ಉಕ್ರೇನ್‌-ರಷ್ಯಾ ಯುದ್ಧ: ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್‌ ಸಾವು

ಕೀವ್: ರಷ್ಯಾ-ಉಕ್ರೇನ್‌ ಯುದ್ಧದ ಸಮರದಲ್ಲಿ ಉಕ್ರೇನ್ ನಗರಗಳನ್ನು ವಶಪಡಿಸಿಕೊಳ್ಳಲು ರಷ್ಯಾದ ದಾಳಿ ಮುಂದುವರೆದಿದೆ. ರಷ್ಯಾ ವಾಯುದಾಳಿ ನಡೆಸಿ ಖಾರ್ಕಿವ್‌ನ ಪ್ರಧಾನ ಕಚೇರಿ ಸ್ಪೋಟಗೊಂಡಿದೆ. ಈ ವೇಳೆ ನಡೆದ ವೈಮಾನಿಕ ದಾಳಿಯಲ್ಲಿ ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ, ರಾಣೆಬೆನ್ನೂರು ತಾಲ್ಲೂಕಿನ ಚಲಗೇರಿಯ 21 ವರ್ಷದ ವಿದ್ಯಾರ್ಥಿ ನವೀನ್ ಶೇಕರಪ್ಪ ಜ್ಞಾನಗೌಡರ್ ಮರಣ ಹೊಂದಿದ್ದಾರೆ.

ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಮ್ಮ ಟ್ವೀಟ್‌ ಮೂಲಕ ಮಾಹಿತಿಯನ್ನು ದೃಢಪಡಿಸಿದ್ದಾರೆ. ಇಂದು ಬೆಳಿಗ್ಗೆ ಖಾರ್ಕಿವ್‌ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರು ಶೆಲ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ನಾವು ತೀವ್ರ ದುಃಖದಿಂದ ದೃಢಪಡಿಸುತ್ತೇವೆ. ಸಚಿವಾಲಯವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ. ಕುಟುಂಬಕ್ಕೆ ನಮ್ಮ ಸಂತಾಪವನ್ನು ಸೂಚಿಸುತ್ತೇವೆ ಎಂದಿದ್ದಾರೆ.

ವಿದ್ಯಾರ್ಥಿ ನವೀನ್ ಕಳೆದ ನಾಲ್ಕು ವರ್ಷಗಳಿಂದ ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದರು. ಅವರು, ಅರ್ಖಿಟೆಕ್ಟೋರಾ ಬೆಕೆಟೋವಾ ಮೆಟ್ರೋ ನಿಲ್ದಾಣದ ಬಂಕರ್‌ನಿಂದ ದಿನಸಿ ಪದಾರ್ಥ ತರಲು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಕ್ಷಿಪಣಿ ದಾಳಿ ನಡೆದಿದೆ ಎಂದು ವಿದೇಶಾಂಗ ಇಲಾಖೆ ಅಧಿಕಾರಿ ನವೀನ್ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ಮೃತದೇಹವನ್ನು ಖಾರ್ಕಿವ್ ನಗರದ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪ್ರಥಮ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ರಾಣೆಬೆನ್ನೂರಿನ ಪ್ರವೀಣ್ ಅವರ ಸ್ನೇಹಿತರೊಬ್ಬರು ಮೃತ ಕುಟುಂಬದ ಸದಸ್ಯರಿಗೆ ವಿಷಯ ತಿಳಿಸಿದ್ದಾರೆ. ಸ್ಥಳೀಯ ಉಕ್ರೇನ್ ಕಾಲಮಾನ ಬೆಳಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಎಂಇಎ ಅಧಿಕಾರಿಗಳು ನವೀನ್ ಸೋದರ ಸಂಬಂಧಿಯೊಂದಿಗೆ ಮಾತನಾಡಿ ಸಾವನ್ನು ದೃಢಪಡಿಸಿದರು. ”ಯುದ್ಧ ಪ್ರದೇಶವಾಗಿರುವುದರಿಂದ ಈಗ ಶವವನ್ನು ತರಲು ಸಾಧ್ಯವಾಗುತ್ತಿಲ್ಲ. ದೇಹವನ್ನು ಸಂರಕ್ಷಿಸಲು ಮತ್ತು ಸಾಧ್ಯವಾದಷ್ಟು ಬೇಗ ಭಾರತಕ್ಕೆ ತರಲು ಅವರು ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ’ʼ ಖಚಿತಪಡಿಸಿದೆ.

ರಷ್ಯಾದ ಪಡೆಗಳು ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವನ್ನು ಪ್ರವೇಶಿಸಿ, ಉಕ್ರೇನ್ ಸರ್ಕಾರದ ಮೇಲೆ ಒತ್ತಡವನ್ನು ಹೇರಲು ಕಳೆದ ಎರಡು ದಿನಗಳಿಂದ ನಾಗರಿಕರ ಮೇಲೆ ದಾಳಿ ಪ್ರಾರಂಭಿಸಿದೆ.

‘ಹಾರ್ಕಿವ್‌ ಮತ್ತು ಇತರ ನಗರಗಳಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ತುರ್ತಾಗಿ ಮತ್ತು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಸಹಕರಿಸುವಂತೆ ರಷ್ಯಾ ಮತ್ತು ಉಕ್ರೇನ್‌ನ ರಾಯಭಾರಿಗಳ ಜೊತೆ ವಿದೇಶಾಂಗ ಕಾರ್ಯದರ್ಶಿ ಸಂಪರ್ಕದಲ್ಲಿದ್ದಾರೆ. ರಷ್ಯಾ ಮತ್ತು ಉಕ್ರೇನ್‌ನಲ್ಲಿರುವ ನಮ್ಮ ರಾಯಭಾರಿಗಳು ಕ್ಷಿಪ್ರ ಕಾರ್ಯಚರಣೆ ನಡೆಸುತ್ತಿದ್ದಾರೆ’  ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *