ಗಂಗಾವತಿ: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಗಂಭೀರವಾದ ಘರ್ಷಣೆ ನಡೆದು ಸಾವುಗಳು ಸಂಭವಿಸಿವೆ. ಘಟನೆ ಸಂಬಂಧಿಸಿದ ಸುಳ್ಳು ಕೊಲೆ ಪ್ರಕರಣ ದಾಖಲಿಸಲಾಗಿದೆ. ಹಿಂಸಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಗಂಗಾವತಿ ತಾಲ್ಲೂಕು ಸಮಿತಿ ಪ್ರತಿಭಟನೆ ನಡೆಸಿದೆ.
ಈ ಪ್ರಕರಣದಲ್ಲಿ ಅಮಾಯಕರ ಮೇಲೆ ಹಾಕಿರುವ ಸುಳ್ಳು ಮೊಕದ್ದಮೆಗಳನ್ನು ಕೈಬಿಡಬೇಕು. ಅಮಾಯಕರಾದ ಬಾಳಪ್ಪ, ಸಣ್ಣ ಹನುಮಂತ ಇತರರು ಮೇಲೆ ಹಾಕಿರುವ ಸುಳ್ಳು ಪ್ರಕರಣವನ್ನು ಕೈಬಿಡಬೇಕೆಂದು ಸಿಪಿಐ(ಎಂ) ಪಕ್ಷವು ಆಗ್ರಹಿಸಿದೆ.
ಘಟನೆಯ ನಂತರ ಗ್ರಾಮದಲ್ಲಿ ಅಶಾಂತಿ ನಿರ್ಮಾಣವಾಗಿದೆ. ಬಂಧಿಸುವ ಭೀತಿಯಿಂದಾಗಿ ಜನತೆ ಗ್ರಾಮ ತೊರೆದಿದ್ದಾರೆ. ವಯೊವೃದ್ದರಿಗೆ, ಧನ-ಕರುಗಳ ನಿರ್ವಹಣೆ ಮತ್ತು ಜೀವನ ನಿರ್ವಹಣೆಗೆ ಭಾರೀ ತೊಂದರೆಯಾಗಿದೆ. ಆದ್ದರಿಂದ ಈ ಪ್ರಕರಣವನ್ನು ಸಮಗ್ರವಾಗಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಹಾಗೂ ತಪ್ಪಿಸರ ಮೇಲೆ ಕ್ರಮ ಜರುಗಿಸಬೇಕು.
ನ್ಯಾಯಾಂಗ ತನಿಖೆ ಹಾಗೂ ಸುಳ್ಳು ಪ್ರಕರಣ ಕೈಬಿಡಬೇಕೆಂದು ಆಗ್ರಹಿಸಿದ್ದು, ಅಲ್ಲದೆ, ಪ್ರಕರಣದಲ್ಲಿ ಸಾವನ್ನಪ್ಪಿದ ಎರಡು ಕುಟುಂಬಕ್ಕೂ ತಲಾ 50 ಲಕ್ಷ ರೂಪಾಯಿ ಪರಿಹಾರ ವಿತರಿಸಬೇಕು ಮತ್ತು ಗಾಯಾಳುಗಳಿಗೆ ಜಿಲ್ಲಾಡಳಿತ ಚಿಕಿತ್ಸೆಯನ್ನು ಕೊಡಿಸಬೇಕು. ಗ್ರಾಮದಲ್ಲಿ ಶಾಂತಿ ಸಭೆಯನ್ನು ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
ಹಕ್ಕೊತ್ತಾಯಗಳನ್ನು ಇತ್ಯರ್ಥಪಡಿಸಬೇಕೆಂದು ಸಿಪಿಐ(ಎಂ) ಪಕ್ಷವು ಗಂಗಾವತಿಯ ಉಪ ತಹಶಿಲ್ದಾರರ ಹೊರಪೇಟೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಸಿಪಿಐ(ಎಂ) ಪಕ್ಷದ ರಾಜ್ಯ ಸಮಿತಿ ಸದಸ್ಯ ಚಂದ್ರಪ್ಪ ಹೋಸ್ಕರ, ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಜಿಲ್ಲಾ ಮುಂಖಡರಾದ ಬಸವರಾಜ ಮರಕುಂಬಿ, ಹುಸೇನಪ್ಪ, ಅಮರೇಶ ಕಡಗದ, ಮರಿನಾಗಪ್ಪ, ಶಿವಕುಮಾರ ಈಚನಾಳ, ಸೋಮನಾಥ, ಮುಕೇಶ, ಹನುಮಂತ ಹೋಸ್ಕರಿ ಇತರರು ಇದ್ದರು.