ದಿಲ್ಲಿಯಲ್ಲಿ ಬೃಹತ್ ಮಜ್ದೂರ್-ಕಿಸಾನ್ ಸಂಘರ್ಷ ರ‍್ಯಾಲಿ

ನವದೆಹಲಿ : ಸಿಐಟಿಯು-ಎಐಕೆಎಸ್-ಎಐಎಡಬ್ಲ್ಯುಯು ಏಪ್ರಿಲ್ ೫ ರಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿ ಕಿಕ್ಕಿರಿದು ತುಂಬಿದ್ದ ಸುಮಾರು ಒಂದು ಲಕ್ಷ ಕಾರ್ಮಿಕರು, ರೈತರು ಮತ್ತು ಕೃಷಿ ಕೂಲಿಕಾರರು ತಮ್ಮ ಜೀವನೋಪಾಯದ ಸಾಧನಗಳ ಮೇಲೆ ನಡೆಯುತ್ತಿರುವ ದಾಳಿಗಳು ಕೊನೆಗೊಳ್ಳಬೇಕು ಮತ್ತು ತಮಗೆ ಹಾಗೂ ತಮ್ಮ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮತ್ತು ಒಂದು ಘನತೆಯ ಬದುಕಿನ ಅವಕಾಶ ಒದಗಿಸುವ ಧೋರಣೆಗಳನ್ನು ತಳೆಯಬೇಕು ಎಂದು ಆಗ್ರಹಿಸಿ ಬೃಹತ್ ಮಜ್ದೂರ್-ಕಿಸಾನ್ ಸಂಘರ್ಷ ರ‍್ಯಾಲಿ ನಡೆಸಿದರು. ಸಿಐಟಿಯು, ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಮತ್ತು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ ( ಎಐಎಡಬ್ಲ್ಯೂಯು) ಈ ಚಳುವಳಿಗೆ ಕರೆ ನೀಡಿದ್ದವು.

ಕಾರ್ಮಿಕರು ಮತ್ತು ರೈತಾಪಿಗಳ ಈ ಐಕ್ಯ ಕಾರ್ಯಾಚರಣೆ ದೇಶದ ಸಂಪತ್ತನ್ನು ಧ್ವಂಸ ಮಾಡುತ್ತಿರುವ ಮತ್ತು ದುಡಿಯುವ ಜನಗಳ ಬದುಕುಗಳನ್ನು ಆವರಿಸಿರುವ ಗಂಭೀರ ಆರ್ಥಿಕ ಬಿಕ್ಕಟ್ಟಿನಿಂದ ಗಮನವನ್ನು ಬೇರೆಡೆಗೆ ತಿರುಗಿಸುತ್ತಿರುವ ಬಿಜೆಪಿ ಸರಕಾರದ ವಿರುದ್ಧ ದ್ವೇಷ ಮತ್ತು ಆಕ್ರೋಶದ ದೃಢ ಪ್ರತಿಭಟನೆಯನ್ನು ವ್ಯಕ್ತಪಡಿಸಿತು ಎಂದು ಈ ಮೂರು ಸಂಘಟನೆಗಳು ನೀಡಿರುವ ಜಂಟಿ ಹೇಳಿಕೆ ತಿಳಿಸಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ರೈತರ ಹೋರಾಟದ ಯಶಸ್ಸಿನಿಂದ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಇತ್ತೀಚಿನ ಅನೇಕ ವಿಜಯಗಳಿಂದ ಉತ್ಸಾಹ ತುಂಬಿಕೊಂಡಿದ್ದ ಜನಗಳು ದೇಶದ ಮೂಲೆ-ಮೂಲೆಗಳಿಂದ, ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರಪ್ರದೇಶ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ,ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ, ಬಂಗಾಳ, ಒಡಿಸ್ಸಾ, ಅಸ್ಸಾಂ, ತ್ರಿಪುರ, ಮಣಿಪುರ, ಛತ್ತೀಸ್‌ಗಢ, ಗೋವಾ, ಗುಜರಾತ್ ನಿಂದ ದಿಲ್ಲಿಗೆ ಬಂದರು. ಆರು ತಿಂಗಳಿಂದ ಎಲ್ಲ ಜಿಲ್ಲೆಗಳಲ್ಲಿ ನಗರ ಪ್ರದೇಶಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿದ್ದ ಸುದೀರ್ಘ ಪ್ರಚಾರಾಂದೋಲನ ಈ ಬೃಹತ್ ಸಮಾವೇಶದಲ್ಲಿ ಸಮಾಪನಗೊಂಡಿದೆ. ಸಾವಿರಾರು ಮಹಿಳಾ ಕಾರ್ಮಿಕರು ಮತ್ತು ರೈತರು ಸಹ ಈ ಪ್ರತಿಭಟನೆಯ ಭಾಗವಾಗಿದ್ದರು. ಬೃಹತ್ರ‍್ಯಾಲಿಯನ್ನು ಉದ್ದೇಶಿಸಿ ಮೂರು ಸಂಘಟನೆಗಳ ಮುಖಂಡರು, ಕೆ.ಹೇಮಲತಾ ಮತ್ತು ತಪನ್ ಸೇನ್ (ಸಿಐಟಿಯು ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು), ಅಶೋಕ್ ಧವಳೆ ಮತ್ತು ವಿಜೂ ಕೃಷ್ಣನ್ (ಎಐಕೆಎಸ್ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು), ಎ. ವಿಜಯರಾಘವನ್ ಮತ್ತು ಬಿ. ವೆಂಕಟ್ (ಎಐಎಡಬ್ಲ್ಯುಯು ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು), ಸಿಐಟಿಯು ಗೆ ಸಂಯೋಜಿತವಾಗಿರುವ ೧೨ ವಲಯವಾರು ಒಕ್ಕೂಟಗಳ ಮುಖಂಡರು, ರಾಜ್ಯ ಮತ್ತು ಕೇಂದ್ರ ಸರಕಾರೀ ನೌಕರರ, ಬ್ಯಾಂಕ್, ವಿಮೆ, ಬಿಎಸ್‌ಎನ್‌ಎಲ್ ಮತ್ತು ಇತರ ವಲಯಗಳ ನೌಕರರ ಸಂಘಟನೆಗಳ ಮುಖಂಡರು ಕೂಡ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿ, ಇದು ಈ ದೇಶದ ದುಡಿಯುವ ಜನರಲ್ಲಿ ತಮ್ಮ ಮೂಲಭೂತ ಅಗತ್ಯಗಳನ್ನು ಕಡೆಗಣಿಸಿ ದೊಡ್ಡ ಕಾರ್ಪೊರೇಟ್‌ಗಳಿಗೆ ಪ್ರಯೋಜನಗಳ ಸುರಿಮಳೆಗರೆಯುತ್ತಿರುವುದರ ವಿರುದ್ಧ ಹೆಚ್ಚುತ್ತಿರುವ ಆಕ್ರೋಶದ ಸೂಚನೆಯಾಗಿದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿದಿಲ್ಲಿಯಲ್ಲಿ ಬೃಹತ್ ಮಜ್ದೂರ್-ಕಿಸಾನ್ ಸಂಘರ್ಷ ರ‍್ಯಾಲಿ

ಪ್ರಸಕ್ತ ಸರ್ಕಾರ ಉದ್ದೇಶಪೂರ್ವಕವಾಗಿಯೇ ಸಂಪತ್ತಿನ ನಾಶ, ದಶಕಗಳಿಂದ ಅಭಿವೃದ್ಧಿಗೊಳಿಸಿದ ಸಾರ್ವಜನಿಕ ವಲಯದ ದೊಡ್ಡ ಸಂಸ್ಥೆಗಳನ್ನು ಖಾಸಗಿ ಮಾಲೀಕರಿಗೆ ಅಗ್ಗದ ಬೆಲೆಗೆ ಮಾರಾಟ ಮಾಡುವುದು ,ಕಾರ್ಮಿಕರು ಮತ್ತು ರೈತರ ಮೂಲಭೂತ ಹಕ್ಕುಗಳನ್ನು ವಂಚಿಸುವುದು, ವಿದೇಶಿ ಬಂಡವಾಳವು ಭಾರತೀಯ ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರಗಳನ್ನು
ವಶಪಡಿಸಿಕೊಳ್ಳಲು ಆಹ್ವಾನಿಸುವುದು, ಜನರ ಕಷ್ಟಪಟ್ಟು ದುಡಿದ ಹಣವನ್ನು ಲೂಟಿ ಮಾಡಲು ಭ್ರಷ್ಟ ಸುಲಿಗೆಕೋರರಿಗೆ ಅವಕಾಶ ಕೊಡುವುದು ಇವೆಲ್ಲವನ್ನೂ ಹೆಚ್ಚೆಚ್ಚಾಗಿ ಪ್ರೋತ್ಸಾಹಿಸುತ್ತಿದೆ. ಇಂತಹ ಅಪಾಯಗಳ ವಿರುದ್ಧ ಮತ್ತು ದೇಶವನ್ನು ಕೆಲವು ಶ್ರೀಮಂತ ವ್ಯಾಪಾರಿ ಕೂಟಗಳು ವಶಪಡಿಸಿಕೊಳ್ಳದಂತೆ  ರಕ್ಷಿಸಲು ಕಾರ್ಮಿಕರು ಮತ್ತು ರೈತರು ದೇಶಾದ್ಯಂತ ಎಡೆಬಿಡದ ಮತ್ತು ತೀವ್ರತರವಾದ ಚಳುವಳಿಯನ್ನು ಪ್ರಾರಂಭಿಸಲು ಕೈಜೋಡಿಸಿದ್ದಾರೆ ಎಂದು ಈ ಮೂರು ಸಂಘಟನೆಗಳು ಹೇಳಿವೆ. ದೇಶದ ಒಬ್ಬ ಖ್ಯಾತ ಅರ್ಥಶಾಸ್ತ್ರಜ್ಞ ಪ್ರಭಾತ್ ಪಟ್ನಾಯಕ್ ಅವರ ಅಧ್ಯಕ್ಷತೆಯಲ್ಲಿ ಜಂಟಿ ಪೂರ್ವಸಿದ್ಧತಾ ಸಮಿತಿಯು ಈ ರ‍್ಯಾಲಿಯನ್ನು ಆಯೋಜಿಸಿತ್ತು. ಅವರು ಮಾತನಾಡುತ್ತ ಕಾರ್ಮಿಕರು, ರೈತರು ಮತ್ತು ಕೃಷಿ ಕೂಲಿಕಾರರು ಸಮಾಜದ ಮೂರು ಪ್ರಮುಖ ವರ್ಗಗಳು, ಇವರು ಒಟ್ಟುಗೂಡಿರುವುದೇ ಮೋದಿ ಸರಕಾರಕ್ಕೆ, ಅದರ ಧೋರಣೆಗಳಿಗೆ ಆಗಿರುವ ದೊಡ್ಡ ಸೋಲು ಎಂದರು.

Donate Janashakthi Media

Leave a Reply

Your email address will not be published. Required fields are marked *