ಚೆನ್ನೈ: ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ನಾಯಕತ್ವ ಬಿಕ್ಕಟ್ಟಿನ ವಿಚಾರವಾಗಿ ತಲೆದೂರಿದ್ದು, ಮಾಜಿ ಮುಖ್ಯಮಂತ್ರಿ ಇ. ಪಳನಿಸ್ವಾಮಿಗೆ ಭಾರೀ ಹಿನ್ನಡೆಯಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪಳನಿಸ್ವಾಮಿ ನೇಮಕ ಮಾನ್ಯವಲ್ಲವೆಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.
ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಓ. ಪನ್ನೀರ್ ಸೆಲ್ವಂ ನಡುವಿನ ಎರಡು ಗುಂಪುಗಳು ಪಕ್ಷದ ನಾಯಕತ್ವ ವಿಚಾರ ತಾರಕ್ಕೇರಿದೆ. ಜುಲೈ 11ರಂದು ಪಕ್ಷದ ಸಾಮಾನ್ಯ ಮಂಡಳಿ ಸಭೆ ನಡೆಸಿದ ಎಡಪ್ಪಾಡಿ ಪಳನಿಸ್ವಾಮಿ ಎಐಎಡಿಎಂಕೆ ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿತು. ಈ ಸಭೆಯ ತೀರ್ಮಾನಗಳನ್ನು ಮದ್ರಾಸ್ ಹೈಕೋರ್ಟ್ ಇಂದು(ಆಗಸ್ಟ್ 17) ರದ್ದುಗೊಳಿಸಿದೆ.
ಎಐಎಡಿಎಂಕೆ ಪಕ್ಷದ ಸಾಮಾನ್ಯ ಸಭೆ ಮತ್ತು ಪಕ್ಷದಿಂದ ತನ್ನನ್ನು ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ ಪನೀರ್ ಸೆಲ್ವಂ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಜಿ. ಜಯಚಂದ್ರನ್ ಅವರ ಪೀಠವು ಇಂದು ವಿಚಾರಣೆ ನಡೆಸಿ ಪನೀರ್ ಸೆಲ್ವಂ ಅವರನ್ನು ಉಚ್ಛಾಟನೆ ಮಾಡಿರುವ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಅಲ್ಲದೇ, ಇ. ಪಳನಿಸ್ವಾಮಿ ಕರೆದ ಸಾಮಾನ್ಯ ಸಭೆಯೂ ಕೂಡಾ ಪಕ್ಷದ ಬೈಲಾವನ್ನು ಉಲ್ಲಂಘಿಸಿದೆ. ಇಂತಹ ಸಭೆಯಗಳನ್ನು ಜಂಟಿಯಾಗಿಯೇ ನಡೆಸಬೇಕು ಎಂಬುದು ನಿಯಮವಾಗಿದೆ ಎಂದು ಉಲ್ಲೇಖಿಸಿದ್ದರು.
ಪಕ್ಷದ ನಾಯಕತ್ವದ ವಿಚಾರಗಳ ಬಗ್ಗೆ ಜೂನ್ 23ರ ಯಥಾಸ್ಥಿತಿಯನ್ನೇ ಕಾಯ್ದುಕೊಳ್ಳಬೇಕೆಂದು ಹೈಕೋರ್ಟ್ ಆದೇಶ ನೀಡಿದೆ. ಅಂದರೆ, ಇ. ಪಳನಿಸ್ವಾಮಿ ಅವರ ನೇಮಕದ ಮೊದಲು ಎಐಎಡಿಎಂಕೆ ಜಂಟಿ ನಾಯಕತ್ವದಲ್ಲಿತ್ತು. ಪನ್ನೀರ್ ಸೆಲ್ವಂ ಸಂಯೋಜಕರಾಗಿದ್ದು, ಪಳನಿಸ್ವಾಮಿ ಉಪಾಧ್ಯಕ್ಷರಾಗಿದ್ದರು.
ಓ ಪನ್ನೀರ್ ಸೆಲ್ವಂ ಅವರನ್ನು 1.5 ಕೋಟಿ ಪ್ರಾಥಮಿಕ ಸದಸ್ಯರಿಂದ ಪಕ್ಷದ ಸಂಯೋಜಕರನ್ನಾಗಿ ನೇಮಿಸಲಾಗಿದೆ. ಹಾಗಾಗಿ, ಕೇವಲ 2,665 ಸದಸ್ಯರನ್ನು ಒಳಗೊಂಡಿರುವ ಸಾಮಾನ್ಯ ಮಂಡಳಿ ಸಭೆ ತೆಗೆದುಕೊಂಡ ನಿರ್ಧಾರದಿಂದ ಅವರನ್ನು ಆ ಸ್ಥಾನದಿಂದ ಹೊರಹಾಕಲು ಸಾಧ್ಯವಿಲ್ಲ ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಲಾಯಿತು.
ಓ ಪನ್ನೀರ್ ಸೆಲ್ವಂ ಪರ ಹಿರಿಯ ವಕೀಲರಾದ ಗುರು ಕೃಷ್ಣಕುಮಾರ್, ಪಿಎಚ್ ಅರವಿಂದ್ ಪಾಂಡಿಯನ್ ಮತ್ತು ಎಕೆ ಶ್ರೀರಾಮ್ ವಾದ ಮಂಡಿಸಿದರೆ, ಇ ಪಳನಿಸ್ವಾಮಿ ಪರ ಹಿರಿಯ ವಕೀಲರಾದ ವಿಜಯ್ ನಾರಾಯಣ್, ಎಸ್ ಆರ್ ರಾಜಗೋಪಾಲ್ ಮತ್ತು ನರ್ಮದಾ ಸಂಪತ್ ವಾದ ಮಂಡಿಸಿದ್ದರು.