ಐ.ಎಂ.ಎಫ್ ಭಾರತದ ಜಿಡಿಪಿ ಗಣನೆ ವ್ಯವ್ಸಸ್ಥೆಗೆ “ಸಿ” ಗ್ರೇಡ್ ನೀಡಿದೆ. “ನೋ ಡೇಟಾ ಅವೈಲಬಲ್”(ಎನ್‌ಡಿಎ) ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪಿ.ಸಿ.ಮಹಾಲನೋಬಿಸ್ ತಳಹದಿ ಹಾಕಿಕೊಟ್ಟಿದ್ದ ಸಾಂಖ್ಯಿಕ ವ್ಯವಸ್ಥೆಯನ್ನು ಹಾಳುಗೆಡವಲಾಗಿದೆ. ಅಸಂಘಟಿತ ವಲಯದ ಆರ್ಥಿಕತೆಯ ಸರಕು-ಸೇವೆಯ ವಿವರಗಳನ್ನು ಕಲೆಹಾಕುವ ವ್ಯವಸ್ಥೆಯ ಕೊರತೆಯಿಂದಾಗಿ ಅದರ ಊಹೆಯ ವಿಧಾನದಲ್ಲಿರುವ ಉತ್ಪ್ರೇಕ್ಷೆ, 12 ವರ್ಷ ಹಳೆಯ ಮೂಲ ವರ್ಷ, ಸಗಟು ಬೆಲೆ ಸೂಚ್ಯಂಕದ ಬದಲು ಗ್ರಾಹಕ ಬೆಲೆಯ ಸೂಚ್ಯಂಕದ ಮೇಲೆ ಅವಲಂಬನೆ – ಇವೆಲ್ಲ ಐ.ಎಂ.ಎಫ್ ನ ‘ಸಿ’ ಗ್ರೇಡ್ ಗೆ ಕಾರಣವಾಗಿರಬಹುದು. ಹಾಗಾಗಿ ಎರಡನೆಯ ತ್ರೈಮಾಸಿಕದಲ್ಲಿ ಸರಕಾರ ಘೋಷಿಸಿರುವ ಶೇ. 8.7 ಜಿಡಿಪಿ ಬೆಳವಣಿಗೆ ದರ ಸಹ ನಂಬಲರ್ಹವಲ್ಲ! ಜಿಡಿಪಿ ಎನ್ನುವುದು ಕಾರ್ಪೊರೇಟ್-ಸ್ನೇಹಿ ಆರ್ಥಿಕ ಸೂಚಿಯೇ ವಿನಾ ಜನರ ಬದುಕಿನ ಸಮೃದ್ಧತೆಯ ಸೂಚಿಯಲ್ಲ. ಆದರೆ ಅದರ ಲೆಕ್ಕಾಚಾರವೂ ವಸ್ತ್ತುನಿಷ್ಟವಾಗಿಲ್ಲ ವಿಶ್ವಾಸಾರ್ಹವಾಗಿಲ್ಲ ಎಂದು ಆರ್ಥಿಕ ತಜ್ಞರು ಹೇಳುತ್ತಿರುವುದು ಆತಂಕಕಾರಿ. ಆದರೆ ಜಿಡಿಪಿಯೇ ಅಭಿವೃದ್ಧಿಯಲ್ಲ ಎಂಬುದನ್ನು ಸಹ ನಾವು ಮನಗಾಣಬೇಕು. ಭಾರತ
-ಪ್ರೊ. ಟಿ. ಆರ್. ಚಂದ್ರಶೇಖರ
ಐ.ಎಂ.ಎಫ್ (IMF ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ) ಭಾರತದ ಜಿಡಿಪಿ ಗಣನೆ ವ್ಯವ್ಸಸ್ಥೆಗೆ “ಸಿ” ಗ್ರೇಡ್ ನೀಡಿದೆ. ಜಿಡಿಪಿ ಬಗೆಗಿನ ಲೆಕ್ಕಾಚಾರದ ಸಮಸ್ಯೆಯು 2013-14ರ ನಂತರ ಉಲ್ಭಣಗೊಂಡಿದೆ. ಜಗತ್ತಿನಲ್ಲಿ ಭಾರತದ ಸಾಂಖ್ಯಿಕ ವ್ಯವಸ್ಥೆಯ ಬಗ್ಗೆ ಒಳ್ಳೆಯ ಹೆಸರಿತ್ತು ಮತ್ತು ವಿಶ್ವಾಸಾರ್ಹ ಗುಣಮಟ್ಟವು ಅದಕ್ಕಿತ್ತು. ಆದರೆ “ನೋ ಡೇಟಾ ಅವೈಲಬಲ್”(ಎನ್‌ಡಿಎ) ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಪಿ. ಸಿ. ಮಹಾಲನೋಬಿಸ್ ತಳಹದಿ ಹಾಕಿಕೊಟ್ಟಿದ್ದ ಸಾಂಖ್ಯಿಕ ವ್ಯವಸ್ಥೆಯನ್ನು ಹಾಳುಗೆಡವಲಾಗಿದೆ. ನಮ್ಮ ಜಿಡಿಪಿ ಅಂಕಿಸಂಖ್ಯೆಗಳ ಬಗ್ಗೆ ಜಗತ್ತಿನಲ್ಲಿ ವಿಶ್ವಾಸಾರ್ಹತೆ ಕುಸಿದುಹೋಗಿದೆ. ಯಾವುದೇ ಅಧ್ಯಯನ ವರದಿ ಅಥವಾ ಸಮೀಕ್ಷೆಯ ಫಲಿತಾಂಶವು ಸರ್ಕಾರಕ್ಕೆ ಪಥ್ಯವಾಗದಿದ್ದರೆ ಅದನ್ನು ಮುಚ್ಚಿಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಉದಾ: ಎನ್.ಎಫ್.ಎಚ್.ಎಸ್ 5 ನೆಯ ಸುತ್ತಿನ (2019-2021)ವರದಿಯು ದೇಶದಲ್ಲಿ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಅನಿಮಿಯ 2015-16ರ ನಂತರ ಏರಿಕೆಯಾಗುತ್ತಿದೆ ಎಂಬ ಫಲಿತಾಂಶವನ್ನು ತೋರಿಸಿದಾಗ ಅದರ ಮುಖ್ಯಸ್ಥರಾಗಿದ್ದ ಪ್ರಸಿದ್ಧ ಜನಸಂಖ್ಯಾಶಾಸ್ತ್ರಜ್ಞ ಕೆ.ಎಸ್.ಜೇಮ್ಸ್ ಅವರನ್ನು ಅಮಾನತು ಗೊಳಿಸಲಾಯಿತು. ಮತ್ತು 2019-20ರಲ್ಲಿ ರಾಷ್ಟ್ರೀಯ ಸಾಂಖ್ಯಿಕ ಆಯೋಗದ ವರದಿಯಲ್ಲಿ ಇಂದಿನ ನಿರುದ್ಯೋಗವು ಕಳೆದ 45 ವರ್ಷಗಳಲ್ಲಿಯೇ ಅತ್ಯಧಿಕವಾಗಿದೆ ಎಂಬ ಫಲಿತಾಂಶ ಬಂದಾಗ ಆ ವರದಿಯನ್ನು ಸರ್ಕಾರ ಪ್ರಕಟಿಸಲಿಲ್ಲ. ಭಾರತ
ವಿಶ್ವ ಬ್ಯಾಂಕು ತನ್ನ ಒಂದು ವರದಿಯಲ್ಲಿ ಭಾರತದ ಒಟ್ಟು ನಿರುದ್ಯೋಗಿಗಳಲ್ಲಿ ಶೇ. 80 ರಷ್ಟು ಯುವಕ-ಯುವತಿಯರಿದ್ದಾರೆ ಎಂದು ಘೋಷಿಸಿದಾಗ ಅದರ ಗಣನೆ ವಿಧಾನ ತಪ್ಪು ಎಂದು ಅದನ್ನು ತಳ್ಳಿಹಾಕಿತು. ಇದೀಗ ಭಾರತದ ಜಿಡಿಪಿ ಲೆಕ್ಕಾಚಾರಕ್ಕೆ ಐ.ಎಂ.ಎಫ್ “ಸಿ” ಗ್ರೇಡ್ ನೀಡಿದೆ. ಜಗತ್ತಿನಲ್ಲಿಯೇ ನಮ್ಮದು ಮೂರನೆಯ – ನಾಲ್ಕನೆಯ ಬೃಹತ್ ಆರ್ಥಿಕತೆ ಎಂದು ಹೆಮ್ಮೆ ಪಟ್ಟುಕೊಳ್ಳುತ್ತಿರುವಾಗ ಅದರ ವಿಶ್ವಾಸಾರ್ಹತೆಯ ಬಗ್ಗೆಯೇ ಈಗ ಅನುಮಾನಗಳು ವ್ಯಕ್ತವಾಗುತ್ರಿವೆ. ಇದೇನು ಎಡಪಂಥೀಯ ಅರ್ಥಶಾಸ್ತ್ರಜ್ಞರ ಅಭಿಪ್ರಾಯವಲ್ಲ. ಎಡಪಂಥಿಯತೆಯ ಬಗ್ಗೆ ಅಷ್ಟೇನು ಒಲವಿಲ್ಲದ ಐ.ಎಂ.ಎಫ್ ಈಗ ಭಾರತದ ಆರ್ಥಿಕತೆಯ ಬೆಳವಣಿಗೆಯ ಲೆಕ್ಕಾಚಾರದ ಬಗ್ಗೆ ತಪರಾಕಿ ನೀಡಿದೆ. ಭಾರತ
ಇದನ್ನೂ ಓದಿ: ಕನ್ನಡ ಕೇವಲ ಒಂದು ಭಾಷೆಯಲ್ಲ ಅದು ಸೊಗಸಾಗಿಸುವ ಆತ್ಮಶಕ್ತಿ : ರಹಮತ್ ತರೀಕೆರೆ
ಅಸಂಘಟಿತ ವಲಯದ ಲೆಕ್ಕಾಚಾರ ಬರಿಯ ಊಹೆ
ದೇಶದ ಒಂದು ವರ್ಷದ ಒಟ್ಟು ಸರಕು-ಸೇವೆಯ ಹಣಕಾಸು ಮೌಲ್ಯವೇ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ). ಸರಕು-ಸೇವೆಗಳ ಹಣಕಾಸು ಮೌಲ್ಯವನ್ನು ಅವುಗಳ ಬೆಲೆಯನ್ನು ಆಧರಿಸಿ ಲೆಕ್ಕ ಹಾಕಲಾಗುತ್ತದೆ. ನಮ್ಮ ಆರ್ಥಿಕತೆಯಲ್ಲಿ ಔಪಚಾರಿಕ/ಸಂಘಟಿತ ವಲಯದ ವ್ಯಾಪ್ತಿ ಎಷ್ಟಿದೆಯೋ ಅನೌಪಚಾರಿಕ/ಅಸಂಘಟಿತ ವಲಯದ ವ್ಯಾಪ್ತಿಯೂ ಅಷ್ಟೇ ವಿಸ್ತೃತವಾಗಿದೆ. ಒಂದು ಅಂದಾಜಿನ ಪ್ರಕಾರ ಒಟ್ಟು ಕಾರ್ಮಿಕ ವರ್ಗದಲ್ಲಿ ಶೇ. 95 ರಷ್ಟು ಕಾರ್ಮಿಕರು ಅಸಂಘಟಿತ/ಅನೌಪಚಾರಿಕ ವಲಯದಲ್ಲಿದ್ದಾರೆ. ನಮಗೆಲ್ಲ್ಲ ತಿಳಿದಿರುವಂತೆ ಅನೌಪಚಾರಿಕ ವಲಯವು 2017ರ ಡಿಮಾನಿಟೈಸೇಶನ್‌ನಿಂದಾಗಿ(2016), ಜಿ.ಎಸ್.ಟಿ ಯ ಆರಂಭದಲ್ಲಿನ ಅನುಷ್ಠಾನದ ಅದ್ವಾನದಿಂದಾಗಿ (2017)ಮತ್ತು ಒಕ್ಕೂಟ ಸರ್ಕಾರವು 2013-14 ರಿಂದ ಪಾಲಿಸುತ್ತಿರುವ ಪೂರೈಕೆ-ಪರ ಆರ್ಥಿಕ ನೀತಿಯಿಂದಾಗಿ ಸಂಪೂರ್ಣ ಕುಸಿದು ಹೋಗಿತ್ತು ಮತ್ತು ಈಗಲೂ ಅದು ನಿತ್ರ‍್ರಾಣ ಸ್ಥಿತಿಯಲ್ಲಿದೆ. ಯಾವುದನ್ನು ಸಮಗ್ರ ಬೇಡಿಕೆ ಎನ್ನುತ್ತೇವೆಯೋ ಅದು ನೆಲಕಚ್ಚಿದೆ. ಆರ್ಥಿಕತೆಯ ಜಿಡಿಪಿ ಲೆಕ್ಕಾಚಾರಕ್ಕೆ ಅದು ಔಪಚಾರಿಕ ವಲಯವಾಗಿರಲಿ ಅಥವಾ ಅನೌಪಚಾರಿಕ ವಲಯವಾಗಿರಲಿ, ಅಲ್ಲಿನ ಸರಕು-ಸೇವೆಗಳ ಸಾಂಖ್ಯಿಕ ಮಾಹಿತಿ ಮುಖ್ಯವಾಗಿ ಬೇಕಾಗುತ್ತದೆ.
ಇಲ್ಲಿನ ಸಮಸ್ಯೆಯೆಂದರೆ ಅನೌಪಚಾರಿಕೆ ಆರ್ಥಿಕತೆಯ ಸರಕು-ಸೇವೆಯ ವಿವರಗಳನ್ನು ಅಚ್ಚುಕಟ್ಟಾಗಿ ಕಲೆಹಾಕುವ ವ್ಯವಸ್ಥೆ ನಮ್ಮಲ್ಲಿಲ್ಲ. ಇದರ ಬಗ್ಗೆ ವಾಸ್ತವಿಕ ಅಂಕಿಸಂಖ್ಯೆಗಳು ದೊರೆಯುವುದಿಲ್ಲ. ಆಗ ಅದರ ಲೆಕಾಚಾರವನ್ನು ಕೆಲವು ‘ಊಹೆ’ಗಳ ಮೇಲೆ, ಹಿಂದಿನ ಬೆಳವಣಿಗೆಯ ಪ್ರವೃತ್ತಿಯನ್ನು ಆಧರಿಸಿ ಮತ್ತು ಒಂದು ‘ಅಂದಾಜಿ’ನ ಮೇಲೆ ಲೆಕ್ಕ ಹಾಕಲಾಗುತ್ತದೆ. ಇದರಿಂದಾಗಿ ಅದರ ಲೆಕ್ಕಾಚಾರವು ತೀವ್ರತರನಾದ ‘ಉತ್ರ್ರೇಕ್ಷೆ’ಯಿಂದ ಕೂಡಿರುತ್ತದೆ. ಪ್ರಸಿದ್ಧ ಅರ್ಥವಿಜ್ಞಾನಿ ಅರುಣ್‌ಕುಮಾರ್ (ಜೆಎನ್‌ಯುನ ವಿಶ್ರಾಂತ ಪ್ರಾಧ್ಯಾಪಕ) ಪ್ರಕಾರ “ನಮ್ಮ ಅಧಿಕೃತ ಜಿಡಿಪಿಯು ವಾಸ್ತವಿಕ ಜಿಡಿಪಿಯ ಶೇ. 48 ರಷ್ಟು ಮಾತ್ರವಾಗಿದೆ”. ಯಾವುದನ್ನು ನಾವು ಅಧಿಕೃತ ಆರ್ಥಿಕತೆ ಎನ್ನುತ್ತೇವೆಯೋ ಅದು ವಾಸ್ತವಿಕ ಆರ್ಥಿಕತೆಯ ಅರ್ಧದಷ್ಟು ಮಾತ್ರವಾಗಿದೆ. ಸದ್ಯ ಈ ಅನೌಪಚಾರಿಕ ವಲಯವು ನಿತ್ರಾಣ ಸ್ಥಿತಿಯಲ್ಲಿದೆ ಮತ್ತು ಕೋವಿಡ್ ನಂತರದ ಚೇತರಿಕೆಯೂ ಕೂಡ ಈಗ ಮಂದವಾಗಿದೆ. ಜಿಎಸ್‌ಟಿ ಅನೌಪಚಾರಿಕ ವ್ಯಾಪಾರ ವಲಯವನ್ನು ಕೊಂದು ಹಾಕಿದೆ. ಆದರೆ ಬೆಳವಣಿಗೆಯನ್ನು ಸಂಘಟಿತ ವಲಯದ ಬೆಳವಣಿಗೆ ಪ್ರವೃತ್ತಿಯನ್ನು ಆಧಾರವಾಗಿ ಇಟ್ಟುಕೊಂಡು ಅಸಂಘಟಿತ ವಲಯದ ಉತ್ಪನ್ನವನ್ನು ಲೆಕ್ಕಾಚಾರ ಮಾಡುವುದರಿಂದ ಜಿಡಿಪಿಯು ಉತ್ಪೇಕ್ಷಿತ ಮಟ್ಟದಲ್ಲಿದೆ ಮತ್ತು ಇದು ವಿಶ್ವಾಸಾರ್ಹವಲ್ಲ.

ಕಾರ್ಟೂನ್ ಕೃಪೆ : ಸತೀಶ ಆಚಾರ್ಯ
ಎರಡನೆಯ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇ. 8.7 ನಂಬಲರ್ಹವಲ್ಲ!
ಪ್ರಸಿದ್ಧ ಸಂಖ್ಯಾಶಾಸ್ತ್ರಜ್ಞ ಪ್ರೊಣಬ್ ಸೆನ್ ಪ್ರಕಾರ ಕೃಷಿ ಉತ್ಪನ್ನಗಳ ಬೆಲೆಗಳ ಸೂಚ್ಯಂಕ ಕುಸಿಯುತ್ತವೆ; ಆದರೆ ಕೃಷಿ ಜಿಡಿಪಿ ಬೆಳವಣಿಗೆಯು ಶೇ. 3 ಅಥವಾ ಶೇ. 3.5 ರಷ್ಟಿದೆ. ಅರುಣ್ ಕುಮಾರ್ ಮತ್ತು ಪ್ರೊಣಬ್ ಸೆನ್ ಪ್ರಕಾರ 2025-26ನೆಯ ಸಾಲಿನ 2 ನೆಯ ತ್ರೈಮಾಸಿಕ ಜಿಡಿಪಿ ಬೆಳವಣಿಗೆಯು ಶೇ. 8.7 ರಷ್ಟು ಎಂಬುದನ್ನು ಒಪ್ಪುವುದು ಸಾಧ್ಯವಿಲ್ಲ ಎನ್ನುತ್ತಾರೆ. ಅತ್ಯಂತ ನಿತ್ರಾಣ ಸ್ಥಿತಿಯಲ್ಲಿರುವ ಮತ್ತು ಅದರ ಉತ್ಪನ್ನದ ಸಾಂಖ್ಯಿಕ ಮಾಹಿತಿಯು ಲಭ್ಯವಿಲ್ಲದಿರುವಾಗ 2025ರ 2 ನೆಯ ತ್ರೈಮಾಸಿಕದಲ್ಲಿನ ಜಿಡಿಪಿ ಬೆಳವಣಿಗೆ ಶೇ. 8.7 ಹೇಗೆ ಸಾಧ್ಯ?
ಈ ಜಿಡಿಪಿ ಬೆಳವಣಿಯಲ್ಲಿ ಒಂದು ಚಾಲಕ ಶಕ್ತಿ ಒಟ್ಟು ಉಳಿತಾಯ ಪ್ರಮಾಣ. ಕೌಟುಂಬಿಕ ಉಳಿತಾಯವು 2009-10ರಲ್ಲಿ ಜಿಡಿಪಿಯ ಶೇ. 24.8ರಷ್ಟಿತ್ತು. ಈಗ 2022-23ರಲ್ಲಿ ಅದು ಶೇ. 18.4 ಕ್ಕಿಳಿದಿದೆ. ಒಟ್ಟು ಉಳಿತಾಯದ ಪ್ರಮಾಣವೂ ಇದೇ ಅವಧಿಯಲ್ಲಿ ಜಿಡಿಪಿಯ ಶೇ. 36 ರಿಂದ ಶೇ. 30.2 ಕ್ಕಿಳಿದಿದೆ. ಹಾಗಾದರೆ 2025ರ 2 ನೆಯ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇ. 8.7 ಹೇಗಾಯಿತು? ಇಲ್ಲಿ ಒಂದೋ ಪವಾಡ ನಡೆದಿರಬೇಕು ಅಥವಾ ಜಿಡಿಪಿ ಬೆಳವಣಿಗೆ ಪ್ರಮಾಣವು ಉತ್ಪ್ರೇಕ್ಷಿತವಾಗಿರಬೇಕು.
ಐ.ಎಂ.ಎಫ್ ‘ಸಿ’ ಗ್ರೇಡ್ ಏಕೆ?
ನಮ್ಮ ಜಿಡಿಪಿ ಗಣನೆಗೆ ಐಎಂಎಫ್ ‘ಸಿ’ ಗೇಡ್ ನೀಡಿರುವುದಕ್ಕೆ ನಿಜ ಜಿಡಿಪಿ ಲೆಕ್ಕಾಚಾರದ ಮೂಲ ವರ್ಷವನ್ನು 12-13 ವರ್ಷವಾದರೂ ಬದಲಾಯಿಸದಿರುವುದು ಒಂದು ಕಾರಣವಾಗಿದೆ. ಈಗ ನಿಜ ಜಿಡಿಪಿ ಲೆಕ್ಕಾಚಾರಕ್ಕೆ ಮೂಲ ವರ್ಷ 2011-12. ಕೈಗಾರಿಕಾ ಉತ್ಪನ್ನ ಸೂಚ್ಯಂಕ ಮತ್ತು ಗ್ರಾಹಕ ಬೆಲೆ ಸೂಚ್ಯಂಕಗಳ ಮೂಲ ವರ್ಷವೂ 2011-12. ಮೇಲಾಗಿ ಬೆಲೆಗಳಲ್ಲಿನ ಏರುಪೇರನ್ನು ಹೊಂದಾಣಿಕೆ ಮಾಡಿಕೊಳ್ಳಲು ನಮ್ಮಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿ.ಪಿ.ಐ) ಬಳಸಲಾಗುತ್ತಿದೆಯೇ ವಿನಾ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯೂ.ಪಿ.ಐ) ವನ್ನಲ್ಲ. ಸಿಪಿಐ ಲೆಕ್ಕಾಚಾರದಲ್ಲಿ ಆಹಾರ ಪದಾರ್ಥಗಳಿಗೆ ನೀಡುತ್ತಿರುವ ‘ವೈಟ್’ ಕಡಿತ ಮಾಡಲಾಗಿದೆ. ಇದರಿಂದಾಗಿ ಆರ್ಥಿಕತೆಯಲ್ಲಿನ ಬೆಲೆಗಳ ನಿಜಸ್ಥಿತಿಯನ್ನು ಸಿಪಿಐ ತೋರಿಸುತ್ತಿಲ್ಲ. ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯವು ಬಿಡುಗಡೆ ಮಾಡಿರುವ 2025-26ರ 2 ನೆಯ ತ್ರೈಮಾಸಿಕದ ನಾಮಮಾತ್ರ(ನಾಮಿನಲ್) ಜಿಡಿಪಿ ಬೆಳವಣಿಗೆ ಪ್ರಮಾಣ ಶೇ. 8.7 ಮತ್ತು ನಿಜ ಜಿಡಿಪಿ ಬೆಳವಣಿಗೆ ಪ್ರಮಾಣ ಶೇ. 8.2. ಇದರ ಅರ್ಥ ಆರ್ಥಿಕತೆಯಲ್ಲಿ ಬೆಲೆ ಏರಿಕೆಯು ಶೇ. 0.5 ರಷ್ಟು ಮಾತ್ರವಾಗಿದೆ. ಇದನ್ನು ನಂಬುವುದು ಸಾಧ್ಯವಿಲ್ಲ. ಹಣದುಬ್ಬರವು ಆರ್ಥಿಕತೆಯಲ್ಲಿ ಕೆಳಮಟ್ಟದಲ್ಲಿದೆ ಎಂಬುದನ್ನು ಒಪ್ಪಿಕೊಂಡರೂ ಅದು ಶೇ. 0.5 ರಷ್ಟು ತಳಮಟ್ಟದಲ್ಲಿದೆ ಎಂಬುದು ವಸ್ತುಸ್ಥಿತಿಗೆ ವಿರುದ್ಧವಾದುದಾಗಿದೆ.
ನಮ್ಮ ಜಿಡಿಪಿ ಸಾಂಖ್ಯಿಕ ವ್ಯವಸ್ಥೆಯಲ್ಲಿ ಮತ್ತು ಜಿಡಿಪಿ ಗಣನೆಯಲ್ಲಿ ಹಾಗೂ ಆರ್ಥಿಕತೆಯ ಮೇಲೆ ‘ನಿಗಾವಣೆ’ಯಿಡಲು ಅನೇಕ ಕೊರತೆಗಳು ಇರುವುದರಿಂದ ಐ.ಎಂಎಫ್ ‘ಸಿ’ ಗ್ರೇಡ್ ನೀಡಿದೆ. ಆರ್ಥಿಕ ನೀತಿಯನ್ನು ರೂಪಿಸಲು ಅಗತ್ಯವಾಗಿ ಬೇಕಾಗಿರುವುದು ನಿಖರವಾದ ನಂಬಲರ್ಹವಾದ ಸಾಂಖ್ಯಿಕ ವಿವರಗಳು. ಅವುಗಳ ನಿಖರತೆ ಮತ್ತು ಲಭ್ಯತೆಗಳಲ್ಲಿ ಕೊರತೆಯಿಂದಿದ್ದರೆ ಆರ್ಥಿಕ ಸಮಸ್ಯೆಗಳನ್ನು ನಿರ್ವಹಿಸಲು ಸೂಕ್ತವಾದ ನೀತಿಗಳನ್ನು ರೂಪಿಸುವುದು ಸಾಧ್ಯವಾಗುವುದಿಲ್ಲ. ಉದಾ: ಇಂದು ನಮ್ಮ ಆರ್ಥಿಕತೆಯು ಎದುರಿಸುತ್ತ್ತಿರಿರುವ ಜ್ವಲಂತ ಸಮಸ್ಯೆಯೆಂದರೆ ನಿರುದ್ಯೋಗ. ಸರ್ಕಾರವೇನೋ ಅದನ್ನು ಮುಚ್ಚಿಟ್ಟು ಅದು ಅತ್ಯಂತ ಕೆಳಮಟ್ಟದಲ್ಲಿದೆ ಎಂದು ಸರ್ಕಾರಿ ಉತ್ಪಾದಿತ ವರದಿಗಳನ್ನು-ಸಮೀಕ್ಷೆಗಳ ಮೂಲಕ ಅಂಕಿಅAಶಗಳನ್ನು ಬಿಡುಗಡೆ ಮಾಡುತ್ತಿದೆ. ಆದರೆ ವಸ್ತ್ತುಸ್ಥಿತಿಯು ಆತಂಕಾರಿಯಾಗಿದೆ. ಸಮಸ್ಯೆಯನ್ನು ಸರ್ಕಾರವೆ ನಿರಾಕರಿಸಿದಾಗ-ಒಪ್ಪದಿದ್ದಾಗ ಅದಕ್ಕೆ ಸೂಕ್ತ ನೀತಿ ಅಂಗೀಕರಿಸಿ ಜಾರಿಗೆ ತರುವುದು ಎಂಬುದು ದೂರದ ಕನಸಾಗುತ್ತದೆ.
5 ಟ್ರಿಲಿಯನ್ ಡಾಲರ್ ಜಿಡಿಪಿ ಭ್ರಮೆ!
ಅಭಿವೃದ್ಧಿ ಎಂಬುದು ಜನರ ಬದುಕಿನ ಸಮೃದ್ಧತೆಯೇ ವಿನಾ ಆರ್ಥಿಕತೆಯ ಸಮೃದ್ಧತೆಯಲ್ಲ ಎಂಬುದು ಅಮರ್ತ್ಯ ಸೆನ್ ಅವರ ಪ್ರಸಿದ್ಧ ವ್ಯಾಖ್ಯಾನ. ನಮ್ಮ ಆರ್ಥಿಕತೆಯು ಜಗತ್ತಿನ ಮೂರನೆಯ-ನಾಲ್ಕನೆಯ ಸ್ಥಾನ ಗಳಿಸಿಕೊಳ್ಳಬಹುದು. ಅದರ ಜಿಡಿಪಿಯು ಐದು ಟ್ರಲಿಯನ್ ಡಾಲರಾಗಬಹುದು. ಇದೇನು ಅಸಾಧ್ಯವಾದ ಗುರಿಯೇನಲ್ಲ. ಆದರೆ ಜನರ ಬದುಕಿನ ಸ್ಥಿತಿಗತಿ ಹೇಗಿದೆ? ಒಕ್ಕೂಟ ಸರ್ಕಾರದ ನೀತಿ ಆಯೋಗದ ಬಹು-ಆಯಾಮದ ಬಡತನದ (ಮಲ್ಟಿಡೈಮೆನ್ಷನಲ್ ಪಾವರ್ಟಿ) ವರದಿ ಪ್ರಕಾರ(2019-2021) ದೇಶದಲ್ಲಿ ಬಹುಆಯಾಮ ಬಡವರ ಪ್ರಮಾಣ ಶೇ. 15. ನಮ್ಮ 2025ರ ಜನಸಂಖ್ಯೆ 145 ಕೋಟಿ ಎಂದು ಭಾವಿಸಿದರೆ ‘ಬಹುಆಯಾಮ’ ಬಡವರ ಸಂಖ್ಯೆಯು 21.75 ಕೋಟಿ. ಇಷ್ಟು ಬಡವರ ಆರ್ಥಿಕತೆಯಲ್ಲಿ ಐದು ಟ್ರಲಿಯಮ್ ಡಾಲರ್ ಜಿಡಿಪಿಯ ಅರ್ಥವೇನು? ಇದೇ ವರದಿಯ ಪ್ರಕಾರ ಬಡತನಕ್ಕೆ ಆರೋಗ್ಯ ಕೊರತೆಯ ಆಯಾಮದ ಕೊಡುಗೆ ಶೇ. 43.7 ಮತ್ತು ಶಿಕ್ಷಣ ಆಯಾಮದ ಕೊರತೆಯ ಪ್ರಮಾಣ ಶೇ. 26.35 ಹಾಗೂ ಜೀವನಮಟ್ಟ (ಆರ್ಥಿಕ) ಆಯಾಮದ ಕೊರತೆಯ ಕೊಡುಗೆ ಶೇ. 29.95. ಅಂದರೆ ಬಡತನಕ್ಕೆ ಕಾರಣವಾಗಿರುವ ಅಂಶಗಳಲ್ಲಿ ವರಮಾನೇತರ ಸೂಚಿಗಳು ಪ್ರಮಾಣ ಶೇ. 70.05 ರಷ್ಟಿದ್ದರೆ ಆರ್ಥಿಕ ಅಂಶಗಳ ಸೂಚಿಯ ಕೊಡುಗೆ ಶೇ. 29.95.
ನಮಗೆ ಅಗತ್ಯವಾಗಿರುವುದು ಐದು ಟ್ರಲಿಯನ್ ಡಾಲರ್ ಜಿಡಿಪಿಯಲ್ಲ. ಐಎಂಎಪ್ ವರದಿಯ ಪ್ರಕಾರ 2025ರಲ್ಲಿ ಭಾರತದ ಪಿಪಿಪಿ ಡಾಲರ್‌ನಲ್ಲಿ ತಲಾ ವರಮಾನ 2820 ಡಾಲರ್. ನಮ್ಮ ಪಕ್ಕದ ಬಡ ಬಾಂಗ್ಲಾದೇಶದ ಪಿಪಿಪಿ ತಲಾ ಜಿಡಿಪಿ 2730 ಡಾಲರ್. ಸ್ವಾತಂತ್ರ್ಯ ಪಡೆದ 54 ವರ್ಷಗಳಲ್ಲಿ ಬಾಂಗ್ಲಾದೇಶವು ತಲಾ ಜಿಡಿಪಿಯಲ್ಲಿ ಅದ್ಭುತವಾದ ಸಾಧನೆ ಮಾಡಿದೆ. ಆದರೆ ಸ್ವಾತಂತ್ರ್ಯ ಪಡೆದು 75 ವರ್ಷಗಳಾದರೂ ನಮ್ಮ ತಲಾ ಜಿಡಿಪಿಯು ಬಾಂಗ್ಲಾದೇಶಕ್ಕಿಂತ ಕೇವಲ 90 ಡಾಲರ್ ಮುಂದಿದೆ. ನಮ್ಮ ಸರ್ಕಾರವು ಜಿಡಿಪಿ ಭ್ರಮೆಯಿಂದ ಹೊರಬರಬೇಕು. ಬಡತನ, ಶಿಕ್ಷಣ, ನಿರುದ್ಯೋಗ, ಹಸಿವು, ಆಹಾರ ಅಭದ್ರತೆ, ಅಪೌಷ್ಟಿಕತೆ, ಕೂಲಿ, ಕುಡಿಯುವ ನೀರು ಮುಂತಾದವುಗಳು ಆರ್ಥಿಕ ನೀತಿಯಲ್ಲಿ ಮುಖ್ಯವಾಗಬೇಕೇ ವಿನಾ ಐದು ಟ್ರಲಿಯನ್ ಡಾಲರ್ ಜಿಡಿಪಿಯಲ್ಲ. ಭಾರತ
ಜಿಡಿಪಿ ಎನ್ನುವುದು ಕಾರ್ಪೊರೇಟ್-ಸ್ನೇಹಿ ಆರ್ಥಿಕ ಸೂಚಿಯೇ ವಿನಾ ಜನರ ಬದುಕಿನ ಸಮೃದ್ಧತೆಯ ಸೂಚಿಯಲ್ಲ. ಆದರೆ ಅದರ ಲೆಕ್ಕಾಚಾರವೂ ವಸ್ತ್ತುನಿಷ್ಟವಾಗಿಲ್ಲ, ವಿಶ್ವಾಸಾರ್ಹವಾಗಿಲ್ಲ ಎಂದು ಆರ್ಥಿಕ ತಜ್ಞರು ಹೇಳುತಿದ್ದಾರೆ. ಜಿಡಿಪಿಯ ಬೆಳವಣಿಗೆಯು ಉತ್ತಮವಾಗಿರಬೇಕು. ಆದರೆ ಜಿಡಿಪಿಯೇ ಅಭಿವೃದ್ಧಿಯಲ್ಲ ಎಂಬುದನ್ನು ನಾವು ಮನಗಾಣಬೇಕು.
ಇದನ್ನೂ ನೋಡಿ: ಅಂಗನವಾಡಿ, ಆಶಾ, ಬಿಸಿಯೂಟ ನೌಕರರ ಹೋರಾಟJanashakthi Media
