ಬೆಂಗಳೂರು : ಬೆಂಗಳೂರು ನಗರದ ಖಾಸಗಿ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಪ್ರಾಂಶುಪಾಲರು ಸಹಿತ ಕೆಲವರ ವಿರುದ್ಧ ಡೆತ್‌ನೋಟ್ ಬರೆದಿಟ್ಟು ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತಪುರ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಹೆಸರು ಕೆ.ಎಸ್. ರಮ್ಯಾ ಮೂರ್ತಿ. ಟಿ.ದಾಸರಹಳ್ಳಿಯ ಸೌಂದರ್ಯ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಳು. “Dear school marks is not everything. I HATE YOU PRINCIPAL” ಎಂದು ಇಂಗ್ಲಿಷ್ನಲ್ಲೇ ಡೆತ್‌ನೋಟ್ ಬರೆದಿರುವ ರಮ್ಯಾ, ಅದರಲ್ಲಿ ಕೆಲ ವಿದ್ಯಾರ್ಥಿಗಳ ಹೆಸರನ್ನೂ ಬರೆದಿದ್ದಾಳೆ.
ಬಾಲಕಿಯು ಕಳೆದ ಆಗಸ್ಟ್ ತಿಂಗಳಿನಲ್ಲಿ ಒಂದು ದಿನ ಶಾಲೆಗೆ ಸ್ನ್ಯಾಕ್ಸ್ ತೆಗೆದುಕೊಂಡು ಹೋಗಿದ್ದಳಂತೆ. ಆದ ಶಾಲೆ ಆಡಳಿತ ಮಂಡಳಿಯವರು, ಇದರಿಂದ ಶಾಲೆಯ ಘನತೆ ಹಾಳಾಗುತ್ತದೆ. ಹೀಗೆ ತಿಂಡಿ ಕೊಟ್ಟು ಕಳುಹಿಸಬೇಡಿ ಎಂದು ಆಕೆಯ ತಂದೆ, ತಾಯಿಯನ್ನು ಶಾಲೆಗೆ ಕರೆಯಿಸಿ ತಿಳಿಸಿದ್ದರಂತೆ.
ಆದರೆ, ಬಳಿಕ ಬಾಲಕಿಯ ತಾಯಿ ಕವಿತಾ, ಪ್ರಾಂಶುಪಾಲರ ಧೋರಣೆ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು. ಇದೇ ಕಾರಣಕ್ಕೆ ಮಗಳಿಗೆ ಮಾನಸಿಕ ಒತ್ತಡ ಹಾಕಲಾಗಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ.
ಮೊನ್ನೆ ತಾನೆ ಶಾಲೆಗೆ ತೆರಳಿ ಪರೀಕ್ಷೆ ಬರೆದು ಬಂದಿದ್ದ ಬಾಲಕಿ, ನಿನ್ನೆ ಸಾವಿನ ಮನೆ ಸೇರಿದ್ದಾಳೆ. ನಿತ್ಯ ಬೆಳಗ್ಗೆ ಐದು ಗಂಟೆಗೆ ಎದ್ದು ವಾಕಿಂಗ್ಗೆ ತೆರಳಿ, ದೇವಸ್ಥಾನಕ್ಕೆ ಭೇಟಿ ನೀಡಿ ಬರುತ್ತಿದ್ದಳು. ಅದರಂತೆ ನಿನ್ನೆ ಕೂಡ ವಾಕಿಂಗ್ಗೆ ಅಂತಾ ಎದ್ದು ಹೋಗಿದ್ದು, ಆದರೆ ವಾಪಸ್ ಬಂದಿರಲಿಲ್ಲ. ಬಳಿಕ ಪೋಷಕರು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಹಾಗಾಗಿ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿದ್ದಾರೆ. ಮಧ್ಯಾಹ್ನ ವೇಳೆಗೆ ಶೆಟ್ಟಿಹಳ್ಳಿ ರೈಲ್ವೆ ಟ್ರ್ಯಾಕ್ ಮೇಲೆ ಆಕೆಯ ಮೃತದೇಹ ಸಿಕ್ಕಿದೆ. ಯಶವಂತಪುರ ರೈಲ್ವೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.