ಬೆಂಗಳೂರು : ನಾನು ನಿಂತ ನೀರಲ್ಲ. ಹರಿಯೋ ನೀರು. ಮನೆ ಮಗನಾಗಿ ಕ್ಷೇತ್ರದ ಜನರು ನೋಡಿದ್ದಾರೆ. ನಾನು ಯಾರ ಬಗ್ಗೆಯೂ ಒಂದು ಅಕ್ಷರವೂ ಮಾತನಾಡಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಮತ್ತೆ ಬಿಜೆಪಿ ಮುಖಂಡರ ವಿರುದ್ದವೇ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಧ್ಯಕ್ಷರು, ಸಿಎಂ ಜೊತೆ ಕೆಲವು ವಿಷಯಗಳ ಬಗ್ಗೆ ಮಾತಾಡಿದ್ದೇನೆ. ಕ್ಷೇತ್ರದ ಜನರು ನನ್ನನ್ನ ಮನೆ ಮಗನಾಗಿ ನೋಡಿಕೊಂಡಿದ್ದಾರೆ. ನನಗೆ ಈಗ 72 ವರ್ಷ, ನನಗೆ ಈಗ ಆಗಬೇಕಿದ್ದು ಏನು ಇಲ್ಲ ಎಂದು ಹೇಳುವ ಮೂಲಕ ಬಿಜೆಪಿ ಬಿಡುವ ಸುಳಿವು ಕೊಟ್ಟಿದ್ದಾರೆ.
ಸೋಮಣ್ಣ ಮಾತ್ರ ಹರಿಯುವ ನೀರು ಎಂಬುದರ ಬಗ್ಗೆ ಎಚ್ಚರಿಕೆಯಿರಬೇಕು ಎಂದು ಹೇಳಿರುವ ಅವರು, ಪ್ರಚಾರ ಸಮಿತಿಯಲ್ಲಿ ಅವಕಾಶ ನೀಡದೇ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ ಈ ಬಗ್ಗೆ ನಾನು ಏನು ಮಾತಾನಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕಳೆದ ಹಲವು ದಿನಗಳಿಂದ ವಿ.ಸೋಮಣ್ಣ ಬಿಜೆಪಿ ಬಿಡಲಿದ್ದಾರೆ ಎಂಬ ವದಂತಿ ಕೇಳಿಬರುತ್ತಿದೆ. ಇತ್ತೀಚಿನ ಬೆಳವಣಿಗೆ ಕುರಿತಂತೆ ಅಸಮಾಧಾನಗೊಂಡಿರುವ ಅವರು, ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನಗಳು ಮುಂದುವರೆದಿದ್ದು, ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಆರ್.ಅಶೋಕ್ ಸೇರಿದಂತೆ ಸೋಮಣ್ಣನವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಈ ಬೆಳವಣಿಗೆಗಳ ನಡುವೆಯೇ ಚುನಾವಣಾ ಪ್ರಚಾರ ಹಾಗೂ ನಿರ್ವಹಣಾ ಸಮಿತಿಯಲ್ಲಿ ಸಚಿವ ಸೋಮಣ್ಣನವರಿಗೆ ಸ್ಥಾನ ಕಲ್ಪಿಸಿಲ್ಲ.ಇದು ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಮಾಡಿದೆ ಎನ್ನಲಾಗುತ್ತಿದೆ.