ಹಾವೇರಿ: 2008ರಲ್ಲಿ ಜಿಲ್ಲೆಯಲ್ಲಿ ಬಿತ್ತನೆಗೆ ಗೊಬ್ಬರ ಕೇಳಿದ ರೈತರ ಮೇಲೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರಕಾರ ಗೋಲಿಬಾರ್ ನಡೆಸಿ ಸಿದ್ಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನತ್ತಿ ರೈತರ ಮೇಲೆ ಗುಂಡು ಹಾರಿಸಿ, ಅವರ ಪ್ರಾಣಗಳನ್ನು ಬಲಿ ಪಡೆದು ಇಂದಿಗೆ 14 ವರ್ಷ ಕಳೆಯಿತು.
ಹುತಾತ್ಮ ರೈತರ ಸಂಸ್ಮರಾರ್ಥವಾಗಿ ಇಂದು (ಜೂನ್ 10) ಹಾವೇರಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರೈತರ ಹುತಾತ್ಮ ಸ್ಥಂಭಕ್ಕೆ ಗೌರವ ಸಲ್ಲಿಸಿದ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ್, ರಾಜ್ಯದಲ್ಲಿ ಮತ್ತದೇ ಬಿಜೆಪಿ ಆಡಳಿತ ನಡೆಸುತ್ತಿದೆಯಾದರೂ ಇಂದಿಗೂ ರೈತರ ಸಮಸ್ಯೆಗಳು ಪರಿಹಾರ ಕಾಣದೆ ರೈತರನ್ನು ಬಾಧಿಸುತ್ತಲೇ ಇವೆ. ಆಳುವ ಪ್ರಭುತ್ವಗಳ ಒಡೆದಾಳುವ ಕುಟಿಲ ನೀತಿಗಳಿಗೆ ಅನ್ನದಾತ ಸಿಡಿದೆದ್ದು ಐಕ್ಯ ಚಳುವಳಿಗೆ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಕೊನೆಗಾಣದ ಬಾಳಿನ ಗೋಳಿಗೆ ಹೋರಾಟವೇ ದಾರಿಯಾಗಿದೆ. ಹಾಗಾಗಿ ಹೋರಾಟವೊಂದೇ ಸರ್ವರ ಧ್ಯೇಯವಾಗಬೇಕು ಎಂದು ಸ್ಮರಿಸಿದರು.