ನಾಗ್ಪುರ: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ 4 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಗುರುವಾರ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು 4 ವಿಕೆಟ್ ಗಳ ಅಂತರದಲ್ಲಿ ಮಣಿಸಿತು.
ಇಂಗ್ಲೆಂಡ್ ನೀಡಿದ್ದ 249 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ಶುಭ್ ಮನ್ ಗಿಲ್ (87 ರನ್), ಶ್ರೇಯಸ್ ಅಯ್ಯರ್ (59 ರನ್) ಮತ್ತು ಅಕ್ಸರ್ ಪಟೇಲ್ (52 ರನ್) ಅವರ ಅರ್ಧಶತಕಗಳ ನೆರವಿನಿಂದ ಇನ್ನೂ 11.2 ಓವರ್ ಇರುವಂತೆಯೇ ಗೆಲುವು ಸಾಧಿಸಿತು. ಆ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.
ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ರ ಬ್ಯಾಟಿಂಗ್ ವೈಫಲ್ಯ ಮತ್ತೆ ಮುಂದುವರೆದಿದೆ. ಇನ್ನಿಂಗ್ಸ್ ಆರಂಭದಲ್ಲಿ ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದ ರೋಹಿತ್ ಶರ್ಮಾ 7 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿ ಲಿವಿಂಗ್ ಸ್ಟೋನ್ ಬೌಲಿಂಗ್ ನಲ್ಲಿ ಔಟಾದರು. ಅಂತೆಯೇ ಕೆಎಲ್ ರಾಹುಲ್ ಕೂಡ ಈ ಪಂದ್ಯದಲ್ಲಿ ಮತ್ತೆ ನಿರಾಶೆ ಮೂಡಿಸಿದರು. ರಾಹುಲ್ ಕೂಡ 9 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿ ಅದಿಲ್ ರಷೀದ್ ಗೆ ವಿಕೆಟ್ ಒಪ್ಪಿಸಿದರು.ಉಳಿದಂತೆ ಇಂದಿನ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಯಶಸ್ವಿ ಜೈಸ್ವಾಲ್ 15 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ (ಅಜೇಯ 9) ಮತ್ತು ರವೀಂದ್ರ ಜಡೇಜಾ (ಅಜೇಯ 12 ರನ್) ಗೆಲುವಿನ ಔಪಚಾರಿಕತೆ ಮುಕ್ತಾಯ ಮಾಡಿದರು.
ಇಂಗ್ಲೆಂಡ್ ಪರ ಸಕೀಬ್ ಮಹಮೂದ್ ಮತ್ತು ಅದಿಲ್ ರಷೀದ್ ತಲಾ 2 ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್, ಜೇಕಬ್ ಬೆಥೆಲ್ ತಲಾ 1 ವಿಕೆಟ್ ಪಡೆದರು.