- ತನಿಖೆ ಕಾಂಗ್ರೆಸ್ ಪಕ್ಷದ ವಿರುದ್ಧ ಅಲ್ಲ ತಪ್ಪುಮಾಡಿದವರ ವಿರುದ್ಧ
- ಕಾಂಗ್ರೆಸ್ನವರಿಗೆ ಸಂಬಂಧಿಸಿದ ಪ್ರಕರಣ ಅಲ್ಲ. ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಪ್ರಕರಣ
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಆಸ್ತಿಯನ್ನು ಒಂದು ಕುಟುಂಬ ಕಬಳಿಸುತ್ತಿರುವ ಆರೋಪದ ಕುರಿತು ತನಿಖೆ ನಡೆಯುತ್ತಿದೆ. ಪಕ್ಷದ ನಾಯಕರ ಬಂಧನದ ಭೀತಿಯಿಂದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ ಟೀಕಿಸಿದರು
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಜಾರಿ ನಿರ್ದೇಶನಾಲಯ (ಇ.ಡಿ) ಕಾಂಗ್ರೆಸ್ ಪಕ್ಷದ ವಿರುದ್ಧ ತನಿಖೆ ನಡೆಸುತ್ತಿಲ್ಲ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ತನಿಖೆ ನಡೆಸುತ್ತಿದೆ. ನ್ಯಾಷನಲ್ ಹೆರಾಲ್ಡ್ ಆಸ್ತಿಯ ಮೇಲೆ ಒಂದು ಕುಟುಂಬದ ಹಿಡಿತದ ಕುರಿತು ತನಿಖೆ ನಡೆಯುತ್ತಿದೆ’ ಎಂದರು.
ಸ್ವಾತಂತ್ರ್ಯಕ್ಕೂ ಮುನ್ನ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಆರಂಭವಾಗಿದೆ. ಸ್ವಾತಂತ್ರ್ಯ ಯೋಧರು ಹಣ ಹಾಕಿ ಪ್ರಾರಂಭವಾದ ಪತ್ರಿಕೆಗೆ ಅಂದಿನ ಸರ್ಕಾರಗಳು ಭೂಮಿ ನೀಡಿದ್ದವು. ಪತ್ರಿಕೆಯ ಭೂ ಕಬಳಿಕೆಗೆ ಸೋನಿಯಾ, ರಾಹುಲ್ ಮುಂದಾಗಿದ್ದಾರೆ. ಇದು ಕಾಂಗ್ರೆಸ್ನವರಿಗೆ ಸಂಬಂಧಿಸಿದ ಪ್ರಕರಣ ಅಲ್ಲ. ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಇಡಿ, ಸಿಬಿಐ ಇದ್ದವು. ತಪ್ಪು ಮಾಡಿದವರಿಗೆ ನೋಟಿಸ್ ನೀಡುವುದು ಸಹಜ ಪ್ರಕ್ರಿಯೆ. ಇದು ಇಟಲಿ ಅಲ್ಲ ಭಾರತ, ಇಲ್ಲಿ ರಾಜಕೀಯ ಮಾಡಬೇಡಿ ಎಂದು ವಾಗ್ದಾಳಿ ಮಾಡಿದ್ದಾರೆ.
ಇದರಲ್ಲಿ ಸರ್ಕಾರದ ಪಾತ್ರದ ಪ್ರಶ್ನೆ ಬರಲ್ಲ. ದೂರು ಬಂದಿದೆ ತನಿಖೆ ಆಗತ್ತಿದೆ ಕಾನೂನು ಅಡಿಯಲ್ಲಿ ನೋಟಿಸ್ ನೀಡಿ ತನಿಖೆ ಮಾಡಲಾಗುತ್ತಿದೆ. ಜನಸಾಮಾನ್ಯರ ಮೇಲೆ ಇಡಿ ಕೇಸ್ ಸಾಕಷ್ಟು ಇದೆ. ಅವರು ಪ್ರತಿಭಟನೆ ಮಾಡುತ್ತಾರಾ? ನಿರಾಪರಾಧಿ ಆದರೆ ನ್ಯಾಯಾಲಯ ಇದೆ ಅಲ್ಲಿ ನ್ಯಾಯ ಸಿಗುತ್ತದೆ ಎಂದರು.