ಅಮಾಯಕ ಇದ್ರೀಶ್ ಕೊಲೆ ದೀರ್ಘ ಸಂಚಿನ ಭಾಗ : ಟಿ.ಎಲ್.ಕೃಷ್ಣೇಗೌಡ

ಟಿ.ಎಲ್.ಕೃಷ್ಣೇಗೌಡ

ಹಳೇ ಮೈಸೂರು ಭಾಗವನ್ನು ಹೇಗಾದರೂ ವಶಕ್ಕೆ ಪಡೆಯಬೇಕು ಎಂಬ ದೀರ್ಘ ಸಂಚಿನ ಭಾಗವಾಗಿಯೇ ಇದ್ರಿಶನ ಕೊಲೆಯಾಗಿದೆ ಎನ್ನುವುದು ಸ್ಪಷ್ಟ. ಕಳೆದ ಜೂನ್ ತಿಂಗಳಲ್ಲಿ ನಡೆಸಿದ ಶ್ರೀರಂಗಪಟ್ಟಣ ಚಲೋ ಸಂದರ್ಭದಲ್ಲಿ ಜುಮಾ ಮಸೀದಿಯ ಮೇಲೆ ದಾಳಿ ನಡೆಸಿದರು. ಮುಸಲ್ಮಾನರ ಮನೆಗಳ ಮೇಲಿನ ಹಸಿರು ಧಾರ್ಮಿಕ ಧ್ವಜವನ್ನು ತೆಗೆದು ಕೇಸರಿ ಬಾವುಟ ಕಟ್ಟಿ ಮುಸಲ್ಮಾನರನ್ನು ಕೆರಳಿಸಲು ಪ್ರಯತ್ನಿಸಿದರು. ಎರಡನೆಯದಾಗಿ, ಉರೀಗೌಡನಂಜೇಗೌಡ ಎಂಬ ನಕಲಿ ವ್ಯಕ್ತಿಗಳು ಟಿಪ್ಪುವನ್ನು ಕೊಂದ ವೀರರು ಎಂದು ಪಟ್ಟ ಕಟ್ಟಿ ಮುಸಲ್ಮಾನನ್ನು ಕೆರಳಿಸಲು ನೋಡಿದರು. ಮೂರನೆಯದಾಗಿ, ಮುಸಲ್ಮಾನರು ಪಡೆಯುತ್ತಿದ್ದ ಮೀಸಲಾತಿಯನ್ನು ಕಿತ್ತುಕೊಂಡು ಅದರಲ್ಲಿ ಅರ್ಧ ಭಾಗವನ್ನು ಒಕ್ಕಲಿಗರಿಗೆ ಹಂಚಿ ಮುಸಲ್ಮಾನರನ್ನು ಕೆರಳಿಸಲು ಮತ್ತು ಒಕ್ಕಲಿಗರನ್ನು ಒಲಿಸಿಕೊಳ್ಳಲು ನೋಡಿದರು. ಚುನಾವಣೆಯ ಪೂರ್ವದ ಕೊನೆಯ ಪ್ರಯತ್ನವಾಗಿ ಇದ್ರಿಶನನ್ನು ಕೊಂದರು.

ಇಂತಹ ಎಲ್ಲಾ ನೀಚ ಪ್ರಯತ್ನಗಳನ್ನು ಹಳೇ ಮೈಸೂರು ಭಾಗದ ಮುಸಲ್ಮಾನರು ಮತ್ತು ಹಿಂದೂಗಳು ಅತ್ಯಂತ ಪ್ರೌಡಿಮೆಯಿಂದ ನಿಭಾಯಿಸಿದರು. ಮುಸಲ್ಮಾನರು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಿಂದ ಆಚೆ ಸರಿಯದೆ, ತೀವ್ರ ಭಾವಾವೇಶಕ್ಕೆ ಒಳಗಾಗದೆ ಘನತೆಯನ್ನು ಮೆರೆದರು. ಒಕ್ಕಲಿಗರೂ ಸೇರಿದಂತೆ ಹಿಂದೂಗಳು ಕೂಡಾ ಸಂಘ ಪರಿವಾರದ ಸಣ್ಣತನಗಳಿಗೆ ಉತ್ಸುಕರಾಗಿ ಸ್ಪಂದಿಸದೇ ಹೋದರು. ಇದ್ರಿಶನ ಅಮೂಲ್ಯ ಜೀವ ನಾಶವಾಗಿ, ಹೆಂಡತಿ ಮಕ್ಕಳು ಅನಾಥವಾದರೂ ಸಂಘ ಪರಿವಾರದ ಕುತಂತ್ರಗಳಿಗೆ ಯಶಸ್ಸು ಸಿಗದೇ ಹೋಯಿತು. ಹತಾಶ ಸಂಘ ಪರಿವಾರ ಇನ್ನಾವ ಬಲಿಗೆ ಕಾದಿದೆಯೋ??

ನೀರೆಲ್ಲಾ ಇಂಗಿಹೋದ ಅಸಹಾಯಕ ಆ ಕಣ್ಣುಗಳು!! ಇದ್ರಿಶ್ ಪಾಷಾನ ಹೆಂಡತಿ ತನ್ನ ಗಂಡ ಬರುವ ನಿರೀಕ್ಷೆಯನ್ನು ದಫನು ಮಾಡಿ, ಅಳುವ ಮೂರು ತಿಂಗಳ ಕಂದನನ್ನು ಸಮಾಧಾನ ಪಡಿಸುತ್ತ, ಆಡುವ ಮೂರು ವರ್ಷದ ಕಂದನಿಗೆ ಗದರುತ್ತ ನಮ್ಮನ್ನು ಬರಮಾಡಿಕೊಂಡು ಹೇಳಿದ ಆಕೆಯ ಮಾತುಗಳು ನಮ್ಮ ಮನಸ್ಸುಗಳನ್ನು ಕಲಕಿತು.  ಹೀಗೆ ಹೋಗಿ ಹಾಗೆ ಬಂದು ಬಿಡ್ತೀನಿ ಎಂದು ಮಕ್ಕಳಿಗೂ, ಹೆಂಡತಿಗೂ ಹೇಳಿ ಹೋದ ಇದ್ರಿಶ್ ಪಾಷಾ ಇನ್ನೆಂದೂ ಹಿಂದಿರುಗುವಂತಿರಲಿಲ್ಲ.  “ಮೃತದೇಹ ಮನೆಗೆ ಬರುವವರೆಗೂ ಗಂಡನ ಕೊಲೆಯಾಗಿರುವ ವಿಷಯವನ್ನು ಯಾರೂ ತಿಳಿಸಿರಲಿಲ್ಲ.  ಗಾಯದ ಗುರುತುಗಳನ್ನು ನೋಡಿ ಕೊಲೆಯಾಗಿರುವ ವಿಷಯ ಗೊತ್ತಾಯಿತು.  ಶವದ ಸ್ನಾನ ಮಾಡಿಸುವಾಗ ಚರ್ಮ ಕಿತ್ತು ಬರುತ್ತಿತ್ತು.  ಗಂಡನಿಗೆ ಚಿತ್ರಹಿಂಸೆ ಕೊಟ್ಟು ಕೊಂದಿದ್ದಾರೆ.  ವಿದ್ಯುತ್ ಶಾಕ್ ನೀಡಿ ಕೊಂದಿದ್ದಾರೆ ಚುಚ್ಚಿ, ಚುಚ್ಚಿ ಕೊಂದಿದ್ದಾರೆ. ಅನಾಥವಾದ ನನ್ನ ಮಕ್ಕಳಿಗೆ ಇನ್ಯಾರು ಗತಿ?” ಎಂದು ಗದ್ಗದಿತ ದ್ವನಿಯಲ್ಲಿ ಹೇಳುತ್ತ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.

2023 ಏಪ್ರಿಲ್ 4ನೇ ತಾರೀಖು ಮಟ ಮಟ ಮಧ್ಯಾಹ್ನ. ಮಂಡ್ಯದ ಗುತ್ತಲು ಬಡಾವಣೆಯ ಸಪ್ತಾರಿಯಾಬಾದ್‌ನಲ್ಲಿರುವ ಇದ್ರೀಶ್ ಪಾಷಾನ ಮನೆಗೆ ಸಿಪಿಐ(ಎಂ) ಪಕ್ಷದ ಮಂಡ್ಯ ಜಿಲ್ಲಾ ಸಮಿತಿಯ ನಿಯೋಗ ಬೇಟಿ ಕೊಟ್ಟಾಗ ಕಂಡದ್ದು ಈ ಹೃದಯ ವಿದ್ರಾವಕ ದೃಶ್ಯಗಳು.

ಇನ್ನಾರಿಗೂ ನನ್ನ ಸ್ಥಿತಿ ಬಾರದಿರಲಿ

ಇದ್ರಿಶ್ ಪಾಷಾನ ಹೆಂಡತಿ ಫಾತಿಮಾ ಬಾನುಗೆ ಹೆಚ್ಚೆಂದರೆ 30 ವರ್ಷ ವಯಸ್ಸು. ಗಂಡ ಇದ್ರಿಶ್‌ನ ಚಾಲಕ ವೃತ್ತಿಯಿಂದ ಬರುವ ಸಂಪಾದನೆ ಮಕ್ಕಳು ಮತ್ತು ಮನೆಗೆ ಸಾಲದೆಂದು ತಾನೂ ಗಾರ್ಮೆಂಟ್ ಕಾರ್ಖಾನೆಯ ಕೆಲಸಕ್ಕೆ ಹೋಗುತ್ತಿದ್ದಳು. ಈಗ ಮೂರು ತಿಂಗಳಾಗಿರುವ ಎರಡನೇ ಮಗುವಿನ ಹೆರಿಗೆಯ ಸಮಯದಿಂದ ಗಂಡನ ದುಡಿಮೆಯಿಂದಲೇ ಮನೆ ನಡೆಯುತ್ತಿತ್ತು.  ದುಡಿಯುತಿದ್ದ ಜೀವವನ್ನೇ ದುರುಳರು ಹರಣ ಮಾಡಿದ್ದರು.  ಒತ್ತಿ ಬರುತ್ತಿದ್ದ ದುಃಖವನ್ನು ತಡೆಯುತ್ತಾ ಫಾತಿಮಾ ಬಾನು “ಮಕ್ಕಳಿಗಾಗಿ ಹಗಲಿರುಳೆನ್ನದೆ ದುಡಿಯುತ್ತಿದ್ದ ಗಂಡನನ್ನು ಹೊಡೆದು ಕೊಂದಿದ್ದಾರೆ. ಮೂರು ತಿಂಗಳ ಮಗು ಅಪ್ಪನ ಮುಖವನ್ನೇ ನೋಡಲಿಲ್ಲ.  ನನ್ನ ಗಂಡನ ಸಾವಿಗೆ ನ್ಯಾಯ ಕೊಡಿಸಿ. ಇನ್ನಾರಿಗೂ ನನ್ನ ಸ್ಥಿತಿ ಬಾರದಿರಲಿ” ಎಂದರು.

ಎರಡು ಲಕ್ಷ ರೂ. ಗೆ ಒತ್ತಾಯ

ಇದ್ರಿಶ್ ಪಾಷಾ ಏಪ್ರಿಲ್ ಒಂದನೇ ತಾರೀಖು ಕೆ.ಆರ್. ಪೇಟೆ ತಾಲ್ಲೂಕಿನ ತೆಂಡೇಕೆರೆಯಿಂದ ಲಾರಿಯೊಂದನ್ನು ಚಲಾಯಿಸಿಕೊಂಡು ತಮಿಳುನಾಡಿನ ಕೃಷ್ಣಗಿರಿಯ ಕಡೆ ಹೊರಟಿದ್ದ. ಮಳವಳ್ಳಿ, ಹಲಗೂರು ದಾಟಿ ಕನಕಪುರದ ಸಾತನೂರು ಸಮೀಪಿಸುತ್ತಿದ್ದಂತೆ ರಾತ್ರಿ ಹನ್ನೊಂದು ಗಂಟೆ ಹೊತ್ತಿನಲ್ಲಿ ಗುಂಪೊಂದು ಲಾರಿಯನ್ನು ಅಡ್ಡ ಹಾಕಿತು. ಅಡ್ಡ ಹಾಕಿದ್ದು ಪುನೀತ್ ಕೆರೆಹಳ್ಳಿ ಎಂಬ ಆರೆಸ್ಸೆಸ್ ಸಂಘಟನೆಯ ಅಂಗ ಸಂಘ ‘ರಾಷ್ಟ್ರ ರಕ್ಷಣಾ ಪಡೆ’ ಎಂಬ ಪುಂಡರ ಗುಂಪು.  ಈ ಗುಂಪಿನ ಮುಖಂಡ ಪುನೀತ್ ಕೆರೆಹಳ್ಳಿ ಇದ್ರಿಶ್ ಸೇರಿದಂತೆ ಲಾರಿಯಲ್ಲಿದ್ದ ಇನ್ನಿಬ್ಬರನ್ನು ಎರಡು ಲಕ್ಷ ರೂಪಾಯಿ ಕೊಡುವಂತೆ ಒತ್ತಾಯಿಸಿದ.  ಹಣ ಕೊಡಲು ನಿರಾಕರಿಸಿದಾಗ ಒಂದೇ ಸಮನೆ ಬ್ಯಾಟಿನಿಂದ ಹೊಡೆಯಲು ಶುರು ಮಾಡಿದ.  ಈತನ ಜೊತೆಗೆ ಆತನ ಸಂಗಡಿಗರೂ ಸೇರಿಕೊಂಡು ಹೊಡೆಯಲು ಮುಂದಾದರು. ಜೀವ ಭಯದಿಂದ ಲಾರಿಯಲ್ಲಿದ್ದ ಮೂರೂ ಜನ ಲಾರಿಯಿಂದ ಜಿಗಿದು ಓಡಲು ಶುರು ಮಾಡಿದರು. ಕತ್ತಲೆಯಲ್ಲಿ ಓಡಲಾರದ ಇದ್ರಿಶ್ ಹತ್ತಿರದ ಕಾಂಪೌಂಡ್ ಹೊಕ್ಕು ಅವಿತು ಕುಳಿತ. ಆತನನ್ನು ಬೆನ್ನಟ್ಟಿದ ಪುನೀತ್ ಕೆರೆಹಳ್ಳಿ ಮತ್ತು ತಂಡ ಕಾಂಪೌAಡ್ ಒಳಗೆ ಪತ್ತೆ ಹಚ್ಚಿ ಮನಸೋ ಇಚ್ಚೆ ಥಳಿಸಿತು. ಇಲೆಕ್ಟಿçಕಲ್ ಟೀಸರ್ ಗನ್ನಿನಿಂದ ವಿದ್ಯುತ್ ಶಾಕ್ ನೀಡಲು ಆರಂಭಿಸಿತು. ವಿದ್ಯುತ್ ಶಾಕ್‌ನಿಂದಾಗಿ ಮೈಯೆಲ್ಲಾ ಸುಟ್ಟ ಮೇಲೆ, ಕತ್ತು ಮತ್ತು ಕಿವಿಯಂತಹ ಅಂಗಾಂಗಗಳಿಗೆ ಶಾಕ್ ನೀಡಿದರು. ಶಾಕ್ ತಾಳಲಾರದ ಇದ್ರಿಶ್‌ನ ಪ್ರಾಣ ಪಕ್ಷಿ ಹಾರಿ ಹೋಯಿತು ಎನ್ನುವುದು ಒಟ್ಟು ಸಂಗತಿಗಳನ್ನು ಗಮನಿಸಿದಾಗ ಅನಿಸುವುದು.

ದನದ ವ್ಯಾಪಾರಿಯೂ ಅಲ್ಲ, ದಲ್ಲಾಳಿಯೂ ಅಲ್ಲ

ಇದ್ರಿಶ್ ಚಲಾಯಿಸುತ್ತಿದ್ದ ಲಾರಿಯಲ್ಲಿ ತೆಂಡೇಕೆರೆ ವಾರದ ಸಂತೆಯಲ್ಲಿ ಖರೀದಿಸಿದ್ದ ದನಗಳಿದ್ದವು. ವಾರದ ಸಂತೆಯಲ್ಲಿ ಮಾರಲು ಬಂದ ಸುತ್ತಮುತ್ತಲಿನ ಗ್ರಾಮದ ರೈತರಿಂದ ದನಗಳನ್ನು ದನದ ವ್ಯಾಪಾರಿಗಳು ಖರೀದಿಸಿದ್ದರು. ಅದಕ್ಕೆ ಪೂರಕವಾದ ರಶೀದಿಗಳನ್ನೂ ಪಡೆಯಲಾಗಿತ್ತು. ಸಂತೆಯನ್ನು ನಿರ್ವಹಿಸುವ ಗುತ್ತಿಗೆದಾರರು ಕೂಡಾ ತಾವು ಪಡೆದ ಶುಲ್ಕದ ರಶೀದಿ ನೀಡಿದ್ದರು. ಎಲ್ಲವೂ ಕ್ರಮಬದ್ಧವಾಗಿ, ಕಾನೂನುಬದ್ಧವಾಗಿ ನಡೆದಿದ್ದವು. ತೆಂಡೇಕೆರೆ ಸಂತೆಯಿಂದ ಕೃಷ್ಣಗಿರಿಯ ಸಂತೆಗೆ ದನಗಳು ಪ್ರಯಾಣ ಆರಂಭಿಸಿದ್ದವು. ಅಲ್ಲಿ ಆ ದನಗಳು ಯಾರವು ಎಂದು ಚಾಲಕ ಇದ್ರಿಶ್‌ಗೆ ಏನು ಗೊತ್ತಿತ್ತು?

ಇದ್ರಿಶ್ ದನದ ವ್ಯಾಪಾರಿಯೇನೂ ಅಲ್ಲ. ದಲ್ಲಾಳಿಯಂತೂ ಅಲ್ಲವೇ ಅಲ್ಲ. ಹಣ ಕೊಟ್ಟು ದನಗಳನ್ನು ಕೊಂಡವರು ದನದ ವ್ಯಾಪಾರಿಗಳು, ಮಾರಿದವರು ಕಷ್ಟಕ್ಕೋ, ಖುಷಿಗೋ ರೈತರು.  ಚಾಲಕ ಇದ್ರಿಶನಿಗೆ ಇದಾವುದರ ಮಾಹಿತಿ ಇಲ್ಲ,  ಗೊಡವೆಯೂ ಇಲ್ಲ. ಅವನಿಗೆ ಇದ್ದದ್ದು ಲಾರಿಯನ್ನು ಕೃಷ್ಣಗಿರಿಗೆ ತಲುಪಿಸುವ ಜವಾಬ್ದಾರಿ ಮಾತ್ರ. ಅಷ್ಟನ್ನೇ ತಲೆಯಲ್ಲಿ ಇಟ್ಟುಕೊಂಡು ಸಂತೆ ಮುಗಿದ ಮೇಲೆ ದನಗಳನ್ನು ತುಂಬಿಸಿಕೊಂಡು ರಾತ್ರಿಯ ಊಟ ಮುಗಿಸಿ ಕೃಷ್ಣಗಿರಿಯ ಕಡೆಗೆ ಹೊರಟ. ಹೊರಡುವ ಮುನ್ನ ಅಗತ್ಯ ದಾಖಲೆಗಳನ್ನು ಕೇಳಿಯೇ ಪಡೆದುಕೊಂಡಿದ್ದ. ತೆಂಡೇಕೆರೆಯಿಂದ ಲಾರಿ ಹೊರಟಾಗಲೇ ಅಲ್ಲಿನ ಸಂಘಿಗಳು ಮುಂದಿನ ಸಂಘಿಗಳಿಗೆ ಸುದ್ದಿ ರವಾನಿಸಿ ಸಂಚು ರೂಪಿಸಿದ್ದಾರೆ. ಈ ಯಾವ ಸುಳಿವೂ ರಂಜಾನಿನ ಧ್ಯಾನದಲ್ಲಿದ್ದ ಇದ್ರಿಶನಿಗೆ ಗೊತ್ತಾಗಲೇ ಇಲ್ಲ.

ಪರಿವಾರದ ಸಾಕು ನಾಯಿಗಳು ಸಾತನೂರಿನ ಪೊಲೀಸ್ ಠಾಣೆಯ ಮುಂದಿನ ರಸ್ತೆಯಲ್ಲೆ ಲಾರಿಯನ್ನು ಅಡ್ಡಗಟ್ಟಿದಾಗ ಇದ್ರಿಶ್ ಮತ್ತವನ ಸಂಗಡಿಗರು ಧೈರ್ಯವಾಗಿಯೇ ತಮ್ಮಲ್ಲಿರುವ ದಾಖಲೆಗಳನ್ನು ತೋರಿಸಿ ಹಣ ನೀಡಲು ನಿರಾಕರಿಸಿದ್ದಾರೆ. ಯಾವಾಗ ಇವರು ದಾಖಲೆ ನೋಡುವ ಆಸಾಮಿಗಳಲ್ಲ, ದಾಂಧಲೆ ನಡೆಸುವ ಪರಿವಾರಿಗಳು ಎಂದು ತಿಳಿಯಿತೋ, ಆಗ ಲಾರಿಯಿಂದ ಜಿಗಿದು ಜೀವ ಉಳಿಸಿಕೊಳ್ಳಲು ಓಡಲು ಆರಂಭಿಸಿದ್ದಾರೆ. ಇದ್ರಿಶ್ ಓಡಿ ದಣಿದನೇ ಹೊರತು ಜೀವ ಉಳಿಸಿಕೊಳ್ಳಲು ಆಗಲಿಲ್ಲ.

ಬಳಸಿದ್ದು ಎಲೆಕ್ಟ್ರಿಕ್ ಟೀಸರ್ ಗನ್

ಇದ್ರಿಶನ ಜೀವ ತೆಗೆಯಲು ರಾಷ್ಟ್ರ ರಕ್ಷಣಾ ಪಡೆಯೆಂಬ ಸಂಘ ಪರಿವಾರದ ಕೂಸು ಮತ್ತದರ ಕಾಲಾಳು ಪುನೀತ್ ಕೆರೆಹಳ್ಳಿ ಹಾಗೂ ಅವನ ಸಂಗಡಿಗರು ಬಳಸಿದ ಅಸ್ತ್ರ ಎಂತವರನ್ನೂ ಬೆಚ್ಚಿ ಬೀಳಿಸುತ್ತದೆ. ಅವರು ಬಳಸಿದ್ದು ಎಲೆಕ್ಟ್ರಿಕ್ ಟೀಸರ್ ಗನ್ ಎಂಬ ಆಧುನಿಕ ಅಸ್ತ್ರವನ್ನು. ವಿದೇಶಗಳಲ್ಲಿ ಸ್ವಯಂ ರಕ್ಷಣೆಗಾಗಿ ಬಳಸುವ ಈ ಗನ್ ಸುಮಾರು ಮೂವತ್ತು ಅಡಿ ದೂರದಲ್ಲಿ ಇರುವವರನ್ನು ತಾಗಿ ಬಲಿಷ್ಠ ವಿದ್ಯುತ್ ಶಾಕ್ ನೀಡುತ್ತದೆ. ಬ್ಯಾಟರಿಯ ಮೂಲಕ ಕೆಲಸ ಮಾಡುವ ಇದನ್ನು ಇದ್ರಿಶ್ ಪಾಷಾನ ಪ್ರಮುಖ ಅಂಗಗಳಿಗೆ ಶಾಕ್ ನೀಡಲು ಬಳಸಲಾಗಿದೆ. ನಿರಂತರ ವಿದ್ಯುತ್ ಶಾಕ್ ತಡೆದುಕೊಳ್ಳದ ದೇಹ ಸಾವಿಗೆ ಶರಣಾಗಿದೆ. ಪುನೀತ್ ಕೆರೆಹಳ್ಳಿ ಮತ್ತವನ ದುರುಳ ತಂಡ ಕೇಕೆ ಹಾಕಿ ಪರಾರಿಯಾಗಿದೆ.

ಗೋರಕ್ಷಣೆಯ ಮುಖವಾಡ ಹೊತ್ತು ಮುಸಲ್ಮಾನ ಅಲ್ಪಸಂಖ್ಯಾತರಿಗೆ ತೊಂದರೆ ಕೊಡುವುದು, ಆ ಮೂಲಕ ಅವರನ್ನು ಕೆರಳಿಸಿ ಜಗಳಕ್ಕಿಳಿಸಿ, ಅವರ ವಿರುದ್ಧ ಬಹುಸಂಖ್ಯಾತ ಹಿಂದೂಗಳನ್ನು ಛೂ ಬಿಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಈ ಪರಿವಾರದ ರೂಢಿಗತ ಚಾಳಿ. ಇಂತಹ ಅವಕಾಶಕ್ಕಾಗಿಯೇ ಕಾಯುತ್ತಿರುವ ಮತ್ತು ಅವಕಾಶ ಸಿಕ್ಕರೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಬೆಂಕಿ ಹಚ್ಚಿ ರಾಜಕೀಯ ನೆಲೆ ಕಂಡುಕೊಳ್ಳುವ ನಿರೀಕ್ಷೆಯಲ್ಲಿರುವ ಆರೆಸ್ಸೆಸ್-ಬಿಜೆಪಿಗೆ ಸಿಕ್ಕಿದ್ದು ಇದ್ರಿಶ್ ಪಾಷಾ.

ಇದ್ರಿಶ್ ಅವರು ಚಲಾಯಿಸುತ್ತಿದ್ದ ವಾಹನ ತೆಂಡೇಕೆರೆಯಿಂದ ಹೊರಡುವ ಮತ್ತು ಸಾಗುವ ದಾರಿಯ ಇಂಚಿಚೂ ಮಾಹಿತಿ ವಿನಿಮಯ ಮಾಡಿಕೊಂಡಿರುವ ಸಂಘಿಗಳು ಸಾತನೂರಿನಲ್ಲಿ ‘ಆಪರೇಷನ್’ ಪೂರ್ಣಗೊಳಿಸಿದ್ದಾರೆ. ಇದ್ರಿಶ್ ಕೊಲೆಯಾದ ನಂತರವೂ ಕೊಲೆಗಡುಕರು ಪಲಾಯನ ಮಾಡಲು ಬಳಸಿಕೊಂಡಿರುವ ಹಾದಿ ಪರಿವಾರದ ನೆಟ್ವರ್ಕ್ ಹೇಗೆ ಕೆಲಸ ಮಾಡಿದೆ ಎಂಬುದನ್ನು ತೋರಿಸುತ್ತದೆ. ಸಾತನೂರು, ಕನಕಪುರ, ಬೆಂಗಳೂರು, ಹುಬ್ಬಳ್ಳಿ, ಮಹಾರಾಷ್ಟ್ರ, ಗುಜರಾತ್ ಕೊನೆಗೆ ರಾಜಸ್ಥಾನದ ಗಡಿ. ಉದ್ದಕ್ಕೂ ಬಿಜೆಪಿ ಸಂಘ ಪರಿವಾರದ ಬಲಿಷ್ಠ ನೆಲೆಯ ಮೂಲಕವೇ ಸಾಗಿರುವ ಹಂತಕ ಪಡೆಯನ್ನು ಬಂಧಿಸಲೇಬೇಕಾದ ಒತ್ತಡ ಸೃಷ್ಟಿಯಾದ ನಂತರ ಬಂಧಿಸುವ ಒಂದು ನಾಟಕ ನಡೆದಿದೆ ಎನ್ನುವುದು ಮೇಲ್ನೋಟದಲ್ಲೇ ಕಾಣುತ್ತದೆೆ.

ಕುತಂತ್ರಗಳಿಗೆ ಯಶಸ್ಸು ಸಿಗಲಿಲ್ಲ

ಹಳೇ ಮೈಸೂರು ಭಾಗವನ್ನು ಹೇಗಾದರೂ ವಶಕ್ಕೆ ಪಡೆಯಬೇಕು ಎಂಬ ದೀರ್ಘ ಸಂಚಿನ ಭಾಗವಾಗಿಯೇ ಇದ್ರಿಶನ ಕೊಲೆಯಾಗಿದೆ ಎನ್ನುವುದು ಸ್ಪಷ್ಟ. ಕಳೆದ ಜೂನ್ ತಿಂಗಳಲ್ಲಿ ವಿಶ್ವ ಹಿಂದೂ ಪರಿಷತ್ ನಡೆಸಿದ ಶ್ರೀರಂಗಪಟ್ಟಣ ಚಲೋ ಸಂದರ್ಭದಲ್ಲಿ ಜುಮಾ ಮಸೀದಿಯ ಮೇಲೆ ದಾಳಿ ನಡೆಸಲು ಪ್ರಯತ್ನಿಸಲಾಯಿತು. ಆದರೆ ಜನ ಚಳವಳಿಗಳ ಒತ್ತಡದಿಂದಾಗಿ ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡಲಿಲ್ಲ. ಆದರೂ ಸಂಘಿ ಕಾರ್ಯಕರ್ತರು ಮುಸಲ್ಮಾನರ ಮನೆಗಳ ಮೇಲಿನ ಹಸಿರು ಧಾರ್ಮಿಕ ಧ್ವಜವನ್ನು ತೆಗೆದು ಕೇಸರಿ ಬಾವುಟ ಕಟ್ಟಿ ಮುಸಲ್ಮಾನರನ್ನು ಕೆರಳಿಸಲು ಪ್ರಯತ್ನಿಸಿದರು. ಎರಡನೆಯದಾಗಿ, ಉರೀಗೌಡ – ನಂಜೇಗೌಡ ಎಂಬ ನಕಲಿ ವ್ಯಕ್ತಿಗಳಿಗೆ ಆರೆಸ್ಸೆಸ್ ಅಗ್ರಹಾರದಲ್ಲಿ ಜನ್ಮ ನೀಡಿ, ಟಿಪ್ಪುವನ್ನು ಕೊಂದ ವೀರರು ಎಂದು ಪಟ್ಟ ಕಟ್ಟಿ ಮುಸಲ್ಮಾನನ್ನು ಕೆರಳಿಸಲು ನೋಡಿದರು. ಮೂರನೆಯದಾಗಿ, 1918ರ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದ ಮಿಲ್ಲರ್ ಆಯೋಗದ ಕಾಲದಿಂದಲೂ ಮುಸಲ್ಮಾನರು ಪಡೆಯುತ್ತಿದ್ದ ಮೀಸಲಾತಿಯನ್ನು ಕಿತ್ತುಕೊಂಡು ಅದರಲ್ಲಿ ಅರ್ಧ ಭಾಗವನ್ನು ಒಕ್ಕಲಿಗರಿಗೆ ಹಂಚಿ ಮುಸಲ್ಮಾನರನ್ನು ಕೆರಳಿಸಲು ಮತ್ತು ಒಕ್ಕಲಿಗರನ್ನು ಒಲಿಸಿಕೊಳ್ಳಲು ನೋಡಿದರು. ಚುನಾವಣೆಯ ಪೂರ್ವದ ಕೊನೆಯ ಪ್ರಯತ್ನವಾಗಿ ಇದ್ರಿಶನನ್ನು ಕೊಂದರು.

ಈ ಇಂತಹ ಎಲ್ಲಾ ನೀಚ ಪ್ರಯತ್ನಗಳನ್ನು ಹಳೇ ಮೈಸೂರು ಭಾಗದ ಮುಸಲ್ಮಾನರು ಮತ್ತು ಹಿಂದೂಗಳು ಅತ್ಯಂತ ಪ್ರೌಡಿಮೆಯಿಂದ ನಿಭಾಯಿಸಿದರು. ಮುಸಲ್ಮಾನರು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಿಂದ ಆಚೆ ಸರಿಯದೆ, ತೀವ್ರ ಭಾವಾವೇಶಕ್ಕೆ ಒಳಗಾಗದೆ ಘನತೆಯನ್ನು ಮೆರೆದರು. ಒಕ್ಕಲಿಗರೂ ಸೇರಿದಂತೆ ಹಿಂದೂಗಳು ಕೂಡಾ ಸಂಘ ಪರಿವಾರದ ಸಣ್ಣತನಗಳಿಗೆ ಉತ್ಸುಕರಾಗಿ ಸ್ಪಂದಿಸದೇ ಹೋದರು. ಇದ್ರಿಶನ ಅಮೂಲ್ಯ ಜೀವ ನಾಶವಾಗಿ, ಹೆಂಡತಿ ಮಕ್ಕಳು ಅನಾಥವಾದರೂ ಸಂಘ ಪರಿವಾರದ ಕುತಂತ್ರಗಳಿಗೆ ಯಶಸ್ಸು ಸಿಗದೇ ಹೋಯಿತು. ಹತಾಶ ಸಂಘ ಪರಿವಾರ ಇನ್ನಾವ ಬಲಿಗೆ ಕಾದಿದೆಯೋ??

ಅವರು ಬಳಸಿದ್ದು ಎಲೆಕ್ಟ್ರಿಕ್ ಟೀಸರ್ ಗನ್ ಎಂಬ ಆಧುನಿಕ ಅಸ್ತ್ರವನ್ನು. ವಿದೇಶಗಳಲ್ಲಿ ಸ್ವಯಂ ರಕ್ಷಣೆಗಾಗಿ ಬಳಸುವ ಈ ಗನ್ ಸುಮಾರು ಮೂವತ್ತು ಅಡಿ ದೂರದಲ್ಲಿ ಇರುವವರನ್ನು ತಾಗಿ ಬಲಿಷ್ಠ ವಿದ್ಯುತ್ ಶಾಕ್ ನೀಡುತ್ತದೆ. ಸಣ್ಣ ಬ್ಯಾಟರಿಯ ಮೂಲಕ ಕೆಲಸ ಮಾಡುವ ಇದನ್ನು ಇದ್ರಿಶ್ ಪಾಷಾನ ಪ್ರಮುಖ ಅಂಗಗಳಿಗೆ ಶಾಕ್ ನೀಡಲು ಬಳಸಲಾಗಿದೆ. ನಿರಂತರ ವಿದ್ಯುತ್ ಶಾಕ್ ತಡೆದುಕೊಳ್ಳದ ದೇಹ ಸಾವಿಗೆ ಶರಣಾಗಿದೆ. ಪುನೀತ್ ಕೆರೆಹಳ್ಳಿ ಮತ್ತವನ ದುರುಳ ತಂಡ ಕೇಕೆ ಹಾಕಿ ಪರಾರಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *