ನವದೆಹಲಿ: ಕೋವಿಡ್ ರೋಗದ ಕುರಿತು ಸುಳ್ಳು ಸುದ್ದಿಗಳನ್ನು ತಡೆಯಬೇಕು ಹಾಗೂ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಯನಿರ್ವಹಿಸುತ್ತಿರುವ ವೈದ್ಯರ ಮೇಲೆ ನಡೆಯುತ್ತಿರುವ ದಾಳಿಗಳನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕೆಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆಗ್ರಹಿಸಿದೆ.
ಕೋವಿಡ್ ವಿರುದ್ಧದ ಹೋರಾಟದಲ್ಲಿ ದೇಶದಲ್ಲಿ 1,400ಕ್ಕೂ ಹೆಚ್ಚು ವೈದ್ಯರನ್ನು ಕಳೆದುಕೊಂಡಿದ್ದೇವೆ ಎಂದು ವಿವರಿಸಿರುವ ಐಎಂಎ, ಇದೇ ಸಂದರ್ಭದಲ್ಲಿ ಕೆಲ ಜನರು ಲಸಿಕೆಗಳ ಕುರಿತು ತಪ್ಪು ಮಾಹಿತಿಗಳನ್ನು ಹರಡಲು ಮುಂದಾಗುತ್ತಿದ್ದಾರೆ. ಈ ರೀತಿಯ ಘಟನೆಗಳಿಂದಾಗಿ ತೀವ್ರ ನೋವುಂಟಾಗಿದೆ ಎಂದು ಐಎಂಎ ತಿಳಿಸಿದೆ.
IMA written Letter to Honourable Prime Minister of India.
dt. 07.06.2021 pic.twitter.com/JKkQ4HpZdr— Indian Medical Association (@IMAIndiaOrg) June 7, 2021
ಇಂತಹವರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯಿದೆ, 1987, ಐಪಿಸಿ ಹಾಗೂ ವಿಪತ್ತು ನಿರ್ವಹಣಾ ಕಾಯಿದೆ, 2005 ಅಡಿಯಲ್ಲಿ ಕಠಿಣವಾದ ಕ್ರಮಕೈಗೊಳ್ಳಬೇಕು ಎಂದು ಸಂಸ್ಥೆಯೂ ಆಗ್ರಹಿಸಿದೆ.
ಇದನ್ನು ಓದಿ: ಕೋವಿಡ್ ದತ್ತಾಂಶದ ನಿಖರ ವರದಿಯನ್ನು ಕೇಂದ್ರ ಮುಚ್ಚಿಡುತ್ತಿದೆ: ಪ್ರಿಯಾಂಕಾ ಗಾಂಧಿ
ಕರ್ತವ್ಯ ನಿರತ ವೈದ್ಯರು ಮತ್ತಿತರ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವ ಜನರಿಗೆ 10 ವರ್ಷಗಳ ಕಾಲ ಜೈಲಿಗೆ ಕಳುಹಿಸುವಂತಹ ಆರೋಗ್ಯ ಸೇವೆಗಳ ಸಿಬ್ಬಂದಿ ಮತ್ತು ಕ್ಲಿನಿಕಲ್ ಸ್ಥಾಪನೆಗಳು (ಹಿಂಸಾಚಾರ ಮತ್ತು ಆಸ್ತಿಗೆ ಹಾನಿ) ಮಸೂದೆ 2019 ತಕ್ಷಣವೇ ಪ್ರಕಟಿಸಬೇಕು. ಇಂತಹ ಹೀನ ಕೃತ್ಯಗಳಲ್ಲಿ ತೊಡಗಿರುವವರನ್ನು ಶಿಕ್ಷೆಗೆ ಗುರಿಪಡಿಸಬೇಕು ಆದ್ದರಿಂದ ಸಮಾಜ ವಿರೋಧಿ ಶಕ್ತಿಗಳು ಆರೋಗ್ಯ ಸಿಬ್ಬಂದಿ ಮೇಲೆ ದಾಳಿಯಲ್ಲಿ ತೊಡಗಿಸಿಕೊಳ್ಳುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿದೆ ಎಂದು ಐಎಂಎ ಹೇಳಿದೆ.
ಇತ್ತೀಚೆಗೆ ಅಸ್ಸಾಂನಲ್ಲಿ ನಡೆದ ವೈದ್ಯರೊಬ್ಬರ ಮೇಲಿನ ಹಲ್ಲೆ ಕುರಿತು ಉಲ್ಲೇಖಿಸಿದ ಐಎಂಎ, ಪ್ರಧಾನಿ ತಕ್ಷಣ ಮಧ್ಯಪ್ರವೇಶಿಸಿ ಇಂತಹ ಘಟನೆಗಳನ್ನು ತಡೆಯಬೇಕು ಎಂದು ಹೇಳಿದೆ. ಈಗಿರುವ ಲಸಿಕೆ ನೀತಿಯ ಬದಲು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಒದಗಿಸಲು ಸರಕಾರ ಶ್ರಮಿಸಬೇಕು ಎಂದೂ ಐಎಂಎ ಆಗ್ರಹಿಸಿದೆ.
ಇದನ್ನು ಓದಿ: ಲಸಿಕೆ ಪೂರೈಕೆಯನ್ನು ತುರ್ತಾಗಿ ವಿಸ್ತರಿಸಬೇಕಾಗಿದೆ ಮತ್ತು ಅದು ಸಾಧ್ಯವಿದೆ-ಜನವಿಜ್ಞಾನ ಜಾಲದ ಹೇಳಿಕೆ
“ನಿಮ್ಮಂತಹ ಬಲಿಷ್ಠ ನಾಯಕರು ಈ ಲಸಿಕೆ ಕಾರ್ಯಕ್ರಮವನ್ನು ಮುನ್ನಡೆಸಿದಾಗ ಅದರ ಪೂರ್ಣ ಪ್ರಯೋಜನ ಎಲ್ಲರಿಗೂ ತಲುಪುತ್ತದೆ ಎಂದು ನಾವು ನಂಬಿದ್ದೇವೆ” ಎಂದು ಐಎಂಎ ಸಂಸ್ಥೆ ಹೇಳಿದೆ.
“ಕೋವಿಡ್ ರೋಗಿಗಳನ್ನು ಕಾಡುತ್ತಿರುವ ಮ್ಯುಕೋರ್ಮೈಕೋಸಿಸ್ ಫಂಗಲ್ ಸೋಂಕಿಗೆ ಔಷಧಿ ಸುಲಭವಾಗಿ ದೊರೆಯುತ್ತಿಲ್ಲ, ಈ ಸೋಂಕಿನ ಚಿಕಿತ್ಸೆಗೆ ಪ್ರತ್ಯೇಕ ಸಂಶೋಧನಾ ಘಟಕ ಸ್ಥಾಪಿಸಿ ಚಿಕಿತ್ಸೆಗಾಗಿ ಸೂಕ್ತ ಮಾರ್ಗಸೂಚಿಗಳು ಲಭಿಸುವಂತೆ ಮಾಡಬೇಕು” ಎಂದೂ ಐಎಂಎ ವಿನಂತಿಸಿದೆ.
ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಕೋವಿಡ್-ಸಾಂಕ್ರಾಮಿಕದಿಂದ ಮೃತಪಟ್ಟ ವೈದ್ಯರ ಕುಟುಂಬಗಳಿಗೆ ವಿಮೆಯನ್ನು ನೀಡುತ್ತಿರುವುದಕ್ಕೆ ಪ್ರಧಾನಿಗೆ ಅಭಿನಂದನೆ ಸಲ್ಲಿಸಿರುವ ಐಎಂಎ, ಯೋಜನೆ ಅನುಷ್ಠಾನದಲ್ಲಿನ ಅಡೆತಡೆಯಿಂದಾಗಿ ಮೊದಲ ಅಲೆಯಲ್ಲಿ ಮೃತಪಟ್ಟ 754 ವೈದ್ಯರ ಪೈಕಿ, ಕೇವಲ 168 ವೈದ್ಯರು ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಸಾಧ್ಯವಾಗಿದೆ ಎಂದು ಪ್ರಧಾನಿಯ ಗಮನಕ್ಕೆ ತರಲಾಗಿದೆ.