ಹುಸಿ ಸಾರ್ವತ್ರಿಕ ಕಲ್ಪನೆಗಳು ಅಕಾಡೆಮಿಕ್ಸ್ ನಿಂದ ಟ್ರೋಲರ್ಸ್ ವರೆಗೆ ವ್ಯಾಪಕವಾಗಿವೆ: ಪ್ರೊ. ರಾಜೇಂದ್ರ ಚೆನ್ನಿ

– ವಸಂತರಾಜ ಎನ್.ಕೆ.

ರಾಷ್ಟ್ರವಾದ ಮುಂತಾದ ಹಲವು ಹುಸಿ ಸಾರ್ವತ್ರಿಕ ಕಲ್ಪನೆಗಳು ನಮ್ಮ ಅಕಾಡೆಮಿಕ್ಸ್ ನಿಂದ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಟ್ರೋಲರ್ಸ್ ವರೆಗೆ ವ್ಯಾಪಕವಾಗಿ ಹಬ್ಬಿವೆ. ಇಂತಹ ಹಲವು ಹುಸಿ ಸಾರ್ವತ್ರಿಕ ಕಲ್ಪನೆಗಳು ವಸಾಹತುಶಾಹಿ ಕಾಲದಲ್ಲಿ ಒರಿಯಂಟಲಿಸ್ಟರು ಪ್ರಸ್ತುತ ಪಡಿಸಿದ ‘ಭಾರತೀಯ ತತ್ವಶಾಸ್ತ್ರ ಪರಂಪರೆ’ ಎಂಬ ಕಲ್ಪಿತ ಆಕೃತಿಯಿಂದ ಬಂದಿದ್ದು. ವಸಾಹತುಶಾಹಿ ನಂತರದ ಸ್ವಾತಂತ್ರ್ಯೋತ್ತರ ಕಾಲದಲ್ಲೂ ಪೂರ್ಣ ನಿರ್ವಸಾಹತೀಕರಣದ ಅಭಾವದಿಂದ ನಮ್ಮ ಬೌದ್ಧಿಕ ಪರಂಪರೆ ಮತ್ತು ಸಂಕಥನಗಳಲ್ಲಿ ಈ ಆಕೃತಿ ಮುಂದುವರೆದಿದೆ ಎಂದು ಪ್ರೊ. ರಾಜೇಂದ್ರ ಚೆನ್ನಿ ಅವರು ಹೇಳಿದರು.

ಪ್ರೊ. ರಾಜೇಂದ್ರ ಚೆನ್ನಿ ಅವರು ಜುಲೈ 21ರಂದು ನಡೆದ ಆನ್ ಲೈನ್ ಸಭೆಯೊಂದರಲ್ಲಿ ‘ಜರ್ಮನ್ ಸಿದ್ಧಾಂತ’ ಪುಸ್ತಕವನ್ನು ಬಿಡುಗಡೆ ಮಾಡಿ, ‘ಕರ್ನಾಟಕದ ಬೌದ್ಧಿಕ ಪರಂಪರೆಗಳಲ್ಲಿ ಭಾವನಾವಾದ ಪ್ರಭಾವ’ ಸಂವಾದದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು. ‘ಜರ್ಮನ್ ಸಿದ್ಧಾಂತ’ ಏಂಗೆಲ್ಸ್ ದ್ವಿಶತಮಾನೋತ್ಸವದ ಸಂದರ್ಭದಲ್ಲಿ ಕ್ರಿಯಾ ಮಾಧ್ಯಮ ಮತ್ತು ನವಕರ್ನಾಟಕ ಸಂಸ್ಥೆಗಳು ಜಂಟಿಯಾಗಿ ಪ್ರಕಟಿಸುತ್ತಿರುವ ‘ಏಂಗೆಲ್ಸ್ 200 ಮಾಲಿಕೆಯ’ ಎರಡನೆಯ ಪುಸ್ತಕ. ಜುಲೈ 20ರಂದು ಡಾ.ಜಿ.ರಾಮಕೃಷ್ಣ ಅವರು ಬರೆದ ಏಂಗೆಲ್ಸ್ ಅವರ ಬದುಕು ಬರಹದ ಕುರಿತ ಮೊದಲ ಪುಸ್ತಕ ಬಿಡುಗಡೆಯಾಗಿತ್ತು.

ಮಾನವನ ಭೌತಿಕ ಅಸ್ತಿತ್ವದ ಕುರಿತು ಚಿಂತನೆಗಳ ಬದಲು ‘ಮಾನವನ ಸಾರಸತ್ವ’ (ಎಸೆನ್ಸ್ ಆಫ್ ಮ್ಯಾನ್) ಮುಂತಾದ ಜರ್ಮನ್ ಸಿದ್ಧಾಂತಗಳಲ್ಲಿ ವ್ಯಾಪಕವಾಗಿದ್ದ ಹುಸಿ ಸಾರ್ವತ್ರಿಕ ಕಲ್ಪನೆಗಳನ್ನು ಮೊದಲ ಬಾರಿಗೆ ಏಂಗೆಲ್ಸ್ ತಮ್ಮ ಮೇರುಕೃತಿಯಾದ ‘ಜರ್ಮನ್ ಸಿದ್ಧಾಂತ’ ದಲ್ಲಿ ಬಯಲಿಗೆಳೆಯುತ್ತಾರೆ. ಇಂತಹ ಸಿದ್ಧಾಂತಗಳನ್ನು ಒಟ್ಟಾಗಿ ‘ಭಾವನಾವಾದಿ’ (ಐಡಿಯಲಿಸ್ಟ್) ಎಂದು ಗುರುತಿಸಿ, ಅದಕ್ಕೆ ಬದಲಿಯಾಗಿ ಚಾರಿತ್ರಿಕ ಮತ್ತು ಗತಿತಾರ್ಕಿಕ ಭೌತವಾದವನ್ನು ಮಂಡಿಸುತ್ತಾರೆ ಎಂದು ಮುಂದುವರೆದು ಪ್ರೊ. ರಾಜೇಂದ್ರ ಚೆನ್ನಿ ಅವರು ಹೇಳಿದರು.

ಇದನ್ನು ಓದಿ: ಏಂಗೆಲ್ಸ್ 200 ಮಾಲಿಕೆಯ ಎರಡು ಪುಸ್ತಕಗಳ ಪರಿಚಯ

ಬೌದ್ಧಿಕ ಪರಂಪರೆ ಮತ್ತು ಸಂಕಥನಗಳಿಗೆ ಕರ್ನಾಟಕದ ಗಡಿಯ ಮಿತಿ ಹಾಕುವುದು ಕಷ್ಟ. ಆದರೆ ಕರ್ನಾಟಕದ ಪ್ರಧಾನ ಪರಂಪರೆಗೆ ವಿರುದ್ಧವಾಗಿ ಬಂದ ಕಲ್ಯಾಣ ಕರ್ನಾಟಕದ ವಚನಕಾರರ, ತತ್ವಪದಕಾರರ ಚಿಂತನೆಗಳನ್ನು ಭಾವನಾವಾದಿ ಮತ್ತು ಭೌತವಾದಿ ಬೈನರಿಗಳಲ್ಲಿ ನೊಡುವುದು ಸರಿಯಾದ ವಿಧಾನವಲ್ಲ. ಅವುಗಳಲ್ಲಿ ಬರುವ ದೇಹ, ಶ್ರಮ-ಕಾಯಕ ಗಳ ಕುರಿತು ವಿಭಿನ್ನ ಧೋರಣೆ, ಅವು ದುಡಿಯುವ ಜನ, ಚರಿತ್ರೆ, ರಾಜಕಾರಣಗಳ ಮೇಲೆ ಬೀರಿದ ಪ್ರಭಾವದ ಗಟ್ಟಿ ಪರಂಪರೆಯನ್ನು ಗಮನಿಸಿ ಅವುಗಳಲ್ಲಿ ಆದಿ-ಭೌತವಾದಿ (ಪ್ರೊಟೊ ಮಟೀರಿಯಲಿಸ್ಟ್) ಎಳೆಗಳನ್ನು ಗುರುತಿಸುವ ಸೂಕ್ಷ್ಮತೆ ಹೊಂದಿರುವ (ನುಆನ್ಸ್ ಡ್) ಅನ್ವೇಷಣೆ ಅಗತ್ಯ. ಇದು ತತ್ವಶಾಸ್ತ್ರಕ್ಕೆ ಶಂಕರಾಚಾರ್ಯರ ಕೊಡುಗೆ ಕುರಿತು ಆಗ ವಿವಾದಾತ್ಮಕವಾಗಿದ್ದ ಇ.ಎಂ.ಎಸ್ ಅಂಗೀಕರಿಸಿದ ನಿರೂಪಣೆಯಂತಹುದು. ಇಂತಹ ಸೂಕ್ಷ್ಮತೆ ಹೊಂದಿರುವ ಅನ್ವೇಷಣೆ ಲಿಂಗತ್ವ, ಇತರ ಅಸ್ಮಿತೆ, ಭಿನ್ನತೆಗಳ ಅಧ‍್ಯಯನಕ್ಕೂ ಅಗತ್ಯ ಎಂದು ಪ್ರೊ. ಚೆನ್ನಿ ಪ್ರತಿಪಾದಿಸಿದರು.

ವಚನಕಾರರು, ತತ್ವಪದಕಾರರು ಮತ್ತು ಸೂಫಿಗಳ ಚಿಂತನೆಗಳು ಭಾವನಾವಾದಿ ಚೌಕಟ್ಟನ್ನು ಪೂರ್ಣವಾಗಿ ಮೀರುವುದು ಸಾಧ್ಯವಾಗಿಲ್ಲದಿದ್ದರೂ, ಅವು ಪೂರ್ಣವಾಗಿ ಭೌತವಾದಿ ಎಂದು ಹೇಳುವುದು ಸಾಧ್ಯವಿಲ್ಲದಿದ್ದರೂ, ಅವು ಹಲವು ಭೌತವಾದಿ ಎಳೆಗಳನ್ನು ಹೊಂದಿದ್ದವು. ಅಧಿಕಾರದ ಭಾಷೆ, ಚಿಂತನೆಗಳಿಗೆ ದುಡಿಯುವವರ ಭಾಷೆ, ಚಿಂತನೆಗಳ ಬದಲಿ ಒದಗಿಸಿದವು ಎಂದು ಸಂವಾದವನ್ನು ಮುಂದುವರೆಸುತ್ತಾ ಡಾ. ಮೀನಾಕ್ಷಿ ಬಾಳಿ ಅವರು ಹೇಳಿದರು.

ಯುರೋಪಿನಲ್ಲಿ 20ನೆಯ ಶತಮಾನದ ಉತ್ತರಾರ್ಧದಲ್ಲಿ ಬೆಳೆದ ಆಧುನಿಕೋತ್ತರವಾದ ಈಗ ಕರ್ನಾಟಕದ ಬೌದ್ಧಿಕ ಸಂಕಥನಗಳಲ್ಲಿ ಪ್ರಭಾವಶಾಲಿಯಾಗಿರುವ ಭಾವನವಾದಿ ಲೋಕದೃ಼ಷ್ಟಿಯ ಹೊಸ ಅವತಾರ. ಇದು ವೈಜ್ಞಾನಿಕ ವಿಧಾನ ಮತ್ತು ತರ್ಕ (ರೇಶನಾಲಿಟಿ) ವನ್ನೂ ಸೇರಿದಂತೆ ಜ್ಞಾನಪರ್ವ ದಲ್ಲಿ ಮೂಡಿ ಬಂದ ಎಲ್ಲ ಪರಿಕಲ್ಪನೆಗಳನ್ನು ನಿರಾಕರಿಸತ್ತದೆ. ಕಾರ್ಮಿಕ ವರ್ಗ, ಸಮಾಜವಾದ ಇತ್ಯಾದಿಗಳನ್ನು ‘ಮಹಾನ್ ನಿರೂಪಣೆ’ (ಮೆಟಾ ನೆರೇಟವ್) ಗಳು ಎಂದು ಗುರುತಿಸಿ ನಿರಾಕರಿಸುವ ಈ ಲೋಕದೃಷ್ಟಿಯು, ಲಿಂಗ, ಜಾತಿ, ಬುಡಕಟ್ಟು, ಜನಾಂಗ ಗಳ ‘ಅಸ್ಮಿತೆ’ ಗೆ ಒತ್ತು ಕೊಟ್ಟು ‘ಅಸ್ಮಿತೆ’ ರಾಜಕಾರಣದ ಸಿದ್ಧಾಂತವಾಗಿ ಹೊಮ್ಮಿದೆ ಎಂದು ಸಂವಾದವನ್ನು ಮತ್ತಷ್ಟು ಮುಂದುವರೆಸುತ್ತಾ ಡಾ. ಕೆ. ಪ್ರಕಾಶ್ ಅವರು ಹೇಳಿದರು.

ಎಸ್.ವರಲಕ್ಷ್ಮಿ

ಸಿಐಟಿಯು ರಾಜ್ಯ ಅಧ‍್ಯಕ್ಷರಾದ ಎಸ್.ವರಲಕ್ಷ್ಮಿ ಅವರು ಏಂಗೆಲ್ಸ್ 200 ಮಾಲಿಕೆಯ ಪ್ರಕಟಣಾ-ಪೂರ್ವ ರಿಯಾಯಿತಿ ಕೂಪನನ್ನು ಬಿಡುಗಡೆ ಮಾಡಿ, ಕನಿಷ್ಠ 100 ಪುಸ್ತಕಗಳ ಸೆಟ್ ಖರೀದಿಸುವ ಘೋಷಣೆ ಮಾಡಿದರು. ‘ಬಂಡವಾಳ ಸಂಫುಟ-2’ ಮತ್ತು ಈಗಾಗಲೇ ಬಿಡುಗಡೆಯಾಗಿರುವ ಎರಡು ಪುಸ್ತಕಗಳು ಸೇರಿದಂತೆ ಏಂಗೆಲ್ಸ್ 200 ಮಾಲಿಕೆಯ ಆರು ಪುಸ್ತಕಗಳ ಸೆಟ್ ಬೆಲೆ 1800 ರೂ. ಅದು ಪ್ರಕಟಣಾ-ಪೂರ್ವ ರಿಯಾಯಿತಿ ಕೂಪನು ಖರೀದಿ ಮಾಡಿದರೆ ರೂ. 1200 ಕ್ಕೆ ಲಭ್ಯವಿರುತ್ತದೆ ಎಂದು ತಿಳಿಸಿದರು. ಈ ಮಾಲಿಕೆಯ ಮಹತ್ವ ಮತ್ತು ದುಡಿಯುವ ಜನರ ಸಂಘಟನೆಯನ್ನು ಅಸಾಧ್ಯವಾಗಿಸುವ ಇಂದಿನ ಸನ್ನಿವೇಶದಲ್ಲಿ ದುಡಿಯುವ ಜನರ ಸಂಘಟನೆಗಳ ಕಾರ್ಯಕರ್ತರಲ್ಲಿ ಇದರ ಪ್ರಸಾರದ ಅಗತ್ಯ ಕುರಿತು ಅವರು ಒತ್ತಿ ಹೇಳಿದರು.

ಇದನ್ನು ಓದಿ: ಏಂಗೆಲ್ಸ್ 200 ಮಾಲಿಕೆಯ ಅನಾವರಣ – ಎರಡು ಪುಸ್ತಕಗಳ ಬಿಡುಗಡೆ

ಲೇಖಕ ಪೀರ್ ಬಾಷ ಅವರು ಪುಸ್ತಕ ಪರಿಚಯ ಮಾಡುತ್ತಾ, ಈ ಪುಸ್ತಕದ ಅನುವಾದದ ವಿಶಿಷ್ಟತೆಗಳು ಮತ್ತು ಇಂತಹ ಮಾಕ್ಸ್ ವಾದದ ಅಭಿಜಾತ ಕೃತಿಗಳನ್ನು ಕನ್ನಡದಲ್ಲಿ ಕೊಡುವಾಗ ಪ್ರವೇಶಿಕೆ. ಇಂದಿನ ಸನ್ನಿವೇಶದಲ್ಲಿ ಪ್ರಸ್ತುತತೆ ಕುರಿತು ನಿರೂಪಣೆ ಮತ್ತು ಹಲವು ಟಿಪ್ಪಣಿಗಳ ಪೂರಕ ಮಾಹಿತಿಗಳ ಮಹತ್ವದ ಕುರಿತು ವಿವರವಾಗಿ ತಿಳಿಸಿದರು. ಇವೆಲ್ಲವುಗಳಿಂದ ಇದುವರೆಗೆ ಪ್ರಕಟವಾದ ಮಾರ್ಕ್ಸ್ ವಾದದ ಅಭಿಜಾತ ಕೃತಿಗಳ ಅನುವಾದಗಳಲ್ಲಿ, ಕನ್ನಡದ ಓದುಗರಿಗೆ ನಿಜವಾಗಿಯೂ ಅದರ ಹೂರಣವನ್ನು ಪರಿಣಾಮಕಾರಿಯಾಗಿ ತಲುಪಿಸಿದ ಅತ್ಯಂತ ಸಫಲ ಅನುವಾದವಿದು ಎಂದರು.

ಅನುವಾದಕ ಪ್ರೊ.ವಿ.ಎನ್.ಲಕ್ಷ್ಮಿನಾರಾಯಣ ಅವರು ಮಾತನಾಡಿ ಪುಸ್ತಕದ ಅನುವಾದ ಪ್ರಕ್ರಿಯೆ ಮತ್ತು ಅದನ್ನು ಓದುವ ಬಗೆಯ ಕುರಿತು ತಿಳಿಸಿದರು. ಮಾಕ್ಸ್ ವಾದದ ಅಭಿಜಾತ ಕೃತಿಗಳನ್ನು ಕನ್ನಡದಲ್ಲಿ ಕೊಡುವಾಗ ಇರುವ ಸವಾಲುಗಳನ್ನು ವಿವರಿಸಿದರು. ಕೊನೆಯಲ್ಲಿ ಸಂವಾದದಲ್ಲಿ ಮಂಡಿತವಾದ ಅಭಿಪ್ರಾಯಗಳ ಬಗ್ಗೆ ಕೇಳುಗರೊಡನೆ ಸಂವಾದ ನಡೆಯಿತು.

ಕ್ರಿಯಾ ಮಾಧ್ಯಮದ ನಿರ್ದೇಶಕ ವಸಂತರಾಜ ಎನ್.ಕೆ ಮೊದಲಿಗೆ ಮಾಲಿಕೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ್ ಅವರು ಎಸ್.ಆರ್. ಭಟ್ ಅನುವಾದಿಸಿದ ಇಂಟರ್ ನ್ಯಾಶನಾಲ್’ ಹಾಡನ್ನು ಹಾಡಿದರು. ಗುರುರಾಜ ದೇಸಾಯಿ ನಿರೂಪಣೆಯನ್ನು, ನವೀನ್ ಕುಮಾರ್ ತಾಂತ್ರಿಕ ನಿರ್ವಹಣೆಯನ್ನೂ ಮಾಡಿದರು. ಈ ಇಡೀ ಕಾರ್ಯಕ್ರಮವನ್ನು ಜನಶಕ್ತಿ ಮೀಡಿಯಾ ಫೇಸ್ ಬುಕ್ ನಲ್ಲಿ ಲೈವ್ ಪ್ರಸಾರ ಮಾಡಿದ್ದು, ಅಲ್ಲೂ ಯೂ ಟ್ಯೂಬ್ ನಲ್ಲೂ ಅದು ಮುಂದೆ ಲಭ್ಯವಿರುತ್ತದೆ.

ಕಾರ್ಯಕ್ರಮದ ವಿಡಿಯೊ ಮತ್ತು ಪ್ರೊ. ರಾಜೇಂದ್ರ ಚೆನ್ನಿಯವರ ಮಾತುಗಳನ್ನು ಹಾಗೂ ಸಂವಾದ ಕಾರ್ಯಕ್ರಮವನ್ನು ನೋಡಲು ಈ  ಲಿಂಕ್‌ ಮಾಡಿ : ಜರ್ಮನ್ ಸಿದ್ಧಾಂತ ಪುಸ್ರಕ ಬಿಡುಗಡೆ ಮತ್ತು “ಕರ್ನಾಟಕದ ಬೌದ್ಧಿಕ ಪರಂಪರೆ ಮತ್ತು ಸಂಕಥನಗಳಲ್ಲಿ ಭಾವನಾವಾದದ” ಸಂವಾದ ಕಾರ್ಯಕ್ರಮ

 

 

Donate Janashakthi Media

Leave a Reply

Your email address will not be published. Required fields are marked *