ಚಿಕ್ಕಬಳ್ಳಾಪುರ: ವಿವಿಧ ಸಂಘಟನೆಗಳು ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೀಕರಣಕ್ಕಾಗಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿರುವುದನ್ನು ವಿರೋಧಿಸಿ ಮಾರ್ಚ್ 16ರಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಿವೆ. ಕೆಐಎಡಿಬಿ
ನಗರದಲ್ಲಿ ಮಾರ್ಚ್ 11ರಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ನಾವು ಜಮೀನು ನೀಡುವುದಿಲ್ಲ ಎಂದು 800ಕ್ಕೂ ಹೆಚ್ಚು ರೈತರು ಸರ್ಕಾರಕ್ಕೆ ಪತ್ರ ಬರೆದಿದ್ದರೂ ಬಲವಂತವಾಗಿ ಭೂ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಪರಿವರ್ತನಾ ಶುಲ್ಕ ಬ್ಯಾಂಕ್ ಮೂಲಕ ಪಾವತಿ ವಿರೋಧಿಸಿ ನೇಕಾರರ ಪ್ರತಿಭಟನೆ
ಜಂಗಮಕೋಟೆ ಹೋಬಳಿಯ ಒಟ್ಟು 13 ಹಳ್ಳಿಗಳ ಜಮೀನು ಸ್ವಾಧೀನಕ್ಕೆ 2024ರ ಜೂನ್‌ನಲ್ಲಿಅಧಿಸೂಚನೆ ಹೊರಡಿಸಲಾಗಿದೆ. ಕೈಗಾರಿಕೆಗೆ ನಮ್ಮ ವಿರೋಧವಿಲ್ಲ. ಆದರೆ ಕೃಷಿಯೇತರ ಭೂಮಿಯಲ್ಲಿ ಕೈಗಾರಿಕೆ ಮಾಡಬೇಕು. ಇದಕ್ಕೆ ರಾಜ್ಯ ಸರ್ಕಾರ ಬದ್ಧವಾಗಲಿ ಎಂದರು.
2025ರ ಡಿಸೆಂಬರ್‌ನಲ್ಲಿ ಮತ್ತೊಂದು ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರ ರೈತರನ್ನು ವಿಭಾಗಿಸಲು ಹೊರಟಿದೆ. 471 ಎಕರೆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿ ರೈತರನ್ನು ಒಡೆಯುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನು ಖಂಡಿಸಿ ರೈತರು ಬೀದಿಗೆ ಇಳಿಯಬೇಕಾಗಿದೆ. ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಹೋರಾಟಕ್ಕೆ ನಿರ್ಧರಿಸಲಾಗಿದೆ. ಶೇ 75ರಷ್ಟು ರೈತರ ಒಪ್ಪಿಗೆ ಇಲ್ಲವಾದರೆ ಭೂಮಿ ಸ್ವಾಧೀನ ಪಡೆಯಲು ಸಾಧ್ಯವಿಲ್ಲ ಎಂಬ ನಿಯಮವಿದೆ. ಆದರೆ ಸರ್ಕಾರ ಈ ನಿಯಮಗಳನ್ನು ಗಾಳಿಗೆ ತೂರಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವುದು ಖಂಡನೀಯ ಎಂದರು.
ದಲಿತ ಸಂಘರ್ಷ ಸಮಿತಿ ಮುಖಂಡ ಕೆ.ಸಿ.ರಾಜಾಕಾಂತ್ ಮಾತನಾಡಿ, ಡಿಎಸ್‌ಎಸ್ ರೈತರ ಹೋರಾಟಕ್ಕೆ ಬೆಂಬಲ ನೀಡಲಿದೆ. ಸರ್ಕಾರಗಳು ಬಲವಂತವಾಗಿ ರೈತರ ಭೂಮಿ ಸ್ವಾಧೀನಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.
ದಿಬ್ಬೂರಹಳ್ಳಿ ಭಾಗದಲ್ಲಿ ಕೃಷಿಯೇತರ ಭೂಮಿ ಇದೆ. ಆ ಭಾಗದಲ್ಲಿ ಕೈಗಾರಿಕೆಗಳನ್ನು ನಿರ್ಮಿಸಲಿ. ಆದರೆ ಸಮೃದ್ಧವಾದ ಬೆಳೆಗಳಿರುವ ಜಂಗಮಕೋಟೆಯಲ್ಲಿ ಕೈಗಾರಿಕೀಕರಣ ಬೇಡ ಎಂದರು.
ದಸಂಸ ರಾಜ್ಯ ಸಂಚಾಲಕ ಎನ್.ವೆಂಕಟೇಶ್ ಮಾತನಾಡಿ, ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂ ಸ್ವಾಧೀನಕ್ಕೆ ಮುಂದಾದ ವೇಳೆ ರೈತರು ಪ್ರತಿಭಟಿಸಿದರು. ಆ ಫಲವಾಗಿ ಸ್ವಾಧೀನ ಕೈಬಿಡಲಾಯಿತು. ಇದೇ ಮಾದರಿಯಲ್ಲಿ ಹೋರಾಟ ರೂಪಿಸಬೇಕು ಎಂದರು.
ವಿವಿಧ ಸಂಘಟನೆಗಳ ಮುಖಂಡರಾದ ಭೈರೇಗೌಡ, ರಾಮನಾಥ್, ಗಂಗಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನೂ ನೋಡಿ: ಪಿಚ್ಚರ್ ಪಯಣ -169 | ಸಿನೆಮಾ : ಕೈರೋ ಸ್ಟೇಷನ್ : ವಿಶ್ಲೇಷಣೆ : ಬಿ. ಶ್ರೀಪಾದ ಭಟ್ Janashakthi Media
