ಏಷ್ಯಾ ಕಪ್ ಮಹಿಳಾ ಕ್ರಿಕೆಟ್‌: ಲಂಕಾ ವಿರುದ್ಧ ಸೆಣೆಸಿದ ಭಾರತಕ್ಕೆ ಭರ್ಜರಿ ಜಯ; 7ನೇ ಬಾರಿ ಚಾಂಪಿಯನ್ ಪಟ್ಟ!

ಢಾಕಾ: ಇಲ್ಲಿನ ಸಿಲ್ಹೆಟ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನದಲ್ಲಿ ನಡೆದ ಏಶ್ಯಾಕಪ್‌ ಕ್ರಿಕೆಟ್‌ ಪಂದ್ಯದ ಫೈನಲ್‌ ಸೆಣೆಸಾಟದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ ಮಹಿಳಾ ತಂಡ ಸರಣಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಮೂಲಕ ಟೀಂ ಇಂಡಿಯಾ ಒಟ್ಟು ನಡೆದ 8 ಆವೃತ್ತಿ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ 7 ಬಾರಿ ಜಯಗಳಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ 20 ಓವರ್‌ ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ ಕೇವಲ 65 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಲಂಕಾ ಪರ ಓಷದಿ ರಣಸಿಂಗ್(13) ಇನೋಕಾ ರಣವೀರ ಅಜೇಯ 18 ರನ್ ಬಿಟ್ಟರೆ ಮತ್ಯಾವ ಆಟಗಾರ್ತಿಯೂ ಎರಡಂಕಿ ದಾಟಲಿಲ್ಲ. ಲಂಕಾ ಪರ ಇನೋಕಾ ರಣವೀರ 18 ರನ್ (22 ಎಸೆತ, 2 ಬೌಂಡರಿ) ಸಿಡಿಸಿದ್ದು ಹೆಚ್ಚಿನ ಗಳಿಕೆಯಾಗಿದೆ.

ಟೀಂ ಇಂಡಿಯಾ ಪರ ಬೌಲಿಂಗ್ ಮಾಡಿದ ರೇಣುಕಾ ಸಿಂಗ್ 3, ರಾಜೇಶ್ವರಿ ಗಾಯಕ್ವಾಡ್ ಮತ್ತು ಸ್ನೇಹ್ ರಾಣಾ ತಲಾ 2 ವಿಕೆಟ್ ಪಡೆದು ಲಂಕಾ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.

ಬಳಿಕ 66 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 8.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 71 ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿತು. ಲಂಕಾ ನೀಡಿದ ಅಲ್ಪಮೊತ್ತವನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಸ್ಮೃತಿ ಮಂಧಾನ ಬ್ಯಾಟಿಂಗ್‍ನಲ್ಲಿ ನೆರವಾದರು. ಸ್ಮೃತಿ ಮಂದಾನ 51 ರನ್ ಹಾಗೂ ಹರ್ಮನ್‌ ಪ್ರೀತ್‌ ಕೌರ್‌ 11 ರನ್ ಆಟದ ನೆರವಿನಿಂದ ಗುರಿ ಮುಟ್ಟಿದ ತಂಡವು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.‌

ಆರಂಭಿಕರಾಗಿ ಮಂಧಾನ ಜೊತೆ ಕಣಕ್ಕಿಳಿದ ಶಿಫಾಲಿ ವರ್ಮಾ 5 ರನ್‍ ಗಳಿಸಿ ಔಟಾದರು. ಆದರೆ ಇತ್ತ ಮಂಧಾನ ಬಿರುಸಿನ ಬ್ಯಾಟಿಂಗ್ ಮೂಲಕ ಲಂಕಾದ ಅಲ್ಪಮೊತ್ತವನ್ನು ಪುಟಿಗಟ್ಟಿದರು. ಅಂತಿಮವಾಗಿ ಮಂಧಾನ ಅಜೇಯ 51 ರನ್ ಗಳಿಸಿ ಗೆಲುವಿನ ರೂವಾರಿಯಾದರು.

ಇಲ್ಲಿಯವರೆಗೂ ಏಷ್ಯಾಕಪ್ 8 ಆವೃತ್ತಿಗಳು ನಡೆದಿದ್ದು ಇದರಲ್ಲಿ ಭಾರತ ಬರೋಬ್ಬರಿ 7 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನುಳಿದಂತೆ 2018ರ ಟೂರ್ನಿಯಲ್ಲಿ ಬಾಂಗ್ಲಾದೇಶ ಚಾಂಪಿಯನ್ ಆಗಿದ್ದು ಭಾರತ ತಂಡ ರನ್ನರ್‌ ಅಪ್ ಆಗಿತ್ತು.

Donate Janashakthi Media

Leave a Reply

Your email address will not be published. Required fields are marked *