ಮಂಗಳೂರು: ತೌಕ್ತೆ ಚಂಡಮಾರುತದ ಅಬ್ಬರದ ಅಲೆಯಲ್ಲಿ ಸಿಲುಕಿಕೊಂಡಿದ್ದ ಒಂಭತ್ತು ಮಂದಿಯನ್ನು ಭಾರತೀಯ ನೌಕಾಪಡೆ ಸಿಬ್ಬಂದಿಗಳು ಇಂದು ಬೆಳಗ್ಗೆ ರಕ್ಷಿಸಿದ್ದಾರೆ.
ಕೂಡಲೇ ರಕ್ಷಣೆಗೆ ಧಾವಿಸಿದ ನೌಕಾಪಡೆಯ ಹೆಲಿಕಾಪ್ಟರ್ ಮತ್ತು ಹಡಗಿನ ನೆರವಿನಿಂದ ಸತತ 24 ಗಂಟೆಗೂ ಹೆಚ್ಚಿನ ಕಾರ್ಯಚಾರಣೆ ಕೈಗೊಂಡು ಅವರನ್ನು ಕಾಪಾಡಿದ್ದಾರೆ ಎಂದು ಕರ್ನಾಟಕ ಕರಾವಳಿ ಪಡೆಯ ಡಿಐಜಿ ಎಸ್ ಬಿ ವೆಂಕಟೇಶ್ ಹೇಳಿದ್ದಾರೆ.
ಇವರುಗಳು ಮಂಗಳೂರು ಕಡಲ ತೀರದ ಮೂಲ್ಕಿ ಬಳಿಯ ಕಲ್ಲುಬಂಡೆಯ ಪಕ್ಕದಲ್ಲಿ ಸಿಲುಕಿಕೊಂಡಿದ್ದರು ಎಂದು ತಿಳಿದುಬಂದಿತ್ತು. ಕೋರಮಂಡಲ್ ಟಗ್ ನಲ್ಲಿದ್ದ 9 ಜನರಲ್ಲಿ ಐದು ಮಂದಿಯನ್ನು ಬೋಟ್ ಮೂಲಕ ಹಾಗೂ ನಾಲ್ವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿಲಾಗಿದೆ.
ಇದನ್ನು ಓದಿ: ತೌಕ್ತೆ ಚಂಡಮಾರುತ ಎಫೆಕ್ಟ್ : ಕಡಲನಗರಿಯಲ್ಲಿ ಹೆಚ್ಚಿದ ಅಲೆ, 8 ಜಿಲ್ಲೆಯಲ್ಲಿ ಭಾರೀ ಮಳೆ ಸಾದ್ಯತೆ
ಎನ್‌ಎಂಪಿಟಿಯಲ್ಲಿ ಲಂಗರು ಹಾಕಿದ್ದ ಹಡಗು ನಿನ್ನೆ ಬೆಳಗ್ಗೆಯೇ ತೌಕ್ತೆ ಚಂಡಮಾರುತದಿಂದ ಉಂಟಾದ ಹೆಚ್ಚಿನ ಉಬ್ಬರವಿಳಿತದಲ್ಲಿ ಸಿಲುಕಿದ ನಂತರ ಮತ್ತೆ ಚಲಿಸಲಾರಂಭಿಸಿತು. ನಂತರ ಸ್ವಲ್ಪ ದೂರ ಹೋಗಿ ಸಿಕ್ಕಿ ಹಾಕಿಕೊಂಡಿದ್ದು ಮೂಲ್ಕಿ ಬಳಿ ಬಂಡೆಯ ಬಳಿ.
ಹಡಗಿನಲ್ಲಿದ್ದವರ ಬಳಿ ಆಹಾರ ಪದಾರ್ಥಗಳು ಮತ್ತು ನೀರು ಇದ್ದಿದ್ದರಿಂದ ಅವರಿಗೆ ಮತ್ತೊಂದು ಏನೂ ಎದುರಾಗಿರಲಿಲ್ಲ.
ನಿನ್ನೆ ಬೀಸಿದ ಚಂಡಮಾರುತದ ಭಾರೀ ಗಾಳಿಯ ಅಲೆಗಳಿಂದಾಗಿ ರಕ್ಷಣಾ ಸಿಬ್ಬಂದಿಗೆ ಕಾರ್ಯಾಚರಣೆಗೆ ಇಳಿಯಲು ಸಾಧ್ಯವಾಗಿರಲಿಲ್ಲ. ಸುದ್ದಿ ಗೊತ್ತಾದ ಕೂಡಲೇ ರಾಜ್ಯ ಸರ್ಕಾರ ನೌಕಾಪಡೆಗೆ ಮನವಿ ಮಾಡಿಕೊಂಡಿತ್ತು, ಅದು ಗೋವಾದಿಂದ ಹೆಲಿಕಾಪ್ಟರ್ ತರಿಸಿ ರಕ್ಷಣಾ ಕಾರ್ಯಕ್ಕಿಳಿಯಿತು.
ಈ ಮಧ್ಯೆ, ಟಗ್ ಬೋಟ್ ಮಗುಚಿ ಕಾಣೆಯಾದ ಮೂವರು ಇನ್ನೂ ಸಿಕ್ಕಿಲ್ಲ. ದೋಣಿಯಲ್ಲಿ ಒಟ್ಟು 8 ಮಂದಿಯಿದ್ದರು. ಅವರಲ್ಲಿ ಇಬ್ಬರು ಮೃತಪಟ್ಟರೆ, ಮೂವರು ಈಜಿ ಹೇಗೋ ದಡ ಸೇರಿ ಬಚಾವಾಗಿದ್ದಾರೆ.