ಮೋದಿಯವರ ಪ್ರಾಮಾಣಿಕ ಉತ್ತರಕ್ಕಾಗಿ ನಾನೂ ಕಾಯುತ್ತಿದ್ದೇನೆ : ಸಿದ್ದರಾಮಯ್ಯ

ಬೆಂಗಳೂರು : ರಾಜ್ಯ ಪ್ರವಾಸದಲ್ಲಿರುವ ಪ್ರಧಾನಮಂತ್ರಿಯವರಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಎಂಟನೆ ಕಂತಿನ ಪ್ರಶ್ನೆಗಳನ್ನು ಕೇಳಿದ್ದು, ಒಂದಿಷ್ಟು ಸವಾಲುಗಳನ್ನು ಹಾಕಿದ್ದಾರೆ.

ಕೇಳಿಸಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಿ : 
ಕರ್ನಾಟಕದ ರೈತರ ಬದುಕು ನರಕರೂಪಿಯಾಗುತ್ತಿದೆ. ಕೇಂದ್ರ, ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ರಾಕ್ಷಸ ರೀತಿಯಲ್ಲಿ ಕಾಡುತ್ತಿವೆ. 2023 ಬರುತ್ತಿದ್ದಂತೆಯೆ ರೈತರು ಬೆಳೆದ ಎಲ್ಲ ಕೃಷಿ ಉತ್ಪನ್ನಗಳ ಬೆಲೆಗಳು ಪಾತಾಳಕ್ಕೆ ಕುಸಿಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಮಂಡ್ಯ ಭಾಗದ ಸಮಸ್ಯೆಗಳ ಕುರಿತ ವರದಿ ಪಡೆದು, ರೈತರು, ಪತ್ರಕರ್ತರೊಂದಿಗೆ ಮಾತನಾಡಿದರೆ ಮತ್ತಷ್ಟು ಸಮಸ್ಯೆಗಳು ತಿಳಿಯುತ್ತವೆ. ಹೇಳುವ ಪ್ರವೃತ್ತಿಯನ್ನು ಬಿಟ್ಟು ಕೇಳಿಸಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ನೇರವಾಗಿ ಕಾರಣ  ನೀವೆ :
ಮಂಡ್ಯ, ಮೈಸೂರಿನ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ರೈತರು ವ್ಯಾಪಕವಾಗಿ ಅರಿಶಿಣ ಬೆಳೆಯುತ್ತಾರೆ. 15-20 ಸಾವಿರ ರೂಪಾಯಿಗಳಷ್ಟು ಪ್ರತಿ ಕ್ವಿಂಟಾಲ್ ಅರಿಶಿಣಕ್ಕೆ ಬೆಲೆ ಸಿಕ್ಕರೆ ರೈತ ಉಳಿದುಕೊಳ್ಳುತ್ತಾನೆ. ಈಗ 6000ರೂಗಳಿಗಿಂತಲೂ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಎಂಎಸ್‍ಪಿಯಲ್ಲೂ ಖರೀದಿಸುತ್ತಿಲ್ಲ. ಇದರಿಂದಾಗಿ ಲಕ್ಷಾಂತರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಎಂದು ತಿಳಿಸಿದ್ದಾರೆ. 18000 ರಿಂದ 20000 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದ ಕೊಬ್ಬರಿ ಬೆಲೆ ಈಗ ಕೇವಲ 9000 ಕ್ಕೆ ಕುಸಿದರೂ ಸರ್ಕಾರ ನಿಷ್ಕ್ರಿಯವಾಗಿದೆ. ಎಂಎಸ್ಪಿಗಿಂತಲೂ 2500 ರೂಪಾಯಿಗಳಷ್ಟು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಕೆಲವು ತಿಂಗಳ ಹಿಂದೆ 60000 ರೂಪಾಯಿಗಳಿಗೆ ಪ್ರತಿ ಕ್ವಿಂಟಾಲ್ ಅಡಿಕೆ ಮಾರಾಟವಾಗುತ್ತಿತ್ತು. ಈಗ 40 ಸಾವಿರ ರೂಪಾಯಿಗಳಿಗೆ ಕುಸಿದಿದೆ. ಅಡಿಕೆ ಬೆಳೆಯುವ ಜಿಲ್ಲೆಗಳ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ನಿಮ್ಮ ಬಿಜೆಪಿ ಸರ್ಕಾರಗಳು ತಂದೊಡ್ಡಿವೆ. ನಿಮ್ಮ ಸರ್ಕಾರಗಳಿಂದ ಇದುವರೆಗೆ ಅಡಿಕೆ ಬೆಳೆಗೆ ಬಂದಿರುವ ಹಳದಿ ರೋಗ, ಎಲೆಚುಕ್ಕಿ ರೋಗಕ್ಕೆ ಔಷಧ ಕಂಡುಹಿಡಿಯಲಾಗಿಲ್ಲ. ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ನೀವೆ ನೇರವಾಗಿ ಕಾರಣ ಅಲ್ಲವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರ ಮಂಡ್ಯದಲ್ಲಿ  ಸಕ್ಕರೆ ಕಾರ್ಖಾನೆ ಆರಂಭಿಸಿಲ್ಲ : 
ನಿಮ್ಮ ಪಕ್ಷದ ಮಾಡಾಳ್ ವಿರೂಪಾಕ್ಷಪ್ಪನವರ ಮನೆಯಲ್ಲಿ 8 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಒಂದೇ ಕಂತಿನಲ್ಲಿ ಸಿಕ್ಕಿದೆ. ಇಷ್ಟೊಂದು ನಗದನ್ನು ಇಟ್ಟುಕೊಳ್ಳಲು ನಿಮ್ಮ ಪಾರ್ಟಿಯವರಿಗೆ ಮಾತ್ರ ಅನುಮತಿ ನೀಡಲಾಗಿದೆಯೆ ಎಂದು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಈ ಹಿಂದೆ ಕ್ವಿಂಟಾಲಿಗೆ 90000 ರೂವರೆಗೆ ಇದ್ದ ಮೆಣಸಿನ ಬೆಲೆ ಈಗ 40 ಸಾವಿರ ರೂಪಾಯಿಗೆ ಕುಸಿದಿದೆ. ಕೇಂದ್ರ ಸರ್ಕಾರ ಕಬ್ಬಿನ ಎಫ್‍ಆರ್‍ಪಿದರಗಳನ್ನು ಪ್ರತಿ ಟನ್ನಿನ ಮೇಲೆ 3000ರೂ ಆಸುಪಾಸಿನಲ್ಲಿಟ್ಟಿದೆ. ಆದರೆ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ನಿಗೆ 6500 ರೂಗಳಿಗೂ ಹೆಚ್ಚು ಸಂಪಾದಿಸುತ್ತಿವೆ. ಕಬ್ಬು ಬೆಳೆಯುವ ರೈತರೂ ಸಂಕಷ್ಟದಲ್ಲಿದ್ದಾರೆ. ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಿ ಎಂದು ನಾನು ಕಳೆದ ಮೂರೂವರೆ ವರ್ಷಗಳಿಂದ ಒತ್ತಾಯಿಸುತ್ತಿದ್ದೇನೆ. ಆದರೂ ರಾಜ್ಯದ ಬಿಜೆಪಿ ಸರ್ಕಾರಗಳು ಪ್ರಾರಂಭಿಸಿಲ್ಲ ಎಂದು ಆರೋಪಿಸಿದ್ದಾರೆ.

ಹಣ್ಣು, ತರಕಾರಿ ಬೆಳೆಯುವ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ : 
ಈ ತಿಂಗಳಲ್ಲಿ 99 ಲಕ್ಷ ಲೀಟರುಗಳಿಗೆ ಹೆಚ್ಚಾಗಬೇಕಾಗಿದ್ದ ಹಾಲಿನ ಉತ್ಪಾದನೆ 71 ಲಕ್ಷ ಲೀಟರುಗಳಿಗೆ ಕುಸಿದಿದೆ. ರೈತರಿಗೆ ಪ್ರತಿದಿನ 11 ಕೋಟಿ ರೂಪಾಯಿಗಳಷ್ಟು ನಷ್ಟ ಸಂಭವಿಸುತ್ತಿದೆ ಇದಕ್ಕೆ ಬಿಜೆಪಿ ಸರ್ಕಾರವಲ್ಲದೆ ಯಾರು ಹೊಣೆ ಎಂದು ಕೇಳಿದ್ದಾರೆ. ಈರುಳ್ಳಿ ಬೆಳೆಗೆ ಬೆಲೆ ಇಲ್ಲದೆ ರೈತರು ಬೆಂಕಿ ಹಚ್ಚುತ್ತಿರುವ ಪೊಟೋಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ಇತ್ತೀಚೆಗೆ ಈರುಳ್ಳಿ ಬೆಳೆಗಾರ ರೈತರೊಬ್ಬರಿಗೆ ಕೇವಲ 2 ರೂಪಾಯಿ ಚೆಕ್ ಕೊಡಲಾಗಿತ್ತು. ಬೆಲೆ ಕುಸಿತವಾದಾಗ ಮಧ್ಯಪ್ರವೇಶಿಸಬೇಕಾದ ಕೇಂದ್ರ ರಾಜ್ಯ ಸರ್ಕಾರಗಳು ಮೌನ ವಹಿಸಿವೆ. ಹಣ್ಣು, ತರಕಾರಿ ಬೆಳೆಯುವ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಇದಕ್ಕೆ ನೀವೆ ಕಾರಣರಲ್ಲವೆ ಎಂದಿದ್ದಾರೆ.

ಇದನ್ನೂ  ಓದಿ  : ಮೋದಿ ರೋಡ್‌ ʼಶೋʼಕಿಗೆ ಮರಗಳಿಗೆ ಬಿತ್ತು ಕೊಡಲಿ!

ಮೋದಿಯ ಪ್ರಾಮಾಣಿಕ ಉತ್ತರಕ್ಕಾಗಿ ನಾನೂ ಕಾಯುತ್ತಿದ್ದೇನೆ : 
ಮೊದಲು ಸಂಕಷ್ಟಕ್ಕೆ ಸಿಲುಕಿರುವ ರೈತರು, ಕಾರ್ಮಿಕರು, ದಲಿತರು, ಮಹಿಳೆಯರು, ಯುವಜನರು, ಸಣ್ಣ ಮತ್ತು ಗೃಹ ಕೈಗಾರಿಕೋದ್ಯಮಿಗಳು, ಸಣ್ಣ ಪುಟ್ಟ ವ್ಯಾಪಾರಿಗಳ ಸಂಕಷ್ಟಗಳನ್ನು ನಿವಾರಿಸಿ ಆ ನಂತರ ಓಟು ಕೇಳಲು ಬನ್ನಿ. 10 ವರ್ಷಗಳಿಂದ ನಿಮ್ಮ ಬಣ್ಣದ ಮಾತುಗಳನ್ನು ಕೇಳಿ ಟೋಪಿ ಹಾಕಿಸಿಕೊಂಡು ಆಗಿದೆ.
ನಮ್ಮ ಜನರ ಮೈಯಲ್ಲಿ ನೀವು ಇರಿಯಲು ಒಂದಿಂಚೂ ಜಾಗವನ್ನೂ ಉಳಿಸಿಲ್ಲ. ಜನರ ಬದುಕು ಸುಧಾರಣೆಯಾಗಬೇಕಾಗಿದೆಯೇ ಹೊರತು ನಿಮ್ಮ ಬೂದಿ ಬಣ್ಣದ ಮಾತುಗಳಲ್ಲ. ಮಂತ್ರಕ್ಕೆ ಮಾವಿನ ಕಾಯಿ ಉದುರುವುದಿಲ್ಲ ಎಂದು ನಮ್ಮ ಹಿರಿಯರು ಗಾದೆ ಮಾಡಿರುವುದು ನಿಮ್ಮಂತವರನ್ನು ನೋಡಿಯೆ ತಾನೆ ಎಂದು ವಾಗ್ದಾಳಿ ನಡೆಸಿದ್ದಾರೆ. ಹಿಂದಿನ 7 ಕಂತುಗಳ ಪ್ರಶ್ನೆಗಳನ್ನೂ ಸೇರಿಸಿ ಪ್ರಾಮಾಣಿಕವಾಗಿ ಉತ್ತರ ಕೊಡುತ್ತೀರೆಂದು ರಾಜ್ಯದ ಜನರು ಆಶಿಸುತ್ತಿದ್ದಾರೆ. ನಾನೂ ಕೂಡ ಕಾಯುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *