ಹೈದರಾಬಾದ್: ಜುಬ್ಲಿ ಹಿಲ್ಸ್ ಬಳಿ ಅಪ್ರಾಪ್ತೆ ತರುಣಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯ ಕುರಿತು ಬಿಜೆಪಿ ಶಾಸಕ ರಘುನಂದನ್ ರಾವ್ ಅವರು ಬಂಧಿಸಲಾಗಿದೆ. ಅತ್ಯಾಚಾರ ಸಂತ್ರಸ್ತೆ ಹಾಗೂ ಆರೋಪಿಗಳ ಫೋಟೊ ವಿಡಿಯೋ ಬಹಿರಂಗಪಡಿಸಿದ್ದಕ್ಕಾಗಿ ಅವರನ್ನು ಹೈದರಾಬಾದ್ ಪೋಲಿಸರು ಬಂಧಿಸಿದ್ದಾರೆ.
ವಕೀಲರೊಬ್ಬರ ದೂರಿನ ಮೇರೆಗೆ ರಘುನಂದನ್ ರಾವ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 228 ಎ ಅಡಿಯಲ್ಲಿ ಅಬಿಡ್ ರೋಡ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೋಮವಾರ(ಜೂನ್ 06) ತಡರಾತ್ರಿ ಪ್ರಕರಣ ದಾಖಲಾಗಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸುವವರಿಗೆ ಐಪಿಸಿ ಸೆಕ್ಷನ್ 228ಎ ಅಡಿಯಲ್ಲಿ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಸಂತ್ರಸ್ತೆಯ ಗುರುತನ್ನು ತಾನು ಬಹಿರಂಗಪಡಿಸಿಲ್ಲ ಎಂದು ಬಿಜೆಪಿ ಶಾಸಕನ ವಾದವಾಗಿದ್ದು, ಘಟನೆಯಲ್ಲಿ ಎಐಎಂಐಎಂ ಶಾಸಕರ ಪುತ್ರನ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿ, ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿದ ಇಬ್ಬರು ಯ್ಯೂಟೂಬರ್‌ಗಳ ವಿರುದ್ಧವೂ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ವೈರಲ್ ಆಗಿದ್ದ ವಿಡಿಯೊ ಶೇರ್ ಮಾಡಿದ್ದಕ್ಕೆ ರಘುನಂದನ್ ರಾವ್ ವಿರುದ್ಧ ತೆಲಂಗಾಣ ಕಾಂಗ್ರೆಸ್ ನಾಯಕ ಮಾಣಿಕಂ ಟಾಗೋರ್, ಈ ವಿಡಿಯೊ ಅವರಿಗೆ ಹೇಗೆ ಸಿಕ್ಕಿತು? ಇಂಥಾ ವಿಡಿಯೊಗಳನ್ನು ಪ್ರದರ್ಶಿಸುವ ಮೂಲಕ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ್ದಕ್ಕಾಗಿ ಅವರ ವಿರುದ್ಧ ಕೇಸು ದಾಖಲಿಸಬೇಕು ಎಂದು ಸಿಡಿದೆದ್ದಿದ್ದಾರೆ.
ನಮ್ಮ ಪಕ್ಷವು ‘ಅಗ್ಗದ ಟಿಆರ್‌ಪಿ’ಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ, ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಮತ್ತು ಸುಪ್ರೀಂಕೋರ್ಟ್ ಮಾರ್ಗಸೂಚಿಗಳ ಬಗ್ಗೆ ಕಾಳಜಿ ವಹಿಸುತ್ತದೆ. ನಿಮ್ಮಂತೆ ‘ಭಾರತ್ ಮಾತಾ ಕಿ ಜೈ’ ಕೇವಲ ಘೋಷಣೆಯಲ್ಲ. ಪ್ರತಿಯೊಬ್ಬ ಸಹೋದರಿ ಮತ್ತು ತಾಯಿ ನಮಗೆ ಭಾರತ ಮಾತೆಯೇ. ನಮ್ಮ ಹೋರಾಟ ಸತ್ಯಕ್ಕಾಗಿರುವುದಾಗಿ’ ಎಂದು ಮಾಣಿಕಂ ಟಾಗೋರ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿ ಪಕ್ಷದವರು ಅಪ್ರಾಪ್ತೆ ಬಾಲಕಿಯ ವಿಡಿಯೊವನ್ನು ಹಂಚಿಕೊಂಡ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಸಂತ್ರಸ್ತೆಯನ್ನು ದೂಷಿಸಲು ಪ್ರಾರಂಭಿಸಿದರು ಎಂದು ಟಿಆರ್‌ಎಸ್ ಸಾಮಾಜಿಕ ಮಾಧ್ಯಮ ಸಂಚಾಲಕ ಕ್ರಿಶನ್ ಹೇಳಿಕೆ ನೀಡಿದ್ದಾರೆ.