ಐ.ಐ.ಪಿ.ಎಸ್‍. ನಿರ್ದೇಶಕರ ಅಮಾನತಿನ ಹಿಂದೆ

ಚರಿತ್ರೆಯಮರುಲೇಖನದನಂತರ ,ಈಗಅಂಕಿಶಗಳಮರುಲೇಖನ!

ಪ್ರತಿಷ್ಠಿತ ಅಧ್ಯಯನ-ಸಂಶೋಧನಾ ಸಂಸ್ಥೆಯಾದ ‘ಅಂತರರಾಷ್ಟ್ರೀಯ ಜನಸಂಖ್ಯಾಶಾಸ್ತ್ರಗಳ ಸಂಸ್ಥೆ’(ಇಂಟರ್‌ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಪಾಪ್ಯುಲೇಶನ್ ಸೈನ್ಸಸ್- ಐಐಪಿಎಸ್) ನ ನಿರ್ದೇಶಕ ಪ್ರೊ. ಕೆ.ಎಸ್. ಜೇಮ್ಸ್ ಅವರನ್ನು ಮೋದಿ ಸರ್ಕಾರ ಅಮಾನತು ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿ ನೂರಾರು ಸ್ವತಂತ್ರ ಸಂಶೋಧನಾ ಸಂಸ್ಥೆಗಳಿವೆ. ಅವುಗಳ ಪೈಕಿ ನಿರ್ದೇಶಕರನ್ನು ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಅಮಾನತು ಮಾಡಿರುವುದು ಇದೇ ಮೊದಲು ಎನ್ನಲಾಗಿದೆ.

ಕೇಂದ್ರ ಸರ್ಕಾರವು ಅವರಿಗೆ ಕಳುಹಿಸಿದ ಅಮಾನತು ಪತ್ರದಲ್ಲಿ ಅವರ ವಿರುದ್ಧ ವಿಚಾರಣೆ ನಡೆಯುತ್ತಿದ್ದು, ಅದರ ಆಧಾರದ ಮೇಲೆ ಅಮಾನತುಗೊಳಿಸಲಾಗಿದೆ ಎಂದು ತಿಳಿಸಲಾಗಿತ್ತಂತೆ. ಈ ಬಗ್ಗೆ ಆಕ್ರೋಶ ವ್ಯಕ್ತವಾಗುವ ಲಕ್ಷಣ ಕಂಡಾಗ ಬೋಧಕ ವರ್ಗದ ನೇಮಕಾತಿಗಳಲ್ಲಿ ಅಕ್ರಮ ನಡೆದಿರುವುದರ ಬಗ್ಗೆ ವಿಚಾರಣೆ ನಡೆಸುತ್ತಿರುವುದರಿಂದ ವಿಚಾರಣೆಯ ಅವಧಿಗೆ ಮಾತ್ರ ಈ ಕ್ರಮ ಕೈಗೊಳ್ಳಲಾಗಿದೆ, ಇದು ಶಿಕ್ಷೆಯ ಕ್ರಮ ಅಲ್ಲ ಎಂದು ‘ಸ್ಪಷ್ಟೀಕರಣ’ ನೀಡಲಾಯಿತು. ಆದರೆ ಈ ನೇಮಕಾತಿಯನ್ನು ಸಂಸ್ಥೆಯ ಆಡಳಿತ ಮಂಡಳಿ ಮಾಡುತ್ತಿದ್ದು, ಅದರಲ್ಲಿ ನಿರ್ದೇಶಕರ ಪಾತ್ರ ಗೌಣ ಎಂದು ಕಂಡು ಬಂದಿದೆ.

ಅಂದರೆ ಇದರರ್ಥ ಅಮಾನತಿಗೆ ವಾಸ್ತವ ಕಾರಣ ಬೇರೆಯೇ ಇದೆ. ರಾಜೀನಾಮೆ ನೀಡುವಂತೆ ಅವರ ಮೇಲೆ ಈ ಮೊದಲೇ ಒತ್ತಡ ಬಂದಿತ್ತು ಎಂದು ಹೇಳಲಾಗಿದೆ.

ಪ್ರೊ. ಜೇಮ್ಸ್ ತಿರುವನಂತಪುರದ ಅಭಿವೃದ್ಧಿ ಅಧ್ಯಯನ ಕೇಂದ್ರದಲ್ಲಿ ಪಿಎಚ್‌ಡಿ ಪಡೆದ ನಂತರ . ಹಾರ್ವರ್ಡ್‌ ಜನಸಂಖ್ಯೆ ಮತ್ತು ಅಭಿವೃದ್ಧಿ ಕೇಂದ್ರದಿಂದ ಡಾಕ್ಟರೇಟೋತ್ತರ ಪದವಿಯನ್ನು ಪಡೆದರು. ಆ ನಂತರ ಅವರು ಜವಹರಲಾಲ್‍ ನೆಹರು ವಿಶ್ವವಿದ್ಯಾಲಯದಲ್ಲಿ ಜನಸಂಖ್ಯಾ ಅಧ್ಯಯನಗಳ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಅದರ ನಂತರ, ಅವರು ಐಐಪಿಎಸ್‌ನ ನಿರ್ದೇಶಕರಾಗಿ ನೇಮಕಗೊಂಡರು.

ಮನ್ಸುಖ್ ಮಾಂಡವಿಯಾ – ಕೇಂದ್ರ ಸಚಿವ

ಪ್ರೊ. ಕೆ.ಎಸ್. ಜೇಮ್ಸ್‌ರ ಅಮಾನತು ಅಧ್ಯಯನ ಸ್ವಾತಂತ್ರ್ಯದ ಮೇಲಿನ ಆಕ್ರಮಣವಾಗಿದೆ ಎಂದು ವಿಜ್ಞಾನಿಗಳ ಸಮುದಾಯ ಈ ಕ್ರಮವನ್ನು ಖಂಡಿಸಿದೆ. ಈ ಬಗ್ಗೆ ಟಿಪ್ಪಣಿ ಮಾಡುತ್ತ, ಪ್ರೊ. ಜೇಮ್ಸ್ ಅವರನ್ನು ನಿರ್ದೇಶಕರನ್ನಾಗಿ ನೇಮಿಸುವುದಕ್ಕೆ ಕೇಂದ್ರ ಸರ್ಕಾರ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸಿತ್ತು, ಆದರೂ ನಿರ್ವಾಹವಿಲ್ಲದೆ ನೇಮಿಸಲಾಯಿತು ಎಂದು ಕೇರಳದ ಮಾಜಿ ಹಣಕಾಸು ಸಚಿವ ಮತ್ತು ಅರ್ಥಶಾಸ್ತ್ರಜ್ಞ ಥಾಮಸ್ ಐಸಾಕ್ ಹೇಳಿದ್ದಾರೆ.

ಐಐಪಿಎಸ್, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಗಳನ್ನು (ಎನ್‌ಎಫ್‌ಹೆಚ್‌ಎಸ್) ನಡೆಸುವ ಜವಾಬ್ದಾರಿಯುತ ಸಂಸ್ಥೆಯಾಗಿದೆ. ಎನ್‌ಎಫ್‌ಹೆಚ್‌ಎಸ್-5ರ ಫಲಿತಾಂಶಗಳು ಮೋದಿ ಸರ್ಕಾರಕ್ಕೆ ರುಚಿಸಿಲ್ಲ, ಅದಕ್ಕೇ ಈ ನಡೆ ಎನ್ನಲಾಗಿದೆ.

ಆ ಸಮೀಕ್ಷಾ ವರದಿಯ ಪ್ರಕಾರ ಇಂದು ಭಾರತದಲ್ಲಿ ಶೇಕಡ 19ರಷ್ಟು ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಆದರೆ ಇದಕ್ಕೆ ಮೊದಲೇ ಇಡೀ ದೇಶವನ್ನು ಬಯಲು ಶೌಚಾಲಯಮುಕ್ತ ದೇಶ ಎಂದು ಘೋಷಿಸಿ ಭಾರತ ಸರ್ಕಾರ ಸಂಭ್ರಮಿಸುತ್ತಿತ್ತು.

ಇಷ್ಟೇ ಅಲ್ಲ, ಭಾರತ ಸರ್ಕಾರವು ಉಜ್ವಲ ಯೋಜನೆ ಮೂಲಕ ಪ್ರತಿ ಕುಟುಂಬಕ್ಕೂ ಅಡುಗೆ ಅನಿಲ ಸಿಲಿಂಡರ್‌ಗಳನ್ನು ತಲುಪಿಸಿದೆ ಎಂದು    ಹೆಮ್ಮೆಪಡುತ್ತಿರುವಾಗ, ಸಮೀಕ್ಷಾ ವರದಿ ಕೊಡುವ ಚಿತ್ರವೇ ಬೇರೆ. ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಶೇ 40ರಷ್ಟು ಕುಟುಂಬಗಳು ಇನ್ನೂ ಅಡುಗೆ ಅನಿಲ ಸಂಪರ್ಕ ಹೊಂದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಶೇ.57ರಷ್ಟು ಕುಟುಂಬಗಳಿಗೆ ಇನ್ನೂ ಅಡುಗೆ ಅನಿಲ ಲಭ್ಯವಿಲ್ಲ.

ಸರಕಾರಕ್ಕೆ ಮುಜುಗರ ಉಂಟು ಮಾಡಿರುವ ಮತ್ತೊಂದು ಅಂಶವೆಂದರೆ ಎನ್‌ಎಫ್‌ಹೆಚ್‌ಎಸ್-5 ರ ಪ್ರಕಾರ ಭಾರತದಲ್ಲಿ ರಕ್ತಹೀನತೆಯಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಅಂತರರಾಷ್ಟ್ರೀಯ ಆರೋಗ್ಯ/ಲಿಂಗ ಸೂಚ್ಯಂಕಗಳಲ್ಲಿ ಭಾರತವು ಹಿಂದುಳಿದಿರುವುದಕ್ಕೆ ಒಂದು ಕಾರಣವೆಂದರೆ ರಕ್ತಹೀನತೆಯ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು. ಈಗಾಗಲೇ ವರದಿಯಾಗಿರುವಂತೆ ಎನ್‌ಎಫ್‌ಹೆಚ್‌ಎಸ್-6 ಸಮೀಕ್ಷೆಯ ಪ್ರಶ್ನಾವಳಿಯಿಂದ ಮಹಿಳೆಯರಲ್ಲಿ ರಕ್ತಹೀನತೆಯ ಪ್ರಶ್ನೆಯನ್ನು ತೆಗೆದುಹಾಕಲು ಭಾರತ ಸರ್ಕಾರ ನಿರ್ಧರಿಸಿರುವುದು ಅದರ ಮುಜುಗರಕ್ಕೆ ಸಾಕ್ಷಿ. ಆದರೆ ಐಐಪಿಎಸ್ ಈ ಬಗ್ಗೆ ಅಸಮಾಧಾನ
ವ್ಯಕ್ತಪಡಿಸಿದೆಯಂತೆ.

ಇದನ್ನೂ ಓದಿ:ಸೌಜನ್ಯ ಪ್ರಕರಣ: ರಾವ್ ಅಪರಾಧಿ ಅಲ್ಲ ನಿಜ, ಹಾಗಾದರೆ ಅಪರಾಧಿಗಳು ಯಾರು?

ಕೇಂದ್ರ ಆರೋಗ್ಯಮಂತ್ರಿಗಳು ಐಐಪಿಎಸ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದು, ಆಡಳಿತ ಮಂಡಳಿಯ ಇತ್ತೀಚಿನ ಸಭೆಯಲ್ಲಿ ಅವರೊಂದಿಗೆ ಕಟುವಾಗಿ ಮಾತಾಡಿದರು, ಇದು ಯಾವುದಾದರೂ ಪಾಶ್ಚಿಮಾತ್ಯ ಪಿತೂರಿಯ ಭಾಗವೇ ಎಂದು ಕೇಳಿದರು ಎಂದು ವರದಿಯಾಗಿದೆ(ದಿ ವೈರ್, ಜುಲೈ30).

ಅವರಿಂದ ರಾಜೀನಾಮೆ ಪಡೆದು ಆ ಹುದ್ದೆಗೆ ಸರಕಾರದ ಅಗತ್ಯಗಳಿಗೆ ಹೊಂದಿಕೊಳ್ಳುವಂತಹ ವ್ಯಕ್ತಿಯನ್ನು ನೇಮಿಸುವ ಹುನ್ನಾರಕ್ಕೆ ಅವರು ಮಣಿಯದ್ದರಿಂದ ಈ ಕಾರಣ ಕೊಟ್ಟು ಅಮಾನತಿನಲ್ಲಿಟ್ಟಿದ್ದಾರೆ ಎಂದು ಹೇಳಲಾಗಿದೆ.

ಸರಕಾರಕ್ಕೆ ಅಂಕಿ-ಅಂಶಗಳ ಭೀತಿ!

ಅಂಕಿ-ಅಂಶಗಳೊಂದಿಗೆ ಮೋದಿ ಸರಕಾರದ ಗುದ್ದಾಟ ಹೊಸದೇನಲ್ಲ.

  •  ಅವರ ಮೊದಲ ಅಧಿಕಾರಾವಧಿಯಲ್ಲಿ ಗ್ರಾಹಕರ ಬಳಕೆ ವೆಚ್ಚ ಸಮೀಕ್ಷೆಯನ್ನು ಕೈಬಿಡಲಾಯಿತು.
  •  ಜನವರಿ 2019ರಲ್ಲಿ ನಿರುದ್ಯೋಗ ದತ್ತಾಂಶಗಳು ಪ್ರಕಟಣೆಗೆ ಲಭ್ಯವಾದವು. ಆದರೆ ಅದರ ಪ್ರಕಟಣೆಯನ್ನು ತಡೆ ಹಿಡಿಯಲಾಯಿತು. ಮೇ 2019ರಲ್ಲಿ ಸಾರ್ವತ್ರಿಕ ಚುನಾವಣೆಗಳ ನಂತರ ಅದನ್ನು ಪ್ರಕಟಿಸಲಾಯಿತು. ನಿರುದ್ಯೋಗ ದರ ಅವರ ಆಡಳಿತದಲ್ಲಿ 3-4 ಶೇ.ದಿಂದ 6 ಶೇ.ಕ್ಕೆ ಏರಿದ್ದು ತಡೆ ಹಿಡಿಯಲು ಕಾರಣ ಎಂದು ತಿಳಿಯಿತು. ಇದನ್ನು ಪ್ರತಿಭಟಿಸಿ ರಾಷ್ಟ್ರೀಯಅಂಕಿ-ಅಂಶಗಳ ಆಯೋಗ(ಎನ್‍ಎಸ್‍ಸಿ)ದ ಹಂಗಾಮಿ ಅಧ್ಯಕ್ಷರು ಸೇರಿದಂತೆ ಹಲವು ಸದಸ್ಯರು ರಾಜೀನಾಮೆ ನೀಡಿದರು. ಅದರೊಂದಿಗೆ, ನಿರುದ್ಯೋಗ ಸಮೀಕ್ಷೆಯ ಹಳೆಯ ವ್ಯವಸ್ಥೆಯು ಕೊನೆಗೊಂಡಿತು. ಬದಲಾಗಿ, ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸುವ ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯನ್ನು ಪರಿಚಯಿಸಲಾಯಿತು.
  •  ಈಗ ತಡವಾಗಿಯಾದರೂ ಉದ್ಯೋಗ ಸಮೀಕ್ಷೆಯ ಫಲಿತಾಂಶಗಳು ಪ್ರಕಟವಾಗುತ್ತಿವೆ. ಆದರೆ ಗ್ರಾಹಕ ವೆಚ್ಚ ಸಮೀಕ್ಷೆ ನಡೆಯುತ್ತಲೇ ಇಲ್ಲ. ಏಕೆಂದರೆ, 2011-12 ಮತ್ತು 2017-18 ರ ನಡುವೆ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಗ್ರಾಮೀಣ ಭಾರತದಲ್ಲಿ ಜನರ ಬಳಕೆ ವೆಚ್ಚದ ಪ್ರಮಾಣ ಕುಸಿದಿದೆ, ಅಂದರೆ ಬಡತನ ಹೆಚ್ಚಾಗಿದೆ ಎಂದು ಕಂಡು ಬಂತು. 1980 ರ ದಶಕದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರ ಸಂಖ್ಯೆ ಇಳಿಮುಖವಾಗಲು ಪ್ರಾರಂಭಿಸಿದ ನಂತರ ಮೊದಲ ಬಾರಿಗೆ ಬಡವರ ಸಂಖ್ಯೆಯು ಹೆಚ್ಚುತ್ತಿರುವ ಪ್ರವೃತ್ತಿಯನ್ನು ಇದು ತೋರಿಸಿತು. ಈ ಸಮಸ್ಯೆಗೆ ಮೋದಿ ಸರಕಾರ ಪರಿಹಾರ-ಬಳಕೆ ವೆಚ್ಚದ ಸಮೀಕ್ಷೆಯನ್ನೇ ನಿಲ್ಲಿಸುವುದು, ಆಮೂಲಕ ಬಳಕೆ ವೆಚ್ದದ ಆಧಾರದ ಮೇಲೆ ಬಡವರ ಸಂಖ್ಯೆಯನ್ನು ಲೆಕ್ಕಾಚಾರ ಮಾಡುವ ವಿಧಾನವನ್ನು ಕೈಬಿಡಲಾಗಿದೆ. ಈಗ ‘ಬಹು ಆಯಾಮೀಯ ಬಡತನ ಸೂಚ್ಯಂಕ’ಎಂಬುದರ ಮೂಲಕ ಬಡತನವನ್ನು ಅಳೆಯಲಾಗುತ್ತಿದೆ. ಅದರ ಪ್ರಕಾರ ಮೋದಿಯವರ ಆಡಳಿತದಲ್ಲಿ ಭಾರತದಲ್ಲಿ ಬಡತನ ಕಡಿಮೆಯಾಗುತ್ತಿದೆ. ಆದರೆ ಈ ಬಡತನ ಸೂಚ್ಯಂಕದ ಪರಿಭಾಷೆಯೇ ಬಡವಾಗಿದೆ ಎಂದಿದ್ದಾರೆ ಇನ್ನೊಬ್ಬ ಅರ್ಥಶಾಸ್ತ್ರಜ್ಞ ಪ್ರೊ. ಪ್ರಭಾತ್‍ ಪಟ್ನಾಯಕ್ ( ನ್ಯೂಸ್‍ ಕ್ಲಿಕ್, ಜುಲೈ 30)
  • ಇನ್ನು, ಕೊವಿಡ್‌ ಬಾಧೆಗೊಳಗಾಗಿದ್ದ ಎಲ್ಲಾ ಚಟುವಟಿಕೆಗಳು ಸಾಮಾನ್ಯಗೊಂಡಿದ್ದರೂ, ಅದೇ ಕಾರಣದಿಂದ 150 ವರ್ಷಗಳಲ್ಲಿ ಮೊತ್ತಮೊದಲ ಬಾರಿಗೆ ಮುಂದೂಡಿದ್ದ 2021ರ ಜನಗಣತಿಯನ್ನು ನಡೆಸುವ ಯೋಚನೆ ಇನ್ನೂ ಕಾಣುತ್ತಿಲ್ಲ.

“2024ರ ಚುನಾವಣೆಗೂ ಮುನ್ನ ಇದು ಆಗುವುದಿಲ್ಲ. ಏಕೆಂದರೆ ಭಾರತದಲ್ಲಿ ಕೋವಿಡ್‌ನಿಂದ ಕೇವಲ 5ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಮೋದಿ ಹೇಳುತ್ತಾರೆ. 5 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಯಾವುದು ಸರಿ ಎಂಬುದು ಜನಗಣತಿಯ ಅಂಕಿ-ಅಂಶಗಳು ಹೊರಬಂದಾಗ ಖಚಿತವಾಗಿ ತಿಳಿಯಲಿದೆ. ಹಾಗಾಗಿ ಜನಗಣತಿ ಇಲ್ಲ” ಎಂದು ಪ್ರೊ. ಥಾಮಸ್ ಐಸಾಕ್ ಹೇಳುತ್ತಾರೆ.

“ಮುಖವೇ ಕುರೂಪಗೊಂಡಿದ್ದರೆ, ಕನ್ನಡಿಯನ್ನು ಒಡೆದು ಏನು ಪ್ರಯೋಜನ? ಆದರೆ ಮೋದಿ ಇದನ್ನೇ ಮಾಡುತ್ತಿದ್ದಾರೆ. ದೇಶ ಚುನಾವಣಾ ವರ್ಷಕ್ಕೆ ಕಾಲಿಡುತ್ತಿದ್ದಂತೆ ಎಲ್ಲ ಆರ್ಥಿಕ ಕ್ಷೇತ್ರಗಳಲ್ಲೂ ಸೋಲಿನ ಕಥೆಗಳು ಕೇಳಿ ಬರುತ್ತಿವೆ. ಅದನ್ನು ‘ಯಶಸ್ವಿ’ ಎಂದು ಬದಲಿಸಲು ಮತ್ತು ಕಥೆಯನ್ನು ಬದಲಿಸಿ ಬರೆಯಲು, ಭಾರತದ ಅಂಕಿ-ಅಂಶ ವ್ಯವಸ್ಥೆಯನ್ನು ಕಿತ್ತುಹಾಕಲಾಗುತ್ತಿದೆ. ಪ್ರೊ. ಕೆ.ಎಸ್. ಜೇಮ್ಸ್ ಅಮಾನತು ಅದರದ್ದೇ ಒಂದು ಭಾಗ” ಎನ್ನುತ್ತಾರೆ ಪ್ರೊ. ಐಸಾಕ್.

ಕಳೆದ ಎರಡು ವಾರಗಳಿಂದ ಮೋದಿಯವರ ಆರ್ಥಿಕ ಸಲಹೆಗಾರರು ಭಾರತದ ಅಂಕಿ-ಅಂಶಗಳ ವ್ಯವಸ್ಥೆಯ ವಿರುದ್ಧ ಮಾಧ್ಯಮಗಳಲ್ಲಿ ಸರದಿಯಲ್ಲಿ ಲೇಖನಗಳನ್ನು ಬರೆಯುತ್ತಿದ್ದಾರೆ. ಮಾದರಿ ಸಮೀಕ್ಷೆಯ( ಸ್ಯಾಂಪಲ್‍ ಸರ್ವೆ) ಆಧಾರವನ್ನೇ ಕಳಚಿ ಹಾಕಲು ಆಯೋಗವನ್ನು ನೇಮಿಸಲಾಗಿದೆ. ಅದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ಭಾರತದ ಅಂಕಿ-ಅಂಶ ವ್ಯವಸ್ಥೆಯನ್ನೇ ಕಳಚಿ ಹಾಕುವ ನಡೆಗಳು ಸಾಗಿವೆ. ಇತಿಹಾಸವನ್ನು ‘ಸರಿಪಡಿಸುವುದು, ಅಂಕಿ-ಅಂಶಗಳನ್ನು ‘ಸರಿಪಡಿಸುವುದು’ ಮಾಹಿತಿ ವಿನಿಮಯದ ಎಲ್ಲ ಸ್ವೀಕೃತ ಮಾನದಂಡಗಳನ್ನು ತಿರಸ್ಕರಿಸುವುದು ಇತ್ಯಾದಿಗಳಮೂಲಕ ಬಿಜೆಪಿ ಆಳ್ವಿಕೆಯು
ಭಾರತವನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ ಎಂದು ಅವರು ಖೇದದಿಂದ ಪ್ರಶ್ನಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *