ಲೋಕಸಭೆಗೆ ಇಂಡಿಯಾ ಮೈತ್ರಿ | ದೆಹಲಿ ಮಾತುಕತೆ ಫಲಪ್ರದ; ಎಎಪಿಗೆ 4, ಕಾಂಗ್ರೆಸ್‌ಗೆ 3

ನವದೆಹಲಿ: ಲೋಕಸಭೆ ಚುನಾವಣೆಗಾಗಿ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆ ಅಂತಿಮ ಸುತ್ತಿನಲ್ಲಿ ಫಲಪ್ರದವಾಗಿದೆ. ಏಳು ಲೋಕಸಭಾ ಕ್ಷೇತ್ರಗಳಿರುವ ದೆಹಲಿಯಲ್ಲಿ ಎಎಪಿ 4 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 3 ಸ್ಥಾನಗಳನ್ನು ಪಡೆಯಲಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಮೈತ್ರಿ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ.

ಇತ್ತಿಚೆಗೆ, ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಎರಡು ಪಕ್ಷಗಳ ನಡುವಿನ ಲೋಕಸಭೆ ಸೀಟು ಹಂಚಿಕೆ ಒಪ್ಪಂದವು “ಅಂತಿಮ ಹಂತ” ತಲುಪಿದೆ ಎಂದು ಹೇಳಿದ್ದರು. ಇದರ ಹೊರತಾಗಿಯೂ, ಸೀಟು ಹಂಚಿಕೆ ಮಾತುಕತೆಯಲ್ಲಿನ ವಿಳಂಬದ ಬಗ್ಗೆ ಕೇಜ್ರಿವಾಲ್ ಅವರಿಗೆ ಅಸಮಾಧಾನವಿದೆ ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಬೆಂಗಳೂರು | ಫೆಬ್ರವರಿ 27, 28ರಂದು ನಗರದ ಕೆಲವೆಡೆ ನೀರು ಸ್ಥಗಿತ; ಪಟ್ಟಿ ಇಲ್ಲಿದೆ

ಇನ್ನೆರಡು ಮೂರು ದಿನಗಳಲ್ಲಿ ಏನಾಗುತ್ತೋ ನೋಡೋಣ, ಸಾಕಷ್ಟು ತಡವಾಗಿದೆ, ಮೊದಲೇ ಆಗಬೇಕಿತ್ತು ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದ್ದರು. ಆದಾಗ್ಯೂ, ದೆಹಲಿಯಲ್ಲಿ ಒಂದೇ ಒಂದು ಸ್ಥಾನ ಮತ್ತು ಪಂಜಾಬ್‌ನಲ್ಲಿ ಮೈತ್ರಿ ಇಲ್ಲ ಎಂದು ಹೇಳಿದ್ದ ಎಎಪಿಯು ಕಾಂಗ್ರೆಸ್‌ಗೆ ಹೊಡೆತ ನೀಡಿತ್ತು.

“ಅರ್ಹತೆಯ ಆಧಾರದ ಮೇಲೆ, ಕಾಂಗ್ರೆಸ್ ಪಕ್ಷವು ದೆಹಲಿಯಲ್ಲಿ ಒಂದೇ ಒಂದು ಸ್ಥಾನಕ್ಕೂ ಅರ್ಹವಾಗಿಲ್ಲ. ಆದರೆ ‘ಮೈತ್ರಿ ಧರ್ಮ’ವನ್ನು ಗಮನದಲ್ಲಿಟ್ಟುಕೊಂಡು, ನಾವು ಅವರಿಗೆ ದೆಹಲಿಯಲ್ಲಿ ಒಂದು ಸ್ಥಾನವನ್ನು ನೀಡುತ್ತೇವೆ. ನಮ್ಮ ಪ್ರಸ್ತಾಪ ಕಾಂಗ್ರೆಸ್‌ಗೆ ಒಂದು ಸ್ಥಾನ ಮತ್ತು ಎಎಪಿಗೆ ಆರು ಸ್ಥಾನಗಳು” ಎಂದು ಎಎಪಿ ಸಂಸದ ಸಂದೀಪ್ ಪಾಠಕ್ ಆ ಸಮಯದಲ್ಲಿ ಹೇಳಿದ್ದರು.

ಈ ಹಿಂದೆ ಪಂಜಾಬ್ ಮತ್ತು ಚಂಡೀಗಢದಲ್ಲಿ ಎಲ್ಲಾ 14 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ ನಂತರ ಎಎಪಿ ಮತ್ತು ಕಾಂಗ್ರೆಸ್ ನಡುವಿನ ಉದ್ವಿಗ್ನತೆ ಉತ್ತುಂಗಕ್ಕೇರಿತ್ತು. ಈ ನಡುವೆ ಅಸ್ಸಾಂನಲ್ಲಿ ಮೂರು, ಗೋವಾದಲ್ಲಿ ಒಂದು ಮತ್ತು ಗುಜರಾತ್‌ನಲ್ಲಿ ಎರಡು ಸ್ಥಾನಗಳಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ಪಕ್ಷವು ಏಕಪಕ್ಷೀಯವಾಗಿ ಘೋಷಿಸಿದೆ.

ಇದನ್ನೂ ಓದಿ: ಯುಪಿ | ಕಾಂಗ್ರೆಸ್ ಜೊತೆಗೆ ಎಲ್ಲವೂ ಚೆನ್ನಾಗಿದೆ ಎಂದ ಅಖಿಲೇಶ್ ಯಾದವ್; ಶೀಘ್ರದಲ್ಲೆ ಮೈತ್ರಿ ಘೋಷಣೆ ಸಾಧ್ಯೆತೆ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಪಂಜಾಬ್ ಸಿಎಂ ಭಗವಂತ್ ಮಾನ್ ತಳ್ಳಿಹಾಕಿದ್ದಾರೆ. “ದೇಶದಲ್ಲಿ ಪಂಜಾಬ್ ಹೀರೋ ಆಗಲಿದೆ ಮತ್ತು 2024 ರ ಲೋಕಸಭಾ ಚುನಾವಣೆಯಲ್ಲಿ ಎಎಪಿ 13-0 ಅಂತರದಲ್ಲಿ ಗೆಲ್ಲುತ್ತದೆ ಎಂದು ನಾನು ಹಲವಾರು ಸಂದರ್ಭಗಳಲ್ಲಿ ಹೇಳಿದ್ದೇನೆ” ಎಂದು ಮಾನ್ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಎಸ್‌ಪಿ ಒಪ್ಪಂದ

ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡ ಒಂದು ದಿನದ ನಂತರ ದೆಹಲಿಯ ಈ ಬೆಳವಣಿಗೆ ನಡೆದಿದೆ.

ಕಾಂಗ್ರೆಸ್ ಉತ್ತರ ಪ್ರದೇಶ ಉಸ್ತುವಾರಿ ಅವಿನಾಶ್ ಪಾಂಡೆ ಅವರು ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 17 ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ಬುಧವಾರ ಹೇಳಿದ್ದಾರೆ. ಉಳಿದ 63 ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ ಮತ್ತು ಇಂಡಿಯಾ ಒಕ್ಕೂಟದ ಇತರ ಮೈತ್ರಿ ಪಾಲುದಾರರು ಸ್ಪರ್ಧಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

“ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 17 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಲಾಗಿದೆ. ಉಳಿದ 63 ಸ್ಥಾನಗಳಲ್ಲಿ ಇಂಡಿಯಾ ಮೈತ್ರಿ ಕೂಟದ ಎಸ್‌ಪಿ ಮತ್ತು ಇತರ ಪಕ್ಷಗಳ ಅಭ್ಯರ್ಥಿಗಳು ಇರುತ್ತಾರೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಚಲೋ ಹೋರಾಟ | ಪೊಲೀಸರ ಮತ್ತು ರೈತರ ನಡುವೆ ಘರ್ಷಣೆ; 21 ವರ್ಷದ ರೈತ ಸಾವು

2019 ರ ದೆಹಲಿ ಲೋಕಸಭಾ ಫಲಿತಾಂಶ

ದೆಹಲಿ ಲೋಕಸಭೆಯಲ್ಲಿ ಒಟ್ಟು ಏಳು ಸ್ಥಾನಗಳನ್ನು ಹೊಂದಿದ್ದು, 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ 7 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ವೇಳೆ ಕಾಂಗ್ರೆಸ್ ಮತ್ತು ಎಎಪಿ ಒಂದೇ ಒಂದು ಸ್ಥಾನವನ್ನು ಗಳಿಸಲು ವಿಫಲವಾಗಿತ್ತು. ಗೆದ್ದ ಎಲ್ಲಾ ಏಳು ಸ್ಥಾನಗಳಲ್ಲಿ ಬಿಜೆಪಿ 50% ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿತ್ತು.

ವಿಡಿಯೊ ನೋಡಿ: ಪಿಚ್ಚರ್‌ ಪಯಣ -145ಚಿತ್ರ: ಯಜಮಾನನಿರ್ದೇಶನ : ಆರ್‌, ಶೇಷಾದ್ರಿ, ರಾಧಾ ಭಾರತಿ ಕಥೆ ಹೇಳುವವರು: ಭಾವನಾ ಮರಾಠೆ

Donate Janashakthi Media

Leave a Reply

Your email address will not be published. Required fields are marked *