆಹಚ್ಚಲಾಗಿದೆ ಮತ್ತು ಪರೀಕ್ಷಿಸಲಾಗುತ್ತಿದೆ. ಎರಡೂ ಪ್ರಕರಣಗಳು ಸೌಮ್ಯವಾಗಿವೆ ಮತ್ತು ಇದುವರೆಗೆ ಯಾವುದೇ ಗಂಭೀರವಾದ ರೋಗಲಕ್ಷಣಗಳಿಲ್ಲ ಎನ್ನಲಾಗಿದೆ.
ಸುಮಾರು 29 ದೇಶಗಳು ಇಲ್ಲಿಯವರೆಗೆ 373 ಓಮೈಕ್ರಾನ್ ರೂಪಾಂತರದ ಪ್ರಕರಣಗಳನ್ನು ವರದಿ ಮಾಡಿದೆ. ಪ್ರಸ್ತುತ ಪ್ರಪಂಚದಾದ್ಯಂತ ಕೋವಿಡ್ 19 ಉಲ್ಬಣವು ಕಂಡುಬಂದಿದೆ ಎಂದು ಸಚಿವಾಲಯ ಹೇಳಿದೆ.
ಭಾರತದಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಶೇಕಡಾ 55ರಷ್ಟು ಪ್ರಕರಣಗಳು ಕೇರಳ ಮತ್ತು ಮಹಾರಾಷ್ಟ್ರದ ಎರಡು ರಾಜ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದೆ.
ದೇಶದಲ್ಲಿ ಈವರೆಗೆ 79.16 ಕೋಟಿ ವಯಸ್ಕ ಜನಸಂಖ್ಯೆಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 45.92 ಕೋಟಿ ಮಂದಿಗೆ ಎರಡೂ ಡೋಸ್ ಗಳನ್ನು ನೀಡಲಾಗಿದೆ. ಒಟ್ಟಾರೆ 125 ಕೋಟಿಗೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ
ಇದರಿಂದ ಶೇಕಡ 84.3ರಷ್ಟು ವಯಸ್ಕರಿಗೆ ಒಂದು ಡೋಸ್, ಶೇಕಡ 49ರಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.