ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ-ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದ್ದನ್ನು ವಿರೋಧ ವ್ಯಕ್ತಪಡಿಸಿ ಕರ್ನಾಟಕ ಕಾಂಗ್ರೆಸ್ ನಾಯಕರು ಇಂದು (ಜೂನ್ 13) ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಯತ್ತ ಹೊರಟ ಕಾಂಗ್ರೆಸ್ ಪ್ರತಿಭಟನಾಕಾರರನ್ನು ಅರ್ಧದಲ್ಲಿಯೇ ತಡೆದು, ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ.
ಲಾಲ್‌ಬಾಗ್‌ನ ಮುಖ್ಯದ್ವಾರದಿಂದ ಇಡಿ ಕಚೇರಿಯತ್ತ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಗಿಯಾಗಿದ್ದರು. ಪ್ರತಿಭಟನೆಗೆ ಪೋಲಿಸರು ತಡೆವೊಡ್ಡಲು ಮುಂದಾದಾಗ ಬ್ಯಾರಿಕೇಡ್ ಮೇಲೇರಿದ ಕಾಂಗ್ರೆಸ್ ನಾಯಕರು, ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಶಾಸಕರಾದ ಪ್ರಿಯಾಂಕ್ ಖರ್ಗೆ, ಅಂಜಲಿ ನಿಂಬಾಳ್ಕರ್ ಸೇರಿದಂತೆ ಹಲವರು ಬ್ಯಾರಿಕೇಡ್ ಮೇಲೆ ನಿಂತು ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ‘ಪ್ರತಿಭಟನೆ ಮಾಡುವಂತಿಲ್ಲ ಎಂದು ಪೊಲೀಸ್‌ನವರು ಪತ್ರ ಬರೆದಿದ್ದರು. ಆದರೆ, ಪ್ರತಿಭಟನೆ ಮಾಡುವುದು ನಮ್ಮ ಮೂಲಭೂತ ಹಕ್ಕು. ಬಿಜೆಪಿ ವಿರುದ್ಧ ಯಾರೂ ಧ್ವನಿ ಎತ್ತುವ ಹಾಗಿಲ್ಲ. ನಮ್ಮ ವಶಕ್ಕೆ ಪಡೆದ ಪೊಲೀಸರು, ಪರಪ್ಪನ ಅಗ್ರಹಾರಕ್ಕಾದರೂ ಕರೆದುಕೊಂಡು ಹೋಗಲಿ. ಏನು ಬೇಕಾದರೂ ಮಾಡಲಿ. ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಆಗ್ರಹಿಸಿದರು.
‘ಇದೊಂದು ಐತಿಹಾಸಿಕ ಹೋರಾಟ. ನಮ್ಮದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಜನರ ಧ್ವನಿಯಾಗಿ ಕೆಲಸ ಮಾಡುತ್ತಿತ್ತು. ಸೋನಿಯಾಗಾಂಧಿಗೆ ಪ್ರಧಾನಿ ಸ್ಥಾನ ಒಲಿದು ಬಂದಿತ್ತು. ಆದರೆ, ಅದನ್ನು ಅವರು ನಿರಾಕರಿಸಿದ್ದರು. ದೇಶದ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ತ್ಯಾಗ ಮಾಡಿದ್ದರು. ರಾಹುಲ್ ಗಾಂಧಿ ದೇಶದ ಪ್ರಧಾನಿ ಆಗಬಹುದಾಗಿತ್ತು. ಅವರು ಎಂದೂ ಅಧಿಕಾರಕ್ಕಾಗಿ ಹಿಂದೆ ಬೀಳಲಿಲ್ಲ. ಇಂದಿರಾಗಾಂಧಿ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಕಿರುಕುಳ ಕೊಡಲು ಹೊರಟಿದ್ದಾರೆ. ಇದು ಎಂದಿಗೂ ಸಾಧ್ಯವಿಲ್ಲ’ ಎಂದರು.
ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಉದ್ದೇಶಪೂರ್ವಕವಾಗಿ ವಿಚಾರಣೆ ಕೈಗೊಳ್ಳುತ್ತಿದೆ. ಆ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜೊತೆ ನಾವಿದ್ದೇವೆ, ದೇಶದ ಜನರಿದ್ದಾರೆ ಎಂದು ಕಿಡಿಕಾರಿದರು.
ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷವು ಮಕ್ಕಳನ್ನು ಸಹ ಕರೆತಂದಿತ್ತು. ಇಡಿ ಕಚೇರಿಗೆ ಮುತ್ತಿಗೆ ಹಾಕುವ ನಿಟ್ಟಿನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಪ್ರತಿಭಟನಾಕಾರರು, ನರೇಂದ್ರ ಮೋದಿ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.