ನಕಲಿ ದಾಖಲೆ ಸೃಷ್ಟಿಸಿ ಸೈನಿಕರಲ್ಲದವರಿಗೂ ಮಾಜಿ ಸೈನಿಕರ ಗೃಹ ನಿರ್ಮಾಣ ಸಂಘದಲ್ಲಿ ನಿವೇಶನ ಹಂಚುವ ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಮತ್ತೊಂದು ಗೋಲ್ ಮಾಲ್ ಬೆಳಕಿಗೆ ಬಂದಿದೆ.
ಅನರ್ಹರಿಗೆ ಕೂಡ ನಕಲಿ ದಾಖಲೆ ಸೃಷ್ಟಿಸಿ ನಿವೇಶನ ನೀಡಿರುವ ಅಕ್ರಮದ ಹಿಂದೆ ಸೈನಿಕರ ಗೃಹ ನಿರ್ಮಾಣ ಸಂಘದ ಮಾಜಿ ನಿರ್ದೇಶಕರು ಹಾಗೂ ಬಿಡಿಎ ಅಧಿಕಾರಿಗಳು ಶಾಮೀಲಾಗಿದ್ದು, ಎಫ್ ಐಆರ್ ದಾಖಲಾಗಿದೆ.
ಸಂಘದ ಅಧ್ಯಕ್ಷ ವಿಶ್ವರೂಪಾಚಾರ್, ಉಪಾಧ್ಯಕ್ಷ ಬಿ.ಎನ್. ಸೋಮಸುಂದರ್, ಶಿವಕುಮಾರ್, ನಿರ್ದೇಶಕ ನಾಗ ಭೂಷನ್, ಸುಬ್ರಹ್ಮಣ್ಯ, ಪ್ರಸಾದ್, ಬಿಡಿಎ ದಕ್ಷಿಣ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಾಂಜನೇಯಸ್ವಾಮಿ, ಸಹಕಾರ ಸೊಸೈಟಿ ಜಂಟಿ ರಿಜಿಸ್ಟ್ರಾರ್ ಪಾಂಡುರಂಗ ಗರ್ಗ ಸೇರಿ 13 ಮಂದಿ ಮೇಲೆ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಸಂಘದಲ್ಲಿ 2460 ಸದಸ್ಯರ ಪೈಕಿ 5 ಮಂದಿ ಮಾತ್ರ ಮಾಜಿ ಸೈನಿಕರಾಗಿದ್ದು, ಉಳಿದ 2455 ಮಂದಿ ಸೈನಿಕರೇ ಅಲ್ಲ. ಅಂದರೆ ಶೇ.99ರಷ್ಟು ಸದಸ್ಯರು ಅನರ್ಹರಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಮಾಜಿ ಸೈನಿಕರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ 1988 -92 ಸಾಲಿನವರೆಗೆ ಸೈಟ್ ಹಂಚಿಕೆ ಮಾಡಲಾಗಿದ್ದು, ಬೆಂಗಳೂರಿನ ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿ ಹೊಸಹಳ್ಳಿ ಗ್ರಾಮದಲ್ಲಿ 41.07 ಜಮೀನು ಕಂದಾಯ ಇಲಾಖೆಯಿಂದ ಮಂಜೂರು ಮಾಡಲಾಗಿದೆ.