ನಾಲ್ಕು ದಶಕಗಳ ಬಳಿಕ ಹಾಕಿಯಲ್ಲಿ ಪದಕ ಗೆದ್ದು ಬೀಗಿದ ಭಾರತ

  • ಕಂಚಿಗೆ ಮುತ್ತಿಕ್ಕಿದ ಹಾಕಿ ಪುರುಷರ ತಂಡ
  • 41 ವರ್ಷಗಳಿಂದ ಭಾರತ ಪದಕ ಗೆದ್ದಿರಲಿಲ್ಲ

ಟೋಕಿಯೋ : ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಹಾಕಿಯಲ್ಲಿ ಬರೋಬ್ಬರಿ 41 ವರ್ಷಗಳ ಪದಕದ ಬರವನ್ನು ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಪುರುಷರ ಹಾಕಿ ತಂಡ ನೀಗಿಸಿದೆ. ಸಾಕಷ್ಟು ರೋಚಕತೆಯಿಂದ ಕೂಡಿದ ಕಂಚಿನ ಪದಕಕ್ಕಾಗಿನ ಕಾದಾಟದಲ್ಲಿ ಬಲಿಷ್ಠ ಜರ್ಮನಿ ತಂಡವನ್ನು ಮಣಿಸುವ ಮೂಲಕ ಭಾರತ ಹಾಕಿ ತಂಡ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದೆ.

ಮೊದಲ ಕ್ವಾರ್ಟರ್‌ನ ಎರಡನೇ ನಿಮಿಷದಲ್ಲಿ ಟೈಮೂರ್ ಗೋಲು ಬಾರಿಸುವ ಮೂಲಕ ಜರ್ಮನಿಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಇದರೊಂದಿಗೆ ಮೊದಲ ಕ್ವಾರ್ಟರ್‌ನಲ್ಲಿ ಜರ್ಮನಿ 1-0 ಮುನ್ನಡೆ ಕಾಯ್ದುಕೊಂಡಿತು. ಇನ್ನು ಎರಡನೇ ಕ್ವಾರ್ಟರ್‌ನಲ್ಲಿ ಕಮ್‌ಬ್ಯಾಕ್‌ ಮಾಡುವಲ್ಲಿ ಭಾರತ ಯಶಸ್ವಿಯಾಯಿತು. ಎರಡನೇ ಕ್ವಾರ್ಟರ್‌ನಲ್ಲಿ ಭಾರತ ಮೂರು ಗೋಲು ಬಾರಿಸಿದರೆ, ಜರ್ಮನಿ ಎರಡು ಗೋಲು ಬಾರಿಸಿತು. ಇದರೊಂದಿಗೆ ಮೊದಲಾರ್ಧ ಮುಕ್ತಾಯದ ವೇಳೆಗೆ 3-3ರ ಸಮಬಲ ಸಾಧಿಸಿತು.

ಇನ್ನು ಮೂರನೇ ಕ್ವಾರ್ಟರ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿ ಪ್ರದರ್ಶನ ತೋರಿದ ಮನ್‌ಪ್ರೀತ್‌ ಪಡೆ ಮತ್ತೆರಡು ಗೋಲು ಬಾರಿಸುವ ಮೂಲಕ ಭಾರತಕ್ಕೆ 5-3ರ ಮುನ್ನಡೆ ಒದಗಿಸಿಕೊಟ್ಟಿತು. ಇನ್ನು ಕೊನೆಯ ಕ್ವಾರ್ಟರ್‌ನಲ್ಲಿ ಜರ್ಮನಿ ಕೇವಲ ಒಂದು ಗೋಲು ಗಳಿಸಲಷ್ಟೇ ಶಕ್ತವಾಯಿತು.

ಸಾಧನೆಯ ಸಂಕ್ಷಿಪ್ತ ಇತಿಹಾಸ : ಇದಕ್ಕೂ ಮೊದಲು 49 ವರ್ಷದ ಹಿಂದೆ 1972ರಲ್ಲಿ ಮ್ಯೂನಿಚ್​​ನಲ್ಲಿ ನಡೆದಿದ್ದ ಒಲಿಂಪಿಕ್ಸ್‌​ನಲ್ಲಿ ಭಾರತ ತಂಡ ಸೆಮಿಫೈನಲ್​ನಲ್ಲಿ ಪಾಕಿಸ್ತಾನದ ವಿರುದ್ಧ 2-0 ಗೋಲುಗಳ ಅಂತರದಿಂದ ಸೋಲೊಪ್ಪಿಕೊಂಡಿತ್ತು. ಇದಾದ ಬಳಿಕ ಭಾರತ ತಂಡ ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಆದರೆ, 41 ವರ್ಷದ ಹಿಂದೆ 1980ರಲ್ಲಿ ಮಾಸ್ಕೋದಲ್ಲಿ ನಡೆದ ಒಲಿಂಪಿಕ್‌ನಲ್ಲಿ ಕೇವಲ 6 ತಂಡಗಳಿದ್ದ ಕಾರಣ ಸೆಮಿಫೈನಲ್ ಹಂತ ಇಲ್ಲದೆಯೇ ಫೈನಲ್ ಪ್ರವೇಶಿಸಿತ್ತು, ಜೊತೆಗೆ ಅಂದು ಚಿನ್ನಕ್ಕೆ ಕೊರೊಳೊಡ್ಡಿತ್ತು. 2020 – 21 ರ ಟೋಕಿಯೋ ಒಲಿಂಪಿಕ್ಸ್ ಕಂಚಿನ ಪದಕ ಗೆಲ್ಲುವ ಮೂಲಕ ದೇಶಿ ಕ್ರೀಡಗೆ ಹೆಚ್ಚಿನ ಮಹತ್ವ ಬಂದಂತಾಗಿದೆ.

Donate Janashakthi Media

Leave a Reply

Your email address will not be published. Required fields are marked *