ನವದೆಹಲಿ: ನಮ್ಮ ಪ್ರಧಾನ ಮಂತ್ರಿ ಮೋದಿಯವರು ತಮ್ಮ`ಪರಮ ಮಿತ್ರ’ ಟ್ರಂಪ್ ರವರ ಸುಂಕಯುದ್ಧದ ಭಾಗವಾಗಿ ಭಾರತದ ಜವಳಿ ರಫ್ತಿನ ಮೇಲೆ ಅಮೆರಿಕ 50% ಕ್ಕಿಂತ ಹೆಚ್ಚು ಸುಂಕವನ್ನು ಘೋಷಿಸಿರುವುದರಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು, ಜಾಗತಿಕ ಪೂರೈಕೆ ಸರಪಳಿಯಲ್ಲಿ ದುರ್ಬಲ ಕೊಂಡಿಯಾಗಿರುವ ಭಾರತೀಯ ಹತ್ತಿ ರೈತರನ್ನೇ ಶಿಕ್ಷಿಸಲು ನಿರ್ಧರಿಸಿದ್ದಾರೆ ಎಂದು ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್)ದ ಪ್ರಧಾನ ಕಾರ್ಯದರ್ಶಿ ಮತ್ತು ಅಧ್ಯಕ್ಷ ಅಶೋಕ ಧವಳೆಯವರು ಕಟುವಾಗಿ ಟೀಕಿಸಿದ್ದಾರೆ. ಭಾರತದ
ಅವರು ಕೇಂದ್ರ ಸರ್ಕಾರ ಕಚ್ಚಾ ಹತ್ತಿಯ ಮೇಲಿನ 11% ಆಮದು ಸುಂಕವನ್ನು ರದ್ದುಗೊಳಿಸಿದ ನಿರ್ಧಾರವನ್ನು ಖಂಡಿಸುತ್ತ ಈ ಮಾತುಗಳನ್ನು ಹೇಳಿದ್ದಾರೆ.
ಆಗಸ್ಟ್ 25ರಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು ಕೂಡ ಪತ್ರಿಕಾಗೋಷ್ಠಿಯಲ್ಲಿ ಇಂತಹುದೇ ಟೀಕೆಯನ್ನು ಮಾಡುತ್ತ ಸಪ್ಟಂಬರ್ 1ರಿಂದ ಇದರ ವಿರುದ್ಧ ಪ್ರತಿಭಟನಾ ಚಳುವಳಿಯನ್ನು ಆರಂಭಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
‘ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ’(ಸಿಬಿಐಸಿ) ಆಗಸ್ಟ್ 18ರಂದು ಪ್ರಕಟಿಸಿದ ಅಧಿಸೂಚನೆಯು ಆಗಸ್ಟ್ 19 ರಿಂದ ಸೆಪ್ಟೆಂಬರ್ 30, 2025 ರವರೆಗೆ ಹತ್ತಿ ಆಮದು ಸುಂಕವನ್ನು ರದ್ದು ಮಾಡಿರುವುದಾಗಿ ಹೇಳಿತ್ತು. ಈಗ ಆಗಸ್ಟ್ 27ರಂದು ಟ್ರಂಪ್‍ರವರ 50% ಸುಂಕ ಜಾರಿಗೆ ಬರುತ್ತಿರುವಂತೆಯೇ ಈ ಸಂಪೂರ್ಣ ಸುಂಕ ರಿಯಾಯ್ತಿಯನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸುವುದಾಗಿಯೂ ಅಧಿಸೂಚನೆ ಹೊರಡಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಂಗಳೂರು | ಚಿನ್ನಯ್ಯನ ವಿರುದ್ಧ ದೂರು ಕೊಡಲು ಸೌಜನ್ಯಾ ತಾಯಿ ಎಸ್ ಐಟಿ ಕಚೇರಿಗೆ ಆಗಮನ
ಈ ನಿರ್ಧಾರವು ಆಮದು ಮಾಡಿಕೊಂಡ ಹತ್ತಿಯ ಬೆಲೆಯಲ್ಲಿ ಇಳಿಕೆಗೆ ಕಾರಣವಾಗುತ್ತದೆ, ಪರಿಣಾಮವಾಗಿ ಇದು ದೇಶೀಯ ಹತ್ತಿಯ ಬೆಲೆಗಳನ್ನೂ ಕೆಳಕ್ಕೆ ತಳ್ಳುತ್ತದೆ. ಭಾರತದಲ್ಲಿನ ಸಣ್ಣ ಹತ್ತಿ ಉತ್ಪಾದಕರು ಐತಿಹಾಸಿಕವಾಗಿ ಬೃಹತ್ ಸರ್ಕಾರಿ ಸಬ್ಸಿಡಿಗಳನ್ನು ಪಡೆದಿರುವ ಯುನೈಟೆಡ್ ಸ್ಟೇಟ್ಸ್‌ನ ದೊಡ್ಡ, ಕೈಗಾರಿಕಾ-ಪ್ರಮಾಣದ ಹತ್ತಿ ರೈತರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲವಾದ್ದರಿಂದ ಇದು ರೈತ-ವಿರೋಧಿ ನಿರ್ಧಾರ ಎಂದು ಮುಖಂಡರು ರೈತರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿಯವರು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, “ಭಾರತೀಯ ರೈತರು, ಮೀನುಗಾರರು ಮತ್ತು ಪಶುಪಾಲಕರ ಮೇಲೆ ಪರಿಣಾಮ ಬೀರುವ ಯಾವುದೇ ಪ್ರತಿಕೂಲ ನೀತಿಯ ವಿರುದ್ಧ ಗೋಡೆಯಂತೆ ನಿಲ್ಲುತ್ತೇನೆ” ಮತ್ತು “ಭಾರತವು ಭಾರತೀಯ ರೈತರು, ಮೀನುಗಾರರು ಮತ್ತು ಪಶುಪಾಲಕರ ಹಿತಾಸಕ್ತಿಗಳನ್ನು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ಹೇಳಿದ್ದರ ಬೆನ್ನಲ್ಲೇ ಸಿಬಿಐಸಿ ಇಂತಹ ಅಧಿಸೂಚನೆಗಳನ್ನು ಪ್ರಕಟಿಸಿರುವುದು ಒಂದು ವಿಪರ್ಯಾಸ ಎಂದು ಅವರು ಹೇಳುತ್ತಾರೆ.
ಹೆಚ್ಚಿನ ಹತ್ತಿ ಬೆಳೆಯುವ ಪ್ರದೇಶಗಳಲ್ಲಿನ ರೈತರು ಸುಮಾರು ಎರಡು ತಿಂಗಳ ಹಿಂದೆಯೇ ತಮ್ಮ ಬೆಳೆಗಳನ್ನು ಬಿತ್ತಿದ್ದಾರೆ ಮತ್ತು ತಮ್ಮ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಪಡೆಯುವ ನಿರೀಕ್ಷೆಯಲ್ಲಿ ಗಮನಾರ್ಹ ವೆಚ್ಚವನ್ನು ಮಾಡಿದ್ದಾರೆ. ಈಗ ಆಮದು ಸುಂಕವನ್ನು ರದ್ದುಗೊಳಿಸುವ ಈ ಕ್ರಮವು ರೈತರು ತಮ್ಮ ಬೆಳೆಯನ್ನು ಕೊಯ್ಲು ಮಾಡಲು ಸಿದ್ಧರಾಗುತ್ತಿರುವಾಗ ಅವರಿಗೆ ಖಂಡಿತವಾಗಿಯೂ ಒಂದು ಕೆಟ್ಟ ಸುದ್ದಿ. ಭಾರತದ ಹತ್ತಿ ಬೆಳೆಯುವ ಪ್ರದೇಶಗಳು ಕೃಷಿ ಸಂಕಷ್ಟ ಮತ್ತು ರೈತರ ಆತ್ಮಹತ್ಯೆ ಸಾವುಗಳಿಗೆ ಕುಖ್ಯಾತವಾಗಿವೆ. ಸರಕಾರದ ಈ ಕ್ರಮವು ಹತ್ತಿ ರೈತರನ್ನು ಮತ್ತಷ್ಟು ಸಾಲಕ್ಕೆ ತಳ್ಳುತ್ತದೆ ಮತ್ತು ಆರ್ಥಿಕ ಸಂಕಷ್ಟವನ್ನು ಉಲ್ಬಣಗೊಳಿಸುತ್ತದೆ.
ಮೋದಿಯವರು ಎಡೆಬಿಡದೆ ಸಾಮ್ರಾಜ್ಯಶಾಹಿ ಪರ ನೀತಿಗಳನ್ನು ಅನುಸರಿಸಿದರೂ ಟ್ರಂಪ್ ಪ್ರಾರಂಭಿಸಿದ ಸುಂಕ ಯುದ್ಧದಲ್ಲಿ ಭಾರತದ ಹಿತಾಸಕ್ತಿಗಳಿಗೆ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ವಿಫಲರಾಗಿರುವ ಮೋದಿ ಅದಕ್ಕಾಗಿ ಜಾಗತಿಕ ಪೂರೈಕೆ ಸರಪಳಿಯಲ್ಲಿ ದುರ್ಬಲ ಕೊಂಡಿಯಾಗಿರುವ ಭಾರತೀಯ ಹತ್ತಿ ರೈತರನ್ನು ಶಿಕ್ಷಿಸಲು ನಿರ್ಧರಿಸಿದ್ದಾರೆ ಎಂದು ಎಐಕೆಎಸ್ ಮತ್ತು ಎಸ್‍ಕೆಎಂ ಖೇದ ವ್ಯಕ್ತಪಡಿಸಿವೆ.
ನವ ಉದಾರವಾದಿ ಯುಗದಲ್ಲಿ ಪ್ರಭುತ್ವ ಮತ್ತು ಬಂಡವಾಳದ ನಂಟು ಭಾರತೀಯ ಹತ್ತಿ ರೈತರನ್ನು ಲಾಗುವಾಡುಗಳ ಕಡೆಯಿಂದಲೂ ಮತ್ತು ಮತ್ತು ಉತ್ಪನ್ನದ ಕಡೆಯಿಂದಲೂ ಹಿಂಡಿರುವುದನ್ನು ಕಂಡಿದ್ದೇವೆ. ಪ್ರಧಾನ ಮಂತ್ರಿಯಾಗಿ ತಮ್ಮ 11 ವರ್ಷಗಳ ಅವಧಿಯಲ್ಲಿ, ಮೋದಿ ಹತ್ತಿ ರೈತರಿಗೆ ಶಿಫಾರಸು ಮಾಡಿದ ಸಿ2 +50% ದರದಲ್ಲಿ ಕನಿಷ್ಟ ಬೆಂಬಲ ಬೆಲೆ (ಎಂಎಸ್‍ಪಿ) ನೀಡಲಿಲ್ಲ. ಉದಾಹರಣೆಗೆ, ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ(ಸಿಎಸಿಪಿ) 2025 ರ ಮುಂಗಾರು ಋತುವಿನಲ್ಲಿ ಹತ್ತಿಗೆ ಪ್ರತಿ ಕ್ವಿಂಟಲ್‌ಗೆ ರೂ.7710 ಎಂದು ಎಂಎಸ್‍ಪಿ ಘೋಷಿಸಿದೆ. ಸಿ2 +50% ಸೂತ್ರವನ್ನು ಬಳಸಿದ್ದರೆ, ಅದು ಕ್ವಿಂಟಲ್‌ಗೆ ರೂ.10075 ಆಗುತ್ತಿತ್ತು. ಸರಳವಾಗಿ ಹೇಳುವುದಾದರೆ, ಭಾರತೀಯ ಹತ್ತಿ ರೈತರು ಪ್ರಸ್ತುತ ಕ್ವಿಂಟಲ್‌ಗೆ ರೂ.2365 ಕಡಿಮೆ ಎಂಎಸ್‍ಪಿ ಪಡೆಯುತ್ತಿದ್ದಾರೆ. ಇದೇ ರೈತರಿಗೆ ಸ್ಪಷ್ಟವಾದ ದ್ರೋಹವಾಗಿದೆ. ಈಗ ಹತ್ತಿ ಬೆಲೆ ಮತ್ತಷ್ಟು ಕುಸಿಯುತ್ತಿವಂತಾದರೆ ಅದು ರೈತರ ಸಂಪೂರ್ಣ ಲೂಟಿಯಾಗುತ್ತದೆ ಎಂದು ಎಐಕೆಎಸ್ ಈ ಮೊದಲು ಆಗಸ್ಟ್ 20ರಂದು ನೀಡಿದ ಹೇಳಿಕೆಯಲ್ಲಿ ವಿಶ್ಲೇಷಿಸಿತ್ತು.
ರೈತರಿಗೆ ಸಬ್ಸಿಡಿ ವಿಷಯದಲ್ಲಿ ಯುಎಸ್ ದ್ವಂದ್ವ ನೀತಿಯನ್ನು ಅನುಸರಿಸುತ್ತ ಭಾರತೀಯ ಹತ್ತಿ ರೈತರಿಗೆ ಸರಕಾರದ ಬೆಂಬಲವನ್ನು ಕಡಿಮೆ ಮಾಡಲು ಭಾರತ ಸರ್ಕಾರದೊಂದಿಗೆ ಎಷ್ಟೆಲ್ಲಾ ಲಾಬಿ ಮಾಡಿದೆ ಎಂಬುದು ಚೆನ್ನಾಗಿಯೇ ದಾಖಲಾಗಿರುವ ಸಂಗತಿ. ಇದರ ಪರಿಣಾಮವೆಂದರೆ, ಯುಎಸ್ ನಲ್ಲಿ, ಸರ್ಕಾರದ ಸಬ್ಸಿಡಿಗಳು ಹತ್ತಿಯ ಒಟ್ಟು ಉತ್ಪಾದನೆಯ ಮೌಲ್ಯದ ಶೇ.12 ರಷ್ಟಿದೆ ಎಂದು ಅಂದಾಜಿಸಲಾಗಿದ್ದರೆ, ಭಾರತದಲ್ಲಿ, ಹತ್ತಿ ರೈತರಿಗೆ ಸರ್ಕಾರದ ಬೆಂಬಲವು ಉತ್ಪಾದನೆಯ ಮೌಲ್ಯದ ಶೇ. 2.37 ರಷ್ಟು ಮಾತ್ರ. ಪ್ರಭುತ್ವ ಬೆಂಬಲದ ಮಟ್ಟದಲ್ಲಿನ ಈ ಬೃಹತ್ ಅಸಮಾನತೆಯು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹತ್ತಿ ಉತ್ಪಾದಕರ ಮೇಲೆ ಅಮೆರಿಕದ ಹತ್ತಿ ರೈತರು ಹೊಂದಿರುವ ಪ್ರಯೋಜನದ ಮೂಲವಾಗಿದೆ ಎಂದಿರುವ ಎಐಕೆಎಸ್ ಸರ್ಕಾರದ ಬೆಂಬಲದ ಮಟ್ಟದಲ್ಲಿನ ಬೃಹತ್ಅ ಸಮಾನತೆ ಮತ್ತು ಅಮೆರಿಕ ಮತ್ತು ಭಾರತದಲ್ಲಿ ರೈತರ ಉತ್ಪಾದನೆಯ ಪ್ರಮಾಣದಲ್ಲಿನ ದೊಡ್ಡ ವ್ಯತ್ಯಾಸವು ಭಾರತೀಯ ರೈತರನ್ನು ಭಾರಿ ಅನಾನುಕೂಲಕ್ಕೆ ದೂಡುತ್ತದೆ ಎಂಬ ಪರಿಸ್ಥಿತಿಯತ್ತ ಗಮನ ಸೆಳೆದಿದೆ.
ಯುಎಸ್ ಸರ್ಕಾರವು ಭಾರತದ ಮೇಲೆ ಅಮೆರಿಕದ ಇತರ ಕೃಷಿ ಉತ್ಪನ್ನಗಳಿಗೂ ಇದೇ ರೀತಿ ಭಾರತೀಯ ಮಾರುಕಟ್ಟೆಗಳನ್ನು ತೆರೆಯಲು ಒತ್ತಡ ಹೇರುತ್ತಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ. ರೈತರು ಇಂತಹ ರೈತ- ವಿರೋಧಿ ನಿರ್ಧಾರಗಳನ್ನು ಸಹಿಸುವುದಿಲ್ಲ ಎಂದು ಭಾರತ ಸರ್ಕಾರಕ್ಕೆ ಸ್ಪಷ್ಟಪಡಿಸದಿದ್ದರೆ, ಮೋದಿ ಸರ್ಕಾರವು ಅಮೆರಿಕದ ಒತ್ತಡಕ್ಕೆ ಮಣಿದು ಇತರ ಬೆಳೆಗಳಿಗೂ ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲು ಎಲ್ಲಾ ರೈತರು ಒಗ್ಗೂಡಿ ತೀವ್ರ ಆಂದೋಲನವನ್ನು ಪ್ರಾರಂಭಿಸಬೇಕೆಂದು ಎಐಕೆಎಸ್ ಕರೆ ನೀಡಿದೆ.
ಸಪ್ಟಂಬರ್ 1ರಿಂದ ಹತ್ತಿ ರೈತರ ಪ್ರತಿಭಟನೆ – ಎಸ್‍ಕೆಎಂ ಕರೆ

ಆಗಸ್ಸ್ಟ್ 25ರಂದು ಸಂಯುಕ್ತ ಕಿಸಾನ್ ಮೋರ್ಚಾ(ಎಸ್‍ಕೆಎಂ)ದ ಪತ್ರಿಕಾಗೋಷ್ಠಿಯಲ್ಲಿ, ವಿವಿಧ ರೈತ ಸಂಘಟನೆಗಳ ಮುಖಂಡರು 11 ರಾಜ್ಯಗಳ ಸುಮಾರು 70ಲಕ್ಷ ಹತ್ತಿ ರೈತರ ಪ್ರತಿಭಟನಾ ಕ್ರಮಗಳನ್ನು ಪ್ರಕಟಿಸಿದರು.
1. ಹತ್ತಿ ರೈತರು ಅಧಿಸೂಚನೆಯ ಪ್ರತಿಗಳನ್ನು ಸುಟ್ಟು ಸೆಪ್ಟೆಂಬರ್ 1, 2, 3, 2025 ರಂದು ಹಳ್ಳಿಗಳಲ್ಲಿ ಪ್ರತಿಭಟನಾ ಸಭೆಗಳನ್ನು ನಡೆಸಲಿದ್ದಾರೆ.
2. ಗ್ರಾಮ ಸಭೆಗಳನ್ನು ಕರೆಯಲಾಗುವುದು ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ತಿಯ ಮೇಲಿನ 11% ಆಮದು ಸುಂಕವನ್ನು ರದ್ದುಗೊಳಿಸುವ ಮತ್ತು ಕಚ್ಚಾ ಹತ್ತಿಗೆ ಕ್ವಿಂಟಲ್‌ಗೆ ಸಿ2+50% ಶಿಫಾರಸಿನಂತೆರೂ.10075ಎಂಎಸ್‍ಪಿಯನ್ನು ತಕ್ಷಣವೇ ಘೋಷಿಸುವಂತೆ ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಲಾಗುವುದು. ನಿರ್ಣಯವನ್ನು ಪ್ರಧಾನ ಮಂತ್ರಿಗಳಿಗೆ ಕಳುಹಿಸಲಾಗುವುದು.
3. 10.09.2025 ರ ಮೊದಲು ಆಯಾ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಿಗೆ ಸಲ್ಲಿಸುವ ಜ್ಞಾಪಕ ಪತ್ರವನ್ನು ಬೆಂಬಲಿಸಿ ಸಹಿ ಅಭಿಯಾನ ಮತ್ತು ಮನೆ ಮನೆಗೆ ಕರಪತ್ರ ವಿತರಣೆಯನ್ನು ನಡೆಸಲಾಗುತ್ತದೆ.
4. ಪ್ರಧಾನ ಮಂತ್ರಿಗಳು ಬೇಡಿಕೆಯ ಬಗ್ಗೆ ತಕ್ಷಣ ನಿರ್ಧಾರ ತೆಗೆದುಕೊಳ್ಳದಿದ್ದರೆ ಹತ್ತಿ ರೈತರು ಮಂಡಲ ಮಹಾಪಂಚಾಯತ್ ಅನ್ನು ಕರೆದು ಆಯಾ ಸಂಸತ್ತಿನ ಸದಸ್ಯರಿಗೆ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸುತ್ತಾರೆ.
5. ಹತ್ತಿ ಬೆಳೆಯುವ 11 ರಾಜ್ಯಗಳಲ್ಲಿನ ಎಸ್‍ಕೆಎಂ ರಾಜ್ಯ ಸಮನ್ವಯ ಸಮಿತಿಗಳು ತಕ್ಷಣವೇ ಹತ್ತಿ ರೈತರ ಸಭೆಗಳು ಮತ್ತು ಸಮಾವೇಶಗಳನ್ನು ಕರೆದು ಭವಿಷ್ಯದ ಹೋರಾಟದ ಯೋಜನೆಗಳನ್ನು ಚರ್ಚಿಸಲು ಮತ್ತು ನಿರ್ಧರಿಸಲು ಕರೆಯುತ್ತವೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಜುಲೈ4, 2025ರಂದು ಅಲ್ಲಿನ ಪರಿಹಾರ ಮತ್ತು ಮರುವಸತಿ ಮಂತ್ರಿಗಳು ನೀಡಿದ ಮಾಹಿತಿಯ ಪ್ರಕಾರ ಮಹಾರಾಷ್ಟ್ರದ ಮರಾಠವಾಡ ಮತ್ತು ವಿದರ್ಭ ಪ್ರದೇಶದಲ್ಲಿ ಮಾರ್ಚ್ ಮತ್ತು ಎಪ್ರಿಲ್ 2025ರ ರಡೇ ತಿಂಗಳುಗಳಲ್ಲಿ 479 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹತ್ತಿ ರೈತರಲ್ಲಿ ಇಂತಹ ವ್ಯಾಪಕ ಆತ್ಮಹತ್ಯೆಗಳ ಹಿನ್ನೆಲೆಯಲ್ಲಿ ಎಸ್‍ಕೆಎಂನ ಒಂದು ನಿಯೋಗವು ಸೆಪ್ಟೆಂಬರ್ 17 ಮತ್ತು 18, 2025 ರಂದು ಮಹಾರಾಷ್ಟ್ರದ ವಿದರ್ಭಕ್ಕೆ ಭೇಟಿ ನೀಡಲಿದೆ ಎಂದೂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.
ಈ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಹಿರಿಯ ಎಸ್‍ಕೆಂ ಮುಖಂಡರಾದ ಹನ್ನನ್ ಮೊಲ್ಲ, ರಾಕೇಶ್ ಟಿಕಾಯತ್, ರಾಜನ್ ಕ್ಷೀರಸಾಗರ್, ಪ್ರೇಮ್‍ಸಿಂಗ್ ಗೆಹ್ಲಾವತ್ ಮತ್ತು ಪಿ.ಕೃಷ್ಣಪ್ರಸಾದ್ ಮಾತಾಡಿದರು.
ಇದನ್ನೂ ನೋಡಿ: ಧರ್ಮಸ್ಥಳ | ಅಸಹಜ ಸಾವುಗಳು, ಅತ್ಯಾಚಾರಗಳು, ಕೊಲೆಗಳು ಮತ್ತು ಭೂಕಬಳಿಕೆ ನಂಟಿನ ಬಗ್ಗೆ ತನಿಖೆಯಾಗಲಿ – ಎಡಪಕ್ಷಗಳ ಆಗ್ರಹ
