ಮಿಲಿಟರಿ ವೆಚ್ಚಗಳ ಏರಿಕೆಗೆ ಜನಕಲ್ಯಾಣ ವೆಚ್ಚಗಳಲ್ಲಿ ಇಳಿಕೆ

ನವ ಉದಾರವಾದಿ ಬಂಡವಾಳಶಾಹಿಯ ಬಿಕ್ಕಟ್ಟು ತನ್ನ ಪ್ರಾಬಲ್ಯಕ್ಕೆ ಒಂದು ಸವಾಲಾಗಿ ಪರಿಣಮಿಸಿರುವುದರಿಂದಾಗಿ ಸಾಮ್ರಾಜ್ಯಶಾಹಿಯು ಜನಕಲ್ಯಾಣ ವೆಚ್ಚಗಳನ್ನು ಮತ್ತಷ್ಟು ಕಡಿತಗೊಳಿಸಿ ಮಿಲಿಟರಿ ವೆಚ್ಚಗಳತ್ತ ಸಾಗುವ ಬದಲಾವಣೆಯನ್ನು ತರುತ್ತಿದೆ. ಮುಂದುವರೆದ ದೇಶಗಳ ಬಂಡವಾಳಶಾಹಿಗಳು ದೇಶೀಯವಾಗಿಯೂ ಸಹ ದಶಕಗಳಿಂದ ಕಾಣದ ಒಂದು ಅಪಾಯಕಾರಿ ಪರಭಕ್ಷಕ ಮತ್ತು ಆಕ್ರಮಣಕಾರಿ ರೂಪವನ್ನು ಪಡೆದುಕೊಳ್ಳುತ್ತಿದ್ದಾರೆ. ಇತ್ತ ಭಾರತದ ಫ್ಯಾಸಿಸ್ಟ್-ತೆರನ ಆಳ್ವಿಕೆಯು ಉದ್ಯೋಗ ಖಾತ್ರಿ ಯೋಜನೆಯಂತಹ ಕಾರ್ಯಕ್ರಮಗಳಿಗೆ ಹಣ ಕೊಡದೆ ಅವುಗಳನ್ನು ಸೊರಗಿಸುತ್ತಿದ್ದರೂ ಸಹ, ಮಿಲಿಟರಿ ವೆಚ್ಚವನ್ನು ಹೆಚ್ಚಿಸುವ ಎಲ್ಲ ಪ್ರಯತ್ನಗಳನ್ನು ಮಾಡುತ್ತದೆ. ಇದು ಟ್ರಂಪ್ ನಾಯಕತ್ವದ ಮುಂದುವರೆದ ಬಂಡವಾಳಶಾಹಿ ಏನು ಮಾಡಲು ಪ್ರಯತ್ನಿಸುತ್ತಿದೆಯೋ ಅದನ್ನು ಪ್ರತಿಬಿಂಬಿಸುತ್ತದೆ. ಇದರ ವಿರುದ್ಧ ನಾವು ಹೋರಾಡಬೇಕಾಗಿದೆ.

-ಪ್ರೊ. ಪ್ರಭಾತ್ ಪಟ್ನಾಯಕ್

-ಅನು: ಕೆ. ಎಂ. ನಾಗರಾಜ್

ಯುರೋಪಿನ ದೇಶಗಳು ತಮ್ಮ ಮಿಲಿಟರಿ ವೆಚ್ಚಗಳಿಗೆ ಬೇಕಾಗುವ ಹಣದ ಅಂದಾಜನ್ನು ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿಕೊಂಡಿವೆ ಮತ್ತು ಈ ಕ್ರಮವನ್ನು ಉಳಿದ ದೇಶಗಳು ಅನುಸರಿಸುತ್ತಿರುವುದು ಕಂಡುಬರುತ್ತಿದೆ. ಈ ಮಿಲಿಟರಿ ವೆಚ್ಚಗಳು ಏನನ್ನು ಒಳಗೊಂಡಿವೆ ಎಂಬುದರ ಆಧಾರದ ಮೇಲೆ ಭಿನ್ನ ಭಿನ್ನವಾದ ಅಂದಾಜುಗಳಿವೆ. ನಮ್ಮ ವಿಶ್ಲೇಷಣೆಗಾಗಿ ಸ್ಟಾಕ್‌ಹೋಂನಲ್ಲಿರುವ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆಯ ಅಂದಾಜುಗಳನ್ನು ತೆಗೆದುಕೊಳ್ಳೋಣ. ಈ ಸಂಸ್ಥೆಯ ಪ್ರಕಾರ, ಕಳೆದ ಹತ್ತು ವರ್ಷಗಳಿಂದಲೂ ಸತತವಾಗಿ ಪ್ರತಿ ವರ್ಷವೂ ನಿಜ ಮಿಲಿಟರಿ ವೆಚ್ಚಗಳ ಏರಿಕೆ ಕಂಡುಬರುತ್ತದೆ. 2024ರ ಈ ವೆಚ್ಚಗಳು ಅದರ ಹಿಂದಿನ ವರ್ಷಕ್ಕಿಂತಲೂ ಶೇ. 9.4ರಷ್ಟು ಏರಿಕೆಯಾಗಿವೆ. ಇದು ಶೀತಲ ಸಮರದ ಅಂತ್ಯದ ನಂತರದ ಯಾವುದೇ ವರ್ಷಕ್ಕೆ ಹೋಲಿಸಿದರೂ ಅತ್ಯಧಿಕ ವಾರ್ಷಿಕ ಹೆಚ್ಚಳವಾಗಿದೆ. 2024ರ ಜಾಗತಿಕ ಒಟ್ಟು ಮಿಲಿಟರಿ ವೆಚ್ಚವು $2.718 ಟ್ರಿಲಿಯನ್‌ಗಳಷ್ಟಿತ್ತು.

ಈ ಭಾರೀ ಏರಿಕೆಯ ಹಿಂದಿರುವ ಎರಡು ಕಾರಣಗಳನ್ನು ಸ್ಪಷ್ಟವಾಗಿ ಗುರುತಿಸಬಹುದು: ಮೊದಲನೆಯದು, ಯುಎಸ್ ನೇತೃತ್ವದ ಮುಂದುವರೆದ ದೇಶಗಳ ಸಾಮ್ರಾಜ್ಯವು ಎದುರಿಸುತ್ತಿರುವ ಸವಾಲು ವಿಶೇಷವಾಗಿ, ಯುಎಸ್‌ನಲ್ಲಿ ವಸತಿ ಗುಳ್ಳೆ ಒಡೆದಾಗ ಆರಂಭವಾದ ನವ ಉದಾರವಾದಿ ಬಂಡವಾಳಶಾಹಿಯ ಬಿಕ್ಕಟ್ಟಿನೊಂದಿಗೆ ವಿಸ್ತಾರಗೊಳ್ಳುತ್ತಿದೆ. ಎರಡನೆಯದು, ಈ ಸಾಮ್ರಾಜ್ಯವನ್ನು ಉಳಿಸಿಕೊಂಡುಬರುವ ಮಿಲಿಟರಿ ವೆಚ್ಚದ ಸಿಂಹ ಪಾಲನ್ನು ಇನ್ನು ಮುಂದೆ ಹೊರಲು ಸಿದ್ಧವಿಲ್ಲದ ಯುಎಸ್, ಅದರ ಯುರೋಪಿಯನ್ ಪಾಲುದಾರರು ಈ ಹೊರೆಯ ಒಂದು ಭಾಗವನ್ನು ವಹಿಸಿಕೊಳ್ಳಬೇಕೆಂದು ಬಯಸುತ್ತದೆ. ಈ ಕಾರಣಗಳಿಂದಾಗಿ ಸಾಮ್ರಾಜ್ಯಶಾಹಿ ಶಕ್ತಿಗಳು ತಮ್ಮ ಮಿಲಿಟರಿ ವೆಚ್ಚಗಳನ್ನು ಹೆಚ್ಚಿಸಿಕೊಂಡಿವೆ. ಇತರ ದೇಶಗಳು, ಈ ಸಾಮ್ರಾಜ್ಯಶಾಹಿ ತೇರಿನ ಗಾಲಿಯ ಕೆಳಗೆ ಬೀಳದಂತೆ ನೋಡಿಕೊಳ್ಳಲು ತಮ್ಮ ಮಿಲಿಟರಿ ವೆಚ್ಚಗಳನ್ನು ಹೆಚ್ಚಿಸಿಕೊಳ್ಳುವ ಒತ್ತಡಕ್ಕೆ ಒಳಗಾಗಿವೆ.

ಇದನ್ನೂ ಓದಿ: ಪುತ್ತೂರು ಪ್ರೇಮ ವಂಚನೆ, ನಂಬಿಕೆ ದ್ರೋಹ, ದೈಹಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಒದಗಿಸಿ: ಜನವಾದಿ ಮಹಿಳಾ ಸಂಘಟನೆ ಆಗ್ರಹ

ಈ ಎರಡೂ ಕಾರಣಗಳ ಬಗ್ಗೆಯೂ ಒಂದೊಂದು ಮಾತನ್ನು ಹೇಳಬಹುದು. ಈ ಬಿಕ್ಕಟ್ಟು ಆರಂಭವಾಗುವ ಮೊದಲು ತಮ್ಮ ಪಾವತಿ ಶೇಷದ (ಚುಕ್ತಾ) ಚಾಲ್ತಿ ಖಾತೆಯಲ್ಲಿ ಅಧಿಕ ಕೊರತೆಯನ್ನು ಹೊಂದಿರದ ಅಥವಾ ಹೊಂದಿದ್ದ ಕೊರತೆಗಳನ್ನು ಹಾಗೂ ಹೀಗೂ ಒಳಹರಿಯುವ ಹಣದ ಮೂಲಕ ಸರಿದೂಗಿಸಿಕೊಳ್ಳಬಹುದಾಗಿದ್ದ ಅನೇಕ ದೇಶಗಳು ಬಿಕ್ಕಟ್ಟಿನ ನಂತರದಲ್ಲಿ ಸಂಕಷ್ಟದಲ್ಲಿ ಸಿಲುಕಿದವು. ಕೊರೊನಾ ಸಾಂಕ್ರಾಮಿಕದ ನಂತರ ಅವುಗಳ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ರಫ್ತು ಮಾರುಕಟ್ಟೆಗಳು ಕುಗ್ಗಿದ ಪರಿಣಾಮವಾಗಿ ಅವರ ಚಾಲ್ತಿ ಖಾತೆಯ ಕೊರತೆಗಳು ಹೆಚ್ಚಿದವು. ಹೂಡಿಕೆ ಮಾಡಿದ ಹಣವನ್ನು (ಬಂಡವಾಳ)ಹಿಂಪಡೆಯುವಲ್ಲಿ ತೊಂದರೆಯಾಗಬಹುದು ಎಂಬುದಾಗಿ ಹೂಡಿಕೆದಾರರು ಭೀತಿಗೊಳಗಾದ ಕಾರಣದಿಂದ ಹಣಕಾಸಿನ ಒಳಹರಿವು ನಿಂತು ಹೋಯಿತು. ಹಾಗಾಗಿ, ಈ ದೇಶಗಳು ಸಾಲದ ಬಿಕ್ಕಟ್ಟಿನಲ್ಲಿ ಮುಳುಗಿದವು. ಸಾಂಕ್ರಾಮಿಕದ ನಂತರ ಇದೇ ರೀತಿಯ ಇನ್ನೂ ತೀವ್ರ ತರದ ಸಂಕಷ್ಟಗಳಿಗೆ ಅನೇಕ ದೇಶಗಳು ಒಳಗಾದವು. ಈ ಬೆಳವಣಿಗೆಗಳು, ಯುಎಸ್ ನೇತೃತ್ವದ ಸಾಮ್ರಾಜ್ಯಶಾಹಿ ಶಕ್ತಿಗಳು ವಿಶ್ವದ ಮೇಲೆ ಹೇರಿದ ನವ ಉದಾರವಾದಿ ಅಂತಾರಾಷ್ಟ್ರೀಯ ವ್ಯವಸ್ಥೆಯ ಬಗ್ಗೆ ಭ್ರಮನಿರಸನ ಉಂಟುಮಾಡಿದವು.

ರಷ್ಯಾದ ಬೆದರಿಕೆ ಎಂಬ ಕುತಂತ್ರ

ಅದೇ ಕಾಲಮಾನದಲ್ಲಿ, ಯುಎಸ್ ನೇತೃತ್ವದ ಮುಂದುವರೆದ ದೇಶಗಳ ತಯಾರಿಕಾ ಚಟುವಟಿಕೆಗಳ ಸ್ಥಳಾಂತರದ ಮೂಲಕ ಕೊನೆಯಪಕ್ಷ ಆರಂಭದಲ್ಲಿ ಉತ್ತೇಜಿಸಲ್ಪಟ್ಟ ಚೀನಾವು ಒಂದು ಗಮನಾರ್ಹವಾದ ಉನ್ನತ ಮಟ್ಟದ ಬೆಳವಣಿಗೆಯ ದರಗಳನ್ನು ದಾಖಲಿಸಿತು. ತನ್ನ ಚಾಲ್ತಿ ಖಾತೆಯಲ್ಲಿ ಮಿಗುತಾಯವನ್ನು ಒಂದು ಗಣನೀಯಪ್ರಮಾಣದಲ್ಲಿ ಹೊಂದಿದ್ದ ಚೀನಾವು, ಬಿಕ್ಕಟ್ಟಿನಿಂದಾಗಿ ಸಂಕಷ್ಟದಲ್ಲಿರುವ ಮತ್ತು ಸಂಕಷ್ಟಕ್ಕೆ ಒಳಗಾಗಬಹುದಾದ ದೇಶಗಳಿಗೆ ಅಲ್ಪ ಸ್ವಲ್ಪ ಸಹಾಯವನ್ನು ಒದಗಿಸಲು ಮುಂದೆ ಬಂದಿತು. ಚೀನಾದ ಈ ಕ್ರಮವು ಸಾಮ್ರಾಜ್ಯಶಾಹಿಯ ಪ್ರಾಬಲ್ಯಕ್ಕೆ ಒಂದು ಗಂಭೀರ ಸವಾಲನ್ನು ಒಡ್ಡಿತು. ಈ ಸವಾಲಿನಿಂದ ಬೆದರಿದ ಸಾಮ್ರಾಜ್ಯಶಾಹಿಯು ತನ್ನ ಮಿಲಿಟರಿ ಹಸ್ತಕ್ಷೇಪದ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳ ಬಯಸುತ್ತದೆ.

ಅದೇ ಸಮಯದಲ್ಲಿ, ಬಿಕ್ಕಟ್ಟಿನ ಪರಿಣಾಮವಾಗಿ ತನ್ನ ಸ್ವಂತ ಅರ್ಥವ್ಯವಸ್ಥೆಯ ಮೇಲೆ ಉಂಟಾದ ಪರಿಣಾಮಗಳನ್ನು ನಿವಾರಿಸಿಕೊಳ್ಳಲು “ನನ್ನ ನೆರೆಯವನು ಹಾಳಾಗಲಿ” ನೀತಿಗಳ ಮೂಲಕ ಅಮೆರಿಕವು ಸುಂಕಗಳನ್ನು ಆಶ್ರಯಿಸುವ ರೀತಿಯಲ್ಲೇ, ಬಿಕ್ಕಟ್ಟಿನ ಪರಿಣಾಮವಾಗಿ ಅಮೆರಿಕವು ತನ್ನ ಮಿಲಿಟರಿ ವೆಚ್ಚದ ಒಂದು ಭಾಗವನ್ನು ಇತರ ಸಾಮ್ರಾಜ್ಯಶಾಹಿ ದೇಶಗಳ ಮೇಲೆ ಹೊರಿಸಬಯಸುತ್ತದೆ. ಈ ರೀತಿಯಲ್ಲಿ ಹೊರೆ ಇಳಿಸಿಕೊಳ್ಳುವ ಕ್ರಮಗಳು ಒಟ್ಟಾರೆಯಾಗಿ ಸಾಮ್ರಾಜ್ಯಶಾಹಿ ಜಗತ್ತಿನ ಒಟ್ಟು ಮಿಲಿಟರಿ ವೆಚ್ಚಗಳನ್ನು ಹೆಚ್ಚಿಸುತ್ತವೆ, ಏಕೆಂದರೆ, ಕನಿಷ್ಠ ಪಕ್ಷ ಭಾಗಶಃವಾಗಿಯಾದರೂ ಯುಎಸ್ ಮಿಲಿಟರಿ ರಕ್ಷಣೆಯಡಿಯಲ್ಲಿದ್ದ ಯುರೋಪ್ ಈಗ ಬೃಹತ್ ಮಿಲಿಟರಿ ವೆಚ್ಚವನ್ನು ತಾನೇ ಕೈಗೊಳ್ಳಬೇಕಾಗುತ್ತದೆ.

ಯುರೋಪಿನ ದೇಶಗಳು ರಷ್ಯಾದ ಆಕ್ರಮಣಕಾರಿ ಬೆದರಿಕೆಯನ್ನು ಮುಂದೊಡ್ಡುವ ಮೂಲಕ ತಮ್ಮ ಹೆಚ್ಚುವರಿ ಮಿಲಿಟರಿ ವೆಚ್ಚಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತವೆ. ಆದರೆ, ಈ ಬೆದರಿಕೆಯು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಪರಿಶೀಲನೆಗೆ ಒಳಪಡಿಸುವುದಿಲ್ಲ. ಸೋವಿಯತ್ ಒಕ್ಕೂಟದ ಪತನದ ಸಮಯದಲ್ಲಿ ನ್ಯಾಟೋ ಮಿಲಿಟರಿ ಕೂಟದ ವ್ಯಾಪ್ತಿಯನ್ನು ಪೂರ್ವ ದಿಕ್ಕಿನಲ್ಲಿ ವಿಸ್ತರಣೆ ಮಾಡುವುದಿಲ್ಲ ಎಂದು ಕ್ಲಿಂಟನ್ ಆಡಳಿತವು ಸೋವಿಯತ್ ಒಕ್ಕೂಟದ ಅಂದಿನ ಅಧ್ಯಕ್ಷ ಮಿಖಾಯಿಲ್ ಗೋರ್ಬಚೋವ್ ಅವರಿಗೆ ನೀಡಿದ ಭರವಸೆಯ ಹೊರತಾಗಿಯೂ, ನ್ಯಾಟೋದ ವ್ಯಾಪ್ತಿಯನ್ನು ರಷ್ಯಾದ ಗಡಿಯವರೆಗೂ ವಿಸ್ತರಣೆ ಮಾಡಲಾಗಿದೆ.

ಮಾತ್ರವಲ್ಲ, ಉಕ್ರೇನ್‌ನಲ್ಲಿ ಚುನಾಯಿತ ವಿಕ್ಟರ್ ಯಾನುಕೋವಿಚ್ ಸರ್ಕಾರದ ವಿರುದ್ಧ ಯುಎಸ್-ರೂಪಿಸಿದ ದಂಗೆಯ ಮೂಲಕ ಮಹಾ ಯುದ್ಧ ಸಮಯದ ನಾಜಿ ಸಹಯೋಗಿ ಸ್ಟೆಪನ್ ಬಂಡೇರಾ ಅವರ ಅನುಯಾಯಿಗಳನ್ನು ಒಳಗೊಂಡ ಒಂದು ಫ್ಯಾಸಿಸ್ಟ್ ಆಳ್ವಿಕೆಯನ್ನು ಉಕ್ರೇನ್‌ನಲ್ಲಿ ಸ್ಥಾಪಿಸಲಾಯಿತು. ಈ ಫ್ಯಾಸಿಸ್ಟ್ ಆಳ್ವಿಕೆಯು ರಷ್ಯನ್ ಮಾತನಾಡುವ ಉಕ್ರೇನ್‌ನ ಅಲ್ಪಸಂಖ್ಯಾತರನ್ನು ಹತ್ಯೆಗೈದಿತು ಮತ್ತು ನ್ಯಾಟೋ ಸದಸ್ಯತ್ವವನ್ನು ಕೇಳಿತು. ರಷ್ಯಾ, ಈ ಎಲ್ಲ ಬೆದರಿಕೆಯ ಕ್ರಮಗಳನ್ನೂ ಎದುರಿಸಬೇಕಾಯಿತು. ಹಾಗಾಗಿ, ಯುರೋಪಿನ ವಿರುದ್ಧ ರಷ್ಯಾವು ಆಕ್ರಮಣಕಾರಿಯಾಗಿದೆ ಎಂಬ ಮಾತುಗಳು ಸಾಮ್ರಾಜ್ಯಶಾಹಿಯ ಪ್ರಚಾರದ ವಸ್ತುವಾಗಿವೆಯೇ ವಿನಃ ವಾಸ್ತವವಲ್ಲ.

ಪ್ರಸ್ತುತದಲ್ಲಿ ರಷ್ಯಾವು ಒಂದು ಯುದ್ಧದಲ್ಲಿ ನಿಜಕ್ಕೂ ತೊಡಗಿಕೊಂಡಿದ್ದರೂ ಸಹ, 2024ರಲ್ಲಿ ರಷ್ಯಾದ ಒಟ್ಟು ಮಿಲಿಟರಿ ವೆಚ್ಚಗಳು 149 ಬಿಲಿಯನ್ ಡಾಲರಿನಷ್ಟಿರುವಾಗ, ಯುರೋಪಿನ ನ್ಯಾಟೋ ಸದಸ್ಯ ದೇಶಗಳ ಒಟ್ಟು ಮಿಲಿಟರಿ ವೆಚ್ಚವು 454 ಬಿಲಿಯನ್ ಡಾಲರುಗಳಷ್ಟಿದೆ. ಇದು ರಷ್ಯಾದ ಮಿಲಿಟರಿ ವೆಚ್ಚಕ್ಕಿಂತಲೂ ಮೂರು ಪಟ್ಟು ಹೆಚ್ಚಿಗೆ ಇದೆ ಎಂಬ ಅಂಶವು ಮಹತ್ವ ಹೊಂದಿದೆ. ಆದ್ದರಿಂದ, ಮಿಲಿಟರಿ ಉದ್ದೇಶಗಳಿಗಾಗಿ ರಷ್ಯಾಕ್ಕಿಂತ ಮೂರು ಪಟ್ಟು ಹೆಚ್ಚು ಖರ್ಚು ಮಾಡಲು ರಷ್ಯಾದ ಬೆದರಿಕೆ ಎಂಬುದಕ್ಕೆ ಮೊರೆಹೋಗುವ ಕ್ರಮವು ಹಾಸ್ಯಾಸ್ಪದವೂ ಹೌದು ಮತ್ತು ಒಂದು ಕುತಂತ್ರವೂ ಹೌದು. ಹಾಗೆ ನೋಡಿದರೆ ಯುರೋಪಿನ ದೇಶಗಳ ಮಿಲಿಟರಿ ವೆಚ್ಚಗಳು ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಲೆಕ್ಕಾಚಾರಗಳಿಂದ ಕೂಡಿವೆ.

ಜನಕಲ್ಯಾಣ ವೆಚ್ಚಗಳಲ್ಲಿ ಕಡಿತ ಖಚಿತ

ಈ ಸನ್ನಿವೇಶದಲ್ಲಿ ಕಳವಳಕಾರಿಯಾಗಿ ಕಾಣುವ ಒಂದು ಸಂಗತಿಯೆಂದರೆ, ಜರ್ಮನಿಯ ಮಿಲಿಟರಿ ವೆಚ್ಚವು ಹಿಂದಿನ ವರ್ಷಕ್ಕಿಂತಲೂ ಶೇ. 28ರಷ್ಟು ಏರಿಕೆಯಾಗಿದೆ. ಯುದ್ಧಾನಂತರದಲ್ಲಿ ತನ್ನನ್ನು ಪುನಃ ಶಸ್ತ್ರಸಜ್ಜಿತಗೊಳಿಕೊಳ್ಳುವ ಅವಕಾಶವಿಲ್ಲದಿದ್ದ ಪರಿಸ್ಥಿತಿಯಲ್ಲಿದ್ದ ಜರ್ಮನಿ, 2024ರಲ್ಲಿ ಯುರೋಪಿನ ದೇಶಗಳಲ್ಲೇ ಅತಿ ಹೆಚ್ಚು ಮತ್ತು ವಿಶ್ವದ ನಾಲ್ಕನೇ ಅತಿ ಹೆಚ್ಚು ಮಿಲಿಟರಿ ಖರ್ಚುಗಳನ್ನು ಕೈಗೊಳ್ಳುವ ಪ್ರಸ್ತುತ ಸ್ಥಿತಿಗೆ ತಲುಪಿರುವುದು ಒಂದು ಮಹತ್ವದ ಬದಲಾವಣೆಯೇ ಸರಿ. ನಾಜಿ ಭೂತಕಾಲವು ಮರುಕಳಿಸುವ ಲಕ್ಷಣಗಳನ್ನು ಜರ್ಮನಿ ತೋರಿಸುತ್ತಿರುವುದನ್ನು ಮತ್ತು ಅದರ ಕುಖ್ಯಾತ ಯುದ್ಧೋನ್ಮಾದದ ಇತಿಹಾಸವನ್ನು ಗಮನಿಸಿದರೆ, ಈ ವಿದ್ಯಮಾನವು ಅತ್ಯಂತ ಗಂಭೀರ ಪರಿಣಾಮಗಳಿಂದ ಕೂಡಿದ ಬೆಳವಣಿಗೆಯಾಗಿ ಕಾಣುತ್ತದೆ.

ಈ ಸಂದರ್ಭದಲ್ಲಿ ಉದ್ಭವಿಸುವ ನಿರ್ಣಾಯಕವಾದ ಒಂದು ಪ್ರಶ್ನೆ ಯಾವುದು ಎಂದರೆ: ಸಾಮ್ರಾಜ್ಯಶಾಹಿ ಜಗತ್ತಿನಲ್ಲಿ ಮಿಲಿಟರಿ ವೆಚ್ಚಗಳ ಈ ಏರಿಕೆ ಮತ್ತು ಅದನ್ನು ಇನ್ನೂ ಹೆಚ್ಚಿಸಲುಬದ್ಧರು ಎಂಬ ಘೋಷಣೆಯನ್ನು ಗಮನಿಸಿದರೆ, ಈ ಮಿಲಿಟರಿ ವೆಚ್ಚಗಳಿಗೆ ಬೇಕಾಗುವ ಹಣವನ್ನು ಹೇಗೆ ಹೊಂದಿಸಿಕೊಳ್ಳಲಾಗುವುದು? ಬೂರ್ಜ್ವಾ ಸರ್ಕಾರಗಳ ಗ್ರಹಿಕೆಯಲ್ಲಿ, ಬಂಡವಾಳಗಾರರಿಗೆ ತೆರಿಗೆ ರಿಯಾಯಿತಿ ಒದಗಿಸುವ ಕ್ರಮವು ಪ್ರಸ್ತುತದಲ್ಲಿ ಅರ್ಥವ್ಯವಸ್ಥೆಯನ್ನು ಉತ್ತೇಜಿಸುವ ಒಂದು ಪ್ರಾಥಮಿಕ ಸಾಧನವಾಗಿ ತೋರುವುದರಿಂದ, ಸ್ವಲ್ಪ ಮಟ್ಟಿನ ವಿತ್ತೀಯ ಕೊರತೆಯು ಅನಿವಾರ್ಯವಾಗಿ ಉಂಟಾಗುತ್ತದೆಯಾದರೂ, ಜನಕಲ್ಯಾಣ ವೆಚ್ಚಗಳ ಕಡಿತವಾಗುವುದು ಖಚಿತ ಎಂಬುದAತೂ ಸ್ಪಷ್ಟವಾಗುತ್ತದೆ.

“ದೊಡ್ಡ ಸುಂದರ ಮಸೂದೆ” ಎಂದು ಕರೆಯಲಾದ ಡೊನಾಲ್ಡ್ ಟ್ರಂಪ್ ಅವರ ವಿತ್ತೀಯ ಕಾರ್ಯಸೂಚಿಯನ್ನು ನೋಡಿದಾಗ ಜನ ಕಲ್ಯಾಣ ವೆಚ್ಚಗಳು ಕಡಿತಗೊಳ್ಳುವ ಅಂಶವು ಸ್ಪಷ್ಟವಾಗುತ್ತದೆ. ಈ ಮಸೂದೆಯನ್ನು ಯುಎಸ್ ಕಾಂಗ್ರೆಸ್ ಅಂಗೀಕರಿಸಿದೆ ಮತ್ತು ಅದು ಸೆನೆಟ್ ಅನುಮೋದನೆಗಾಗಿ ಕಾಯುತ್ತಿದೆ. ಈ ಮಸೂದೆಯ ಪ್ರಕಾರ ಮುಂದಿನ ಹತ್ತು ವರ್ಷಗಳಲ್ಲಿ ತೆರಿಗೆ ರಿಯಾಯಿತಿಗಳು 3.76 ಟ್ರಿಲಿಯನ್ ಡಾಲರುಗಳಷ್ಟಿರುತ್ತವೆ ಮತ್ತು ಒಟ್ಟು ವೆಚ್ಚ ಕಡಿತ ಕಡಿತಗಳು 1.3 ಟ್ರಿಲಿಯನ್ ಡಾಲರುಗಳಷ್ಟಿರುತ್ತವೆ. ಈ ಕ್ರಮದಿಂದಾಗಿ ಸರ್ಕಾರದ ಒಟ್ಟು ಸಾಲವು (ಈ ಸಾಲದ ಮೇಲಿನ ಬಡ್ಡಿಯನ್ನು ಲೆಕ್ಕ ಹಾಕದೆ) 2.5 ಟ್ರಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗುತ್ತದೆ.

ಈ ಮಸೂದೆಯಡಿಯಲ್ಲಿ ತೆರಿಗೆ ರಿಯಾಯಿತಿಗಳನ್ನು ಎಲ್ಲ ಜನ ಗುಂಪುಗಳಿಗೂ ನೀಡಲಾಗುತ್ತದೆಯಾದರೂ, ತೆರಿಗೆಯ ಪ್ರಸ್ತಾಪಗಳನ್ನು ಮತ್ತು ಖರ್ಚುಗಳ ಪ್ರಸ್ತಾಪಗಳನ್ನು ಒಟ್ಟಿಗೆ ತೆಗೆದುಕೊಂಡು ನೋಡಿದರೆ, ರಿಯಾಯಿತಿಗಳ ಅತಿ ದೊಡ್ಡ ಫಲಾನುಭವಿಗಳು ಶ್ರೀಮಂತರಾಗಿರುತ್ತಾರೆ ಮತ್ತು ಬಡವರ ಸ್ಥಿತಿ-ಗತಿಗಳು ಸಂಪೂರ್ಣವಾಗಿ ಹದಗೆಡುತ್ತವೆ. ಹಾಗೆ ನೋಡಿದರೆ, ಪ್ರಧಾನವಾಗಿ ಆರೋಗ್ಯ-ಸೌಲಭ್ಯಗಳ ಕಡಿತ ಮತ್ತು ಆರೋಗ್ಯ ವಿಮೆ ಶುಲ್ಕಗಳ ಹೆಚ್ಚಳದ ಕಾರಣದಿಂದಾಗಿ, ಮುಂಬರುವ ವರ್ಷಗಳಲ್ಲಿ ಜನಸಂಖ್ಯೆಯ ಮೇಲ್ತುದಿಯ ಶೇ. 10ರಷ್ಟು ಜನರ ಕುಟುಂಬಗಳು ತಮ್ಮ ಸಂಪನ್ಮೂಲಗಳ ನಿವ್ವಳ ಹೆಚ್ಚಳವನ್ನು ಕಾಣುತ್ತಾರೆ ಮತ್ತು ತಳ ಭಾಗದ ಶೇ. 10ರಷ್ಟು ಜನರ ಕುಟುಂಬಗಳು ತಮ್ಮ ಸಂಪನ್ಮೂಲಗಳ ನಿವ್ವಳ ಇಳಿಕೆಯನ್ನು ಕಾಣುತ್ತಾರೆ.

ಆಕ್ರಾಮಕ ರೂಪ

ಯುಎಸ್ ಕಾಂಗ್ರೆಸ್ ಈ ಮಸೂದೆಯನ್ನು ಕೇವಲ ಒಂದು-ಮತದ ಬಹುಮತದಿಂದ ಅಂಗೀಕರಿಸಿದೆಯಾದರೂ ಮತ್ತು ಸೆನೆಟ್‌ನಲ್ಲಿ ದೊರೆಯುವ ಫಲಿತಾಂಶವು ಇನ್ನೂ ಸ್ಪಷ್ಟವಿಲ್ಲವಾದರೂ, ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಮಸೂದೆಯನ್ನು ಎಷ್ಟರ ಮಟ್ಟಿಗೆ ಸ್ವೀಕರಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಿಲ್ಲದ ಮತ್ತು ಸಂಪೂರ್ಣವಾಗಿ ಬೇರೆಯದೇ ಆದ ಒಂದು ವಿಷಯ. ಬ್ರಿಟನ್‌ನಲ್ಲಿ ಲಿಜ್ ಟ್ರಸ್ ಸರ್ಕಾರವು ಬಂಡವಾಳಗಾರರಿಗೆ ತೆರಿಗೆ ರಿಯಾಯಿತಿಗಳನ್ನು ನೀಡುವ ಸಲುವಾಗಿ ವಿತ್ತೀಯ ಕೊರತೆಯ ವಿಸ್ತರಣೆಯನ್ನು ಪ್ರಸ್ತಾಪಿಸಿತ್ತು.

ಆದರೆ, ವಿತ್ತೀಯ ಕೊರತೆಯ ಈ ವಿಸ್ತರಣೆಯೂ ಸಹ ಹಣಕಾಸು ಬಂಡವಾಳಕ್ಕೆ ಸ್ವೀಕಾರಾರ್ಹವಾಗಿರಲಿಲ್ಲ. ಹಣಕಾಸು ಬಂಡವಾಳವು ದೇಶವನ್ನು ತೊರೆದು ಹೋಗುತ್ತಿದ್ದಂತೆಯೇ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಬ್ರಿಟಿಷ್ ಪೌಂಡ್‌ನ ಮೌಲ್ಯ ಕುಸಿಯಿತು ಮತ್ತು ಲಿಜ್ ಟ್ರಸ್ ರಾಜೀನಾಮೆ ನೀಡಬೇಕಾಯಿತು. ಈ ಪ್ರಕ್ರಿಯೆಯಲ್ಲಿ ಬ್ರಿಟಿಷ್ ಇತಿಹಾಸದಲ್ಲಿ ಅತಿ ಕಡಿಮೆ ಅವಧಿಯ ಪ್ರಧಾನಿಯಾಗಿ ಲಿಜ್ ಟ್ರಸ್ ದಾಖಲಾದರು. ಟ್ರಂಪ್ ಅವರ ಈ ಮಸೂದೆಯನ್ನು ಹಣಕಾಸು ಬಂಡವಾಳವು ಒಂದು ವೇಳೆ ಅನುಕೂಲಕರವಾಗಿ ಸ್ವೀಕರಿಸದಿದ್ದರೆ, ದುಡಿಯುವ ಜನರ ಮೇಲೆ ಹೆಚ್ಚಿನ ಪರಿಣಾಮ ಬೀರುವ ಜನ ಕಲ್ಯಾಣ ವೆಚ್ಚಗಳನ್ನು ಇನ್ನೂ ಹೆಚ್ಚು ಕಡಿತಗೊಳಿಸುವ ಮೂಲಕ ವಿತ್ತೀಯ ಕೊರತೆಯ ಪ್ರಮಾಣವನ್ನು ಮತ್ತಷ್ಟು ಕಡಿತಗೊಳಿಸಬೇಕಾಗುತ್ತದೆ.

ಈ ರೀತಿಯಲ್ಲಿ ಮುಂದುವರೆದ ದೇಶಗಳ ಬಂಡವಾಳಶಾಹಿಯ ಸ್ವಭಾವದಲ್ಲಿ ಒಂದು ಸಂಪೂರ್ಣ ಬದಲಾವಣೆಯನ್ನು ನಾವು ನೋಡುತ್ತಿದ್ದೇವೆ. ಮಹಾ ಯುದ್ಧದ ನಂತರ ಬಂಡವಾಳಶಾಹಿಯು ಎದುರಿಸಿದ ಅಸ್ತಿತ್ವದ ಬಿಕ್ಕಟ್ಟಿನ ಕಾರಣದಿಂದಾಗಿ ಯುದ್ಧಾನಂತರದ ವರ್ಷಗಳಲ್ಲಿ ಜನ ಕಲ್ಯಾಣ (ದೇಶೀಯವಾಗಿ ಹತ್ತಿರ ಹತ್ತಿರ ಪೂರ್ಣ ಉದ್ಯೋಗ ಮಟ್ಟದ ಮತ್ತು ನಿರ್ವವಸಾಹತೀಕರಣದ ಹೊರತಾಗಿಯೂ) ವೆಚ್ಚಗಳ ಹೆಚ್ಚಳಕ್ಕೆ ಒಪ್ಪಿಕೊಳ್ಳಬೇಕಾಯಿತು. ಮುಂದುವರೆದ ದೇಶಗಳ ಬಂಡವಾಳಶಾಹಿಯಿAದ ಕಸಿದುಕೊಂಡ ಈ ರಿಯಾಯಿತಿಗಳನ್ನು ಆಗ ಉದಾರವಾದಿ ಅಭಿಪ್ರಾಯವು ಬಂಡವಾಳಶಾಹಿಯ ಸ್ವರೂಪದಲ್ಲಿ ಉಂಟಾದ ಮೂಲಭೂತ ಮತ್ತು ಶಾಶ್ವತ ಬದಲಾವಣೆ ಎಂದು ಪ್ರಸ್ತುತಪಡಿಸಿತು. ಬಂಡವಾಳಶಾಹಿಯು ಒಂದು ಪರಭಕ್ಷಕ ಸ್ಥಿತಿಯಿಂದ ಜನ ಕಲ್ಯಾಣ ಬಂಡವಾಳಶಾಹಿ ವ್ಯವಸ್ಥೆಗೆ ಬದಲಾಗಿರುವುರಿಂದ ಸಮಾಜವಾದಕ್ಕೆ ಪರಿವರ್ತನೆ ಹೊಂದುವ ಅಗತ್ಯವಿಲ್ಲ ಎಂದು ವಾದಿಸಿತು.

ಈ ದಾವೆಯನ್ನು ಅರವತ್ತರ ದಶಕದ ಉತ್ತರಾರ್ಧ ಮತ್ತು ಎಪ್ಪತ್ತರ ದಶಕದ ಆರಂಭದಲ್ಲಿ ಕಂಡುಬAದ ಹಣದುಬ್ಬರದ ಏರಿಕೆ ಹುಸಿಗೊಳಿಸಿತು. ಇದು ಎಲ್ಲೆಡೆಯೂ ನವ ಉದಾರವಾದಿ ಆಳ್ವಿಕೆಯನ್ನು ತಂದಿತು ಮತ್ತು ಮುಂದುವರೆದ ಅರ್ಥವ್ಯವಸ್ಥೆಗಳಲ್ಲಿ ನಿರುದ್ಯೋಗವನ್ನು ಹೆಚ್ಚಿಸಿತು. ನವ ಉದಾರವಾದಿ ಬಂಡವಾಳಶಾಹಿಯ ಬಿಕ್ಕಟ್ಟು ಸಾಮ್ರಾಜ್ಯಶಾಹಿ ಪ್ರಾಬಲ್ಯಕ್ಕೆ ಒಂದು ಸವಾಲಾಗಿ ಪರಿಣಮಿಸಿತು. ಈ ಸವಾಲಿನಿಂದಾಗಿ ಸಾಮ್ರಾಜ್ಯಶಾಹಿಯು ಜನ ಕಲ್ಯಾಣ ವೆಚ್ಚಗಳನ್ನು ಮತ್ತಷ್ಟು ಕಡಿತಗೊಳಿಸಿ ಮಿಲಿಟರಿ ವೆಚ್ಚಗಳತ್ತ ಸಾಗುವ ಬದಲಾವಣೆಯನ್ನು ತರುತ್ತಿದೆ. ಮುಂದುವರೆದ ದೇಶಗಳ ಬಂಡವಾಳಶಾಹಿಯು ದೇಶೀಯವಾಗಿಯೂ ಸಹ ದಶಕಗಳಿಂದ ಕಾಣದ ಒಂದು ಅಪಾಯಕಾರಿ ಪರಭಕ್ಷಕ ಮತ್ತು ಆಕ್ರಾಮಕ ರೂಪವನ್ನು ಪಡೆದುಕೊಳ್ಳುತ್ತಿದೆ.

2024ರಲ್ಲಿ 86.1 ಬಿಲಿಯನ್ ಡಾಲರ್‌ಗಳನ್ನು ಖರ್ಚು ಮಾಡಿದ ಭಾರತವು ಅಮೆರಿಕ, ಚೀನಾ, ರಷ್ಯಾ ಮತ್ತು ಜರ್ಮನಿಯ ನಂತರ ವಿಶ್ವದ ಐದನೇ ಅತಿ ಹೆಚ್ಚು ಮಿಲಿಟರಿ ಖರ್ಚು ಮಾಡುವ ದೇಶವಾಗಿದೆ. ನಮ್ಮ ದೇಶದಲ್ಲಿರುವ ಫ್ಯಾಸಿಸ್ಟ್-ತೆರನ ಆಳ್ವಿಕೆಯು ಉದ್ಯೋಗ ಖಾತ್ರಿ ಯೋಜನೆಯಂತಹ ಕಾರ್ಯಕ್ರಮಗಳಿಗೆ ಹಣ ಕೊಡದೆ ಅವುಗಳನ್ನು ಸೊರಗಿಸುತ್ತಿದ್ದರೂ ಸಹ, ಮಿಲಿಟರಿ ವೆಚ್ಚವನ್ನು ಹೆಚ್ಚಿಸುವ ಎಲ್ಲ ಪ್ರಯತ್ನಗಳನ್ನು ಮಾಡುತ್ತದೆ. ಇದು ಟ್ರಂಪ್ ನಾಯಕತ್ವದ ಮುಂದುವರೆದ ಬಂಡವಾಳಶಾಹಿ ಏನು ಮಾಡಲು ಪ್ರಯತ್ನಿಸುತ್ತಿದೆಯೋ ಅದನ್ನು ಪ್ರತಿಬಿಂಬಿಸುತ್ತದೆ. ಇದರ ವಿರುದ್ಧ ನಾವು ಹೋರಾಡಬೇಕಾಗಿದೆ.

ಇದನ್ನೂ ನೋಡಿ: LIVE | ಬಲವಂತದ ಭೂ ಸ್ವಾಧೀನ ವಿರೋಧಿಸಿ ಭೂಮಿ ಸತ್ಯಾಗ್ರಹ | ಪತ್ರಿಕಾಗೋಷ್ಠಿ

Donate Janashakthi Media

Leave a Reply

Your email address will not be published. Required fields are marked *