ನವದೆಹಲಿ: ಕೋವಿಡ್ ಲಸಿಕೆ ನೀಡಿಕೆಯಲ್ಲಿ ಪದೇ ಪದೇ ಪರಿಷ್ಕರಣೆಗೊಂಡು ಸದ್ಯ ಈಗಿನ ಸಂದರ್ಭದಲ್ಲಿ ಇಂದಿನಿಂದ ಆರಂಭವಾಇರುವ ಎಲ್ಲರಿಗೂ ಲಸಿಕೆ ನೀಡಿಯ ಹಿನ್ನೆಲೆಯಲ್ಲಿ ಇಂದಿನ ದಿನದ ಅಂತ್ಯದ ವೇಳೆಗೆ 82 ಲಕ್ಷಕ್ಕೂ ಹೆಚ್ಚು ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಜನವರಿ 16ರಿಂದ ಆರಂಭವಾದ ಲಸಿಕೆ ಅಭಿಯಾನವು ಇದುವರೆಗಿನ ಎಲ್ಲಾ ದಾಖಲೆಯನ್ನು ಮುರಿದು ಇಂದು ಅತ್ಯಂತ ಗರಿಷ್ಠ ಪ್ರಮಾಣ ಲಸಿಕೆ ವಿತರಣೆ ಮಾಡಲಾಗಿದೆ. ಇದುವರೆಗೆ ಒಟ್ಟು 28.7 ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
‘ಎಲ್ಲರಿಗೂ ಉಚಿತ ಲಸಿಕೆ ಅಭಿಯಾನವನ್ನು ಕೇಂದ್ರ ಸರ್ಕಾರವು ಇಂದಿನಿಂದ ಆರಂಭಿಸಿದೆ. ಬಡವರು, ಮಧ್ಯಮ ವರ್ಗ ಮತ್ತು ಯುವಕರು ಈ ಅಭಿಯಾನದ ಅತಿದೊಡ್ಡ ಫಲಾನುಭವಿಗಳಾಗಿರಲಿದ್ದಾರೆ. ನಾವೆಲ್ಲರೂ ಲಸಿಕೆ ಪಡೆಯುವುದಾಗಿ ಪ್ರತಿಜ್ಞೆ ಮಾಡಬೇಕು. ನಾವೆಲ್ಲ ಜತೆಯಾಗಿ ಕೋವಿಡ್ ಅನ್ನು ಸೋಲಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪರಿಷ್ಕೃತ ಲಸಿಕೆ ವಿತರಣೆ ಮಾರ್ಗಸೂಚಿ ಪ್ರಕಾರವಾಗಿ ಕೇಂದ್ರ ಸರ್ಕಾರವೇ ಲಸಿಕೆಯ ಡೋಸ್‌ಗಳನ್ನು ಉಚಿತವಾಗಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಣೆ ಮಾಡುತ್ತಿದೆ. ಜನಸಂಖ್ಯೆ, ಸೋಂಕಿನ ತೀವ್ರತೆ, ಲಸಿಕೆ ನೀಡಿಕೆಯ ಪ್ರಗತಿಯ ಆಧಾರದಲ್ಲಿ ಲಸಿಕೆಯನ್ನು ವಿತರಣೆ ಮಾಡಲಾಗುತ್ತದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಉಚಿತ ಲಸಿಕೆಗೆ ಅರ್ಹರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಲಸಿಕೆ ವ್ಯರ್ಥವಾದರೆ ಅದು ಹಂಚಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದೂ ಕೇಂದ್ರ ಹೇಳಿದೆ.
ಹೊಸ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿರುವ ಪ್ರಕಾರ, ದೇಶದ ಲಸಿಕೆ ತಯಾರಿಕಾ ಕಂಪನಿಗಳಿಂದ ಶೇಕಡಾ 75ರಷ್ಟು ಡೋಸ್ ಲಸಿಕೆಗಳನ್ನು ಕೇಂದ್ರ ಸರ್ಕಾರವೇ ಖರೀದಿ ಮಾಡಲಿದೆ ಅವುಗಳನ್ನು ದೇಶದ ಎಲ್ಲಾ ರಾಜ್ಯಗಳಿಗೆ ಇಂದಿನಿಂದ ಹಂಚಿಕೆ ಮಾಡಲಾಗುತ್ತಿದೆ. ಈ ಹಿಂದೆ ರಾಜ್ಯ ಸರ್ಕಾರಗಳಿಗೆ ನಿಗದಿ ಮಾಡಲಾಗಿದ್ದ ಶೇ 25ರಷ್ಟು ಡೋಸ್ ಲಸಿಕೆಗಳೂ ಇದರಲ್ಲಿ ಸೇರಿವೆ. ಉಳಿದ ಶೇ 25ರಷ್ಟು ಡೋಸ್ ಲಸಿಕೆಗಳು ಖಾಸಗಿ ಆಸ್ಪತ್ರೆಗಳಿಗೆ ಎಂದಿನಂತೆ ಲಭ್ಯವಾಗಲಿವೆ.
ಇಂದು ಹಮ್ಮಿಕೊಂಡಿರುವ ಲಸಿಕೆ ಅಭಿಯಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು ʻʻಕೊರೋನಾ ವಿರುದ್ಧ ಹೋರಾಡಲು ನಮ್ಮಲ್ಲಿರುವ ಪ್ರಮುಖ ಅಸ್ತ್ರ ಲಸಿಕೆ. ಲಸಿಕೆ ಪಡೆದವರಿಗೆ ಎಲ್ಲರಿಗೂ ಅಭಿನಂದನೆಗಳು. ಇದರ ಜೊತೆಗೆ ಲಸಿಕೆ ನೀಡಿದ, ಸಹಕರಿಸಿದ ಎಲ್ಲಾರಿಗೂ ಅಭಿನಂದನೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದಲ್ಲಿಯೂ ಇಂದು 10 ಲಕ್ಷಕ್ಕೂ ಹೆಚ್ಚಿನ ಲಸಿಕೆ ನೀಡಿಕೆ
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 75 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ. ಕರ್ನಾಟಕದಲ್ಲಿ ಇಂದು 10.34 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಇದರೊಂದಿಗೆ ಒಂದೇ ದಿನ ಗರಿಷ್ಠ ಲಸಿಕೆ ನೀಡಿದ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನ ಪಡೆದುಕೊಂಡಿದೆ.
ಮೊದಲ ಸ್ಥಾನದಲ್ಲಿರುವ ಮಧ್ಯ ಪ್ರದೇಶ 14 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಕರ್ನಾಟಕದಲ್ಲಿ ಒಟ್ಟು 1.96 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. ಕರ್ನಾಟಕದ ಜನಸಂಖ್ಯೆಯ 3ನೇ 1 ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ.
ಉಚಿತ ಲಸಿಕೆ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಬೆಂಗಳೂರಿನ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ‘ಲಸಿಕಾ ಮಹಾ ಅಭಿಯಾನ’ಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಉಪಸ್ಥಿತರಿದ್ದರು.