ಕರ್ನಾಟಕ ರಾಜ್ಯ ಸರ್ಕಾರವು ಐಟಿ/ಐಟಿಇಎಸ್/ಬಿಪಿಒ ವಲಯದಲ್ಲಿ ಕೆಲಸದ ಸಮಯವನ್ನು ದಿನಕ್ಕೆ 12 ಗಂಟೆಗೆ ಹೆಚ್ಚಿಸಲು ಮತ್ತೆ ಮುಂದಾಗಿದೆ. ಇದಕ್ಕಾಗಿ, ʼಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆʼಗೆ ತಿದ್ದುಪಡಿ ಮಾಡುವ ಪ್ರಸ್ತಾವನೆಯನ್ನು ಮಂಡಿಸಲಾಗಿದೆ. ಸರ್ಕಾರದ ಈ ಕ್ರಮ ಈ ವಲಯದ ಉದ್ಯೋಗಿಗಳನ್ನು ಕೆರಳಿಸಿದೆ. ಇಂತಹ ಯಾವುದೇ ಪ್ರಯತ್ನವನ್ನು ಕರ್ನಾಟಕದ ಐಟಿ/ಐಟಿಇಎಸ್ ವಲಯದಲ್ಲಿ ಕೆಲಸ ಮಾಡುತ್ತಿರುವ 20 ಲಕ್ಷ ಉದ್ಯೋಗಿಗಳಿಗೆ ನೇರ ಸವಾಲು ಎಂದು ನೋಡಲಾಗುತ್ತದೆ ಎಂದು ಎಚ್ಚರಿಸಿರುವ ʼಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘʼವು (KITU), ತಮ್ಮ ಮೇಲೆ ಆಧುನಿಕ ಗುಲಾಮಗಿರಿಯನ್ನು ಹೇರುವ ಇಂತಹ ಅಮಾನವೀಯ ಪ್ರಯತ್ನವನ್ನು ವಿರೋಧಿಸಲು ಎಲ್ಲಾ ಐಟಿ/ಐಟಿಇಎಸ್ ಉದ್ಯೋಗಿಗಳು ಒಗ್ಗೂಡಿ ಒಟ್ಟಾಗಿ ನಿಲ್ಲಬೇಕೆಂದು ಕರೆ ನೀಡಿದೆ. ಕರ್ನಾಟಕ
ಕಾರ್ಮಿಕ ಇಲಾಖೆಯು ಜೂನ್ 18 ರಂದು ಉದ್ಯಮದ ವಿವಿಧ ಪಾಲುದಾರರೊಂದಿಗೆ ಕರೆದಿದ್ದ ಸಭೆಯಲ್ಲಿ, 12 ಗಂಟೆಗಳ ಕೆಲಸದ ದಿನಕ್ಕೆ ಅನುಕೂಲವಾಗುವಂತೆ ʼಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆʼ (Karnataka Shops and Commercial Establishment Act)ಗೆ ತಿದ್ದುಪಡಿ ಮಾಡುವ ಪ್ರಸ್ತಾವನೆಯನ್ನು ಮಂಡಿಸಲಾಗಿದೆ. ಕಾರ್ಮಿಕ ಕಾರ್ಯದರ್ಶಿ ಮತ್ತು ಕಾರ್ಮಿಕ ಇಲಾಖೆಯ ಇತರ ಅಧಿಕಾರಿಗಳು ಹಾಗೂ ಸಬೆಯಲ್ಲಿ ಭಾಗವಹಿಸಿದ್ದರು. ಐಟಿ/ಐಟಿಇಎಸ್ ವಲಯದ ನೌಕರರನ್ನು ಪ್ರತಿನಿಧಿಸಿ KITU ಮುಖಂಡರು ಭಾಗವಹಿಸಿದ್ದರು.
ಮೂರನೇ ಒಂದು ಭಾಗದಷ್ಟು ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳುತ್ತಾರೆ ಕರ್ನಾಟಕ
ಅಸ್ತಿತ್ವದಲ್ಲಿರುವ ʼಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆʼಯು ಓವರ್‌ಟೈಮ್ ಸೇರಿದಂತೆ ದಿನಕ್ಕೆ ಗರಿಷ್ಠ 10 ಗಂಟೆಗಳ ಕೆಲಸವನ್ನು ಮಾತ್ರ ಅನುಮತಿಸುತ್ತದೆ. ಆದರೆ, ಪ್ರಸ್ತಾವಿತ ತಿದ್ದುಪಡಿಯು 12 ಗಂಟೆಗಳ ಕೆಲಸದ ದಿನವನ್ನು ಸಾಮಾನ್ಯಗೊಳಿಸಲು ಪ್ರಯತ್ನಿಸುತ್ತದೆ ಮಾತ್ರವಲ್ಲ, ಪ್ರಸ್ತುತ ಅಸ್ತಿತ್ವದಲ್ಲಿರುವ ಮೂರು ಪಾಳಿ ವ್ಯವಸ್ಥೆಗೆ ಬದಲಾಗಿ ಎರಡು ಪಾಳಿ ವ್ಯವಸ್ಥೆಗೆ ಹೋಗಲು ಕಂಪನಿಗಳಿಗೆ ಅವಕಾಶ ನೀಡುತ್ತದೆ. ಇದರಿಂದಾಗಿ ಮೂರನೇ ಒಂದು ಭಾಗದಷ್ಟು ಉದ್ಯೋಗಿಗಳು ತಮ್ಮ ಉದ್ಯೋಗದಿಂದ ಹೊರಹಾಕಲ್ಪಡುತ್ತಾರೆ.
ಕಾರ್ಮಿಕ ಇಲಾಖೆಯು ಕರೆದಿದ್ದ ಈ ಸಭೆಯಲ್ಲಿ KITU ಪ್ರಧಾನ ಕಾರ್ಯದರ್ಶಿ ಸುಹಾಸ್ ಅಡಿಗ, ಅಧ್ಯಕ್ಷರಾದ ವಿಜೆಕೆ ನಾಯರ್ ಮತ್ತು ಕಾರ್ಯದರ್ಶಿ ಲೆನಿಲ್ ಬಾಬು ಇವರುಗಳು, ಪ್ರಸ್ತಾವಿತ ತಿದ್ದುಪಡಿಗೆ ಬಲವಾದ ವಿರೋಧ ವ್ಯಕ್ತಪಡಿಸಿದರು. ʼಈ ಪ್ರಸ್ತಾವಿತ ತಿದ್ದುಪಡಿಯು ವೈಯಕ್ತಿಕ ಜೀವನವನ್ನು ಹೊಂದುವ ಕಾರ್ಮಿಕನ ಮೂಲಭೂತ ಹಕ್ಕಿನ ಮೇಲೆ ದಾಳಿಯನ್ನು ಮಾಡುತ್ತದೆʼ ಎಂದು ಹೇಳಿದರು.
ಇದನ್ನೂ ನೋಡಿ : ಜಾತಿ ಗಣತಿ ವಿರೋಧಿಸಿದ ಮೋದಿಯವರ ಯು ಟರ್ನ್… ಸಮರ್ಥಿಸಿದ ಸಿದ್ದರಾಮಯ್ಯನವರು ಕವಲು ದಾರಿಯಲ್ಲಿ….
ಆರೋಗ್ಯದ ಮೇಲೆ ಪರಿಣಾಮ
ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯದ ಕುರಿತಾದ “ರಾಜ್ಯ ಭಾವನಾತ್ಮಕ ಯೋಗಕ್ಷೇಮ ವರದಿ 2024” (State emotional wellbeing report 2024) ಭಾರತದಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ. 90ರಷ್ಟು ಕಾರ್ಪೊರೇಟ್ ಉದ್ಯೋಗಿಗಳು ಆತಂಕದಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದೆ. ಈ ಅಧ್ಯಯನ ವರದಿಗಳನ್ನು ಸಭೆಯಲ್ಲಿ ಎತ್ತಿ ತೋರಿಸಿದ KITU ಮುಖಂಡರು, ಹೆಚ್ಚಿನ ಅವಧಿಯ ಕೆಲಸದ ಸಮಯದಿಂದಾಗಿ ಐಟಿ ಉದ್ಯೋಗಿಗಳಲ್ಲಿ ಉಂಟಾಗುವ ಆರೋಗ್ಯದ ಮೇಲಿನ ದುಷ್ಪರಿಣಾಮದ ಕುರಿತು ಮಾತನಾಡಿದರು.
ಐಟಿ ವಲಯದಲ್ಲಿ ಅತಿಯಾದ ಕೆಲಸದ ಒತ್ತಡದಿಂದ ಸಾವು, ಆತ್ಮಹತ್ಯೆಗಳು ಸಾಮಾನ್ಯವಾಗುತ್ತಿವೆ. ಇತ್ತೀಚೆಗೆ, ಬೆಂಗಳೂರಿನಲ್ಲಿರುವ ಓಲಾ ಸಂಸ್ಥೆಯ ಕೃತಕ ಬುದ್ಧಿಮತ್ತೆ ಘಟಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಆತ್ಮಹತ್ಯೆಗೆ ಶರಣಾದರು. ಅತಿಯಾದ ಕೆಲಸದ ಒತ್ತಡದಿಂದಾಗಿ ಈ ಪರಿಸ್ಥಿತಿ ಎಂಬುದನ್ನು ಈ ಘಟನೆ ಒತ್ತಿಹೇಳುತ್ತದೆ. ಕೆಲಸದ ಸಮಯವನ್ನು ಹೆಚ್ಚಿಸಿದರೆ ಇಂತಹ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಕರ್ನಾಟಕ ಸರ್ಕಾರವು ತನ್ನ ಕಾರ್ಪೊರೇಟ್ ಯಜಮಾನರನ್ನು ಮೆಚ್ಚಿಸುವ ದಾವಂತದಲ್ಲಿ, ಯಾವುದೇ ವ್ಯಕ್ತಿಯ ಮೂಲಭೂತ ಹಕ್ಕನ್ನು, ಬದುಕುವ ಹಕ್ಕನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ ಎಂದು ಅವರು ಆಪಾದಿಸಿದರು.
ಕಾರ್ಮಿಕರು ಕಾರ್ಪೊರೇಟ್ ಗಳ ಲಾಭವನ್ನು ಹೆಚ್ಚಿಸುವ ಯಂತ್ರಗಳಲ್ಲ
ಬದುಕಲು ಅಗತ್ಯವಿರುವ ವೈಯಕ್ತಿಕ ಮತ್ತು ಸಾಮಾಜಿಕ ಜೀವನವನ್ನು ಬಯಸುವ ಮನುಷ್ಯರೆಂದು ಕಾರ್ಮಿಕರನ್ನು ಗುರುತಿಸಲು ಕರ್ನಾಟಕ ಸರ್ಕಾರವು ಸಿದ್ಧವಿಲ್ಲ ಎಂಬುದನ್ನು ಈ ತಿದ್ದುಪಡಿಯು ತೋರಿಸುತ್ತದೆ. ಬದಲಾಗಿ, ಅದು ಕಾರ್ಮಿಕರನ್ನು ತಾನು ಸೇವೆ ಸಲ್ಲಿಸುವ ಕಾರ್ಪೊರೇಟ್ ಗಳ ಲಾಭವನ್ನು ಹೆಚ್ಚಿಸುವ ಯಂತ್ರಗಳಾಗಿ ಮಾತ್ರ ನೋಡುತ್ತದೆ.
ಹೆಚ್ಚಿದ ಕೆಲಸದ ಸಮಯವು ಉತ್ಪಾದಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಜಗತ್ತು ಒಪ್ಪಿಕೊಳ್ಳಲು ಪ್ರಾರಂಭಿಸುತ್ತಿರುವ ಸಮಯದಲ್ಲಿ ಮತ್ತು ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ಪ್ರತಿಯೊಬ್ಬ ಉದ್ಯೋಗಿಯ ಮೂಲಭೂತ ಹಕ್ಕು ಎಂದು ಗುರುತಿಸಲು ಹೆಚ್ಚಿನ ದೇಶಗಳು ಶಾಸನವನ್ನು ಪರಿಚಯಿಸುತ್ತಿರುವ ಸಮಯದಲ್ಲಿ ಈ ತಿದ್ದುಪಡಿ ಬಂದಿದೆ.
ಕಳೆದ ವರ್ಷವೂ ಪ್ರಯತ್ನ
2024 ರಲ್ಲಿಯೂ ಸಹ, ಕರ್ನಾಟಕ ಸರ್ಕಾರವು ಐಟಿ ವಲಯದಲ್ಲಿ 14 ಗಂಟೆಗಳ ಕೆಲಸದ ದಿನವನ್ನು ಅನುಮತಿಸಲು ತಿದ್ದುಪಡಿಯನ್ನು ಪರಿಚಯಿಸುವ ಮೂಲಕ ಕೆಲಸದ ಸಮಯವನ್ನು ಹೆಚ್ಚಿಸಲು ಪ್ರಯತ್ನಿಸಿತು. ಆದರೆ, ಈ ಕ್ರಮವನ್ನು KITU ದೊಡ್ಡ ಮಟ್ಟದ ಉದ್ಯೋಗಿಗಳ ಬೆಂಬಲದೊಂದಿಗೆ ಯಶಸ್ವಿಯಾಗಿ ವಿರೋಧಿಸಿತು. ಕೆಲಸದ ಸಮಯವನ್ನು ವಿಸ್ತರಿಸಲು ನವೀಕರಿಸಿದ ಒತ್ತಾಯವು ಕಾರ್ಮಿಕರ ಹಕ್ಕುಗಳಿಗಿಂತ ಕಾರ್ಪೊರೇಟ್ ಹಿತಾಸಕ್ತಿಗಳನ್ನು ಪೂರೈಸಲು ಸರ್ಕಾರದ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ.
ಈ ಕ್ರಮವನ್ನು ಮರುಪರಿಶೀಲಿಸುವಂತೆ ಸರ್ಕಾರವನ್ನು KITU ಒತ್ತಾಯಿಸಿದೆ. ತಿದ್ದುಪಡಿಯೊಂದಿಗೆ ಮುಂದುವರಿಯುವ ಯಾವುದೇ ಪ್ರಯತ್ನವನ್ನು ಕರ್ನಾಟಕದ ಐಟಿ/ಐಟಿಇಎಸ್ ವಲಯದಲ್ಲಿ ಕೆಲಸ ಮಾಡುತ್ತಿರುವ 20 ಲಕ್ಷ ಉದ್ಯೋಗಿಗಳಿಗೆ ನೇರ ಸವಾಲು ಎಂದು ನೋಡಲಾಗುತ್ತದೆ ಎಂದು ಎಚ್ಚರಿಸಿದೆ. ತಮ್ಮ ಮೇಲೆ ಆಧುನಿಕ ಗುಲಾಮಗಿರಿಯನ್ನು ಹೇರುವ ಇಂತಹ ಅಮಾನವೀಯ ಪ್ರಯತ್ನವನ್ನು ವಿರೋಧಿಸಲು ಎಲ್ಲಾ ಐಟಿ/ಐಟಿಇಎಸ್ ಉದ್ಯೋಗಿಗಳು ಒಗ್ಗೂಡಿ ಒಟ್ಟಾಗಿ ನಿಲ್ಲಬೇಕು ಮತ್ತು ಇಡೀ ಕಾರ್ಮಿಕ ವರ್ಗ ರಾಜ್ಯ ಸರ್ಕಾರದ ಈ ಕ್ರಮವನ್ನು ವಿರೋಧಿಸಬೇಕು ಎಂದು ಕರೆ ನೀಡಿದೆ.
ಇದನ್ನೂ ಓದಿ : “ಪ್ರತಿ ಪೀಳಿಗೆಯೂ ತನ್ನದೇ ಆದ ತುರ್ತು ಪರಿಸ್ಥಿತಿಯನ್ನು ಎದುರಿಸಲೇಬೇಕೆ?”: ಪ್ರಬೀರ್ ಪುರಕಾಯಸ್ತ
