2025ರೊಳಗೆ ಐದು ಲಕ್ಷ ಕೋಟಿ ಡಾಲರ್ ಆರ್ಥಿಕತೆ ತಲುಪಲು ಸಾಧ್ಯವಿಲ್ಲ: ರಂಗರಾಜನ್

ಹೈದರಾಬಾದ್‌: ಕೋವಿಡ್‌ ನಿಂದಾಗಿ ದೇಶದ ಸ್ಥಿತಿ ಗಂಭೀರವಾಗಿದ್ದು, ಆರ್ಥಿಕತೆ ಬೆಳವಣಿಗೆಯು ಅಷ್ಟುಂದು ಉತ್ತಮವಾಗಿಲ್ಲ. ಹೀಗಿರುವಾಗ ಭಾರತವು 2025ರೊಳಗೆ 5 ಲಕ್ಷ ಕೋಟಿ ಡಾಲರ್ (5 ಟ್ರಿಲಿಯನ್ ಡಾಲರ್‌) ಆರ್ಥಿಕತೆಯ ರಾಷ್ಟ್ರವಾಗಲು ಸಾಧ್ಯವೇ ಇಲ್ಲ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಮಾಜಿ ಗವರ್ನರ್ ಸಿ.ರಂಗರಾಜನ್‌ ಹೇಳಿದ್ದಾರೆ.

ಐಸಿಎಫ್‌ಎಐ ಉನ್ನತ ಶಿಕ್ಷಣ ಫೌಂಡೇಶನ್‌ನಲ್ಲಿ 11ನೇ ಘಟಿಕೋತ್ಸವದಲ್ಲಿ ಮಾತನಾಡಿದ ಸಿ.ರಂಗರಾಜನ್‌ ಕೋವಿಡ್‌ನ ಮೂರನೇ ಅಲೆಯಿಂದ ದುಷ್ಪರಿಣಾಮ ಎದುರಾಗದಂತೆ ನೋಡಿಕೊಳ್ಳಲು ಪ್ರಯತ್ನಗಳನ್ನು ನಡೆಸಲೇಬೇಕು, ವ್ಯಾಪಕವಾಗಿ ಲಸಿಕೆ ಹಾಕಿಸುವುದು ಮತ್ತು ಆರೋಗ್ಯ ಕ್ಷೇತ್ರ ಸಹಿತ ಒಟ್ಟಾರೆ ಮೂಲಸೌಲಭ್ಯಗಳಲ್ಲಿ ಹೂಡಿಕೆಯಾಗುವಂತೆ ನೋಡಿಕೊಳ್ಳುವುದು ಸಹ ಅತಿ ಮುಖ್ಯವಾಗಿದೆ ಎಂದರು.

ಇದನ್ನು ಓದಿ: ಆರ್ಥಿಕತೆಯ ಚೇತರಿಕೆಯೂ ಶ್ರಮಜೀವಿಗಳನ್ನು ಮತ್ತಷ್ಟು ದುರವಸ್ಥೆಗೆ ತಳ್ಳುತ್ತಿದೆ

ಅಷ್ಟು ದೊಡ್ಡ ಮೊತ್ತದ ಆರ್ಥಿಕತೆ ಸಾಧಿಸಬೇಕಾದರೆ ಮುಂದಿನ ಐದು ವರ್ಷಗಳ ಕಾಲ ಶೇಕಡಾ 9ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಬೇಕಾಗುತ್ತದೆ ಎಂದರು.

ಕ‌ೋವಿಡ್ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು. 2021ರಲ್ಲಿ ಭಾರತದ ಜಿಡಿಪಿ ಶೇಕಡಾ 7.3ರಷ್ಟು ಕುಸಿದರೆ, ಅಮೆರಿಕದ ಜಿಡಿಪಿ ಶೇ. 3.5ರಷ್ಟು, ಫ್ರಾನ್ಸ್ ಶೇ. 8.1ರಷ್ಟು, ಬ್ರಿಟನ್‌ನಲ್ಲಿ ಶೇ. 9.8ರಷ್ಟು ಕುಸಿದಿತ್ತು. ಲಾಕ್‌ಡೌನ್‌ ನಿರ್ಬಂಧ ಸಡಿಲಿಸಿದ ಬಳಿಕವಷ್ಟೇ ಆರ್ಥಿಕತೆ ಮತ್ತೆ ಚೇತರಿಕೆ ಹಾದಿ ಕಂಡಿದೆ. ಕೋವಿಡ್ ಮೊದಲ ಅಲೆಯ ಆರ್ಥಿಕ ದುಷ್ಪರಿಣಾಮ ತೀವ್ರವಾಗಿದ್ದರೆ, ಎರಡನೇ ಅಲೆಯ ಆರೋಗ್ಯ ಪರಿಣಾಮ ತೀವ್ರವಾಗಿತ್ತು. ಒಟ್ಟಾರೆ ಕೋವಿಡ್‌ನಿಂದ ದಿನಗೂಲಿ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರಿಗೆ ಬಹಳ ತೊಂದರೆ ಉಂಟಾಯಿತು ಎಂದು ಅವರು ವಿವರಿಸಿದರು.

‘ಕೆಲವು ವರ್ಷಗಳ ಹಿಂದೆ ಭಾರತವು 2025ರೊಳಗೆ 5 ಟ್ರಿಲಿಯನ್‌ ಡಾಲರ್ ಆರ್ಥಿಕತೆಯಾಗಬಹುದು ಎಂಬ ಆಶಯ ಇತ್ತು. ಆದರೆ ಈಗಿನ ಸ್ಥಿತಿಯಲ್ಲಿ ಅದು ಅಸಾಧ್ಯ. 2019ರಲ್ಲಿ ಭಾರತವು  2.7 ಟ್ರಿಲಯನ್‌ ಡಾಲರ್ ಆರ್ಥಿಕತೆಯಾಗಿತ್ತು. 2022ರ ಮಾರ್ಚ್‌ ಅಂತ್ಯದ ವೇಳೆಯಲ್ಲಿಯೂ ಅದು 2.7 ಟ್ರಿಲಿಯನ್ ಡಾಲರ್ ಮಟ್ಟದಲ್ಲೇ ಇರಲಿದೆ. ಈ ಹಂತದಿಂದ 5 ಟ್ರಿಲಿಯನ್ ಡಾಲರ್‌ಗೆ ಹೋಗಬೇಕಿದ್ದರೆ ಸತತ 5 ವರ್ಷಗಳ ಕಾಲ ಶೇ 9ರಷ್ಟು ಆರ್ಥಿಕ ಅಭಿವೃದ್ಧಿ ಸಾಧಿಸಬೇಕಾಗುತ್ತದೆ’ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಹಿಂದಿನ ಎರಡು ವರ್ಷಗಳಲ್ಲಿ ಉತ್ಪಾದನೆಯ ನಷ್ಟವನ್ನು ಸರಿದೂಗಿಸಲು ಭಾರತಕ್ಕೆ ನಿಜವಾಗಿಯೂ ವೇಗದ ಬೆಳವಣಿಗೆಯ ಅಗತ್ಯವಿದೆ ಮತ್ತು ಈ ವರ್ಷದಲ್ಲಿಯೇ ವೇಗವಾಗಿ ಬೆಳವಣಿಗೆಗೆ ಅಡಿಪಾಯ ಹಾಕಬೇಕು ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *