ಅಮೆರಿಕದ ಸುಂಕದ ಬಾಧೆಗೆ ಸಿಲುಕಿದ ಭಾರತದ ಹತ್ತಿ ಬೆಳೆ ಮತ್ತು ಉದ್ಯಮ

ಅಮೆರಿಕ ಭಾರತದ ಆಮದಿನ ಮೇಲೆ ಶೇ 50 ರ ಆಮದು ಸುಂಕ ವಿಧಿಸಿರುವ ಸನ್ನಿವೇಶದಲ್ಲಿ ಪ್ರಧಾನ ಮಂತ್ರಿಗಳು ತಮ್ಮ ವಿಫಲತೆಯನ್ನು ಮರೆಮಾಚಲು “ನಮ್ಮ ರೈತರ ಹಿತಾಸಕ್ತಿಗಳನ್ನು ಅಮೆರಿಕದ ಒತ್ತಡಗಳಿಗೆ ಮಣಿದು ಎಂದಿಗೂ ಬಲಿಕೊಡುವುದಿಲ್ಲ” ಎಂಬ ಪ್ರತಾಪದ ಮಾತುಗಳನ್ನಾಡಿದ್ದಾರೆ. ಆದರೆ ಅದೇ ವೇಳೆಗೆ, ಅಮೆರಿಕಾದೊಡನೆ ದ್ವಿಪಕ್ಷೀಯ ವ್ಯಾಪಾರದ ಒಪ್ಪಂದದ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದು, ಅದರಲ್ಲಿ ಅಮೆರಿಕಾ ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕಗಳಲ್ಲಿ ಕಡಿತಕ್ಕೆ ಪಟ್ಟು ಹಿಡಿದಿತ್ತು ಎಂದು ತಿಳಿದುಬಂದಿದೆ. ಇಂಥ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಹತ್ತಿ ಬೆಳೆಗಾರರ ಹಿತಾಸಕ್ತಿಗಳನ್ನು ಹೀಗೆ ಬಲಿಕೊಟ್ಟಿದೆಯೆ ಎಂಬುದು ದೊಡ್ಡ ಪ್ರಶ್ನೆ.

ಜಿ. ಎಸ್‍. ಮಣಿ

ಕೇಂದ್ರ ಸರ್ಕಾರ ಹತ್ತಿ ಆಮದಿನ ಮೇಲೆ ಇದ್ದ ಶೇ 11 ರ ಸುಂಕವನ್ನು ತೆಗೆದು ಹಾಕಿದೆ. ಈ ನಿರ್ಧಾರ CBIC ಯದ್ದು. ಕೇಂದ್ರ ಪರೋಕ್ಷ ತೆರಿಗೆ ಮತ್ತು ಸುಂಕಗಳ ಮಂಡಳಿ ಇದನ್ನು ಅಲ್ಪ ಅವಧಿಗೆ ಅಂದರೆ ಆಗೋಸ್ತು 19 ರಿಂದ ಸೆಪ್ಟೆಂಬರ್ 30 2025 ರ ವರೆಗೆ ತೆಗೆದು ಹಾಕಿದೆ. ಆಗಲೇ ಡಿಸೆಂಬರ್ ಕೊನೆಯವರೆಗೆ ಇದರ ವಿಸ್ತರಣೆಯನ್ನೂ ಮಾಡಲಾಗಿದೆ. ಮುಂದಕ್ಕೆ ಈ ಅವಧಿಯನ್ನು ವಿಸ್ತರಿಸದಿರುವ ಮಾತು ಎಲ್ಲೂ ಇಲ್ಲ. ಇದರಿಂದಾಗಿ ಹೊರ ದೇಶಗಳ ಹತ್ತಿ ಭಾರತಕ್ಕೆ ಹರಿದು ಬರುತ್ತಿದೆ. ಅಮೆರಿಕದಂತಹ ದೇಶದಿಂದಲೂ ಇದು ಬರುತ್ತಿದೆ. ಇದರ ಪರಿಣಾಮ ನಮ್ಮ ದೇಸೀ ಹತ್ತಿ ಬೆಳೆಗಾರರ ಮೇಲೆ ಆಗುತ್ತಿದೆ. ಜವಳಿ ಉದ್ಯಮ ಇದನ್ನು ಸ್ವಾಗತಿಸಿದೆ. ಆದರೆ ರೈತರು ಕಂಗಾಲಾಗಿದ್ದಾರೆ. ಅಮೆರಿಕದಂತಹ ದೇಶಗಳಲ್ಲಿ ಹತ್ತಿಯನ್ನು ದೊಡ್ಡ ಕಾರ್ಪೊರೇಟ್ ಗಳು ಬೆಳೆಯುತ್ತವೆ ಮತ್ತು ಅಪಾರ ಪ್ರಮಾಣದ ಸಹಾಯಧನವನ್ನು ಅವು ಪಡೆದಿರುತ್ತವೆ. ಭಾರತದ ಬಡ ರೈತ ಇಂತಹ ಹತ್ತಿ ಸರಬರಾಜಿನ ವಿರುದ್ಧ ಹೋರಾಡಬೇಕಾಗುತ್ತದೆ.

ಅಖಿಲ ಭಾರತ ಕಿಸಾನ್ ಸಭಾ ಈ ಬಗೆಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು,“ಆಗಲೇ ಭಾರತದ ರೈತರು ಒಳ್ಳೆ ಬೆಲೆಯ ನಿರೀಕ್ಷೆ ಇಟ್ಟುಕೊಂಡುಹತ್ತಿ ಬೆಳೆಯನ್ನು ಬೆಳೆದಿದ್ದಾರೆ. ಇಂಥ ಸಂಧರ್ಭದಲ್ಲಿ ಆಮದನ್ನು ಸುಲಭ ಗೊಳಿಸಿರುವುದರಿಂದ ರೈತರಿಗೆ ತೀವ್ರ ಹೊಡೆತ ಬೀಳುತ್ತದೆ” ಎಂದು ಅದು ಹೇಳಿದೆ. ಅಲ್ಲದೆ ಹತ್ತಿ ಬೆಳೆವ ಪ್ರದೇಶಗಳು ರೈತರ ಆತ್ಮಹತ್ಯೆಗಳಿಗೆ ಕುಖ್ಯಾತವಾದ ಪ್ರದೇಶಗಳು. ಹತ್ತಿ ಬೆಳೆಗಾರರು ಸಾಂಪ್ರದಾಯಿಕವಾಗಿ ಆರ್ಥಿಕ ಬಿಕ್ಕಟ್ಟುಗಳಿಗೆ ಒಳಗಾಗುತ್ತಿರುವವರು. ಈಗ ಇಂತಹ ಸಂವೇದನಾಹೀನ ಕ್ರಮಗಳಿಂದ ನಲುಗಿ ಹೋಗುವ ಅಂಚಿಗೆ ಸಿಲುಕಿದ್ದಾರೆ ಎಂಬುದು ಸ್ಪಷ್ಟ.ಇಂತಹ ಕ್ರಮಗಳಿಂದ ಈ ಬೆಳೆಗಾರರು ಸಾಲದ ಸುಳಿಗೆ ಸಿಲುಕಿ ನರಳಲಿದ್ದಾರೆ ಎಂಬುದು ಯಾರಿಗಾದರೂ ಅರ್ಥವಾಗುವ ವಿಷಯ.

ಇದನ್ನೂ ಓದಿ: ಶರಾವತಿ ಸಂತ್ರಸ್ತರು, ಅರಣ್ಯ ಭೂಮಿ ಸಾಗುವಳಿದಾರರ ಹಿತ ಕಾಯಲು ಸರ್ಕಾರ ಬದ್ದ ಮಧು ಬಂಗಾರಪ್ಪ

ವಿಪರ್ಯಾಸವೆಂದರೆ ಮೋದಿ ಸರ್ಕಾರ “ನಮ್ಮ ರೈತರ ಹಿತಾಸಕ್ತಿಗಳನ್ನು ಅಮೆರಿಕದ ಒತ್ತಡಗಳಿಗೆ ಮಣಿದು ಎಂದಿಗೂ ಬಲಿಕೊಡುವುದಿಲ್ಲ” ಎಂಬ ಶೌರ್ಯದ ಮಾತುಗಳನ್ನು ಆಡಿದೆ. ನಿಜದಲ್ಲಿ ಮಾಡಿರುವ ಕೆಲಸ ಇಂತಹದ್ದು ಎಂಬುದನ್ನು ಗಮನಿಸಲೇಬೇಕಾಗುತ್ತದೆ. ಅಮೆರಿಕ ಭಾರತದ ಆಮದಿನ ಮೇಲೆ ಶೇ 50 ರ ಆಮದು ಸುಂಕ ವಿಧಿಸಿರುವುದು ಎಲ್ಲರಿಗೂ ಗೊತ್ತಿದೆ. ಇಂಥ ಸನ್ನಿವೇಶದಲ್ಲಿ ಪ್ರಧಾನ ಮಂತ್ರಿಗಳು ತಮ್ಮ ವಿಫಲತೆಯನ್ನು ಮರೆಮಾಚಲು ಇಂತಹ ಪ್ರತಾಪದ ಮಾತುಗಳನ್ನಾಡಿದ್ದಾರೆ. ಆದರೆ ಅದೇವೇಳೆಗೆ, ಅಮೆರಿಕಾ ದೊಡನೆ ದ್ವಿಪಕ್ಷೀಯ ವ್ಯಾಪಾರದ ಒಪ್ಪಂದದ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದು, ಅದರಲ್ಲಿ ಅಮೆರಿಕಾ ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕಗಳಲ್ಲಿ ಕಡಿತಕ್ಕೆ ಪಟ್ಟುಹಿಡಿದಿತ್ತು ಎಂದು ತಿಳಿದುಬಂದಿದೆ. ಇಂಥ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಹತ್ತಿ ಬೆಳೆಗಾರರ ಹಿತಾಸಕ್ತಿಗಳನ್ನು ಹೀಗೆ ಬಲಿಕೊಟ್ಟಿದೆಯೆ ಎಂಬುದು ದೊಡ್ಡ ಪ್ರಶ್ನೆ.

ಅಖಿಲ ಭಾರತ ಕಿಸಾನ್ ಸಭಾ ಹೇಳುವಂತೆ ಮೋದಿ ಸರ್ಕಾರ,ಪ್ರಭುತ್ವ ಮತ್ತು ಬಂಡವಾಳಿಗರ ದುಷ್ಟಕೂಟದಿಂದ ಹತ್ತಿ ಬೆಳೆಗಾರರನ್ನು ಹಿಂಡುವ ಪ್ರಕ್ರಿಯೆ ನಿರಂತರವಾಗಿ ನಡೆಯುವಂತೆ ನೋಡಿಕೊಂಡಿದೆ. ಅಧಿಕಾರದಲ್ಲಿ ಇರುವ ಕಳೆದ ಹನ್ನೊಂದು ವರ್ಷಗಳಲ್ಲಿ ಈ ಸರ್ಕಾರ ಹತ್ತಿ ಬೆಳೆಗೆ ಸ್ವಾಮಿನಾಥನ್ ಆಯೋಗದ ಶಿಫಾರಿಸ್ಸಿನ C2+50ಬೆಲೆ (ಅಂದರೆ ಲಾಗುವಾಡು ಖರ್ಚು+ ಶೇ 50) ನೀಡುವ ಗೋಜಿಗೆ ಹೋಗೇ ಇಲ್ಲ. ಬದಲಿಗೆ ಇಂತಹ ಹೊರದೇಶದ ಮಾರಿಯನ್ನು ತಂದು ನಮ್ಮ ರೈತರ ಬದುಕು ಹೈರಾನಾಗುವಂತೆ ಮಾಡಿದೆ. ಕೃಷಿ ಖರ್ಚು ಮತ್ತು ಬೆಲೆ ಆಯೋಗ 2025 ನೇ ಸಾಲಿಗೆ ಶಿಫಾರಸ್ಸು ಮಾಡಿರುವ ಹತ್ತಿ ಬೆಲೆ ಕ್ವಿಂಟಾಲ್ ಗೆ 7710 ರೂಪಾಯಿಗಳು. ಆಯೋಗ C2+50 ಸೂತ್ರದಂತೆ ಬೆಲೆ ನಿಗದಿಪಡಿಸಿದರೆ,ಕ್ವಿಂಟಾಲ್ ಗೆ 10075 ರೂಪಾಯಿಗಳ ಬೆಲೆ ನಿಗದಿ ಮಾಡಬೇಕಾಗಿತ್ತು. ಈಗ ಹತ್ತಿ ಬೆಳೆಗಾರರು ನಿಗದಿಯಾಗಿರುವ ಕನಿಷ್ಠ ಮಾರಾಟ ಬೆಲೆಗಿಂತ 2365 ರೂಪಾಯಿ ಕಡಿಮೆ ಬೆಲೆಗೆ ಹತ್ತಿಯನ್ನು ಮಾರಬೇಕು. ಆಮದಿನ ಸುಂಕ ತೆಗೆದು ಹಾಕಿರುವುದರಿಂದ ಬೆಲೆ ಕುಸಿದರೆ ಇದಕ್ಕೂ ಕಡಿಮೆ ಬೆಲೆಗೆ ಮಾರಬೇಕಾದ ಸನ್ನಿವೇಶಗಳು ಒದಗಿ ಬರಬಹುದು. ಇದು ಹತ್ತಿ ಬೆಳೆಗಾರರು ಎದುರಿಸುತ್ತಿರುವ ಕರಾಳ ವಾಸ್ತವ.

ಅಖಿಲ ಭಾರತ ಕಿಸಾನ್ ಸಭಾ ಈ ವಿಷಯದಲ್ಲಿ ಹೇಳಿರುವ ಇನ್ನೊಂದು ಬಹು ಮುಖ್ಯ ಅಂಶವೆಂದರೆ: “ಭಾರತೀಯ ಹತ್ತಿ ರೈತರಿಗೆ ಪ್ರಭುತ್ವ ಬೆಂಬಲವನ್ನು ಕಡಿಮೆ ಮಾಡಲು ಭಾರತ ಸರ್ಕಾರದೊಂದಿಗೆ ಅಮೆರಿಕ ಲಾಬಿ ಮಾಡುವ ಹುನ್ನಾರವುಚೆನ್ನಾಗಿಯೇ ದಾಖಲಿಸಲ್ಪಟ್ಟಿದೆ.ಅಮೆರಿಕದಲ್ಲಿ, ಹತ್ತಿಯ ಒಟ್ಟು ಉತ್ಪಾದನೆಯ ಮೌಲ್ಯದ ಶೇಕಡಾ 12 ರಷ್ಟನ್ನು ಸರ್ಕಾರಿ ಸಬ್ಸಿಡಿಗಳು ತುಂಬಿಕೊಡುತ್ತವೆ. ಆದರೆ ಭಾರತದಲ್ಲಿ, ಹತ್ತಿ ರೈತರಿಗೆ ಸರ್ಕಾರದ ಬೆಂಬಲವು ಉತ್ಪಾದನೆಯ ಮೌಲ್ಯದ ಸುಮಾರು ಶೇಕಡಾ 2.37 ರಷ್ಟು ಮಾತ್ರ ಇದೆ.ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಹತ್ತಿ ಉತ್ಪಾದಕರಿಗಿಂತ ಅಮೆರಿಕದ ಹತ್ತಿ ರೈತರು ಹೊಂದಿರುವ ಅನುಕೂಲದ ಮೂಲದಲ್ಲೇಪ್ರಭುತ್ವ ಬೆಂಬಲದ ಮಟ್ಟದಲ್ಲಿನ ಈ ಬೃಹತ್ ಅಸಮಾನತೆ ಇದೆಎಂಬುದು ಗಮನಿಸಲೇಬೇಕಾದ ಇನ್ನೊಂದು ಅಂಶ”.

ಇತರ ಕೃಷಿ ಉತ್ಪನ್ನಗಳ ಮೇಲೆ ಅಮೆರಿಕದ ಸುಂಕದ ಪರಿಣಾಮ

ಹತ್ತಿ ಬೆಳೆಯ ಪರಿಸ್ಥಿತಿ ಏನಾಗಿದೆ ಎಂದು ನೋಡಿದೆವು. ಇಂತಹ ಪರಿಸ್ಥಿತಿ ಭಾರತದ ಇತರ ಬೆಳೆ ಮತ್ತು ಉದ್ಯಮಗಳಿಗೂ ಬರುವ ಸಾಧ್ಯತೆ ತೀವ್ರವಾಗಿ ಇದೆ. ಟ್ರಂಪ್ ಭಾರತದ ಮೇಲೆ ಸುರಿಯಲು ಬಯಸುವ ಹೆಚ್ಚಿನ ಕೃಷಿ ಉತ್ಪನ್ನಗಳು – ಡೈರಿ, ಎಥೆನಾಲ್, ಮೆಕ್ಕೆ ಜೋಳ ಮತ್ತು ಸೋಯಾಬೀನ್ ನಂತಹವು – ತಳೀಯವಾಗಿ ಮಾರ್ಪಡಿಸಿದ ಮೂಲದ್ದಾಗಿದ್ದು, ಇದು ನಮ್ಮ ದೇಶಕ್ಕೆ ಪ್ರಮುಖ ಆರೋಗ್ಯ ಅಪಾಯ ತಂದೊಡ್ಡಬಹುದು ಎಂಬ ಭಯವಿದೆ. ಇಂತಹ ತೀರ್ಮಾನವನ್ನು ಸಾಕಷ್ಟು ಆಮೂಲಾಗ್ರ ಸಂಶೋಧನೆಯ ನಂತರವೇ ಮಾಡಬೇಕು ಹೊರತು ಅವಸರದಲ್ಲಲ್ಲ.

ಪ್ರಸ್ತುತ, ಯುರೋಪಿಯನ್ ಒಕ್ಕೂಟ (EU) ದಂತೆ ಭಾರತವು ಆರೋಗ್ಯ ಮತ್ತು ಜೀವವೈವಿಧ್ಯದ ಅಪಾಯಗಳನ್ನು ಉಲ್ಲೇಖಿಸಿ ತಳಿ ಮಾರ್ಪಡಿಸಿದ (GM) ಆಹಾರಗಳು ಅಥವಾ GM ಮೂಲದ ಆಹಾರಗಳನ್ನು ಮಾರುಕಟ್ಟೆಯಲ್ಲಿ ಅನುಮತಿಸುವುದಿಲ್ಲ. ಟ್ರಂಪ್ ಈ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಲು ಮತ್ತು ಮಾರುಕಟ್ಟೆಗಳನ್ನು ಬಲವಂತವಾಗಿ ತೆರೆಸಲು ಬಯಸುತ್ತಾರೆ.ಸ್ವಾತಂತ್ರ್ಯಾನಂತರದ ನಮ್ಮ ಆಹಾರ ಕೊರತೆಯ ದಿನಗಳಲ್ಲಿ ಕಳಪೆ ಆಹಾರವನ್ನು ಸ್ವೀಕರಿಸಿದಂತೆ (PL-480) ಭಾರತವು ಕಳಪೆ ಗುಣಮಟ್ಟದ ಆಹಾರವನ್ನು ಸ್ವೀಕರಿಸುತ್ತದೆ ಎಂದು ಅಮೆರಿಕನ್ನರು ಇನ್ನೂ ಭಾವಿಸುವಂತೆ ಕಾಣುತ್ತದೆ.

ಇದಲ್ಲದೆ, ಟ್ರಂಪ್ ಅಸಮಾಧಾನಗೊಂಡಿರುವುದು ರಷ್ಯಾದ ತೈಲದ ಬಗ್ಗೆ ಮಾತ್ರವಲ್ಲ.ಹಾಲಿನ ಬಗೆಗೂ ಕೂಡ.ಜಿಎಂ ಮೂಲದ ಹಾಲು ಮತ್ತು ಇತರ ಹಾಲಿನ ಉತ್ಪನ್ನಗಳನ್ನು ಭಾರತಕ್ಕೆ ರಫ್ತು ಮಾಡುವ ಅಮೆರಿಕ ಸರ್ಕಾರದ ಪ್ರಯತ್ನಗಳನ್ನು ಭಾರತ ನಿರಂತರವಾಗಿ ( ಇಲ್ಲಿಯವರೆಗೆ) ವಿರೋಧಿಸುತ್ತಿದೆ.

ದೇಶದ ಹೆಚ್ಚಿನ ಸಣ್ಣ ಮತ್ತು ಮಧ್ಯಮ ರೈತರಿಗೆ ಹಾಲು ಮುಖ್ಯ ಆದಾಯದ ಮೂಲವಾಗಿದೆ.ಭಾರತೀಯ ಮಾರುಕಟ್ಟೆಗಳಲ್ಲಿ ಅಮೆರಿಕ ಮೂಲದ ಹಾಲಿನ ಸುರಿಯುವಿಕೆ ಆದರೆ ಅವರ ಜೀವನೋಪಾಯ ಮತ್ತು ಮಾರುಕಟ್ಟೆ ನಾಶವಾಗುವುದಲ್ಲದೆ, ನಮ್ಮ ಮಕ್ಕಳಿಗೆ ದೊಡ್ಡ ಆರೋಗ್ಯದ ಅಪಾಯವೂ ಎದುರಾಗುಬಹುದು.

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ರೈತರ ರಕ್ಷಣೆಗಾಗಿ ವಿಶ್ವ ವ್ಯಾಪಾರ ಸಂಸ್ಥೆ (WTO) ಮತ್ತು ಇತರ ಅಂತರರಾಷ್ಟ್ರೀಯ ಸಮಾವೇಶಗಳನ್ನು ನಡೆಸಿದ ಅಮೆರಿಕ ಈಗ ಹೀಗೇಕೆ ನಡೆದುಕೊಳ್ಳುತ್ತಿದೆ?

ಮೇಲ್ನೋಟಕ್ಕೆ ಟ್ರಂಪ್ ಒಬ್ಬ ಮನಸ್ಸುಸ್ಥಿಮಿತದಲ್ಲಿಲ್ಲದವ್ಯಕ್ತಿ ಎಂದು ಹೇಳುವವರು ಹೇಳಬಹುದು.ಆದರೆ ಆರ್ಥಿಕ ಮಟ್ಟದಲ್ಲಿ ಅವರು ಅಮೆರಿಕ ದೇಶದ ಸಾಮ್ರಾಜ್ಯಶಾಹಿಹಿತಾಸಕ್ತಿಗಳೊಂದಿಗೆ ಆಳವಾಗಿ ಹೊಂದಿಕೊಂಡಿದ್ದಾರೆ ಮತ್ತು ತಮ್ಮ ಅಧ್ಯಕ್ಷತೆಯನ್ನು ಬಳಸಿಕೊಂಡು ವಿಶ್ವ ವ್ಯಾಪಾರ ಸಂಸ್ಥೆ (WTO)ಯನ್ನು ಕೆಡವುತ್ತಿದ್ದಾರೆ.ಈ (ದ್ವಿಪಕ್ಷೀಯ) ಬೆದರಿಸುವಿಕೆಯ ಪರಿಣಾಮವಾಗಿ, ಭಾರತವು ಅಮೆರಿಕದ ಕೃಷಿಯ ಹೆಚ್ಚುವರಿ ಉತ್ಪನ್ನಗಳಿಗೆ ತನ್ನ ಮಾರುಕಟ್ಟೆಗಳನ್ನು ತೆರೆಯುವಒತ್ತಡಗಳಿಗೆಒಳಗಾಗಿದೆ.ಇದನ್ನು ಸರಿಪಡಿಸುವಲ್ಲಿ ವಿಶ್ವ ವ್ಯಾಪಾರ ಸಂಸ್ಥೆ (WTO)ಬಲಹೀನವಾಗಿದೆ.

ವಿಶ್ವ ವ್ಯಾಪಾರ ಸಂಸ್ಥೆ (WTO)ಯ ಪ್ರಮುಖ ಬೆಂಬಲಿಗ ಮತ್ತು ಸೃಷ್ಟಿಕರ್ತ ಅಮೆರಿಕ. ನಮ್ಮ ಆಹಾರ ಮೀಸಲು, ಸಾರ್ವಜನಿಕ ವಿತರಣಾ ವ್ಯವಸ್ಥೆ, ಕನಿಷ್ಠ ಬೆಂಬಲ ಬೆಲೆ ಮತ್ತು ಮಾರುಕಟ್ಟೆ ಪ್ರವೇಶ ಸೇರಿದಂತೆ ಹಲವಾರು ವಿಷಯಗಳಲ್ಲಿ ಭಾರತದ ಮೇಲೆ ದಾಳಿ ಮಾಡಲು ಅಮೆರಿಕ ವಿಶ್ವ ವ್ಯಾಪಾರ ಸಂಸ್ಥೆ (WTO) ವ್ಯವಸ್ಥೆಗಳನ್ನು ಬಳಸಿಕೊಂಡಿತು. ಆದರೆ ಭಾರತವು ಆಫ್ರಿಕನ್ ರಾಷ್ಟ್ರಗಳು ಮತ್ತು ಇತರ ಅಭಿವೃದ್ಧಿಶೀಲ ರಾಷ್ಟ್ರಗಳ ಸಹಾಯದಿಂದ ತನ್ನ ರೈತರನ್ನು ರಕ್ಷಿಸುವ ಪ್ರಯತ್ನ ಮಾಡಿತು.ಭಾರತವು ತನ್ನನ್ನು ತಾನು ರಕ್ಷಿಸಿಕೊಳ್ಳಲು ವಿಶ್ವದ ಹಲವು ದೇಶಗಳ ಬೆಂಬಲವನ್ನು ಹೊಂದಿದ್ದರಿಂದ ಸಾಧ್ಯವಾಯಿತು. ಅಮೆರಿಕದ ರೈತರ ಹಿತಾಸಕ್ತಿಯನ್ನು ಅಮೆರಿಕ ಕಾಯಲಿ. ಆದರೆ ಭಾರತದ ರೈತರು ಅದರ ಬೆಲೆ ತೆರುವಂತೆ ಮಾಡುವ ಮೂಲಕ ಅಲ್ಲ.ಈ ಸ್ಪಷ್ಟ ತಿಳುವಳಿಕೆ ಭಾರತ ಸರ್ಕಾರಕ್ಕೆ ಇರಬೇಕು. ಅದು ಇದೆ ಎಂದು ಭಾರತ ಸರ್ಕಾರ ತನ್ನ ಹೇಳಿಕೆಗಳಲ್ಲಿ ವ್ಯಕ್ತಪಡಿಸಿದೆ. ಆದರೆ ಹತ್ತಿ ಮೇಲಿನ ಸುಂಕ ತೆಗೆದದ್ದು ಯಾಕೆ ಎಂಬ ಪ್ರಶ್ನೆ ತಟ್ಟನೆ ಏಳುತ್ತದೆ.

ಟ್ರಂಪ್ ಅಮೆರಿಕವನ್ನು ದ್ವಿಪಕ್ಷೀಯ ವಿಧಾನದತ್ತ ಕೊಂಡೊಯ್ದರು.ವಿಶ್ವ ವ್ಯಾಪಾರ ಸಂಸ್ಥೆ (WTO)ಮಾತುಕತೆಗಳನ್ನು ಬಹುತೇಕ ಅನಗತ್ಯವಾಗಿಸಿದರು. ಅಮೆರಿಕಕ್ಕೆ ಇದು ಗೆಲುವು. ಅದು ಮೊದಲು WTO ವ್ಯವಸ್ಥೆಯನ್ನು ನಿತ್ರಾಣಗೊಳಿಸಿತು. ಈಗ ಆಳವಾದ ತನ್ನ ಆರ್ಥಿಕ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ವಿಭಿನ್ನ ಆರ್ಥಿಕ ಅಸ್ತ್ರಗಳನ್ನು ಬಳಸುತ್ತಿದೆ.

ಇದನ್ನೂ ನೋಡಿ: ಕೋಲಾರ | ಅಂಗೈ ಮೂಳೆ ಮುರಿದು ಆರು ದಿನ ಆದ್ರು ಚಿಕಿತ್ಸೆ ನೀಡದ ಸರ್ಕಾರಿ ಆಸ್ಪತ್ರೆ Janashakthi Media

ಈ ದಾಳಿಯನ್ನು ತಡೆದುಕೊಳ್ಳುವಲ್ಲಿ ಭಾರತಕ್ಕೆ ಬಹಳ ದಾರಿಗಳಿಲ್ಲ.ನವದೆಹಲಿಯು BRICS++ ವೇದಿಕೆಯನ್ನು (ಬ್ರೆಜಿಲ್,ರಷ್ಯಾ, ಭಾರತ, ಚೈನ, ದಕ್ಧೀನ ಆಫ್ರಿಕಾ ಮತ್ತು ಇತರ ಕೆಲವು ದೇಶಗಳ ಆರ್ಥಿಕ ವೇದಿಕೆ) ಗಂಭೀರವಾಗಿ ಪರಿಗಣಿಸಿಬಳಸಿಕೊಂಡಿದ್ದರೆ, ಅದರೊಳಗೆ ಕೃಷಿ ವ್ಯಾಪಾರ ಚೌಕಟ್ಟನ್ನು ಅಭಿವೃದ್ಧಿ ಪಡಿಸಬಹುದಿತ್ತು. ಸದಸ್ಯ ರಾಷ್ಟ್ರಗಳು ರಾಷ್ಟ್ರೀಯ ಅಥವಾ BRICS ನ ಕರೆನ್ಸಿಗಳನ್ನು ಬಳಸಿಕೊಂಡು ಸರಬರಾಜು ಮತ್ತು ಖರೀದಿ ಮಾಡುತ್ತಿದ್ದರೆ, ಅಮೆರಿಕ ಮಾರುಕಟ್ಟೆಯ ನಷ್ಟವು ಭಾರತವನ್ನು ಇಷ್ಟು ತೀವ್ರವಾಗಿ ಬಾಧಿಸುತ್ತಿರಲಿಲ್ಲ.

ಪಾಕಿಸ್ತಾನ ಮತ್ತು ವಿಯೆಟ್ನಾಂನಂತಹ ದೇಶಗಳಿಗೆ ಹೊಸ ಅನುಕೂಲಗಳನ್ನು ಸೃಷ್ಟಿಸಲು ಟ್ರಂಪ್ ಈಗಾಗಲೇ ಸುಂಕಗಳನ್ನು ಬಳಸುತ್ತಿದ್ದಾರೆ.ಅವರು ಈಗ ಕಡಿಮೆ ವೆಚ್ಚದಲ್ಲಿ ಕೃಷಿ ಮತ್ತು ಮಾಂಸವನ್ನು ಅಮೆರಿಕಕ್ಕೆ ರಫ್ತು ಮಾಡಬಹುದು.ಈ ಸಂದರ್ಭದಲ್ಲಿ ನಮಗಿರುವ ಪ್ರಶ್ನೆ: ಈ ಕೃಷಿ ವ್ಯಾಪಾರ ಸ್ವಾಧೀನವನ್ನು ತಡೆಯಲು ನಮ್ಮ ಪ್ರಧಾನಿ ಏನು ಮಾಡಬಹುದು ಮತ್ತು ಅವರ ಕಾರ್ಯಗಳು ತಮ್ಮದೇ ಹೇಳಿಕೆಗಳಿಗೆ ಅನುಗುಣವಾಗಿರುತ್ತವೆಯೇ?

ರೈತರ ಬಗೆಗೆ ಅತ್ಯಂತ ಕಾಳಜಿಯ ಮಾತುಗಳನ್ನು ಸಾರ್ವಜನಿಕವಾಗಿ ಆಡುವ ಸರ್ಕಾರಕ್ಕೆ ರೈತರಸಂಕಷ್ಟಗಳಬಗ್ಗೆಕನಿಷ್ಠ ಕಾಳಜಿಯಾದರೂ ಇರಬೇಕು ಎಂದು ನಿರೀಕ್ಷಿಸುವುದು ತಪ್ಪೇ? ಅಂತಹ ಕಾಳಜಿ ಸರ್ಕಾರದ ಈ ಕ್ರಮಗಳಲ್ಲಿ ಎದ್ದು ಕಾಣುತ್ತದೆಯೇ? ನೀವೇ ಹೇಳಿ.

(ಆಧಾರ: ಅಖಿಲ ಭಾರತ ಕಿಸಾನ್ ಸಭಾದ ಹೇಳಿಕೆ ಮತ್ತು ವೈರ್ ಜಾಲತಾಣ ಮಾಧ್ಯಮದ ಲೇಖನಗಳು ಮತ್ತು ದಿ ಹಿಂದು ಪತ್ರಿಕೆಯ 15.09.25 ರ ಡಾಟಾ ಪಾಯಿಂಟ್ ಅಂಕಣ )

Donate Janashakthi Media

Leave a Reply

Your email address will not be published. Required fields are marked *