ಬೆಂಗಳೂರು : ಗುಣಮಟ್ಟದ ಊಟ ನೀಡಿ ಎಂದು ಹಾಗೂ ಮೂಲಸೌಲಭ್ಯಗಳನ್ನು ಕೊಡಿ ಎಂದು ಆಗ್ರಹಿಸಿದ ದಲಿತ ವಿದ್ಯಾರ್ಥಿಯನ್ನು ಹಾಸ್ಟೇಲ್ ನಿಂದ ಹೊರ ಹಾಕಲಾಗಿದೆ.
ಹೌದು ವೀಕ್ಷಕರೆ, ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಗೋಕುಲ್ ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೇಲ್ ನಲ್ಲಿ ಅಧ್ಯಯನ ಮಾಡುತ್ತಿರು ಕಾನೂನು ವಿದ್ಯಾರ್ಥಿ, ದಲಿತ ವರ್ಗಕ್ಕೆ ಸೇರಿದ ಪಂಪಾಪತಿ, ಊಟದಲ್ಲಿ ಹುಳು ಬರ್ತಾ ಇದೆ. ವಿದ್ಯಾರ್ಥಿಗಳಿಗೆ ನೀಡಬೇಕಾದ ಸೌಲಭ್ಯಗಳ ಕಿಟ್ ನೀಡಿಲ್ಲ ಯಾಕೆ? ಎಂದು ಪ್ರಶ್ನಿಸಿದ್ದಾರೆ. ಗುಣ ಮಟ್ಟದ ಊಟ ಕೊಡಿ ಎಂದು ಆಗ್ರಹಿಸಿದ್ದಾರೆ. ನ್ಯಾಯ ನೀಡಬೇಕಿದ್ದ ವಾರ್ಡನ್, ಪ್ರಶ್ನೆ ಮಾಡ್ತಾರೆ ಅಂತ 9 ಜನ ವಿದ್ಯಾರ್ಥಿಗಳನ್ನು ಹಾಸ್ಟೆಲ್ ನಿಂದ ಹೊರದಬ್ಬಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಗುಣ ಮಟ್ಟದ ಊಟ ಕೇಳಿದ ಪಂಪಾಪತಿ ಮತ್ತು ಆತನ ಗೆಳಯರ ಮೇಲೆ ವಾರ್ಡನ್ ಮಹೇಶ್ ಅಣಗಿ, ಅಡುಗೆ ಸಿಬ್ಬಂದಿ ಅಲ್ಲಾಸಾಬ್ ನದಾಫ್ ಇಬ್ಬರು ಸೇರಿ ಮಾನಸಿಕ ಹಿಂಸೆ ನೀಡಿದ್ದಾರೆ. ಮನೆಯಲ್ಲಿ ಊಟ ಚನ್ನಾಗಿಲ್ಲ ಅಂದ್ರೆ ತಿನ್ನಲ್ವಾ, ಬಾಯಿ ಮುಚ್ಕೊಂಡು ತಿನ್ನಿ, ಇಲ್ಲಾ ಅಂದ್ರೆ ಹಾಸ್ಟೆಲ್ ನಿಂದ ಹೊರಗೆ ಹಾಕ್ತಿನಿ ಅಂತಾ ದಬಾಯಿಸಿದ್ದಾರೆ. ವಾರ್ಡ್‌ನ್ ಹಿಂಸೆ ತಾಳಲಾರದೆ ಪಂಪಾಪತಿ, ತಾಲ್ಲೂಕು ಮತ್ತು ಜಿಲ್ಲಾ ಬಿಸಿಎಂ ಅಧಿಕಾರಿಗೆ ದೂರು ನೀಡಿದ್ದಾರೆ. ನ್ಯಾಯ ನೀಡಬೇಕಿದ್ದ ಬಿಸಿಎಂ ತಾಲ್ಲೂಕ ಅಧಿಕಾರಿ ಚಂದ್ರಶೇಖರ್ ಕರವಿಮಠ, ಜಿಲ್ಲಾ ಅಧಿಕಾರಿ ಅಜ್ಜಪ್ಪ ಸಗಲೂರು, ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸದೆ ವಾರ್ಡನ್ ಹೇಳಿದಂತೆ ನಡೆದುಕೊಳ್ಳಿ ಇಲ್ಲಾ ಅಂದ್ರೆ ನಿಮ್ಮನ್ನ ಹೊರಗೆ ಹಾಕ್ತಾರೆ ಅಂತಾ ಕಚೇರಿಂದ ಹೊರ ಕಳುಹಿಸಿದ್ದಾರೆ. ಇದ್ಯಾವುದಕ್ಕೂ ಜಗ್ಗದ ವಿದ್ಯಾರ್ಥಿಗಳು ಗುಣ ಮಟ್ಟದ ಊಟ ಹಾಗೂ ಮೂಲ ಸೌಲಭ್ಯ ನೀಡಲೆಬೇಕು ಎಂದು ಪಟ್ಟು ಹಿಡಿದಾಗ, ನಿಮ್ಮ ನಡತೆ ಸರಿ ಇಲ್ಲ, ನೀವು ಗಾಂಜಾ ಮಾರುವವರ ಸಂಪರ್ಕದಲ್ಲಿ ಇದ್ದೀರಿ ಎಂದು ಹಾಸ್ಟೆಲ್ ನಿಂದ ಹೊರದಬ್ಬಿದ್ದಾರೆ. ಗುಣ ಮಟ್ಟದ ಊಟ ನೀಡಿ ಎಂದು ಪ್ರಶ್ನಿಸಿದ್ದಕ್ಕೆ ನನ್ನನ್ನು ಹಾಸ್ಟೆಲ್ ನಿಂದ ಹೊರಹಾಕಿದ್ದಾರೆ ಎಂದು ಜನಶಕ್ತಿ ಮೀಡಿಯಾ ಜೊತೆ ಅಳಲು ತೋಡಿಕೊಂಡರು
ವಿದ್ಯಾರ್ಥಿಗಳು ಸೌಲಭ್ಯ ನೀಡಿ ಎನ್ನುವುದು, ಗುಣ ಮಟ್ಟದ ಊಟ ನೀಡಿ ಎಂದು ಕೇಳುವುದರಲ್ಲಿ ತಪ್ಪಿಲ್ಲ, ಸರಿಯಾದ ರೀತಿಯಲ್ಲಿ ಸೌಲಭ್ಯ ಒದಗಿಸಿದ್ದರೆ ವಿದ್ಯಾರ್ಥಿಗಳು ಪ್ರಶ್ನೆ ಮಾಡುತ್ತಿರಲಿಲ್ಲ. ಅಷ್ಟೆ ಅಲ್ಲದೆ ಬಾಂಡ್ ಹೆಸರಲ್ಲಿ ವಿದ್ಯಾರ್ಥಿಗಳನ್ನು ಬಂದಿಯಾಗಿಸುವ ಕೆಲಸ ನಡೆಯುತ್ತಿದೆ. ನ್ಯಾಯ ನೀಡಬೇಕಿದ್ದ ಜಿಲ್ಲಾ ಹಾಗೂ ತಾಲ್ಲೂಕ ಬಿಸಿಎಂ ಅಧಿಕಾರಿಗಳು ವಿದ್ಯಾರ್ಥಿಗಳಿಂದ ಹಣ ಪಡೆದು ಸೀಟಿಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದಾರೆ ಎಂದು ಎಸ್ಎಫ್ ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ್ ಆರೋಪಿಸಿದ್ದಾರೆ.
ಇತ್ತೀಚೆಗೆ ಬಾಂಡ್ ಹೆಸರಲ್ಲಿ ಬಂಧಿಯಾಗಿಸುವ ಮತ್ತು ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಲಾಗುತ್ತಿದೆ. ಬಾಂಡ್ ನಲ್ಲಿ ” ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ, ಹೋರಾಟಗಳಿಗೆ ಹೋಗುವುದಿಲ್ಲ, ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಬರೆದುಕೊಡಬೇಕಿದೆ. ಅದಷ್ಟೆ ಅಲ್ಲದೆ ಹಾಸ್ಟೇಲ್ ನಲ್ಲಿ ಏನಾದರೂ ಆಗಿ ಸತ್ತರೆ ಅದಕ್ಕೆ ನಾನೇ ಹೊಣೆಗಾರನಾಗಿರುತ್ತೇನೆ ಎಂದು ಬರೆದುಕೊಡಬೇಕಿದೆ. ಈ ಬಾಂಡ್‌ನ ನಿಯಮಗಳು ನಮಗೆ ಆತಂಕವನ್ನು ಸೃಷ್ಟಿಸಿವೆ ಎಂದು ಪೋಷಕರ ಸಂಘಟನೆಯ ಮುಖಂಡ ನಿರುಪಾದಿ ಬೆಣಕಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಹಾಸ್ಟೇಲ್ ಗಳಲ್ಲಿ ಗುಣ ಮಟ್ಟದ ಆಹಾರ ನೀಡುವುದು ಮತ್ತು ವಿದ್ಯಾರ್ಥಿಗಳ ರಕ್ಷಣೆ ಮಾಡುವುದು ವಾರ್ಡನ್ ಗಳ ಜವಬ್ದಾರಿ ಆದರೆ ವಾರ್ಡನ್ ನಿರ್ಲಕ್ಷ್ಯ ವಹಿಸಿದರೆ ಏನು ಮಾಡಬೇಕು ಎಂಬ ಪ್ರಶ್ನೆ ಇದೆ. ಹಾಗಾಗಿ ಸರಕಾರ ಇಂತಹ ವಾರ್ಡನ್ ಗಳ ಮೇಲೆ ಕ್ರಮ ಜರುಗಿಸಿಬೇಕು. ಗುಣಮಟ್ಟದ ಆಹಾರ ವಿತರಿಸಲು ಮುಂದಾಗಬೇಕಿದೆ.