ಕಾಮನ್‌ವೆಲ್ತ್‌: ಬೆಳ್ಳಿಗೆ ತೃಪ್ತಿಗೊಂಡ ಭಾರತದ ಕ್ರಿಕೆಟ್‌ ವನಿತೆಯರು

ಬರ್ಮಿಂಗ್ಹ್ಯಾಮ್‌: ಕಾಮನ್‌ವೆಲ್ತ್‌ ಕ್ರೀಡಾ ಕೂಟದಲ್ಲಿ ಭಾರತದ ಕ್ರಿಕೆಟ್‌ ಮಹಿಳೆಯರ ಪಂದ್ಯದಲ್ಲಿ ಸ್ವಲ್ಪದರಲ್ಲೇ ಚಿನ್ನದ ಪದಕದಿಂದ ವಂಚಿತರಾಗಿದ್ದಾರೆ. ಫೈನಲ್‌ ಪಂದ್ಯದಾಟದಲ್ಲಿ ಆಸ್ಟ್ರೇಲಿಯಾ 9 ರನ್‌ಗಳಿಂದ ಭಾರತವನ್ನು ಸೋಲಿಸಿ ಚೊಚ್ಚಲ ಪದಕವನ್ನು ಮುಡಿಗೇರಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್‌ ಸೇರಿಸಲಾಗಿತ್ತು.

162 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡಿದ್ದರೂ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಜೆಮಿಮಾ ರಾಡಿಗ್ರಾಸ್‌ ಇಬ್ಬರ ಸೆಣೆಸಾಟದಿಂದ ಗೆಲುವಿನ ಹಂತದವರೆಗೆ ತಲುಪಿತ್ತು. ಆದರೆ ಕೊನೆಯಲ್ಲಿ ವಿಕೆಟ್‌ ಕಳೆದುಕೊಳ್ಳುವುದರೊಂದಿಗೆ ಅಂತಿಮವಾಗಿ 19.3 ಓವರ್‌ಗಳಲ್ಲಿ 152 ರನ್‌ಗಳಿಗೆ ಬ್ಯಾಟ್ಸ್‌ಮನ್‌ಗಳು ಸೋಲನ್ನು ಅನುಭವಿಸಿದರು.

ಭಾರತ 22 ರನ್‌ಗಳಿಸುವಷ್ಟರಲ್ಲೇ ಆರಂಭಿಕ ಇಬ್ಬರು ಆಟಗಾರ್ತಿಯರಾದ ಸ್ಮೃತಿ ಮಂದನಾ ಮತ್ತು ಶಫಾಲಿ ವರ್ಮಾ ಅವರ ವಿಕೆಟ್‌ ಕಳೆದುಕೊಂಡಿತ್ತು. ಈ ಹಂತದಲ್ಲಿ ಜೊತೆಯಾದ ಜೆಮಿಮಾ ಮತ್ತು ಕೌರ್‌ ನಿಧನವಾಗಿ ಆಡಿ ಇನ್ನಿಂಗ್ಸ್‌ ಕಟ್ಟತೊಡಗಿದರು. ಇವರಿಬ್ಬರು ಮೂರನೇ ವಿಕೆಟಿಗೆ 71 ಎಸೆತಗಳಲ್ಲಿ 96 ರನ್‌ ಜೊತೆಯಾಟವಾಡಿದಾಗ ಗೆಲುವಿನ ಆಸೆ ಚಿಗುರಿತ್ತು. ಆದರೆ ಇವರಿಬ್ಬರು ಔಟಾದ ಬೆನ್ನಲ್ಲೇ ಟೀಂ ಇಂಡಿಯಾದ ಪತನ ಆರಂಭವಾಯಿತು.

14.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 118 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಭಾರತ ನಂತರ 34 ರನ್‌ ಗಳಿಸುವಷ್ಟರಲ್ಲಿ 8 ವಿಕೆಟ್‌ ಕಳೆದುಕೊಂಡಿತ್ತು. ಮಧ್ಯಮ ಕ್ರಮಾಂಕ ಮತ್ತು ಬೌಲರ್‌ಗಳಿಂದ ಬ್ಯಾಟಿಂಗ್‌ ಪ್ರದರ್ಶನ ಬಾರದ ಕಾರಣ ಪಂದ್ಯವನ್ನು ಕೈಚೆಲ್ಲಿತು.

ಹರ್ಮನ್‌ ಪ್ರೀತ್‌ ಕೌರ್‌ 65 ರನ್‌(43 ಎಸೆತ, 7 ಬೌಂಡರಿ, 2 ಸಿಕ್ಸರ್)‌, ಜೆಮಿಮಾ 33 ರನ್‌(33 ಎಸೆತ, 3 ಬೌಂಡರಿ) ದೀಪ್ತಿ ಶರ್ಮಾ 13 ರನ್‌ ಗಳಿಸಿ ಔಟಾದರು.

ಆಸ್ಟ್ರೇಲಿಯಾ ಪರವಾಗಿ ಬೆಥ್‌ ಮೂನಿ 61 ರನ್‌(41 ಎಸೆತ, 8 ಬೌಂಡರಿ) ಮೆಗ್‌ ಲ್ಯಾನಿಂಗ್‌ 36 ರನ್‌(26 ಎಸೆತ, 5 ಬೌಂಡರಿ, 1 ಸಿಕ್ಸರ್‌), ಗಾರ್ಡ್‌ನರ್‌ 25 ರನ್‌(15 ಎಸೆತ, 2 ಬೌಂಡರಿ, 1 ಸಿಕ್ಸರ್‌) ಹೊಡೆದ ಪರಿಣಾಮ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 161 ರನ್‌ ಗಳಿಸಿತ್ತು.

Donate Janashakthi Media

Leave a Reply

Your email address will not be published. Required fields are marked *