ನವದೆಹಲಿ: ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ಮತ್ತೊಮ್ಮೆ ಕಡಿಮೆ ಮಟ್ಟಕ್ಕೆ ಇಳಿದು ಹಿನ್ನಡೆ ಅನುಭವಿಸಿದೆ. 2022ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕದಲ್ಲಿ(ಜಿಎಚ್‌ಐ), 121 ದೇಶಗಳ ಪಟ್ಟಿಯಲ್ಲಿ ಭಾರತ 107ನೇ ಸ್ಥಾನಕ್ಕೆ ಕುಸಿತಕಂಡಿದೆ.
ಐರಿಶ್ ಸಂಸ್ಥೆ ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ಜರ್ಮನ್ ಸಂಸ್ಥೆ ವೆಲ್ಟ್ ಹಂಗರ್ ಹಿಲ್ಫ್ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಭಾರತದ ಹಸಿವಿನ ಪರಿಸ್ಥಿತಿ ‘ಗಂಭೀರ’ವಾಗಿದೆ ಎಂದು ಹೇಳಿದೆ. ಕಳೆದ ವರ್ಷ 101ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ 107ನೇ ಸ್ಥಾನಕ್ಕೆ ಕುಸಿದಿದೆ.
ಜಾಗತಿಕ ಹಸಿವು ಸೂಚ್ಯಾಂಕವನ್ನು ನಾಲ್ಕು ಸೂಚಕಗಳ ಮೇಲೆ ಅಳೆಯಲಾಗುತ್ತದೆ. 2021ರ ಜಾಗತಿಕ ಹಸಿವು ಸೂಚ್ಯಂಕ ಪಟ್ಟಿಯಲ್ಲಿ 116 ದೇಶಗಳ ಪೈಕಿ ಭಾರತ 101ನೇ ಸ್ಥಾನದಲ್ಲಿತ್ತು. ಈ ಬಾರಿ 121 ದೇಶಗಳು ಈ ಪಟ್ಟಿಯಲ್ಲಿದ್ದು, ಭಾರತ 107ನೇ ಸ್ಥಾನಕ್ಕೆ ಕುಸಿದಿದೆ. ಭಾರತದ ಜಿಎಚ್‌ಐ ಅಂಕವು 2000ನೇ ಇಸವಿಯಲ್ಲಿ 38.8ರಷ್ಟಿತ್ತು. ಅದು 2014- 2022ರ ನಡುವೆ 28.2- 29.1ಕ್ಕೆ ಇಳಿಕೆಯಾಗಿದೆ. ನೆರೆಯ ದೇಶಗಳಾದ ನೇಪಾಳ(81), ಪಾಕಿಸ್ತಾನ (99), ಶ್ರೀಲಂಕಾ (64) ಮತ್ತು ಬಾಂಗ್ಲಾದೇಶ (84) ಸ್ಥಾನದಲ್ಲಿದೆ.
ಚೀನಾ, ಟರ್ಕಿ ಹಾಗೂ ಕುವೈತ್ ಸೇರಿದಂತೆ ಹದಿನೇಳು ದೇಶಗಳು ಜಾಗತಿಕ ಹಸಿವು ಸೂಚ್ಯಂಕದ ಪಟ್ಟಿಯಲ್ಲಿ ಐದಕ್ಕಿಂತ ಕಡಿಮೆಯೊಂದಿಗೆ ಅಗ್ರ ಶ್ರೇಯಾಂಕವನ್ನು ಹಂಚಿಕೊಂಡಿವೆ ಎಂದು ಹಸಿವು ಮತ್ತು ಅಪೌಷ್ಟಿಕತೆಯನ್ನು ಪತ್ತೆಹಚ್ಚುವ ಜಾಗತಿಕ ಹಸಿವು ಸೂಚ್ಯಂಕಕ್ಕೆ ಸಂಬಂಧಿಸಿದ ಅಂತರ್ಜಾಲದಲ್ಲಿ ವರದಿಯಾಗಿದೆ.
ಭಾರತವು ನಾಲ್ಕು ಸೂಚಕಗಳಿಗೆ ಸ್ಥಿರವಾಗಿ ಕಡಿಮೆ ಮೌಲ್ಯಗಳನ್ನು ದಾಖಲಿಸುತ್ತಿದೆ. 2014 ರಿಂದ ಅಪೌಷ್ಟಿಕತೆ ಮತ್ತು ಮಕ್ಕಳಲ್ಲಿ ಕ್ಷೀಣಿಸುವಿಕೆಯಲ್ಲಿ ಏರುಗತಿ ಪ್ರಾರಂಭಿಸಿತು. ಜನಸಂಖ್ಯೆಯಲ್ಲಿನ ಅಪೌಷ್ಟಿಕತೆಯ ಪ್ರಮಾಣ 2014 ರಲ್ಲಿ ಶೇ. 14.8 ರಿಂದ 2022 ರಲ್ಲಿ ಶೇ. 16.3 ಕ್ಕೆ ಏರಿಕೆಯಾಗಿತು ಮತ್ತು ಐದು ವರ್ಷದೊಳಗಿನ ಮಕ್ಕಳಲ್ಲಿ ಕ್ಷೀಣಿಸುವಿಕೆಯ ಪ್ರಮಾಣವು 2014 ರಲ್ಲಿ ಶೇ.15.1 ರಿಂದ 2022 ರಲ್ಲಿ ಶೇ.19.3 ಕ್ಕೆ ಏರಿತು.
ಜಾಗತಿಕ ಹಸಿವು ಸೂಚ್ಯಂಕದ ಮಾನದಂಡವನ್ನು ಅಳಿಯಲು ಮೊದಲನೆಯದಾಗಿ ಅಪೌಷ್ಟಿಕತೆ, ಇದು ಮಗುವಿನ ಕ್ಷೀಣತೆ (ತಮ್ಮ ಎತ್ತರಕ್ಕೆ ಕಡಿಮೆ ತೂಕ ಹೊಂದಿರುವ ಐದು ವರ್ಷದೊಳಗಿನ ಮಕ್ಕಳ ಪಾಲು, ತೀವ್ರ ಅಪೌಷ್ಟಿಕತೆಯನ್ನು ಪ್ರತಿಬಿಂಬಿಸುತ್ತದೆ) ಎರಡನೇಯದಾಗಿ ಮಕ್ಕಳ ಬೆಳವಣಿಗೆ ಕುಂಠಿತ (5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಮ್ಮ ವಯಸ್ಸಿಗೆ ಅಗತ್ಯಕ್ಕಿಂತ ಕಡಿಮೆ ಎತ್ತರವನ್ನು ಹೊಂದಿರುವ, ದೀರ್ಘಕಾಲದ ಅಪೌಷ್ಟಿಕತೆಯನ್ನು ಪ್ರತಿಬಿಂಬಿಸುತ್ತದೆ). ಮೂರನೇ ಅಂಶ ಮಕ್ಕಳ ಮರಣ (ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ) ಪರಿಗಣಿಸಲಾಗುತ್ತದೆ. ಈ ವಿಧಾನದ ಪ್ರಕಾರ, 9.9 ಕ್ಕಿಂತ ಕಡಿಮೆ ಅಂಕವನ್ನು ‘ಕಡಿಮೆ’ ಎಂದು ಪರಿಗಣಿಸಲಾಗುತ್ತದೆ, 10-19.9 ‘ಮಧ್ಯಮ’, 20-34.9 ‘ಗಂಭೀರ’, 35-49.9 ‘ಆತಂಕಕಾರಿ’ ಮತ್ತು 50 ಕ್ಕಿಂತ ಹೆಚ್ಚು ‘ಅತ್ಯಂತ ಆತಂಕಕಾರಿ’ ಎಂದು ಪರಿಗಣಿಸಲಾಗುತ್ತದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಕೇಂದ್ರ ಹಣಕಾಸು ಸಚಿವ ಹಾಗೂ ಕಾಂಗ್ರೆಸ್ ಸಂಸದ ಪಿ. ಚಿದಂಬರಂ, ನರೇಂದ್ರ ಮೋದಿ ನೇತೃತ್ವದ 8 ವರ್ಷಗಳ ಆಡಳಿತದಲ್ಲಿ 2014 ರಿಂದ ನಮ್ಮ ಅಂಕಗಳು ಹದಗೆಟ್ಟಿದೆ ಎಂದಿದ್ದಾರೆ. “ಗೌರವಾನ್ವಿತ ಪ್ರಧಾನಮಂತ್ರಿಗಳು ಅಪೌಷ್ಟಿಕತೆ, ಹಸಿವು, ಮತ್ತು ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗುವುದು ಮತ್ತು ವ್ಯರ್ಥವಾಗುವಂತಹ ನೈಜ ಸಮಸ್ಯೆಗಳನ್ನು ಯಾವಾಗ ಪರಿಹರಿಸುತ್ತಾರೆ?” ಎಂದು ಚಿದಂಬರಂ ಟ್ವಿಟ್ ಮಾಡಿದ್ದಾರೆ.
ಕಳೆದ ವರ್ಷ ಬಿಡುಗಡೆಗೊಳಿಸಿದ ವರದಿಯನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರವು ವರದಿಯ ವಿರುದ್ಧ ಹರಿಹಾಯ್ದಿತ್ತು. ಈ ವರದಿ ‘ಆಘಾತಕಾರಿ’ ಮತ್ತು ‘ತಳಮಟ್ಟದ ವಾಸ್ತವವನ್ನು ಕಡೆಗಣಿಸಿದೆ’ ಎಂದು ಹೇಳಿತು. ಜಾಗತಿಕ ಹಸಿವು ಸೂಚ್ಯಂಕದ ಮಾಪನಕ್ಕೆ ಬಳಸಿದ ವಿಧಾನವು ಅವೈಜ್ಞಾನಿಕ ಎಂದು ಭಾರತ ಹೇಳಿತ್ತು.