ಇದ್ರೀಷ್‌ ಪಾಷಾ ಸಾವು ಪ್ರಕರಣ : ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ರಾಜ್ಯವ್ಯಾಪಿ ಪ್ರತಿಭಟನೆ

ಬೆಂಗಳೂರು : ಇದ್ರೀಷ್‌ ಪಾಷಾ ಹಂತಕರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಹಾಗೂ ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸಿಪಿಐಎಂ ನಿಂದ ರಾಜ್ಯವ್ಯಾಪಿ ಪ್ರತಿಭಟನೆ ನಡೆದಿದೆ. ಮಂಡ್ಯ,  ಮೈಸೂರು, ವಿಜಯನಗರ, ಬಳ್ಳಾರಿ ಸೇರಿದಂತೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸುವ ಮೂಲಕ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.

ಕನಕಪುರದ ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಮುಂಜಾನೆ ಜಾನುವಾರು ಸಾಗಟ ವಾಹನದ ಸಹಾಯಕ ಚಾಲಕ (39) ಎಂಬಾತನನ್ನು ಹತ್ಯೆಗೈದ ಆರೋಪಕ್ಕೆ ಸಂಬಂಧಿಸಿದಂತೆ ಇದ್ರೀಷ್‌ ಪಾಷಾ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ನೆರವು ನೀಡಬೇಕೆಂಬ ಕೂಗು ರಾಜ್ಯದಾದ್ಯಂತ ಸಾಕಷ್ಟು ಕೇಳಿ ಬರುತ್ತಿರುವ ಹಿನ್ನಲೆ ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ಪಕ್ಷವು ಸಹ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಕಾನೂನಾತ್ಮಕವಾಗಿ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ.

ಈ ಕುರಿತು ಮಂಡ್ಯ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.‌ ಕೃಷ್ಣೇಗೌಡ ಪತ್ರಿಕಾ ಮಾತನಾಡಿ ಕನಕಪುರ ತಾಲೂಕಿನ ಸಾತನೂರು ಬಳಿ ಪುನೀತ್ ಕೆರೆಹಳ್ಳಿ ನೇತೃತ್ವದ ಗೋರಕ್ಷಣೆಯ ಮುಸುಕಿನ ಕೊಲೆಗಡುಕ ಗೂಂಡಾ ಪಡೆ ಇದ್ರಿಶ್ ಪಾಷಾ ಎಂಬ ಬಡ ಕಾರ್ಮಿಕನನ್ನು ಬಲವಂತವಾಗಿ ಕಾಂಪೌಂಡ್ ಒಳಗೆ ಎಳೆದೊಯ್ದು ವಿದ್ಯುತ್ ಶಾಕ್ ಮೂಲಕ ಚಿತ್ರಹಿಂಸೆ ನೀಡಿ ಕಗ್ಗೊಲೆಗೈದಿದೆ. ಈ ಹಿಂದುತ್ವವಾದಿ ಮತಾಂಧರ ಕೊಲೆಗಡುಕತನವನ್ನು ಸಿಪಿಐಎಂ ಬಲವಾಗಿ ಖಂಡಿಸುತ್ತದೆ. ಕೊಲೆಗಡುಕರನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ ಇವರಿಗೆ ಬೆಂಬಲವಾಗಿರುವ ವ್ಯಕ್ತಿಗಳು ಮತ್ತು ಶಕ್ತಿಗಳನ್ನು ಬಂಧಿಸಿ ಕಾನೂನಿನ ಕ್ರಮಕ್ಕೆ ಒಳಪಡಿಸಬೇಕೆಂದು ರಾಜ್ಯ ಸರಕಾರ ಮತ್ತು ಉನ್ನತ ಪೋಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಮುಸ್ಲಿಂ ಸಮುದಾಯ ರಂಜಾನ್ ಹಬ್ಬದಲ್ಲಿ ತೊಡಗಿರುವಾಗ ಅವರಿಗೆ ನೆರವಾಗುವಂತಹ ಉಡುಗೊರೆ ನೀಡುವ ಬದಲು, ರಾಜ್ಯ ಸರಕಾರ ಒಂದೆಡೆ ಬಡ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಶೇ. 4ರಷ್ಟು ಮೀಸಲಾತಿಯನ್ನು ಕಿತ್ತುಕೊಂಡು ತಾರತಮ್ಯ ಮೆರೆದಿದೆ. ಇನ್ನೊಂದೆಡೆ ಹಿಂದೂ ಕೊಲೆಗಡುಕ ಮತಾಂದರು ಕಾನೂನನ್ನು ಕೈಗೆತ್ತಿಕೊಂಡು ಅಮಾಯಕ ಬಡ ಮುಸ್ಲಿಂ ವ್ಯಕ್ತಿಯ ಕಗ್ಗೊಲೆಗೆ ಮುಂದಾಗಿದ್ದಾರೆ. ಈಚೆಗಿನ ಈ ಎರಡು ಘಟನೆಗಳು ಜಗತ್ತಿನ ಮುಂದೆ ನಾಗರೀಕ ಸಮಾಜ ತೀವ್ರ ನಾಚಿಕೆಯಿಂದ ತಲೆ ತಗ್ಗಿಸುವಂಹ ಹೇಯ ದುಷ್ಕೃತ್ಯಗಳಾಗಿವೆ. ಈ ಮತಾಂಧ ಕೊಲೆಗಳು ಹಾಗೂ ರಾಜಕಾರಣವನ್ನು ತಕ್ಷಣವೇ ನಿಲ್ಲಿಸಬೇಕು, ಇದಲ್ಲದೆ ಮುಸ್ಲಿಂ ಅಲ್ಪ ಸಂಖ್ಯಾತರ ಮೇಲಿನ ಇಂತಹ ಕೊಲೆಗಡುಕ ದಾಳಿಗಳಿಗೆ ಬಿಜೆಪಿ ಹಾಗೂ ಆರೆಸ್ಸೆಸ್ಗಳ ಮುಸ್ಲಿಂ ದ್ವೇಷದ ರಾಜಕಾರಣವೇ ಪ್ರೇರಣೆಯಾಗಿದೆ. ರಾಜ್ಯ ಸರಕಾರ ತನ್ನ ಅಧಿಕಾರವನ್ನು ಬಳಸಿ ಭಾರತದ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿರೋಧಿಯಾಗಿ, ದಲಿತರು ಹಾಗೂ ರಾಜ್ಯದ ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಆಹಾರದ ಹಕ್ಕು ಹಾಗೂ ರಾಜ್ಯದ ಹೈನುಗಾರರೂ ಸೇರಿದಂತೆ ಈ ಎಲ್ಲರ ಉದ್ಯೋಗದ ಹಕ್ಕಿನ ಮೇಲೆ ದಾಳಿ ಮಾಡುವ ಮತ್ತು ಹೈನೋದ್ಯಮ, ಚರ್ಮೋದ್ಯಮ ಹಾಗೂ ಮಾಂಸೋದ್ಯಮಗಳನ್ನು ಕಾರ್ಪೋರೇಟ್ ಕಂಪನಿಗಳ ಲೂಟಿಗೆ ತೆರೆಯುವ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ – 2020ನ್ನು ಅಂಗೀಕರಿಸಿ ಜಾರಿಯಲ್ಲಿಟ್ಟಿರುವುದು ಮತ್ತು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಯ ಕಾಯ್ದೆಗೆ ಕ್ರಮವಹಿಸುತ್ತಿರುವುದು ಕೂಡಾ ಇಂತಹ ಬಡವರ ಮೇಲಿನ ದಾಳಿಗಳಿಗೆ ಕುಮ್ಮಕ್ಕು ನೀಡುತ್ತದೆ ಎಂದು ಮೈಸೂರು ಜಿಲ್ಲಾ ಕಾರ್ಯದರ್ಶಿ ಜಗದೀಶ್‌ ಸೂರ್ಯ ಆರೋಪಿಸಿದ್ದಾರೆ.

ಗದಗ ಜಿಲ್ಲೆಯ ನರಗುಂದಾದಲ್ಲಿ ಸಮೀರ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜಲೀಲ್ , ಮಸೂದ್ , ಫಾಜಿಲ್ ರ ಕೊಲೆಗಳು ಈಗಾಗಲೇ ನಡೆದು ಹೋಗಿವೆ.
ತಮ್ಮ ಸರಕಾರವು ಮುಸ್ಲಿಂ ಸಮುದಾಯದ ವಿರುದ್ದ ಧಾರ್ಮಿಕ ತಾರತಮ್ಯ ಮೆರೆಯುತ್ತಿರುವುದು ಮತ್ತು ಹಿಂದುತ್ವವಾದಿ ಮತಾಂಧರ ಕುರಿತ ಪ್ರೋತ್ಸಾಹಿಸುವಂತಹ ಮೆದು ಧೋರಣೆಯು ಇಂತಹ ಘಟನೆಗಳು ಬೆಳೆಯುತ್ತಿರುವುದರ ಹಿಂದಿನ ಕುಮ್ಮಕ್ಕಾಗಿದೆ. ರಾಜ್ಯ ಸರಕಾರ ಮತ್ತು ಆಡಳಿತ ಇಂತಹ ಮತಾಂಧ ಧಾಳಿಗಳನ್ನು, ಕೊಲೆಗಳನ್ನು ಗಂಭೀರವಾಗಿ ಪರಿಗಣಿಸಿ, ಕಠಿಣ ಕ್ರಮದ ಮೂಲಕ ನಿಗ್ರಹಿಸದೇ ಹೋದುದರಿಂದ ಇಂತಹ ಮತಾಂಧ ದುಷ್ಕೃತ್ಯಗಳು, ಕೊಲೆಗಳು ರಾಜ್ಯದಲ್ಲಿ ಮತ್ತಷ್ಠು ಬೆಳೆಯುತ್ತಿವೆ ಎಂಬುದು ಆತಂಕಕಾರಿ ಸಂಗತಿ ಎಂದು ಸಿಪಿಎಂ ಕಳವಳ ವ್ಯಕ್ತಪಡಿಸಿದೆ.

ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದಾಗ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ ನಡೆದ ಚಳುವಳಿಯ ಮೇಲಿನ ಗೋಲಿಬಾರ್ ಪ್ರಕರಣದಲ್ಲಿ ಮಡಿದ ಮುಸ್ಲಿಂ ಯುವಜನರ ಕುಟುಂಬಗಳಿಗೆ ನೀಡಲಾದ ಪರಿಹಾರದ ಚೆಕ್ ಗಳನ್ನು ಅಂದು ಮತಾಂಧತೆಯ ಒತ್ತಡಕ್ಕೆ ಮಣಿದು ವಾಪಾಸು ಪಡೆದರು ಮತ್ತು ತಾವು ಮತೀಯ ಕಾರಣದಿಂದ ಕೊಲೆಯಾದ ಹಿಂದುತ್ವವಾದಿ ಯುವಕರ ಮನೆಗೆ ತೆರಳಿ 25 ಲಕ್ಷ ರೂಗಳ ನೆರವು ನೀಡಿದಿರಿ. ಆದರೇ ಅಂತಹದ್ದೆ ಮತೀಯ ದುಷ್ಕೃತ್ಯಕ್ಕೆ ಬಲಿಯಾದ ಮುಸ್ಲಿಂ ಜನತೆಯ ಕುಟುಂಬಗಳನ್ನು ಸಂತೈಸುವ ಕೆಲಸವನ್ನು ಮಾಡಲಿಲ್ಲ ಮತ್ತು ನೆರವನ್ನು ನೀಡಲಿಲ್ಲ. ಇಂತಹ ಕೊಲೆಗಡುಕರ ಮೇಲೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಿಲ್ಲ. ಬದಲಿಗೆ, ಇಂತಹ ಧಾಳಿಗಳಿಗೆ ಪೂರಕವಾದ ಕಾಯ್ದೆಗಳನ್ನು ಜಾರಿಗೊಳಿಸಲು ಕ್ರಮವಹಿಸಿದಿರಿ. ಇಡೀ ಮುಸ್ಲಿಂ ಸಮುದಾಯ ರಂಜಾನ್ ಹಬ್ಬದ ಸಡಗರದಲ್ಲಿರುವಾಗ ರಾಜ್ಯ ಸರಕಾರ ಅವರನ್ನು ಪ್ರೋತ್ಸಾಹಿಸುವ ದಿಶೆಯಲ್ಲಿ ನೆರವನ್ನು ಘೋಷಿಸಬೇಕಾದ ಜಾಗದಲ್ಲಿ ಅವರಿಗೆ ಇದುವರೆಗೆ ನೆರವಾಗುತ್ತಿದ್ದ ಮೀಸಲಾತಿ ಹಕ್ಕನ್ನು ವಾಪಾಸು ಪಡೆಯುವ ಅತ್ಯಂತ ನಾಚಿಕೆ ಗೇಡಿನ ಕೃತ್ಯವನ್ನು ಎಸಗಿದಿರಿ. ಈ ಎಲ್ಲ ತಾರತಮ್ಯಗಳು ಅಕ್ಷಮ್ಯ ಹಾಗೂ ತೀವ್ರ ಖಂಡನೀಯವಾಗಿದೆ. ಪ್ರಜಾಪ್ರಭುತ್ವ ಹಾಗೂ ಭಾರತದ ಜಾತ್ಯಾತೀತ ಸಂವಿಧಾನದ ವಿರೋಧಿಯಾಗಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯ ಸರಕಾರ ಇಂತಹ ಎಲ್ಲಾ ಧಾರ್ಮಿಕ ಹಾಗೂ ಜಾತಿತಾರತಮ್ಯದ ನೀತಿಗಳನ್ನು ಈ ಕೂಡಲೇ ಕೈಬಿಟ್ಟು.ಇಂತಹ ಧಾರ್ಮಿಕ ದ್ವೇಶದ ಕೊಲೆಗಳಿಗೆ ಕೊನೆ ಹಾಡಬೇಕೆಂದು ತಿಳಿಸುವ ಮೂಲಕ ಹಕ್ಕೊತ್ತಾಯಗಳನ್ನು ಪರಿಗಣಿಸಲು ಒತ್ತಾಯಿಸಿದ್ದಾರೆ.

ಹಕ್ಕೊತ್ತಾಯಗಳು :

1) ಮಂಡ್ಯ ಜಿಲ್ಲೆಯ ಇದ್ರೀಶ್ ಪಾಷಾರವರ ಕೊಲೆಗೆ ಕಾರಣರಾದ ಗೋರಕ್ಷಕ ವೇಶದ ಕೊಲೆಗಡುಕರನ್ನು ಈ ಕೂಡಲೇ ಬಂದಿಸಿ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಬೇಕು.

2) ಇದ್ರಿಶ್ ಕುಟುಂಬಕ್ಕೆ ತಕ್ಷಣವೇ 25 ಲಕ್ಷ ರೂಪಾಯಿಗಳ ನೆರವು ಮತ್ತು ಮಕ್ಕಳಿಗೆ ಉನ್ನತ ಹಂತದವರೆಗೆ ಉಚಿತ ವಿದ್ಯಾಭ್ಯಾಸ ಮತ್ತು ಒಂದು ಸರಕಾರಿ ಉದ್ಯೋಗವನ್ನು ಒದಗಿಸಬೇಕು.

3) ಇದೇ ರೀತಿ, ಮತೀಯ ದ್ವೇಷದಿಂದ ಕೊಲ್ಲಲ್ಪಟ್ಟ ಗದಗ ಜಿಲ್ಲೆಯ ನರಗುಂದಾದ ಸಮೀರ್, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯಾ ತಾಲೂಕಿನ ಬೆಳ್ಳಾರೆ ಮಸೂದ್, ಸೂರತ್ ಕಲ್ ನ ಮಂಗಳಪೇಟೆ ಫಾಜಿಲ್, ಕಾಟಿಪಳ್ಳದ ಜಲೀಲ್ ಈ ಕುಟುಂಬಗಳಿಗೂ ತಲಾ 25 ಲಕ್ಷ ರೂ ನೆರವು ಮತ್ತು ಒಂದು ಸರಕಾರಿ ಉದ್ಯೋಗ ಮತ್ತು ಉನ್ನತ ಹಂತದ ವರೆಗೂ ಮಕ್ಕಳಿಗೆ ಉಚಿತ ಶಿಕ್ಷಣದ ನೆರವು ನೀಡಬೇಕು. ಅದೇ ರೀತಿ, ಪೌರತ್ವ ತಿದ್ದುಪಡಿ ಕಾಯ್ದೆ ಸಂದರ್ಭದಲ್ಲಿ ಪೋಲೀಸರ ಗುಂಡಿಗೆ ಬಲಿಯಾದವರ ಕುಟುಂಬಗಳಿಗೂ ಪರಿಹಾರವನ್ನು ಒದಗಿಸಬೇಕು. ಪರಿಹಾರ ನೀಡಿಕೆಯಲ್ಲಿ ಧರ್ಮ ದ್ವೇಷದ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ತಡೆಯಬೇಕು.

4) ಧರ್ಮದ ಆಧಾರದಲ್ಲಿ ಧಾರ್ಮಿಕ ದ್ವೇಷಕ್ಕೆ ಬಲಿಯಾದವರಿಗೆ ನೀಡುವ ಪರಿಹಾರದಲ್ಲಿ ತಾರತಮ್ಯ ಎಸಗುತ್ತಿರುವದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು.

5) ರೈತ ಹಾಗೂ ಹೈನೊದ್ಯಮ, ಮಾಂಸೋದ್ಯಮ ಮತ್ತು ಚರ್ಮೋದ್ಯಮವನ್ನು ನಾಶ ಮಾಡುವ, ಜನತೆಯ ಆಹಾರದ ಹಕ್ಕು, ಬದುಕುವ ಹಾಗೂ ಉದ್ಯೋಗದ ಹಕ್ಕಿನ ಮೇಲೆ ಧಾಳಿ ಮಾಡಿರುವ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ – 2020 ನ್ನು ಈ ಕೂಡಲೇ ವಾಪಾಸು ಪಡೆಯಬೇಕು.

6) ಬಡ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ 2ಬಿ ಮೀಸಲಾತಿ ಸೌಲಭ್ಯ ರದ್ದತಿಯನ್ನು ತಡೆಯಬೇಕು ಹಾಗೂ ಅದನ್ನು ಪುನರ್ಸ್ಥಾಪಿಸಿ ಮುಂದುವರೆಸಬೇಕು.

7) ಸಾರ್ವಜನಿಕ ರಂಗದ ಶಿಕ್ಷಣ ಹಾಗೂ ಸಾರ್ವಜನಿಕ ಉದ್ಯಮ ಹಾಗೂ ಸಂಸ್ಥೆಗಳ ಖಾಸಗೀಕರಣ ನಿಲ್ಲಿಸಬೇಕು. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಾಪಾಸು ಪಡೆಯಬೇಕು‌. ಖಾಲಿ ಇರುವ ಎಲ್ಲ ಸರಕಾರಿ ಹುದ್ದೆಗಳನ್ನು ತುಂಬಬೇಕು. ಖಾಸಗೀರಂಗದಲ್ಲೂ ಮೀಸಲಾತಿಯನ್ನು ಜಾರಿಗೊಳಿಸಬೇಕು.

Donate Janashakthi Media

Leave a Reply

Your email address will not be published. Required fields are marked *