ಟ್ರಂಪ್ ಸುಂಕ ದಾಳಿಯ ಎದುರು ಭಾರತ “ಎಂದಿನಂತೆ” ಮುಂದುವರೆಯಲು ಸಾಧ್ಯವಿಲ್ಲ

ಟ್ರಂಪ್ ಸುಂಕಗಳ ಹೊರತಾಗಿಯೂ “ವ್ಯವಹಾರವು ಯಥಾ ಪ್ರಕಾರ”ವಾಗಿ ಮುಂದುವರಿಯಬೇಕೆಂದು ಬಯಸುವ ನವ-ಉದಾರವಾದಿ ವಕ್ತಾರರು, ಭಾರತದಂತಹ ದೇಶಗಳು ಆಮದು ಸುಂಕಗಳ ಹೆಚ್ಚಳವನ್ನು ಕೈಬಿಟ್ಟು, ಅದರ ಬದಲಾಗಿ ತಮ್ಮ ಕರೆನ್ಸಿಗಳ ಅಪಮೌಲ್ಯೀಕರಣ ಮಾಡಬೇಕು ಎಂದು ಸೂಚಿಸುವ ಮೂಲಕ, ಮುಖ್ಯವಾಗಿ ಕಾರ್ಮಿಕರನ್ನು ಇನ್ನಷ್ಟು ಹಿಂಡಬೇಕು ಎಂದೇ ಸೂಚಿಸುತ್ತಿದ್ದಾರೆ. ಟ್ರಂಪ್ ಅವರ ಸುಂಕಗಳ ಹಿನ್ನೆಲೆಯಲ್ಲಿಯೂ ನವ ಉದಾರವಾದವು ಮುಂದುವರಿಯಬೇಕು, ಆದರೆ ಅದಕ್ಕೆ ಕಾರ್ಮಿಕರು ಬೆಲೆ ತೆರಬೇಕು ಎಂಬುದೇ ಅವರ ಆಶಯ. ಆದರೆ, ವಾಸ್ತವವಾಗಿ, ಈಗಲೂ, “ನವ ಉದಾರವಾದ”ಕ್ಕೆ ಅಂಟಿಕೊಂಡೇ ಇರುವುದು ಭಾರತದ ಜನತೆಗೆ, ಅವರ ಜೀವನಕ್ಕೆ ಮತ್ತು ಅವರು ಕಷ್ಟಪಟ್ಟು ಗಳಿಸಿದ ಸ್ವಾತಂತ್ರ‍್ಯಕ್ಕೆ ವಿಪತ್ತನ್ನು ತರುತ್ತದೆ. ಇನ್ನೊಂದೆಡೆಯಲ್ಲಿ, ಟ್ರಂಪ್‌ರ ಸುಂಕಗಳು ಇಡೀ ನವ ಉದಾರವಾದಿ ಆಳ್ವಿಕೆಯಿಂದ ಹೊರಬರಲು ಒಂದೊಳ್ಳೆ ಅವಕಾಶವನ್ನು ಒದಗಿಸುತ್ತವೆ; ಇಂತಹ ಸನ್ನಿವೇಶದಲ್ಲಿ, ದುಡಿಯುವ ಜನರು ತಮ್ಮ ಅದೃಷ್ಟವನ್ನು ತಾವೇ ನಿರ್ವಹಿಸಿಕೊಳ್ಳಲು ಒಂದು ಅಗತ್ಯ ಷರತ್ತೆಂದರೆ, ಅವರು ನವ ಉದಾರವಾದವನ್ನು ಮೀರಿ ಹೋಗಬೇಕು. ಟ್ರಂಪ್‌ರವರ ದಾಳಿ ಅದಕ್ಕೆ ಒಂದು ಅವಕಾಶವನ್ನು ಒದಗಿಸುತ್ತದೆ.

-ಪ್ರೊ.ಪ್ರಭಾತ್ ಪಟ್ನಾಯಕ್

-ಅನು: ಕೆ.ಎಂ.ನಾಗರಾಜ್

ಡೊನಾಲ್ಡ್ ಟ್ರಂಪ್ ತಮ್ಮ ಪ್ರಸ್ತಾವಿತ ಸುಂಕಗಳನ್ನು ತೊಂಬತ್ತು ದಿನಗಳವರೆಗೆ ಮುಂದೂಡಿದ್ದಾರೆ. ಆದರೆ, ಭಾರತದಂತಹ ದೇಶಗಳು ತೊಂಬತ್ತು ದಿನಗಳ ನಂತರವಾದರೂ ಟ್ರಂಪ್ ಅವರ ಸುಂಕಗಳಿಗೆ ಪ್ರತಿಕ್ರಿಯಿಸಲೇಬೇಕಾಗುತ್ತದೆ. ಈ ಸುಂಕಗಳನ್ನು ಕೇವಲ ಒಂದು ಒಂಟಿ ಪ್ರಸಂಗ ಎನ್ನುವಂತಿಲ್ಲ. ತಮಗೆ ಒಪ್ಪಿಗೆಯಾಗದ ರೀತಿಯಲ್ಲಿ ಮತ್ತು ಧೈರ್ಯವಾಗಿ ವರ್ತಿಸುವ ಯಾವುದೇ ದೇಶದ ಮೇಲೆ ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಸುತ್ತಾರೆ. ತಮ್ಮ ದೇಶದಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ಬಲಗೊಳಿಸುವ ಮತ್ತು ಅಮೆರಿಕದ ಚಾಲ್ತಿ ಖಾತೆಯ ಕೊರತೆಯನ್ನು ಕಡಿಮೆ ಮಾಡುವಂತಹ ಆರ್ಥಿಕ ಉದ್ದೇಶಗಳಿಗಾಗಿ ಸುಂಕಗಳನ್ನು ಬಳಸುತ್ತಿದ್ದಾರೆ ಮಾತ್ರವಲ್ಲ, ಅಮೆರಿಕದ ಪ್ರಾಬಲ್ಯವನ್ನು ಪ್ರದರ್ಶಿಸಲು ಸುಂಕಗಳನ್ನು ಅವರು ಒಂದು ಆಯುಧವನ್ನಾಗಿಸಿದ್ದಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ವಿಶ್ವ ಬಂಡವಾಳಶಾಹಿಯು ಈಗ ಹೊಸದೇ ಆದ ಒಂದು ಹಂತದಲ್ಲಿದೆ. ಅದರ ಬಗ್ಗೆ ಅರಿವೇ ಇಲ್ಲದವರಂತೆ ಭಾರತದಂತಹ ದೇಶಗಳು ನಟನೆ ಮಾಡುವುದು ಮತ್ತು “ಯಥಾಪ್ರಕಾರ ವ್ಯವಹಾರ”(business as usual) ಮುಂದುವರೆದರೆ ಸಾಕು ಎನ್ನುವುದು ಒಂದು ಅಸಂಬದ್ಧವೇ ಸರಿ. ಬಂಡವಾಳಶಾಹಿಯು ತನ್ನ ಉಚ್ಛ್ರಾಯ ಸ್ಥಿತಿಯಲ್ಲಿ ಹೊಂದಿದ್ದ ಈ “ಯಥಾಪ್ರಕಾರ ವ್ಯವಹಾರ” ಮನೋಭಾವವು ದೇಶದ ದುಡಿಯುವ ಜನರಿಗೆ ದೊಡ್ಡ ನೋವನ್ನೇ ತಂದಿತ್ತು. ಹಾಗಾಗಿ, ಬಂಡವಾಳಶಾಹಿಯ ಪರಿಸ್ಥಿತಿ ಬದಲಾದಾಗಲೂ ಅದೇ ಹಿಂದಿನ ಮನೋಭಾವವನ್ನು ಮುಂದುವರಿಸಿಕೊಂಡು ಹೋಗುವುದು ಇನ್ನೂ ಹೆಚ್ಚಿನ ನೋವನ್ನು ತರುತ್ತದೆ ಮತ್ತು ಅಮೇರಿಕದ ನಿರ್ದೇಶನಗಳಿಗೆ ತಲೆಬಾಗುವುದು ಇನ್ನೂ ಹೆಚ್ಚಿನ ಅಧೀನತೆಯನ್ನು ತರುತ್ತದೆ.

ಇದನ್ನೂ ಓದಿ: ಬಿಬಿಎಂಪಿಯ ಶಿಸ್ತು ಕ್ರಮಕ್ಕೆ ಜಲಮಂಡಳಿ ಮತ್ತು ಬೆಸ್ಕಾಂ ಸಾಥ್

“ಯಥಾಪ್ರಕಾರ ವ್ಯವಹಾರ” ಎಂದರೆ, ವಿಶ್ವ ಮಾರುಕಟ್ಟೆಯು ವೇಗವಾಗಿ ಬೆಳೆಯುತ್ತಿದೆ ಎಂಬುದನ್ನು ಒಪ್ಪಿಕೊಳ್ಳುವುದು ಮತ್ತು ಭಾರತದಂತಹ ದೇಶಗಳು ತಮ್ಮ ನಿಯಂತ್ರಣ ನೀತಿಗಳ (ಡಿರಿಜಿಸ್ಟ್- ಪ್ರಭುತ್ವದ ಮಧ್ಯಪ್ರವೇಶವಿರುವ) ಕಾರ್ಯತಂತ್ರವನ್ನು ತ್ಯಜಿಸಿ ತಮ್ಮ ದೇಶೀಯ ಮಾರುಕಟ್ಟೆಗಳನ್ನು ವಿಸ್ತರಿಸಲು ತಮ್ಮ ತಮ್ಮ ಅರ್ಥವ್ಯವಸ್ಥೆಗಳನ್ನು “ತೆರೆದಿಡುವ” ಮೂಲಕ ವಿಶ್ವ ಮಾರುಕಟ್ಟೆಯ ಲಾಭವನ್ನು ಪಡೆದುಕೊಂಡರೆ ತಾವು ವೇಗವಾಗಿ ಬೆಳೆಯುತ್ತೇವೆಎಂದು ನಂಬುವುದು.

ಇದುವೇ ನವ ಉದಾರವಾದದ ಹಿಂದಿರುವ ಔಪಚಾರಿಕ ವಾದ. ಇದಕ್ಕೆ ಅತ್ಯಂತ ಅನುಕೂಲವಾಗಿದ್ದ ಕಾಲದಲ್ಲೇ ಇದೊಂದು ಅಸಂಬದ್ಧ ವಾದವಾಗಿತ್ತು(ಅದನ್ನು ಇಲ್ಲಿ ಚರ್ಚಿಸುವ ಅಗತ್ಯವಿಲ್ಲ) ಮತ್ತು ಅಮೆರಿಕದ “ವಸತಿ ಗುಳ್ಳೆ”ಯ ಕುಸಿತದ ನಂತರ ಉಂಟಾದ ವಿಶ್ವ ಆರ್ಥಿಕ ನಿಧಾನಗತಿಯ ಮೂಲಕವಂತೂ ಈ ವಾದ ಅನೂರ್ಜಿತವೇ ಅಗಿ ಬಿಟ್ಟಿದೆ. ಟ್ರಂಪ್‌ರ ಜಗಳಗಂಟಿತನದಿಂದಾಗಿ ಈಗ ಅದು ಬಹಿರಂಗವಾಗಿಯೇ ಕಿತ್ತುಕೊಂಡು ಹೋಗಿದೆ. ಈ ವಿದ್ಯಮಾನವನ್ನು ಗುರುತಿಸದಿರುವುದು ಮತ್ತು ಅದೇ “ನವ ಉದಾರವಾದ” ಕ್ಕೆ ಅಂಟಿಕೊಂಡೇ ಇರುವುದು ಭಾರತದ ಜನತೆಗೆ, ಅವರ ಜೀವನಕ್ಕೆ ಮತ್ತು ಅವರು ಕಷ್ಟಪಟ್ಟು ಗಳಿಸಿದ ಸ್ವಾತಂತ್ರ‍್ಯಕ್ಕೆ ವಿಪತ್ತನ್ನು ತರುತ್ತದೆ.

ನವ-ಉದಾರವಾದದ ವಕ್ತಾರರುಮತ್ತು ರೂಪಾಯಿ ಅಪಮೌಲ್ಯನ

ಅಮೆರಿಕ ಮತ್ತು ಚೀನಾ ಒಂದು ಸುಂಕ ಯುದ್ಧದಲ್ಲಿ ತೊಡಗಿವೆ. ಹಾಗಾಗಿ, ಅವರ ನಡುವಿನ ಪರಸ್ಪರ ವ್ಯಾಪಾರ ನಿಂತುಹೋಗುತ್ತದೆ; ಭಾರತದಂತಹ ದೇಶಗಳು ಅಮೆರಿಕದ ಮಾರುಕಟ್ಟೆಯಲ್ಲಿ ಚೀನಾ ಹೊಂದಿದ್ದ ಸ್ಥಾನವನ್ನು ಆಕ್ರಮಿಸಲು ಇದೊಂದು ಸುವರ್ಣಾವಕಾಶ ಮತ್ತು ಸಕಾಲವಾಗಿರುವುದರಿಂದ ನವ ಉದಾರವಾದಿ ಕಾರ್ಯತಂತ್ರದಿಂದ ದೂರ ಸರಿಯುವ ಬದಲು, ಭಾರತವು ಈಗ ಅದರಿಂದ ಹೆಚ್ಚಿನ ಲಾಭ ಪಡೆಯಬೇಕು ಎಂದೇನೋ ಭಾವಿಸಬಹುದು. ವಾಸ್ತವವಾಗಿ, ಭಾರತದಲ್ಲಿ ನವ ಉದಾರವಾದದ ವಕ್ತಾರರೂ ಇದನ್ನೇ ಸೂಚಿಸುತ್ತಿದ್ದಾರೆ.

ಆದ್ದರಿಂದ, ಭಾರತವು ಟ್ರಂಪ್ ಅವರ ಕೃಪೆಗೆ ಪಾತ್ರವಾಗುವಂತೆ ನೋಡಿಕೊಂಡು ಅವರ ಜೊತೆ ಒಂದು ಒಪ್ಪಂದವನ್ನು ಮಾಡಿಕೊಂಡರೆ ನಾವು ಅಮೆರಿಕಕ್ಕೆ ಮಾಡುವ ರಫ್ತುಗಳು ಅಲ್ಪಾವಧಿಯಲ್ಲಿ ಹೆಚ್ಚಬಹುದು ಎಂಬುದನ್ನು ನಾವು ವಾದಕ್ಕಾಗಿ ಒಂದು ವೇಳೆ ಒಪ್ಪಿಕೊಂಡರೂ ಸಹ, ಅಮೆರಿಕದ ಮಾರುಕಟ್ಟೆಯಲ್ಲಿ ಚೀನಾದ ಜಾಗದಲ್ಲಿ ಅಮೆರಿಕಾದ ಇತರ ವ್ಯಾಪಾರ ಪಾಲುದಾರರನ್ನು ತರುವುದು ಮಾತ್ರವೇ ಟ್ರಂಪ್ ಅವರ ಉದ್ದೇಶವಲ್ಲ; ಅಮೆರಿಕದ ಚಾಲ್ತಿ ಖಾತೆಯ ಕೊರತೆಯನ್ನು ಕಡಿಮೆ ಮಾಡುವುದೂ ಸಹ ಅವರ ಉದ್ದೇಶವೇ. ಹಾಗಾಗಿ, ಚೀನಾಗೆ ನಷ್ಟವನ್ನುಂಟುಮಾಡಿ ಗಳಿಸುವ ಒಂದು ಅಲ್ಪಾವಧಿಯ ರಫ್ತು ಲಾಭವನ್ನು ಮುಂದೆಯೂ ಸ್ಥಿರವಾಗಿ ಉಳಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ.

ಮೇಲಾಗಿ, ಈ ಅಲ್ಪಾವಧಿಯ ಲಾಭವನ್ನು ಪಡೆಯುವುದಕ್ಕೆ ಕೂಡ, ಇತರ ದೇಶಗಳು ಅದನ್ನು ಬಾಚಿಕೊಳ್ಳದಂತೆ (ವಾಸ್ತವವಾಗಿ, ಅಮೆರಿಕದ ಮಾರುಕಟ್ಟೆಯಲ್ಲಿ ಚೀನಾ ಹೊಂದಿರುವ ಪಾಲನ್ನು ಬಾಚಿಕೊಳ್ಳಲು ದೇಶ ದೇಶಗಳು ತಮ್ಮ ತಮ್ಮ ಕರೆನ್ಸಿಗಳನ್ನು ಅಪಮೌಲ್ಯನಗೊಳಿಸುವ ಮೂಲಕ ಪರಸ್ಪರ ಸ್ಪರ್ಧಿಸುತ್ತವೆ) ನೋಡಿಕೊಳ್ಳಬೇಕಾಗುತ್ತದೆ; ಆಗ ರೂಪಾಯಿಯ ವಿನಿಮಯ ದರದಲ್ಲಿ ಸ್ವಲ್ಪ ಮಟ್ಟಿನ ಅಪಮೌಲ್ಯನ ಉಂಟಾಗುತ್ತದೆ, ಇದರಿಂದ ಅದಾಗಲೇ ಅಪಮೌಲ್ಯನಗೊಂಡಿರುವ ರೂಪಾಯಿಯು ಮತ್ತಷ್ಟು ಅಪಮೌಲ್ಯಗೊಳ್ಳುತ್ತದೆ. ಟ್ರಂಪ್‌ರ ಶೇ. 10ರ ಮೂಲ ಸುಂಕವಂತೂ ಮುಂದುವರಿಯುತ್ತದೆ, ಆಗ ಟ್ರಂಪ್‌ರ ಸುಂಕಗಳಿಗೆ ಪ್ರತೀಕಾರವಾಗಿ ಭಾರತವು ಅಮೆರಿಕದ ವಿರುದ್ಧ ಸುಂಕಗಳನ್ನು ಮತ್ತಷ್ಟು ಹೆಚ್ಚಿಸುವ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ರೂಪಾಯಿಯ ವಿನಿಮಯ ದರವು ಮತ್ತಷ್ಟು ಅಪಮೌಲ್ಯನಗೊಳ್ಳುತ್ತದೆ; ಗಮನಾರ್ಹ ಸಂಗತಿಯೆಂದರೆ, ನಮ್ಮ ನವ-ಉದಾರವಾದಿ ವಕ್ತಾರರೂ ಸಹ ಇದನ್ನೇ ಪ್ರತಿಪಾದಿಸುತ್ತಿದ್ದಾರೆ!

ಇದನ್ನೂ ನೋಡಿ: ಪಹಲ್‍ಗಾಂಮ್ ಹತ್ಯಾಕಾಂಡ| ಕುಟುಂಬದವರನ್ನು ಕಳೆದುಕೊಂಡವರ ಪ್ರಶ್ನೆಗಳಿಗೆ ಉತ್ತರಿಸುವಿರಾ? Janashakthi Media

ಇಲ್ಲ್ಲಿ, ವಿನಿಮಯ ದರದ ಅಪಮೌಲ್ಯನಕ್ಕೆ ಸಂಬಂಧಿಸಿದ ಒಂದು ಅಂಶವು ಸಾಮಾನ್ಯವಾಗಿ ಗಮನಕ್ಕೆ ಬರದೇ ಹೋಗುತ್ತದೆ. ಅದೆಂದರೆ, ವಿನಿಮಯ ದರದ ಅಪಮೌಲ್ಯನವು ನಿಜ ವೇತನವನ್ನು ಕುಗ್ಗಿಸುವ ಕೆಲಸ ಮಾಡುತ್ತದೆ ಎಂಬುದು. ಈ ಅಂಶವನ್ನು ಒಂದು ಉದಾಹರಣೆಯ ಮೂಲಕ ಸ್ಪಷ್ಟಪಡಿಸಬಹುದು: ಒಂದು ದೇಶವು 220 ರೂ. ಮೌಲ್ಯದ ಸರಕುಗಳನ್ನು ಉತ್ಪಾದಿಸುತ್ತಿದೆ ಎಂದು ಭಾವಿಸೋಣ. ಅದರಲ್ಲಿ 100 ರೂ. ಆಮದು ಮಾಡಿಕೊಂಡ ಕಚ್ಚಾ ವಸ್ತುಗಳಿರುತ್ತವೆ, ವೇತನ ವೆಚ್ಚ 100 ರೂ. ಇರುತ್ತದೆ ಮತ್ತು ಲಾಭದ ಪಾಲು 20 ರೂ. ಇರುತ್ತದೆ ಎಂದುಕೊಳ್ಳೋಣ.

ಈಗ ನಾಮಮಾತ್ರ ವಿನಿಮಯ ದರವು ಒಂದು ವೇಳೆ ಶೇ. 10ರಷ್ಟು ಅಪಮೌಲ್ಯನಕ್ಕೆ ಒಳಗಾಗಿದೆ ಎಂದುಕೊಳ್ಳೋಣ. ಆಗ ಆಮದು ಮಾಡಿಕೊಂಡ ಕಚ್ಚಾ ವಸ್ತುಗಳ (ತೈಲ ಆಮದುವೇ ಇರಬಹುದು) ಮೌಲ್ಯವು ಶೇ. 10ರಷ್ಟು ಏರಿಕೆಯನ್ನು ಕಂಡು 110ರೂ.ಗಳಿಗೆ ಏರುತ್ತದೆ. ನಿಜ ವೇತನದ ಪಾಲನ್ನು ಮತ್ತು ಲಾಭದ ಪಾಲನ್ನು ಒಂದು ವೇಳೆ ಬದಲಾಯಿಸದೇ ಇದ್ದರೆ, ಆಗ ಹಣ ವೇತನದ ವೆಚ್ಚವು 110 ರೂ.ಗಳಿಗೆ ಏರುತ್ತದೆ ಮತ್ತು ಲಾಭದ ಪಾಲು 22 ರೂ.ಗಳಿಗೆ ಏರುತ್ತದೆ ಮತ್ತು ಸರಕಿನ ಉತ್ಪಾದನೆಯ ಒಟ್ಟಾರೆ ಬೆಲೆಯು 242 ರೂ.ಗಳಿಗೆ ಏರುತ್ತದೆ.

ಅಂದರೆ, ಮೊದಲಿಗಿಂತ ಶೇ. 10ರಷ್ಟು ಹೆಚ್ಚಾಗುತ್ತದೆ. ಆದರೆ, ರೂಪಾಯಿ ಮೌಲ್ಯವು ಶೇ. 10ರಷ್ಟು ಕುಸಿದಿರುವುದರಿಂದ, ಸರಕಿನ ಡಾಲರ್ ಬೆಲೆ ಬದಲಾಗದೆ ಉಳಿದಿರುತ್ತದೆ. ಇದರರ್ಥ ಹೇಳಲು ಶೇ. 10ರಷ್ಟು ಅಪ-ಮೌಲ್ಯನ ಎಂದಿದ್ದರೂ, ನಿಜ ಪರಿಣಾಮಕಾರಿ ವಿನಿಮಯ ದರದ ಅಪಮೌಲ್ಯನ ಇರಲಿಲ್ಲ ಎಂದಾಗುತ್ತದೆ. ನಿಜ, ವೇತನದ ಪಾಲು ಕಡಿಮೆಯಾದರೆ ಅಥವಾ ಲಾಭದ ಪಾಲು ಕಡಿಮೆಯಾದರೆ ಮಾತ್ರವೇ ಇದು ನಿಜವಾದ ವಿನಿಮಯ ದರದ ಅಪಮೌಲ್ಯನಕ್ಕೆ ಕಾರಣವಾಗುತ್ತದೆ. ಆದರೆ, ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಬಂಡವಾಳಗಾರರು ಲಾಭದ ಪಾಲಿನಲ್ಲಿ ರಾಜಿ ಮಾಡಿಕೊಳ್ಳುವುದೇ ಇಲ್ಲ.

ಆದ್ದರಿಂದ ನಿಜವಾಗಿಉಂಟಾಗುವವಿನಿಮಯ ದರ ಅಪಮೌಲ್ಯವು ವೇತನವನ್ನು ಇಳಿಕೆ ಮಾಡಿಯೇ ಮಾಡುತ್ತದೆ. ಆದರೆ ಸುಂಕ ವಿಧಿಸುವುದರಿಂದ ಇಂತಹ ಪರಿಣಾಮ ಉಂಟಾಗುವುದಿಲ್ಲ. ಏಕೆಂದರೆ ಅವನ್ನು ನಿರ್ದಿಷ್ಟವಾಗಿ ವಿಧಿಸಲಾಗುತ್ತದೆ, ಅವನ್ನು ಆಮದು ಮಾಡಿಕೊಂಡ ಕಚ್ಚಾ ವಸ್ತುಗಳು ಅಥವಾ ಆಮದು ಮಾಡಿಕೊಂಡ ಕಾರ್ಮಿಕರ ದಿನ ನಿತ್ಯದ ಬಳಕೆಯ ವಸ್ತುಗಳ ಮೇಲೆ ವಿಧಿಸದಿದ್ದರೆ ಅವು ನಿಜ ವೇತನದ ಕುಸಿತಕ್ಕೆ ಕಾರಣವಾಗಬೇಕಿಲ್ಲ.

ಕಾರ್ಮಿಕರನ್ನು ಇನ್ನಷ್ಟು ಹಿಂಡಬೇಕೆಂಬ ಸೂಚನೆ

ಟ್ರಂಪ್ ಅವರ ಸುಂಕಗಳ ಹೊರತಾಗಿಯೂ “ವ್ಯವಹಾರವು ಯಥಾ ಪ್ರಕಾರ”ವಾಗಿ ಮುಂದುವರಿಯಬೇಕೆಂದು ಬಯಸುವ ನವ-ಉದಾರವಾದಿ ವಕ್ತಾರರು, ಭಾರತದಂತಹ ದೇಶಗಳು ಆಮದು ಸುಂಕಗಳ ಹೆಚ್ಚಳವನ್ನು ಕೈಬಿಟ್ಟು, ಅದರ ಬದಲಾಗಿ ಕರೆನ್ಸಿಯ ಅಪಮೌಲ್ಯೀಕರಣ ಮಾಡಬೇಕು ಎಂದು ಸೂಚಿಸುವ ಮೂಲಕ, ಅವರು ಮುಖ್ಯವಾಗಿ ಕಾರ್ಮಿಕರನ್ನು ಇನ್ನಷ್ಟು ಹಿಂಡಬೇಕು ಎಂದೇ ಸೂಚಿಸುತ್ತಿದ್ದಾರೆ. ಟ್ರಂಪ್ ಅವರ ಸುಂಕಗಳ ಹಿನ್ನೆಲೆಯಲ್ಲಿಯೂ ನವ ಉದಾರವಾದವು ಮುಂದುವರಿಯಬೇಕು, ಆದರೆ ಅದಕ್ಕೆ ಕಾರ್ಮಿಕರು ಬೆಲೆ ತೆರಬೇಕು ಎಂಬುದೇ ಅವರ ಆಶಯ.

ಟ್ರಂಪ್ ಒಂದು ವೇಳೆ ಚೀನಾದ ರಫ್ತುಗಳ ಜಾಗದಲ್ಲಿ ಇತರ ದೇಶಗಳ ರಫ್ತುಗಳನ್ನು ಬಯಸದಿದ್ದರೆ, ಆಗ ಭಾರತದಂತಹ ದೇಶಗಳಲ್ಲಿ ನಿಜ ವೇತನ ಕುಸಿಯುತ್ತದೆ, ಆದರೆ ಅದರೊಂದಿಗೆ ಉದ್ಯೋಗ ಮತ್ತು ಇತರೆ ಯಾವುದೇ ಚಟುವಟಿಕೆಗಳಲ್ಲಿ ಹೆಚ್ಚಳ ಕಾಣಬರುವುದಿಲ್ಲ (ಇದು ಉದ್ಯೋಗದ ಇಳಿಕೆಗೂ ಕಾರಣವಾಗಬಹುದು, ಏಕೆಂದರೆ ಭಾರತದ ಕಾರ್ಮಿಕರಿಗೆ ನಷ್ಟವುಂಟುಮಾಡಿ ತಮ್ಮ ಸ್ಥಿತಿ-ಗತಿಗಳನ್ನು ಉತ್ತಮಪಡಿಸಿಕೊಳ್ಳುವ ಭಾರತದ ಆಮದು ಕಚ್ಚಾ ವಸ್ತುಗಳ ಮಾರಾಟಗಾರರಲ್ಲಿ ಭಾರತೀಯ ಸರಕುಗಳನ್ನು ಖರೀದಿಸುವ ಒಲವು ಭಾರತದ ಕಾರ್ಮಿಕರಿಗಿಂತ ಕಡಿಮೆಯೇ ಇರುತ್ತದೆ)

ಅಷ್ಟೇ ಅಲ್ಲದೆ, ಚೀನಾದಿಂದ ಮಾಡಿಕೊಳ್ಳುತ್ತಿದ್ದ ಆಮದುಗಳನ್ನು ಇತರ ದೇಶಗಳಿಂದ ಮಾಡಿಕೊಳ್ಳಲು ಅಮೆರಿಕ ಬಯಸದಿದ್ದರೆ, ಚೀನಾ ತೆರವು ಮಾಡಿರುವ ಯುಎಸ್ ಮಾರುಕಟ್ಟೆಯ ಒಂದು ಭಾಗವನ್ನು ಪಡೆಯಲು ಇತರ ದೇಶಗಳು ತಂತಮ್ಮ ಕರೆನ್ಸಿಗಳನ್ನು ಅಪಮೌಲ್ಯಗೊಳಿಸಿದರೆ, ಅದು ಆ ದೇಶಗಳ ಕಾರ್ಮಿಕರಿಗೆ ನಷ್ಟವುಂಟುಮಾಡುತ್ತದೆ, ಇಂತಹ ಅಪಮೌಲ್ಯೀಕರಣವು ಮುಂದುವರಿಯುತ್ತಲೇ ಹೋಗುತ್ತದೆ. ಈ ಅಪಮೌಲ್ಯೀಕರಣವನ್ನು ನಿರೀಕ್ಷಿಸುವ ಕರೆನ್ಸಿ ಜೂಜುಕೋರರು ದೇಶದಿಂದ ಹಣವನ್ನು ಹೊರತೆಗೆಯಲು ಆರಂಭಿಸಿದರೆ, ಅದು ಕರೆನ್ಸಿಯ ಮತ್ತಷ್ಟು ಕುಸಿತಕ್ಕೆ ಕೊಡುಗೆ ನೀಡುತ್ತದೆ ಮತ್ತು ಕಾರ್ಮಿಕರ ಜೀವನವನ್ನು ಇನ್ನಷ್ಟು ಕಷ್ಟಕರವಾಗಿಸುತ್ತದೆ. ಟ್ರಂಪ್ ಅವರ ಸುಂಕಗಳಿಗೆ ಪ್ರತಿಕ್ರಿಯೆಯಾಗಿ ಕರೆನ್ಸಿ ಅಪಮೌಲ್ಯವನ್ನು ಪ್ರತಿಪಾದಿಸುವ ನವ ಉದಾರವಾದಿ ವಕ್ತಾರರಿಗೆ ಈ ಅಪಮೌಲ್ಯನದ ನಂತರ ಕಾರ್ಮಿಕರ ಭವಿಷ್ಯ ಏನಾಗತ್ತದೆ ಎಂಬುದರ ಬಗ್ಗೆ ತಿಳಿದಿರುವುದಿಲ್ಲ ಅಥವಾ ಅದು ಅವರಿಗೆ ಬೇಕಾಗಿಯೂ ಇಲ್ಲ.

ಒಳ್ಳೆ ಅವಕಾಶ-ಜನ ಕಲ್ಯಾಣ ಕ್ರಮಗಳತ್ತ ಮರಳಲು

ನಿಜ ಹೇಳಬೇಕೆಂದರೆ, ಟ್ರಂಪ್‌ರ ಸುಂಕಗಳು ಇಡೀ ನವ ಉದಾರವಾದಿ ಆಳ್ವಿಕೆಯಿಂದ ಹೊರಬರಲು ಒಂದೊಳ್ಳೆ ಅವಕಾಶವನ್ನು ಒದಗಿಸುತ್ತವೆ; ಯುಎಸ್ ವಿರುದ್ಧ ಪ್ರತೀಕಾರದ ಸುಂಕಗಳನ್ನು ವಿಧಿಸಲು, ಆಮದುಗಳಲ್ಲಿ ವೆಚ್ಚ ಹೆಚ್ಚಳದ ಹಣದುಬ್ಬರವನ್ನು ತಡೆಗಟ್ಟುವ ಸಲುವಾಗಿ ವಿನಿಮಯ ದರವನ್ನು ಕಾಯ್ದುಕೊಳ್ಳಲು ಮತ್ತು ಪಾವತಿ ಶೇಷದ ತೊಂದರೆಗಳ ಸಂದರ್ಭದಲ್ಲಿ, ವ್ಯಾಪಾರದ ಮೇಲೆ ಮತ್ತು ಬಂಡವಾಳದ ಹರಿವಿನ ಮೇಲೆ ನಿಯಂತ್ರಣಗಳನ್ನು ಹೇರಲು ಅವಕಾಶವನ್ನು ಒದಗಿಸುತ್ತವೆ. ಇವೆಲ್ಲಕ್ಕೆ ಪೂರಕವಾಗಿ, ಆಂತರಿಕ ಆರ್ಥಿಕ ಚಟುವಟಿಕೆಗಳು ಮತ್ತು ಉದ್ಯೋಗ ಮಟ್ಟದಲ್ಲಿ ಹೆಚ್ಚಳವನ್ನು ತರಲು, ಸರ್ಕಾರದ ಖರ್ಚುಗಳನ್ನು ಮುಖ್ಯವಾಗಿ “ಜನ ಕಲ್ಯಾಣ” ಕ್ರಮಗಳಿಗಾಗಿ ಹೆಚ್ಚಿಸಬೇಕು. ಈ ಉದ್ದೇಶಕ್ಕಾಗಿ ಬೇಕಾಗುವ ಹಣವನ್ನು ಸಂಪತ್ತು ತೆರಿಗೆಯ ಮೂಲಕ ಒದಗಿಸಿಕೊಳ್ಳಬೇಕು (ವಿಪರ್ಯಾಸವೆಂದರೆ, ಇದು ಭಾರತದಲ್ಲಿ ಕಣ್ಮರೆಯಾಗಿದೆ). ಇದರರ್ಥ, ಆಂತರಿಕ ಮಾರುಕಟ್ಟೆ ಆಧಾರಿತ ಬೆಳವಣಿಗೆಯ ನಿಯಂತ್ರಣ ನೀತಿಗಳ ವ್ಯವಸ್ಥೆಗೆ ಮರಳಬೇಕಾಗುತ್ತದೆ.

ನಿಯಂತ್ರಣ ನೀತಿಗಳ ವ್ಯವಸ್ಥೆಗೆ ಮರಳುವ ಯಾವುದೇ ಮಾತು ನವ ಉದಾರವಾದಿ ವಕ್ತಾರರನ್ನು ಭಯಭೀತರನ್ನಾಗಿಸುತ್ತದೆ. ಮತ್ತು, ಅವರ ನಿಲುವುಗಳು, ಐಎಂಎಫ್, ವಿಶ್ವಬ್ಯಾಂಕ್ ಮತ್ತು ಇತರ ಅಂತಹ ಸಂಸ್ಥೆಗಳ ಬೆಂಬಲದಿಂದ ಮತ್ತು ಏಕಸ್ವಾಮ್ಯ-ನಿಯಂತ್ರಿತ ಮಾಧ್ಯಮಗಳ ಮೂಲಕ ಬೀರುವ ಪ್ರಭಾವವು ಎಷ್ಟರ ಮಟ್ಟಿಗೆ ಇದೆ ಎಂದರೆ, ಜನ ಸಾಮಾನ್ಯರೂ ಸಹ ನಿಯಂತ್ರಣ ನೀತಿಗಳ ವ್ಯವಸ್ಥೆಗೆ ಮರಳುವುದನ್ನು ಸ್ವಲ್ಪ ಸಂಶಯದಿಂದಲೇ ನೋಡುತ್ತಾರೆ. ಆದಾಗ್ಯೂ, ಈ ಸಂದರ್ಭದಲ್ಲಿ ಮೂರು ಅಂಶಗಳನ್ನು ಗಮನಿಸಬೇಕಾಗುತ್ತದೆ: ಮೊದಲನೆಯದು, ನಿಯಂತ್ರಣ ನೀತಿಗಳ ವ್ಯವಸ್ಥೆಯ ಅವಧಿಯಲ್ಲಿ ಬೆಳವಣಿಗೆಯ ವೇಗವು ಮೂಲಭೂತವಾಗಿ ಕೃಷಿಯ ಬೆಳವಣಿಗೆಯ ದರವನ್ನು ಅವಲಂಬಿಸಿರುತ್ತದೆ ಮತ್ತು ನವ ಉದಾರವಾದಿ ಅವಧಿಯಲ್ಲಿ ಅನುಭವಿಸಿದ ನಷ್ಟದಿಂದಾಗಿ ಉಸಿರುಗಟ್ಟಿದ ಕೃಷಿ ಬೆಳವಣಿಗೆಯು ಪುನಶ್ಚೇತನಗೊಳ್ಳುತ್ತದೆ ಮಾತ್ರವಲ್ಲದೆ, ಸೂಕ್ತ ಕ್ರಮಗಳನ್ನು ಅಳವಡಿಸಿಕೊಂಡರೆ, ಹಿಂದಿನ ನಿಯಂತ್ರಣ ನೀತಿಗಳ ವ್ಯವಸ್ಥೆಯ ಅವಧಿಯಲ್ಲಿ ಮಾಡಿದ್ದ ಸಾಧನೆಯನ್ನೂ ಮೀರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈಗ ನಿಯಂತ್ರಣ ನೀತಿಗಳ ವ್ಯವಸ್ಥೆ ಎಂದರೆ ಹಿಂದೆ ಇದ್ದ ಪರಿಸ್ಥಿತಿಗೆ ಮರಳುವುದಷ್ಟೇ ಅಲ್ಲ, ಅದಕ್ಕೂ ಹೆಚ್ಚಿನದನ್ನು ಒದಗಿಸಬಲ್ಲದು.

ಎರಡನೆಯದು, ಮೂಲಭೂತ ಆಹಾರ ಧಾನ್ಯಗಳ ಸೇವನೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಇಂದಿನ ನವ ಉದಾರವಾದೀ ಆಳ್ವಿಕೆಯಲ್ಲಿ ಕಂಡುಬರುವ ಪರಿಸ್ಥಿತಿಗೆ ಹೋಲಿಸಿದರೆ, ಅದರ ಹಿಂದಿನ ಅವಧಿಯಲ್ಲಿ ಏನಿತ್ತೋ ಅದು ನಿಜಕ್ಕೂ ಉತ್ತಮವಾಗಿತ್ತು. ಬಡತನವನ್ನು ವ್ಯಾಖ್ಯಾನಿಸುವ ಪೌಷ್ಠಿಕಾಂಶದ ಕೊರತೆಯ ಪರಿಭಾಷೆಯಲ್ಲಿ, ನವ ಉದಾರವಾದೀ ಅವಧಿಯಲ್ಲಿ ಕಡು ಬಡತನವು, ಅದರ ಹಿಂದಿನ ಅವಧಿಗೆ ಹೋಲಿಸಿದರೆ, ಏರಿಕೆಯಾಗಿರುವುದು ಕಂಡುಬರುತ್ತದೆ. ಇದು ವಿಶೇಷವಾಗಿ ಗ್ರಾಮೀಣ ಭಾರತದ ವಿಷಯದಲ್ಲಿ ಸತ್ಯ. ದೈನಿಕ ತಲಾ 2200 ಕ್ಯಾಲೊರಿಗಳನ್ನು ಪಡೆಯಲು ಸಾಧ್ಯವಾಗದ ಗ್ರಾಮೀಣ ಭಾರತದ ಒಟ್ಟು ಜನಸಂಖ್ಯೆಯ ಪ್ರಮಾಣವು 2017-18ರಲ್ಲಿ ಶೇ. 80ರ ಮಟ್ಟವನ್ನು ತಲುಪಿತ್ತು.

ಮೂರನೆಯದು, ಹಿಂದಿನ ನಿಯಂತ್ರಣ ನೀತಿಗಳ ವ್ಯವಸ್ಥೆಯ ಅವಧಿಯಲ್ಲಿಯೂ ಸಹ ವರಮಾನ ಮತ್ತು ಸಂಪತ್ತಿನ ಅಸಮಾನತೆಗಳಿದ್ದವು. ಆದರೆ, ಅವು ಇಂದಿನ ನವ ಉದಾರವಾದೀ ಅವಧಿಯಲ್ಲಿ ತಲುಪಿರುವ ಪ್ರಮಾಣಕ್ಕೆ ಹೋಲಿಸಿದರೆ, ಅತಿ ಕಡಿಮೆ ಪ್ರಮಾಣದಲ್ಲಿದ್ದವು. ‘ವರ್ಲ್ಡ್ ಇನಿಕ್ವಾಲಿಟಿ ಡೇಟಾಬೇಸ್’ ಎಂಬ ಸಂಸ್ಥೆಯು ಒದಗಿಸಿರುವಅಂಕಿಅಂಶಗಳು ಭಾರತದ ಜನಸಂಖ್ಯೆಯ ತುತ್ತ ತುದಿಯ ಶೇ. 1ರಷ್ಟು ಜನರು ದೇಶದ ಒಟ್ಟು ಆದಾಯದಲ್ಲಿ ಸ್ವಾತಂತ್ರ‍್ಯದ ಸಮಯದಲ್ಲಿ ಹೊಂದಿದ್ದ ಸುಮಾರು ಶೇ. 12ರ ಪಾಲನ್ನು 1982ರ ವೇಳೆಗೆ ಸುಮಾರು ಶೇ. 6ಕ್ಕೆ ಇಳಿಸಲಾಗಿತ್ತು ಎಂಬುದನ್ನು ತೋರಿಸುತ್ತವೆ. ಇದು ಈಗ ಶೇ. 23ಕ್ಕಿಂತಲೂ ಅಧಿಕವಾಗಿದೆ- ದಿಗ್ಭ್ರಮೆಗೊಳಿಸುವ ಪ್ರಮಾಣದಲ್ಲಿ ಅಸಮಾನತೆಗಳು ಬೆಳೆದಿವೆ ಎಂಬುದನ್ನು ಇದು ಸೂಚಿಸುತ್ತದೆ. ಈ ಪರಿಸ್ಥಿತಿಯಲ್ಲಿ, ದುಡಿಯುವ ಜನರು ತಮ್ಮ ಅದೃಷ್ಟವನ್ನು ತಾವೇ ನಿರ್ವಹಿಸಿಕೊಳ್ಳಲು ಒಂದು ಅಗತ್ಯ ಷರತ್ತೆಂದರೆ, ಅವರು ನವ ಉದಾರವಾದವನ್ನು ಮೀರಿ ಹೋಗಬೇಕು. ಟ್ರಂಪ್‌ರವರ ದಾಳಿ ಅದಕ್ಕೆ ಒಂದು ಅವಕಾಶವನ್ನು ಒದಗಿಸುತ್ತದೆ.

 

ಕೊನೆಗೂ,ಟ್ರಂಪ್‍ರತಿಪ್ಪರಲಾಗಗಳಿಗಿಂತನಮ್ಮಜಡತ್ವವೇಗೆಲ್ಲುವುದು,

ಎನ್ನುತ್ತಾರೆಮಂತ್ರಿವರ್ಯರು

ವ್ಯಂಗ್ಯಚಿತ್ರ:

ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್

Donate Janashakthi Media

Leave a Reply

Your email address will not be published. Required fields are marked *