ನವದೆಹಲಿ: ರಷ್ಯಾ ದೇಶದ ಬಳಿಕ ಭಾರತವು ಕ್ಯೂಬಾ ದೇಶದೊಂದಿಗೆ ರೂಪಾಯಿ ಅಥವಾ ಯುರೋದಲ್ಲಿ ವ್ಯವಹಾರವನ್ನು ನಡೆಸಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಈ ವಿಚಾರವಾಗಿ ಕ್ಯೂಬಾದ ಕೇಂದ್ರೀಯ ಬ್ಯಾಂಕ್ ಅಧಿಕಾರಿಗಳು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಜೊತೆಗೆ ಸಭೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ನೊಂದಿಗೂ ಮಾತುಕತೆ ನಡೆಸಿದ್ದಾರೆ.
ಕಳೆದ ವಾರ ಕ್ಯೂಬಾದ ಬ್ಯಾಂಕ್ ಅಧಿಕಾರಿಗಳು ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದರು. ಈ ಅವಧಿಯಲ್ಲಿ ಮುಂಬೈಯಲ್ಲಿನ ದೇಶದ ಬ್ಯಾಂಕುಗಳ ಜೊತೆ ಸಭೆ ನಡೆಸಿದ್ದಾರೆ. ಎರಡು ದೇಶಗಳ ಮಧ್ಯೆ ರುಪಿ ಪಾವತಿ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.
ಕ್ಯೂಬಾ ಮತ್ತು ಭಾರತದ ಮಧ್ಯೆ ಉತ್ತಮ ವ್ಯಾಪಾರ ಸಂಬಂಧವಿದೆ. 2022ರ ಹಣಕಾಸು ವರ್ಷದಲ್ಲಿ ಭಾರತ 26.56 ದಶಲಕ್ಷ ಡಾಲರ್ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿದರೆ ಕ್ಯೂಬಾದಿಂದ ಭಾರತ 1 ದಶಲಕ್ಷ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಿದೆ.
ಜೂನ್ ತಿಂಗಳ ಅಂತ್ಯದವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತ 4 ದಶಲಕ್ಷ ಡಾಲರ್ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದರೆ ಕ್ಯೂಬಾದಿಂದ 0.6 ದಶಲಕ್ಷ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಿದೆ. ಕ್ಯೂಬಾ ತನ್ನ ದೇಶದ ಕರೆನ್ಸಿ ಪೆಸೋಗೆ ಜಾಗತಿಕ ಮನ್ನಣೆ ಇಲ್ಲದಿರುವ ಕಾರಣ ಯುರೋದಲ್ಲಿ ವ್ಯವಹಾರ ನಡೆಸಲು ಒಪ್ಪಿಗೆ ಇದೆ ಎಂದು ತಿಳಿಸಿದೆ.
ರಷ್ಯಾದ ಮೇಲೆ ಪಾಶ್ಚಿಮಾತ್ಯ ದೇಶಗಳು ಆರ್ಥಿಕ ನಿರ್ಬಂಧ ಹೇರಿದ ಬಳಿಕ ಆರ್ಬಿಐ ಜುಲೈ 11 ರಿಂದ ರುಪಿ ಪಾವತಿಗೆ ಅನುಮತಿ ನೀಡಿದೆ.