ನವದೆಹಲಿ: ಭಾರತದ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ರಮ ಮುಂದುವರೆದಿದ್ದು, ಲಸಿಕೆ ನೀಡುವಿಕೆಯಲ್ಲಿ ಅಮೆರಿಕಾಗಿಂತ ಭಾರತದಲ್ಲಿ ಹೆಚ್ಚಾಗಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು ‘ಕೋವಿಡ್ ಲಸಿಕೆಯನ್ನು ಜನರಿಗೆ ನೀಡುವುದರಲ್ಲಿ ಭಾರತ ಮಹತ್ತರವಾದ ಮೈಲಿಗಲ್ಲು ಸಾಧಿಸಿದೆ. ಒಟ್ಟು ಲಸಿಕೆ ನೀಡಿರುವುದನ್ನು ಪರಿಗಣಿಸಿದ್ದಲ್ಲಿ ಅಮೆರಿಕಕ್ಕಿಂತ ಹೆಚ್ಚಾಗಿ ವಿತರಣೆ ಮಾಡಲಾಗಿದೆ’ ಎಂದು ಆರೋಗ್ಯ ಸಚಿವಾಲಯ ಟ್ವೀಟ್ ಮಾಡಿದೆ.
ಇದನ್ನು ಓದಿ: ವ್ಯಾಕ್ಸಿನ್ ಎಂಬ ಉಸಿರು ನಿರಾಕರಿಸುತ್ತಿರುವ ಸರ್ಕಾರ!!
ಹೆಚ್ಚು ಲಸಿಕೆ ನೀಡಿದ ದೇಶಗಳ ಪಟ್ಟಿಯನ್ನೂ ಪ್ರಕಟಿಸಿದೆ. ಇದರ ಪ್ರಕಾರ ಅಮೆರಿದಲ್ಲಿ ಈವರೆಗೆ 32,33,27,328 ಡೋಸ್ ಲಸಿಕೆ ನೀಡಲಾಗಿದ್ದರೆ ಭಾರತದಲ್ಲಿ 32,36,63,297 ಡೋಸ್ ಲಸಿಕೆ ನೀಡಲಾಗಿದೆ.
ಅಮೆರಿಕ ಭಾರತಕ್ಕಿಂತ ಮೊದಲೇ ಲಸಿಕೆ ಅಭಿಯಾನ ಆರಂಭಿಸಿತ್ತು. ಭಾರತದಲ್ಲಿ ಲಸಿಕೆ ಅಭಿಯಾನವನ್ನು ಈ ವರ್ಷದ ಜನವರಿ 16 ರಿಂದ ಪ್ರಾರಂಭ ಮಾಡಲಾಗಿತ್ತು. ಆದರೆ, ಅಮೇರಿಕಾ ಇದಕ್ಕೂ ಮೊದಲು 2020ರ ಡಿಸೆಂಬರ್ 14 ರಿಂದಲೇ ಲಸಿಕೆ ನೀಡಲು ಪ್ರಾರಂಭಿಸಿತ್ತು.
ನೆನ್ನೆ (ಜೂನ್ 27) ದೇಶದಲ್ಲಿ 17.21 ಲಕ್ಷಕ್ಕೂ ಹೆಚ್ಚು ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ತಾತ್ಕಾಲಿಕ ಮಾಹಿತಿ ಲಭ್ಯವಾಗಿದೆ.
ಕೋವಿಡ್ ತಡೆಯಲು ಅತ್ಯಂತ ಪ್ರಮುಖವಾಗಿ ಲಸಿಕೆಯೂ ಪ್ರಮುಖವಾಗಿದ್ದು, ಜನರಿಗೆ ಲಸಿಕೆ ನೀಡಿಕೆಯನ್ನು ಮತ್ತಷ್ಟು ವೇಗಗೊಳ್ಳಲಿ ಎಂಬುದಾಗಿದೆ.
ಆದರೂ ಸಹ ಭಾರತ ದೇಶದ ಜನಸಂಖ್ಯೆಯನ್ನು ಗಮನಿಸಿದ್ದಲ್ಲಿ, ಒಟ್ಟಾರೆಯಾಗಿ ಶೇಕಡಾ 5ರಷ್ಟು ಮಾತ್ರ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಸಾಕಷ್ಟು ಸಂಪನ್ಮೂಲಗಳು ಇದ್ದರೂ ಸಹ ಸರಕಾರ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಲ್ಲಿ ಈಗಾಗಲೇ ಇನ್ನೂ ಹೆಚ್ಚಿನ ಜನರಿಗೆ ಲಸಿಕೆ ನೀಡಬಹುದಾಗಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.